ಮೇಕೆಗಳು ಹಿತ್ತಲಿನ ಹೂ ಗಿಡಗಳನ್ನು ತಿಂದ ವಿಚಾರವಾಗಿ ನಡೆದ ಜಗಳದಲ್ಲಿ 70 ವರ್ಷದ ವೃದ್ಧೆ ಮೇಲೆ ಹಲ್ಲೆ ನಡೆಸಿ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಮೂರು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಮಹಿಳೆಗೆ ಆಕೆಯ ‘ಇಬ್ಬರು ಮಕ್ಕಳ ಭವಿಷ್ಯ ಮತ್ತು ಅಪರಾಧ ಎಸಗಿದ ನಂತರದ ವರ್ಷಗಳಲ್ಲಿ ತೋರಿದ ಸನ್ನಡತೆ’ ಪರಿಗಣಿಸಿ ಹೈಕೋರ್ಟ್ ಕ್ಷಮಾದಾನ ನೀಡಿದೆ.

ವೆಂಕಟೇಶ್‌ ಕಲಿಪಿ

ಬೆಂಗಳೂರು (ಜೂ.27) : ಮೇಕೆಗಳು ಹಿತ್ತಲಿನ ಹೂ ಗಿಡಗಳನ್ನು ತಿಂದ ವಿಚಾರವಾಗಿ ನಡೆದ ಜಗಳದಲ್ಲಿ 70 ವರ್ಷದ ವೃದ್ಧೆ ಮೇಲೆ ಹಲ್ಲೆ ನಡೆಸಿ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಮೂರು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಮಹಿಳೆಗೆ ಆಕೆಯ ‘ಇಬ್ಬರು ಮಕ್ಕಳ ಭವಿಷ್ಯ ಮತ್ತು ಅಪರಾಧ ಎಸಗಿದ ನಂತರದ ವರ್ಷಗಳಲ್ಲಿ ತೋರಿದ ಸನ್ನಡತೆ’ ಪರಿಗಣಿಸಿ ಹೈಕೋರ್ಟ್ ಕ್ಷಮಾದಾನ ನೀಡಿದೆ.

ಪ್ರಕರಣದಲ್ಲಿ ಅಪರಾಧಿಯಾಗಿರುವ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕು ನಿವಾಸಿ ರೇಣುಕಾಗೆ ಇಬ್ಬರು ಮಕ್ಕಳಿದ್ದಾರೆ. ಘಟನೆ ನಂತರ ಈವರೆಗೂ ಇತರೆ ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗದೆ ಸನ್ನಡತೆ ಕಾಯ್ದುಕೊಂಡಿದ್ದಾರೆ. ಮೃತ ವೃದ್ಧೆಯನ್ನು ಕೊಲೆ ಮಾಡುವ ಉದ್ದೇಶವನ್ನು ಆಕೆ ಹೊಂದಿರಲಿಲ್ಲ. ಕ್ಷಣ ಮಾತ್ರದಲ್ಲಿ ಉಂಟಾದ ಜಗಳದಲ್ಲಿ ಮಾಡಿದ ಹಲ್ಲೆಯಿಂದ ವೃದ್ಧೆ ಸಾವನ್ನಪ್ಪಿದ್ದಾರೆ ಎಂದು ಪರಿಗಣಿಸಿದ ಹೈಕೋರ್ಚ್‌, ಶಿಕ್ಷೆ ರದ್ದುಪಡಿಸಿದೆ.

16ನೇ ವಯಸ್ಸಿಗೆ ಹುಡುಗಿ ಒಮ್ಮತದ ಸೆಕ್ಸ್ ನಿರ್ಧರಿಸಬಹದು, ಹುಡುಗನ ಪರವಾಗಿ ಹೈಕೋರ್ಟ್ ತೀರ್ಪು!

