ಶೌಚಾಲಯವಿಲ್ಲದ ಶಾಲೆಗಳಿಗೆ ಪೋಷಕರು ಮಕ್ಕಳನ್ನು ಕಳುಹಿಸ್ತಾರಾ?: ಸರ್ಕಾರಕ್ಕೆ ಹೈಕೋರ್ಟ್ ತೀವ್ರ ತರಾಟೆ
ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಸಮರ್ಪಕವಾಗಿ ಶೌಚಾಲಯ ಸೌಲಭ್ಯವಿಲ್ಲದ ಬಗ್ಗೆ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್, ಶೌಚಾಲಯಗಳಿಲ್ಲದ ಶಾಲೆಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಕಳುಹಿಸಲು ಇಷ್ಟಪಡುವುದಿಲ್ಲ.
ಬೆಂಗಳೂರು (ಜೂ.23): ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಸಮರ್ಪಕವಾಗಿ ಶೌಚಾಲಯ ಸೌಲಭ್ಯವಿಲ್ಲದ ಬಗ್ಗೆ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್, ಶೌಚಾಲಯಗಳಿಲ್ಲದ ಶಾಲೆಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಕಳುಹಿಸಲು ಇಷ್ಟಪಡುವುದಿಲ್ಲ. ಇಂತಹ ಶಾಲೆಗಳಿಂದ ಯಾವ ಮಾದರಿ ಸಮಾಜ ನಿರ್ಮಿಸಲು ಸಾಧ್ಯವಿದೆ? ಸರ್ಕಾರಿ ಅಧಿಕಾರಿಗಳು ತಮ್ಮ ಮಕ್ಕಳನ್ನು ಈ ಶಾಲೆಗಳಿಗೆ ಕಳುಹಿಸುತ್ತಾರೆಯೇ ಎಂದು ಮಾರ್ಮಿಕವಾಗಿ ಪ್ರಶ್ನಿಸಿದೆ.
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ವಿಚಾರವಾಗಿ 2013ರಲ್ಲಿ ಹೈಕೋರ್ಟ್ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ವಿಚಾರಣೆಗೆ ಅಮೆರಿಕದಿಂದ ಬರುವ ಪತಿಗೆ ಪತ್ನಿ ಹಣ ಕೋಡಬೇಕಿಲ್ಲ: ಹೈಕೋರ್ಟ್
ಅಲ್ಲದೆ, ಸೂಕ್ತ ರೀತಿಯಲ್ಲಿ ಶೌಚಾಲಯಗಳಿಲ್ಲದ ಸರ್ಕಾರಿ ಶಾಲೆಗಳ ದುಸ್ಥಿತಿ ಕಂಡು ನ್ಯಾಯಾಲಯಕ್ಕೆ ಆಘಾತವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ನ್ಯಾಯಪೀಠ, ಸರ್ಕಾರಿ ಶಾಲೆಗಳಲ್ಲಿನ ಮೂಲಸೌಕರ್ಯಗಳ ಸ್ಥಿತಿಗತಿ ಬಗ್ಗೆ ಹೊಸದಾಗಿ ಸಮೀಕ್ಷೆ ನಡೆಸಿ ಮೂರು ತಿಂಗಳಲ್ಲಿ ವರದಿ ಸಲ್ಲಿಸಬೇಕು. ಶಾಲೆಗಳ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಬಜೆಟ್‌ನ ವಿಶೇಷ ಅನುದಾನ ಹಂಚಿಕೆ ಮಾಡಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ ಸರ್ಕಾರಿ ವಕೀಲರು ವರದಿ ಸಲ್ಲಿಸಿ, ರಾಜ್ಯದಲ್ಲಿ ಕೇವಲ 38 ಶಾಲೆಗಳಲ್ಲಿ ಮಾತ್ರ ಶೌಚಾಲಯ ವ್ಯವಸ್ಥೆ ಇಲ್ಲ ಎಂದು ತಿಳಿಸಿದರು. ಆ ವರದಿಯನ್ನು ಪರಿಶೀಲಿಸಿದ ನ್ಯಾಯಪೀಠ, ಸರ್ಕಾರಿ ಶಾಲೆಯೊಂದರಲ್ಲಿ ಕುಡಿಯುವ ನೀರನ್ನು ತಲೆ ಮೇಲೆ ಹೊತ್ತು ತರುತ್ತಿರುವುದು ಹಾಗೂ ಮತ್ತೊಂದು ಶಾಲೆಯಲ್ಲಿ ಶೌಚಾಲಯದ ಸುತ್ತ ಮುಳ್ಳು ಕಂಟಿಗಳು ಬೆಳೆದಿರುವ ಫೋಟೋಗಳನ್ನು ಗಮನಿಸಿತು.
