ಪರಪುರುಷನ ಜೊತೆಗಿದ್ದ ಕಾರಣಕ್ಕೆ ಪತ್ನಿ ಹತ್ಯೆಗೈದ ಪತಿ ಜೀವಾವಧಿ ಶಿಕ್ಷೆಯಿಂದ ಪಾರು..!

ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ದೊಡ್ಡಬಳ್ಳಾಪುರದ ಬೊಮ್ಮನಹಳ್ಳಿಯ ನಿವಾಸಿ ರಾಜೇಶ್‌ (39) ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಬಿ.ವೀರಪ್ಪ ಹಾಗೂ ಕೆ.ಎಸ್‌.ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.

High Court Ordered that the Life Sentence be Reduced to 7 Years on Murder Case grg

ಬೆಂಗಳೂರು(ಮೇ.27):  ಪರಪುರುಷನ ಜೊತೆಗಿದ್ದ ಕಾರಣ ಪತ್ನಿಯನ್ನು ಕೊಲೆಗೈದ ಪ್ರಕರಣದಲ್ಲಿ ಪತಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಏಳು ವರ್ಷಕ್ಕೆ ಇಳಿಸಿ ಹೈಕೋರ್ಟ್‌ ಆದೇಶಿಸಿದೆ.
ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ದೊಡ್ಡಬಳ್ಳಾಪುರದ ಬೊಮ್ಮನಹಳ್ಳಿಯ ನಿವಾಸಿ ರಾಜೇಶ್‌ (39) ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಬಿ.ವೀರಪ್ಪ ಹಾಗೂ ಕೆ.ಎಸ್‌.ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಸಿ.ಎಚ್‌.ಹನುಮಂತರಾಯ ವಾದ ಮಂಡಿಸಿ, ಮೇಲ್ಮನವಿದಾರನ ಪತ್ನಿ ಬೆಳಗಿನ ಜಾವ 4 ಗಂಟೆಯಲ್ಲಿ ಗ್ರಾಮದ ಹೊರ ವಲಯದ ಹೊಲದಲ್ಲಿ ಪರಪುರುಷನ ಜೊತೆಗಿದ್ದರು. ಈ ದೃಶ್ಯವನ್ನು ನೋಡಿದ್ದರಿಂದ ಉಂಟಾದ ಹಠಾತ್‌ ಪ್ರಚೋದನೆಯಿಂದ ಪತಿ ಸ್ವಯಂ ನಿಯಂತ್ರಣ ಹಾಗೂ ಮಾನಸಿಕ ಸಮತೋಲನ ಕಳೆದುಕೊಂಡು ಪತ್ನಿಯನ್ನು ಹತ್ಯೆಗೈದಿದ್ದಾನೆ. ಆತ ಘಟನಾ ಸ್ಥಳಕ್ಕೆ ನಿರಾಯುಧನಾಗಿ ಹೋಗಿದ್ದ. ಹೆಂಡತಿಯನ್ನು ಕೊಲೆ ಮಾಡುವ ಉದ್ದೇಶ ಹೊಂದಿರಲಿಲ್ಲ. ಹಾಗಾಗಿ, ಅದನ್ನು ಉದ್ದೇಶಪೂರ್ವಕ ಕೊಲೆಯೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದರು. ಈ ವಾದ ಪರಿಗಣಿಸಿದ ಹೈಕೋರ್ಟ್‌ ರಾಜೇಶ್‌ಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಏಳು ವರ್ಷ ಕಠಿಣ ಜೈಲು ಶಿಕ್ಷೆಗೆ ಇಳಿಸಿದೆ.

ದೀರ್ಘಕಾಲದವರೆಗೆ ಸಂಗಾತಿಯನ್ನು ಸೆಕ್ಸ್‌ಗೆ ಕಾಯಿಸೋದು ಮಾನಸಿಕ ಕ್ರೌರ್ಯ: ಅಲಹಾಬಾದ್‌ ಹೈಕೋರ್ಟ್‌!

