ಶಾಲೆಗಳಿಗೆ ಟಾಯ್ಲೆಟ್, ಕುಡಿಯುವ ನೀರು ನೀಡದ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ
ರಾಜ್ಯದ ನೂರಾರು ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಮತ್ತು ಕುಡಿಯುವ ನೀರು ಸೌಲಭ್ಯ ಕಲ್ಪಿಸಲು ಸರ್ಕಾರ ವಿಫಲವಾಗಿದೆ ಎಂದು ಕಟುವಾಗಿ ಛೀಮಾರಿ ಹಾಕಿರುವ ಹೈಕೋರ್ಟ್, ಸರ್ಕಾರದ ನಿರ್ಲಕ್ಷ್ಯ ಧೋರಣೆಯೇ ಖಾಸಗಿ ಶಿಕ್ಷಣ ಸಂಸ್ಥೆಗಳ ಹೆಚ್ಚಳಕ್ಕೆ ಕಾರಣವಾಗಿದೆ. ಕಡು ಬಡವರೂ ತಮ್ಮ ಎರಡು ಹೊತ್ತಿನ ಊಟವನ್ನು ತ್ಯಾಗ ಮಾಡಿ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುವಂತಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಬೆಂಗಳೂರು (ಅ.10): ರಾಜ್ಯದ ನೂರಾರು ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಮತ್ತು ಕುಡಿಯುವ ನೀರು ಸೌಲಭ್ಯ ಕಲ್ಪಿಸಲು ಸರ್ಕಾರ ವಿಫಲವಾಗಿದೆ ಎಂದು ಕಟುವಾಗಿ ಛೀಮಾರಿ ಹಾಕಿರುವ ಹೈಕೋರ್ಟ್, ಸರ್ಕಾರದ ನಿರ್ಲಕ್ಷ್ಯ ಧೋರಣೆಯೇ ಖಾಸಗಿ ಶಿಕ್ಷಣ ಸಂಸ್ಥೆಗಳ ಹೆಚ್ಚಳಕ್ಕೆ ಕಾರಣವಾಗಿದೆ. ಕಡು ಬಡವರೂ ತಮ್ಮ ಎರಡು ಹೊತ್ತಿನ ಊಟವನ್ನು ತ್ಯಾಗ ಮಾಡಿ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುವಂತಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ ಶಾಲೆಯಿಂದ ಹೊರಗಿರುವ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಸಂಬಂಧ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.
ಬೀದಿ ನಾಯಿಗಳ ಸಂತಾನಹರಣ ವರದಿ ಕೊಡದ ಸರ್ಕಾರ: ಹೈಕೋರ್ಟ್ ತರಾಟೆ
ಸರ್ಕಾರಿ ಶಾಲೆಯಲ್ಲಿ ಕನಿಷ್ಠ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇಲ್ಲದ ಈ ಪರಿಸ್ಥಿತಿಯನ್ನು ಸರ್ಕಾರ ನಿರ್ಮಾಣ ಮಾಡಿರುವುದರಿಂದ ಖಾಸಗಿ ಶಾಲೆಗಳ ಮಾಲೀಕರಿಗೆ ಬೆಂಬಲ ನೀಡಿದಂತಾಗುತ್ತದೆ. ಇಂದು ಉಳ್ಳವರು ಸೌಲಭ್ಯ ಪಡೆಯುತ್ತಾರೆ. ಇಲ್ಲದವರಿಗೆ ಏನೂ ಇಲ್ಲ. ಇದು ನಿಜಕ್ಕೂ ದುರದೃಷ್ಟಕರ ಸಂಗತಿ ಎಂದು ನ್ಯಾಯಪೀಠ ನುಡಿಯಿತು.
ವಿಚಾರಣೆ ವೇಳೆ ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿರುವ ಹಿರಿಯ ವಕೀಲ ಕೆ.ಎನ್.ಫಣೀಂದ್ರ ಅವರು ಸಲ್ಲಿಸಿದ ವರದಿಯಲ್ಲಿ ರಾಜ್ಯದ 464 ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳು, 87 ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಸಾಕಷ್ಟು ಸೌಲಭ್ಯಗಳು ಇಲ್ಲದೇ ಇರುವುದರಿಂದ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಹಣಕಾಸಿನ ಸಮಸ್ಯೆ ಎದುರಿಸುತ್ತಿರುವ ಪೋಷಕರೂ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸದೇ ಬೇರೆ ವಿಧಿ ಇಲ್ಲವಾಗಿದೆ ಎಂಬುದಾಗಿ ಉಲ್ಲೇಖವಾಗಿದೆ.
ಸರ್ಕಾರಿ ವಕೀಲರು ಹಾಜರಾಗಿ, ಅಮಿಕಸ್ ಕ್ಯೂರಿ ಸಲ್ಲಿಸಿರುವ ವರದಿಯನ್ನು ಪರಿಶೀಲಿಸಲು ಎಂಟು ವಾರ ಕಾಲಾವಕಾಶ ಬೇಕು. ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ವೈಯಕ್ತಿಕವಾಗಿ ಚರ್ಚೆ ನಡೆಸಲಾಗುವುದು. ನಂತರ ಪ್ರಾಥಮಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಸರ್ಕಾರದ ವಕೀಲರ ಮನವಿ ಪರಿಗಣಿಸಿದ ಹೈಕೋರ್ಟ್, ಅಮಿಕಸ್ ಕ್ಯೂರಿ ಅವರ ವರದಿಯನ್ನು ಸರ್ಕಾರ ಪರಿಶೀಲಿಸಿ, ಶೌಚಾಲಯ ಮತ್ತು ಕುಡಿಯುವ ನೀರು ಇಲ್ಲದ ಸರ್ಕಾರಿ ಶಾಲೆಗಳ ಸಮೀಕ್ಷೆಯನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಬೇಕು. ತನ್ನ ವ್ಯಾಪ್ತಿಯಲ್ಲಿ ಶಾಲೆಗಳಿಗೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಬಿಬಿಎಂಪಿಗೆ ನಿರ್ದೇಶಿಸಲಾಗಿದೆ. ಸಮೀಕ್ಷೆಗೆ ಕಾಲಾವಕಾಶ ನೀಡಲಾಗಿದೆ ಎಂದ ಮಾತ್ರಕ್ಕೆ ಶೌಚಾಲಯ ಮತ್ತು ಕುಡಿಯುವ ನೀರುವ ಕಲ್ಪಿಸಬೇಕಿಲ್ಲ ಎಂದರ್ಥವಲ್ಲ. ಮೂಲ ಸೌಕರ್ಯ ಕಲ್ಪಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಸೂಚಿಸಿತು.
ಹೆಂಡತಿ ಅನೈತಿಕ ಸಂಬಂಧವಿಟ್ಟುಕೊಂಡು ಜೀವನಾಂಶ ಕೇಳುವಂತಿಲ್ಲ: ಹೈಕೋರ್ಟ್
ಹೈಕೋರ್ಟ್ ಸೂಚನೆ:
- ಅಮಿಕಸ್ ಕ್ಯೂರಿ ವರದಿ ಪರಿಶೀಲಿಸಲು ಸೂಚನೆ
- ಶೌಚಾಲಯ ಇಲ್ಲದ ಶಾಲೆಗಳ ಸಮೀಕ್ಷೆಗೆ ಆದೇಶ
- ಎರಡು ತಿಂಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸಬೇಕು
- ಮೂಲ ಸೌಕರ್ಯ ಕಲ್ಪಿಸುವುದು ಸರ್ಕಾರದ ಕರ್ತವ್ಯ