ಇದರಿಂದ ತೀವ್ರವಾಗಿ ಬೇಸರಗೊಂಡ ನ್ಯಾಯಪೀಠ, ಸರ್ಕಾರಿ ಶಾಲೆಗಳಲ್ಲಿನ ಮೂಲಸೌಕರ್ಯಗಳ ದುಸ್ಥಿತಿಗೆ ಇದೊಂದು ಉದಾಹರಣೆ. ಸಮರ್ಪಕ ಶೌಚಾಲಯಗಳಿಲ್ಲ. ಶೌಚಾಲಯಗಳ ಸುತ್ತ ಮುಳ್ಳುಕಂಟಿಗಳು ಬೆಳೆದಿವೆ. ನಾಮಕಾವಸ್ತೆಗೆಂದು ಶೌಚಾಲಯಕ್ಕೆ ನಾಲ್ಕು ಗೋಡೆ, ಬಾಗಿಲು ಮಾತ್ರ ಇದೆ. ಆದರೆ, ಅಲ್ಲಿ ನೀರಿನ ಸೌಲಭ್ಯ ಇಲ್ಲ. ಈ ಶೌಚಾಲಯವು ಗಂಡು ಮಕ್ಕಳಿಗೋ ಅಥವಾ ಹೆಣ್ಣು ಮಕ್ಕಳಿಗೋ ಎಂಬುವುದೇ ತಿಳಿಯುವುದಿಲ್ಲ. ಶೌಚಾಲಯದ ಹೊರಗೋಡೆ, ಬಾಗಿಲುಗಳಿಗೆ ಈಚೆಗೆ ಬಣ್ಣ ಬಳಿಯಲಾಗಿದೆ ಎಂದು ನುಡಿಯಿತು.
ಸರ್ಕಾರಿ ಶಾಲೆಗಳಲ್ಲಿ ಸೂಕ್ತ ಸೌಲಭ್ಯ ಕಲ್ಪಿಸದಿರುವುದು ಪ್ರತಿಭಾವಂತ ಮಕ್ಕಳು ದೇಶದ ಅಭಿವೃದ್ಧಿಯಲ್ಲಿ ಪಾಲುದಾರರಾಗುವುದನ್ನು ತಡೆದಂತೆ ಆಗುತ್ತದೆ. ಇಂತಹ ದುಸ್ಥಿತಿಯಿದ್ದರೆ ಸರ್ಕಾರಿ ಶಾಲೆಗಳ ಮಕ್ಕಳ ಭವಿಷ್ಯದ ಬಗ್ಗೆ ಪೋಷಕರು ಕಾಣುವ ಕನಸು ನನಸಾಗಲು ಸಾಧ್ಯವೇ? ಈ ಅರ್ಜಿಯ ವಿಚಾರಣೆ 2013ರಿಂದ ನಡೆಯುತ್ತಿದೆ. ಈಗ ನಾವು 2023ರಲ್ಲಿ ಇದ್ದೇವೆ. ಈ ಅವಧಿಯಲ್ಲಿ ಮೂರು ಸರ್ಕಾರಗಳು ಬಂದಿದೆ. ಸರ್ಕಾರಗಳು ಬದಲಾದರೂ ಪರಿಸ್ಥಿತಿ ಬದಲಾಗಿಲ್ಲ ಎಂದು ನ್ಯಾಯಪೀಠ ತೀವ್ರ ಬೇಸರ ಹೊರಹಾಕಿತು.
