ಬಾಂಗ್ಲಾ ಪ್ರಜೆಗಳಿಗೆ ನಕಲಿ ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದ ಆರೋಪಿಯೊಬ್ಬನ ವಿರುದ್ಧದ ಫೋರ್ಜರಿ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಇದು ದೇಶದ ಹಿತಾಸಕ್ತಿಗೆ ವಿರುದ್ಧವಾದ ಕೆಲಸವಾಗಿದ್ದು, ದೇಶದ ವ್ಯವಸ್ಥೆಯನ್ನೇ ನಾಶಮಾಡುತ್ತಿದೆ ಎಂದು ನ್ಯಾಯಾಲಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಬೆಂಗಳೂರು: ಬಾಂಗ್ಲಾ ಪ್ರಜೆಗಳಿಗೆ ನಕಲಿ ಆಧಾರ್ ಮಾಡಿಸಿಕೊಟ್ಟ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಪಶ್ಚಿಮ ಬಂಗಾಳ ನಿವಾಸಿ ವಿರುದ್ಧ ಫೋರ್ಜರಿ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಇದೇ ವೇಳೆ ಭಾರತಕ್ಕೆ ಬಂದ ವಿದೇಶಿಯರಿಗೆ ನಕಲಿ ಆಧಾರ್ ಕಾರ್ಡ್ ನೀಡುವ ಮೂಲಕ ದೇಶದ ವ್ಯವಸ್ಥೆಯನ್ನು ನಾಶಮಾಡುತ್ತಿದ್ದಾರೆ. ಇದು ದೇಶದ ಹಿತಾಸಕ್ತಿಯ ವಿರುದ್ಧದ ಕೆಲಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಪಶ್ಚಿಮ ಬಂಗಾಳದ ಅರ್ನಾಬ್ ಮಂಡಲ್ (28) ತನ್ನ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಫೋರ್ಜರಿ ಆರೋಪ ಹಾಗೂ ವಿದೇಶಿಯರ ಮತ್ತು ಭಾರತೀಯ ಪಾಸ್‌ಪೋರ್ಟ್ ಕಾಯ್ದೆಯಡಿ ದಾಖಲಿಸಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರನ್ನು ಬಂಧಿಸಲು ಕಾರಣ ನೀಡಿಲ್ಲ. ಅರ್ಜಿದಾರರು ಯಾವುದೇ ಅಪರಾಧ ಎಸಗಿಲ್ಲ ಎಂದರು.
ಈ ವಾದ ಕೇಳಿ ಕೆಂಡಮಂಡಲರಾದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ಅರ್ಜಿದಾರರ ವಕೀಲರನ್ನು ಉದ್ದೇಶಿಸಿ, ಪ್ರಕರಣದಲ್ಲಿ ಗಂಭೀರ ಸ್ವರೂಪದ ಅಪರಾಧಗಳಿವೆ. ಅರ್ಜಿದಾರರು ಬೇರೆ ದೇಶಗಳಿಂದ ಭಾರತಕ್ಕೆ ಬಂದವರಿಗೆ ನಕಲಿ ಆಧಾರ್ ಕಾರ್ಡ್ ನೀಡುವ ಮೂಲಕ ದೇಶದ ಎಲ್ಲ ವ್ಯವಸ್ಥೆಯನ್ನು ನಾಶ ಮಾಡುತ್ತಿದ್ದಾರೆ. ಅರ್ಜಿದಾರ ದೇಶದ ಹಿತಾಸಕ್ತಿ ವಿರುದ್ಧ ಕೆಲಸ ಮಾಡಿದ್ದಾರೆ. ಇಂತಹವರ ವಿರುದ್ಧ ಪ್ರಕರಣ ರದ್ದುಪಡಿಸಬೇಕು ಬಯಸುತ್ತಿರಾ? ಅದೂ ಬಂಧನಕ್ಕೆ ಕಾರಣ ನೀಡಿಲ್ಲವೆಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
ಅಲ್ಲದೇ, ಎಷ್ಟು ಆಧಾರ್ ಕಾರ್ಡ್ ಸೃಷ್ಟಿಸುತ್ತೀರಿ? ಎಷ್ಟು ಜನರಿಗೆ ಭಾರತಕ್ಕೆ ಬರಲು ಅವಕಾಶ ಕೊಡುತ್ತೀರಿ? ಪ್ರತಿಯೊಬ್ಬರೂ ಆಧಾರ್ ಕಾರ್ಡ್ ಪಡೆಯುತ್ತಾರೆ. ಏಕೆ? ಇಂಥ ಜನರಿಂದ. ದೇಶದ ಹಿತಾಸಕ್ತಿ ಬಗ್ಗೆ ಸ್ವಲ್ಪಮಟ್ಟಿಗಾದರೂ ಕಾಳಜಿ ಹೊಂದಿರಬೇಕು. ಅರ್ಜಿದಾರರು ತಮ್ಮ ಮನೆಯ ಬಾಗಿಲಿಗೆ ಬಂದ ವಿದೇಶಿಯರಿಗೆಲ್ಲ ನಕಲಿ ಆಧಾರ್ ಕಾರ್ಡ್ ಮಾಡಿಕೊಡುತ್ತಾರೆಯೇ? ವ್ಯವಸ್ಥೆಯನ್ನು ಗಮನಿಸಿದರೆ ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂಬುದೇ ತಿಳಿಯುತ್ತಿಲ್ಲ ಎಂದು ಹೈಕೋರ್ಟ್ ತೀವ್ರ ಆತಂಕ ವ್ಯಕ್ತಪಡಿಸಿತು.