ಪ್ರಕರಣದ ವಿವರ:

ಲಕ್ಷ್ಮಿ ಎಂಬಾಕೆಯನ್ನು ರಾಜೇಶ್‌ 2010ರ ಅ.22ರಂದು ಮದುವೆಯಾಗಿದ್ದರು. ಆತನೊಂದಿಗೆ ಬಾಳಲು ಲಕ್ಷ್ಮೇಗೆ ಇಷ್ಟವಿರಲಿಲ್ಲ. ಇದರಿಂದ ರಾಜೇಶ್‌ ಎರಡನೆ ಮದುವೆಯಾಗಲು ಆಕೆ ಒಪ್ಪಿಗೆ ಪತ್ರ ಬರೆದುಕೊಟ್ಟಿದ್ದಳು. ಅದರಂತೆ ರಾಜೇಶ್‌ ಎರಡನೇ ಮದುವೆಯಾಗಿದ್ದರು. ಹಿರಿಯರ ರಾಜಿ ಸಂಧಾನದಂತೆ ಲಕ್ಷ್ಮೇಗೆ ಮನೆ ಕಟ್ಟಿಸಿಕೊಡಲಾಗಿತ್ತು. ಇಬ್ಬರು ಪತ್ನಿಯರೊಂದಿಗೆ ರಾಜೇಶ್‌ ಸಂಸಾರ ನಡೆಸುತ್ತಿದ್ದರು.

ಲಕ್ಷ್ಮಿ  2018ರ ಫೆ.8ರಂದು ತವರು ಮನೆಯಿಂದ ರಾಜೇಶ್‌ ಮನೆಗೆ ಬಂದಿದ್ದರು. ಅಂದು ಬೆಳಗಿನ ಜಾವ 4 ಗಂಟೆಯಲ್ಲಿ ಲಕ್ಷ್ಮಿ  ತನ್ನ ಪಕ್ಕದಲ್ಲಿ ಇಲ್ಲದೇ ಇರುವುದನ್ನು ರಾಜೇಶ್‌ ಗಮನಿಸಿದ್ದರು. ಹೆಂಡತಿಯನ್ನು ಹುಡುಕಿಕೊಂಡು ಹೋದಾಗ ಗ್ರಾಮದ ಹೊರವಲಯದ ಹೊಲದಲ್ಲಿ ಯಾರೋ ಮಾತನಾಡುತ್ತಿರುವುದು ಕೇಳಿತ್ತು. ಅಲ್ಲಿಗೆ ತೆರಳಿ ನೋಡಿದಾಗ ಲಕ್ಷ್ಮಿ  ಪರಪುರುಷನ ಜೊತೆಯಲ್ಲಿ ಇರುವುದು ಕಂಡುಬಂದಿತ್ತು. ಇದರಿಂದ ಕುಪಿತನಾದ ರಾಜೇಶ್‌, ಆಕೆ ತೊಟ್ಟಿದ್ದ ವೇಲ್‌ನಿಂದಲೇ ಕುತ್ತಿಗೆ ಬಿಗಿದು ಸಾಯಿಸಿದ್ದರು.

ನಂತರ ಸ್ನೇಹಿತನ ಮೂಲಕ ರಾಜೇಶ್‌ ಘಟನೆಯ ಮಾಹಿತಿಯನ್ನು ದೊಡ್ಡಬೆಳವೆಂಗಲ ಪೊಲೀಸರು ತಿಳಿಸಿದ್ದನು. ಕೊಲೆ ಪ್ರಕರಣ ದಾಖಲಿಸಿದ್ದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದರು. ದೊಡ್ಡಬಳ್ಳಾಪುರ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಕೊಲೆ ಪ್ರಕರಣದಡಿ ರಾಜೇಶ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಆದೇಶ ಪ್ರಶ್ನಿಸಿ ಆತ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದನು.

Latest Videos
Follow Us:
Download App:
  • android
  • ios