ಅಲ್ಲದೆ, ಅಪರಾಧಿಗಳ ಪರಿವೀಕ್ಷಣಾ ಕಾಯ್ದೆ-1958ರ ಸೆಕ್ಷನ್‌ 4 ಅನುಸಾರ ಒಂದು ವರ್ಷದವರೆಗೆ ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗುವುದಿಲ್ಲ ಎಂಬುದಾಗಿ ಮುಚ್ಚಳಿಕೆ ಬರೆದುಕೊಡಬೇಕು ಮತ್ತು ಒಂದು ಲಕ್ಷ ರು. ಮೊತ್ತಕ್ಕೆ ವೈಯಕ್ತಿಕ ಬಾಂಡ್‌ ಹಾಗೂ ಒಬ್ಬರ ಭದ್ರತಾ ಖಾತರಿ ಒದಗಿಸಬೇಕು ಎಂದು ರೇಣುಕಾಗೆ ಹೈಕೋರ್ಟ್ ಷರತ್ತು ವಿಧಿಸಿದೆ.

ಪ್ರಕರಣದ ವಿವರ:

2009ರ ಮೇ 24ರಂದು ಮಧ್ಯಾಹ್ನ ನಂಜಮ್ಮ (70) ಅವರ ಮನೆಯ ಹಿತ್ತಲಿನಲ್ಲಿದ್ದ ಹೂ ಗಿಡಗಳನ್ನು ಚಂದ್ರಣ್ಣ ಎಂಬುವರಿಗೆ ಸೇರಿದ ಮೇಕೆಗಳು ತಿನ್ನುತ್ತಿದ್ದವು. ಅದನ್ನು ನೋಡಿ ಆಕ್ರೋಶಗೊಂಡ ನಂಜಮ್ಮ, ಚಂದ್ರಣ್ಣನ ಪುತ್ರಿ ರೇಣುಕಾಗೆ ‘ಪ್ರತಿ ದಿನ ನಮ್ಮ ಹಿತ್ತಲಿಗೆ ಮೇಕೆಗಳನ್ನು ಬಿಟ್ಟು ಸಸಿಗಳನ್ನು ಮೇಯಿಸುತ್ತಿದ್ದೀಯಾ, ನಿನಗೆ ಎಷ್ಟುಹೇಳಿದರೂ ತಿಳಿಯುವುದಿಲ್ಲವೇ’ ಎಂದು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ರೇಣುಕಾ, ನಂಜಮ್ಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಜುಟ್ಟು ಹಿಡಿದು ಬೀಳಿಸಿ ರಸ್ತೆವರೆಗೆ ಎಳೆದುಕೊಂಡು ಬಂದು ಕಾಲಿನಿಂದ ಹೊಟ್ಟೆಗೆ ತುಳಿದಿದ್ದರು. ಗಾಯಗೊಂಡಿದ್ದ ನಂಜಮ್ಮ ಅವರನ್ನು ಪತಿಯು ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಘಟನೆ ಕುರಿತು ಮಳವಳ್ಳಿ ಗ್ರಾಮೀಣ ಠಾಣೆಗೆ ದೂರು ನೀಡಲಾಗಿತ್ತು. ಮೇ 25ರಂದು ಮಳವಳ್ಳಿ ಠಾಣಾ ಪೊಲೀಸರು ನಂಜಮ್ಮನ ಹೇಳಿಕೆ ಪಡೆದು ರೇಣುಕಾ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು.

ರೇಣುಕಾ ಬಲವಾಗಿ ಒದ್ದಿದ್ದರಿಂದ ಹೊಟ್ಟೆಯಲ್ಲಿ ಗಂಭೀರ ಗಾಯವಾದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಮೇ 26ರಂದು ನಂಜಮ್ಮ ಸಾವನ್ನಪ್ಪಿದ್ದರು. ವಿಚಾರಣೆ ನಡೆಸಿದ್ದ ಮಂಡ್ಯ ಜಿಲ್ಲಾ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ, ಐಪಿಸಿ ಸೆಕ್ಷನ್‌ 304​-2(ಉದ್ದೇಶಪೂರ್ವಕವಲ್ಲದೆ ಸಾವಿಗೆ ಕಾರಣವಾದ) ಅಡಿಯಲ್ಲಿ ರೇಣುಕಾಗೆ ಮೂರು ವರ್ಷ ಸಾಧಾರಣಾ ಜೈಲು ಶಿಕ್ಷೆ ವಿಧಿಸಿ 2011ರ ಆ.6ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಆಕೆ ಹೈಕೋರ್ಚ್‌ ಮೊರೆ ಹೋಗಿದ್ದರು.