ನಾಡಿನ ಭವಿಷ್ಯ ಇರುವುದು ಶಾಲೆಗಳಲ್ಲಿ. ಅವುಗಳ ಬಗ್ಗೆ ಸರ್ಕಾರ ಇಷ್ಟೊಂದು ಉದಾಸೀನ ಮಾಡಬಾರದು. ಈ ವಿಚಾರ ಮನಸ್ಸಿಗೆ ತುಂಬಾ ನೋವು ಉಂಟು ಮಾಡಿದೆ. ‘ಚಲ್ತಾ ಹೈ’ ಎಂಬ ಭಾವನೆ ಸರ್ಕಾರಿ ಅಧಿಕಾರಿಗಳಿಗೆ ಬಂದು ಬಿಟ್ಟಿದೆಯೇ? ಈ ಮನೋಭಾವನೆಯನ್ನು ನ್ಯಾಯಾಲಯ ಸಹಿಸುವುದಿಲ್ಲ. ಸರ್ಕಾರ ಸಹ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸದ ಅಧಿಕಾರಿಗಳನ್ನು ಸಮರ್ಥಿಸಿಕೊಳ್ಳಬಾರದು. ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯಗಳನ್ನು ಒದಗಿಸುವುದು ಸರ್ಕಾರದ ಆದ್ಯತೆಯಾಗಬೇಕು ಎಂದು ನ್ಯಾಯಪೀಠ ನುಡಿಯಿತು.
ಎಚ್ಡಿಕೆಯಿಂದ ಜಮೀನು ವಾಪಸ್ ಪಡೆದಿದ್ದೀರಾ?: ಹೈಕೋರ್ಟ್
ಇದೇ ವೇಳೆ ಅನುದಾನದ ಲಭ್ಯತೆ ಆಧರಿಸಿ ಶಾಲೆಗಳಲ್ಲಿ ಮೂಲ ಸೌಕರ್ಯ ಒದಗಿಸಲಾಗುವುದು ಎಂಬ ಸರ್ಕಾರಿ ವಕೀಲರ ಹೇಳಿಕೆ ಒಪ್ಪದ ನ್ಯಾಯಪೀಠ, ಶಾಲೆಗಳ ಮೂಲಸೌಕರ್ಯಗಳ ಅಭಿವೃದ್ಧಿಗೆ ಬಜೆಟ್‌ನ ವಿಶೇಷ ಅನುದಾನ ಹಂಚಿಕೆ ಮಾಡಬೇಕು. ಸರ್ಕಾರಿ ಶಾಲೆಗಳಲ್ಲಿನ ಮೂಲ ಸೌಕರ್ಯಗಳ ಸ್ಥಿತಿಗತಿ ಬಗ್ಗೆ ಹೊಸದಾಗಿ ಸಮೀಕ್ಷೆ ನಡೆಸಿದ ಮೂರು ತಿಂಗಳಲ್ಲಿ ವರದಿ ಸಲ್ಲಿಸಬೇಕು. ಸಮೀಕ್ಷೆ ವೇಳೆ ತಾಲೂಕು ಕಾನೂನು ಸೇವಾ ಸಮಿತಿಗಳ ಸದಸ್ಯ ಕಾರ್ಯದರ್ಶಿಗಳನ್ನು ಭಾಗಿದಾರರನ್ನಾಗಿ ಮಾಡಿಕೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ ಇರುವ ಕಡೆ ಎರಡು ವಾರದಲ್ಲಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.