ಕಾಯ್ದೆ ಅನ್ವಯಿಸುವುದಿಲ್ಲ
ಆಗ ಅರ್ಜಿದಾರ 2024ರ ಫೆ.21ರಿಂದ ಜೈಲಿನಲ್ಲಿ ಇದ್ದಾರೆ. ಅರ್ಜಿದಾರರು, ಅವರ ಮೇಲಿನ ಅಪರಾಧಗಳಿಗೆ ಕಾನೂನಿನಲ್ಲಿ ನಿಗದಿಯಾಗಿರುವ ಜೈಲು ಶಿಕ್ಷೆಯ ಅವಧಿ ಪೈಕಿ ಅರ್ಧ ಅವಧಿಯನ್ನು ಈಗಾಗಲೇ ಜೈಲಿನಲ್ಲಿ ಪೂರೈಸಿದ್ದರು. ವಿದೇಶಿಯರ ಕಾಯ್ದೆಯ ಅಪರಾಧವನ್ನು ಹೊರಿಸಲಾಗಿದೆ. ಆದರೆ, ಈ ಅಪರಾಧಗಳು ಅರ್ಜಿದಾರರಿಗೆ ಅನ್ವಯಿಸುವುದೇ ಇಲ್ಲ ಎಂದು ವಿವರಿಸಿದರು.
ಅದಕ್ಕೆ ಆಕ್ಷೇಪಿಸಿದ ನ್ಯಾಯಮೂರ್ತಿಗಳು, ಅರ್ಜಿದಾರರು ಕಸ್ಟಡಿಯಲ್ಲಿರುವುದು ಸರಿಯಾಗಿಯೇ ಇದೆ. ಅದರಲ್ಲಿ ಹೈಕೋರ್ಟ್ ಮಧ್ಯ ಪ್ರವೇಶಿಸುವುದಿಲ್ಲ. ಆಧಾರ್ ಕಾರ್ಡ್ ನೀಡಿ ವಿದೇಶಿಯರಿಗೂ ಸಹ ನಮ್ಮ ದೇಶದಲ್ಲಿ ಬೇರೆ ಬೇರೆ ಹಕ್ಕು ಸೃಷ್ಟಿಸುತ್ತೀರಿ ಎಂದರು.
ನಂತರ ವಿಚಾರಣಾ ನ್ಯಾಯಾಲಯದ ಮುಂದೆ ಜಾಮೀನು ಅರ್ಜಿ ಹಾಕಿಕೊಳ್ಳಲು ಅನುಮತಿಸಲಾಗುವುದು. ಅದನ್ನು ಪರಿಗಣಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಲಾಗುವುದು. ಆದರೆ, ಪ್ರಕರಣ ರದ್ದತಿಗೆ ಕೋರಬೇಡಿ. ಈ ನ್ಯಾಯಪೀಠವು ಪ್ರಕರಣದ ರದ್ದತಿಗೆ ನಿರಾಕರಿಸಿ ಆದೇಶ ಬರೆಯಿಸಿದರೆ, ನಿಮಗೆ ಜಾಮೀನು ಸಹ ಸಿಗುವುದಿಲ್ಲ ಎಂದು ಖಡಕ್ ಆಗಿ ಹೇಳಿದರು. ಅದಕ್ಕೆ ವಕೀಲರು, ಅರ್ಜಿ ಹಿಂಪಡೆಯುವುದಾಗಿ ತಿಳಿಸಿದರು. ಅದನ್ನು ಅನುಮತಿಸಿದ ಪೀಠ ಅರ್ಜಿ ವಜಾಗೊಳಿಸಿತು.
ಇದನ್ನೂ ಓದಿ: ಬಿಯರ್ ಬೆಲೆ ಕಡಿಮೆಯಾದ್ರೂ ಗ್ರಾಹಕರಿಗೆ ಯಾಕಿಷ್ಟು ಸಂಕಟ? ಮಾರುಕಟ್ಟೆ ಸಮಸ್ಯೆ ಏನು?
ಪ್ರಕರಣವೇನು?:
ಖಚಿತ ಮಾಹಿತಿ ಮೇರೆಗೆ ಸೂರ್ಯನಗರ ಠಾಣಾ ಪೊಲೀಸರು 2024ರ ನ.21ರಂದು ಅಂದಿನ ಆನೇಕಲ್ ಉಪ ವಿಭಾಗದ ಡಿವೈಎಸ್ಪಿ ಬಿ.ಕೆ.ಮೋಹನ್ ಕುಮಾರ್ ಅವರ ನೇತೃತ್ವದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆ ಹೋಬಳಿ ಹೀಲಲೆಗೆ ಗ್ರಾಮದಲ್ಲಿ ಸೈಬರ್ ಸೆಂಟರ್ ಮೇಲೆ ದಾಳಿ ನಡೆಸಿದ್ದರು. ಅಲ್ಲಿ ಅರ್ನಾಬ್ ಮಂಡಲ್ ಎಂಬ ವ್ಯಕ್ತಿ ಸುಳ್ಳು ದಾಖಲೆ ಬಳಸಿ ಬಾಂಗ್ಲಾ ದೇಶದ ವ್ಯಕ್ತಿಗಳಿಗೆ ಆಧಾರ್ ಕಾರ್ಡ್ ಮಾಡಿ ಕೊಡುತ್ತಿರುವುದು ಕಂಡು ಬಂದಿತ್ತು. ಪೊಲೀಸರು ಆತನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ಹಾಗೂ ಅದಕ್ಕೆ ಸಂಬಂಧಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲು ಕೋರಿ ಅರ್ನಾಬ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: Bengaluru: 7 ತಿಂಗಳಿಂದ ಏಳು ಕೋಟಿ ರೂಪಾಯಿಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲೇ ಕಾವಲು!