ರೇಣುಕಾ ಪರ ವಕೀಲ ಸಿ.ಎನ್‌.ರಾಜು, ಘಟನೆ ನಡೆದಾಗ ಆಕೆಗೆ 22 ವರ್ಷ. ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಮೃತಳು ಮತ್ತು ಮೇಲ್ಮನವಿದಾರಳು ಒಂದೇ ಗ್ರಾಮಸ್ಥರು ಮತ್ತು ನೆರೆಹೊರೆಯವರು. ಮೇಕೆ ಸಸಿಗಳನ್ನು ತಿನ್ನುವ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿದೆ ಹೊರತು, ಮೃತಳಿಗೆ ಹಲ್ಲೆ ಮಾಡುವ ಮತ್ತು ಗಾಯಗೊಳಿಸುವ ಉದ್ದೇಶ ರೇಣುಕಾಗೆ ಇರಲಿಲ್ಲ. ಹಾಗಾಗಿ, ಅಪರಾಧಿಗಳ ಪರಿವೀಕ್ಷಣಾ ಕಾಯ್ದೆ-1958ರ ಅಡಿಯಲ್ಲಿ ಅಪರಾಧಿಯನ್ನು ಬಿಡುಗಡೆಗೊಳಿಸಲು ಇದು ಸೂಕ್ತ ಪ್ರಕರಣವಾಗಿದೆ ಎಂದು ಹೈಕೋರ್ಟ್ಗೆ ಮನವರಿಕೆ ಮಾಡಿಕೊಟ್ಟರು.

ಶೌಚಾಲಯವಿಲ್ಲದ ಶಾಲೆಗಳಿಗೆ ಪೋಷಕರು ಮಕ್ಕಳನ್ನು ಕಳುಹಿಸ್ತಾರಾ?: ಸರ್ಕಾರಕ್ಕೆ ಹೈಕೋರ್ಟ್ ತೀವ್ರ ತರಾಟೆ

ಅಪರಾಧ ಸಾಬೀತು-ಶಿಕ್ಷೆ ರದ್ದು:

ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್‌ ಅವರ ಪೀಠ, ರೇಣುಕಾ ಅವರ ಹಲ್ಲೆಯಿಂದಲೇ ನಂಜಮ್ಮ ಅವರು ಸಾವನ್ನಪ್ಪಿರುವುದು ಸಾಕ್ಷ್ಯಾಧಾರಗಳಿಂದ ದೃಢಪಡುತ್ತದೆ. ಅದರಂತೆ ಆಕೆಯನ್ನು ದೋಷಿಯಾಗಿ ತೀರ್ಮಾನಿಸಿ ಮಂಡ್ಯ ಜಿಲ್ಲಾ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯಗಳು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಪುರಸ್ಕರಿಸಲಾಗುತ್ತಿದೆ. ಆದರೆ, ಘಟನೆ ನಡೆದು 15 ವರ್ಷ ಕಳೆದಿವೆ. ರೇಣುಕಾಗೆ ಸದ್ಯ 35 ವರ್ಷ. ಆಕೆಗೆ ಇಬ್ಬರು ಮಕ್ಕಳಿದ್ದಾರೆ. 2009ರಿಂದ ಈವರೆಗೂ ಆಕೆ ಇತರೆ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿಲ್ಲ. ಈ ಎಲ್ಲ ಅಂಶಗಳು ಅಪರಾಧಗಳ ಪರಿವೀಕ್ಷಣಾ ಕಾಯ್ದೆ-1958ರ ಸೆಕ್ಷನ್‌ 4 ಅಡಿಯ ಲಾಭವನ್ನು ಆಕೆಗೆ ಒದಗಿಸಬಹುದು ಎಂದು ತೀರ್ಮಾನಿಸಿ ಜೈಲು ಶಿಕ್ಷೆ ರದ್ದುಪಡಿಸಿತು.