Asianet Suvarna News Asianet Suvarna News

ದೇಶದಿಂದ 9 ತಬ್ಲೀಘಿಗಳನ್ನ ಹೊರಹಾಕಿ: ಹೈಕೋರ್ಟ್‌

ಧರ್ಮ ಪ್ರಚಾರ ಮಾಡುತ್ತಿದ್ದ ಆರೋಪದಲ್ಲಿ ದಾಖಲಾಗಿದ್ದ ಎಫ್‌ಐಆರ್‌ ರದ್ದು ಪಡಿಸಿದ ಹೈಕೋರ್ಟ್‌| ಒಂಬತ್ತು ಮಂದಿ ತಕ್ಷಣ ದೇಶದಿಂದ ಹೊರ ಹೋಗಬೇಕು, ಮುಂದಿನ 10 ವರ್ಷ ಭಾರತಕ್ಕೆ ಬರಬಾ​ರ​ದು: ಹೈಕೋರ್ಟ್‌| ಈ ಆದೇಶದಡಿ ಆರೋಪಿಗಳು ಮತ್ತೆ ದೇಶದಲ್ಲಿ ನೆಲೆಸಲು ಅವಕಾಶ ಇರುವುದಿಲ್ಲ|

High Court Order for 9 Tablighi Must go out from the country
Author
Bengaluru, First Published Aug 9, 2020, 10:11 AM IST

ಬೆಂಗಳೂರು(ಆ.09): ಪ್ರವಾಸಿ ವೀಸಾ ಪಡೆದು ದೇಶಕ್ಕೆ ಬಂದಿದ್ದ ಒಂಬತ್ತು ಮಂದಿ ತಬ್ಲೀಘಿ ಜಮಾತ್‌ ಸಂಘಟನೆ ಸದಸ್ಯರ ವಿರುದ್ಧ ಅಕ್ರಮವಾಗಿ ಧರ್ಮ ಪ್ರಚಾರ ಮಾಡುತ್ತಿದ್ದ ಆರೋಪದಲ್ಲಿ ದಾಖಲಾಗಿದ್ದ ಎಫ್‌ಐಆರ್‌ ರದ್ದು ಪಡಿಸಿರುವ ಹೈಕೋರ್ಟ್‌, ಈ ಒಂಬತ್ತು ಮಂದಿ ತಕ್ಷಣ ದೇಶದಿಂದ ಹೊರ ಹೋಗಬೇಕು ಹಾಗೂ ಮುಂದಿನ ಹತ್ತು ವರ್ಷಗಳ ಕಾಲ ಭಾರತಕ್ಕೆ ಭೇಟಿ ನೀಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಬೇಕು ಎಂದು ಆದೇಶಿಸಿದೆ.

ತುಮಕೂರು ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ ರದ್ದು ಕೋರಿ ದಕ್ಷಿಣ ಆಫ್ರಿಕಾದ ಜೊಹಾನ್ಸ್‌ಬರ್ಗ್‌ನ ಫರ್ಹನ್‌ ಹುಸೈನ್‌, ಇಂಡೋನೇಷ್ಯಾದ ರಿಜೋ ಸೇರಿದಂತೆ ಮತ್ತಿತರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಕೃಷ್ಣ ದೀಕ್ಷಿತ್‌ ಅವರಿದ್ದ ನ್ಯಾಯಪೀಠ ಇತ್ತೀಚೆಗೆ ಈ ಆದೇಶ ಪ್ರಕಟಿಸಿದೆ.

ತಬ್ಲೀಘಿ ಮುಖ್ಯಸ್ಥ‌ನನ್ನು ಬಂಧಿಸಲು ಸರ್ಕಾರ ಹಿಂದೇಟು ಹಾಕಲು ಇದು ಕಾರಣವಂತೆ!

ಅರ್ಜಿದಾರ ವಿದೇಶಿಗರ ವಿರುದ್ಧ ಇತರೆ ಯಾವುದೇ ಪ್ರಕರಣ ದಾಖಲಾಗಿದ್ದಲ್ಲಿ, ಜೊತೆಗೆ, ವಶಕ್ಕೆ ಪಡೆದು ವಿಚಾರಣೆ ನಡೆಸಲು ಅಗತ್ಯವಿಲ್ಲದಿದ್ದಲ್ಲಿ ತಕ್ಷಣವೇ ಅವರಿಗೆ ದೇಶ ಬಿಟ್ಟು ತೆರಳಲು ಅನುಮತಿ ನೀಡಬೇಕು ಎಂದು ವಿದೇಶೀಯರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್‌ಆರ್‌ಆರ್‌ಒ) ನ್ಯಾಯಪೀಠ ಸೂಚಿಸಿದೆ.

ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಅರ್ಜಿದಾರರ ವಿಚಾರಣೆ ನಡೆಸುತ್ತಿರುವ ಸಕ್ಷಮ ಪ್ರಾಧಿಕಾರ ದಂಡ ಪಾವತಿಸಿಕೊಳ್ಳಬೇಕು. ಮುಂದಿನ ಹತ್ತು ವರ್ಷಗಳ ಕಾಲ ದೇಶಕ್ಕೆ ಬರುವುದಿಲ್ಲ ಎಂದು ಮುಚ್ಚಳಿಕೆ ಬರೆಸಿಕೊಳ್ಳಬೇಕು ಎಂದು ಸೂಚನೆ ನೀಡಿದೆ. ನ್ಯಾಯಪೀಠ ನೀಡಿರುವ ನಿರ್ದೇಶನ ಪಾಲಿಸುವಲ್ಲಿ ವಿಫಲವಾದಲ್ಲಿ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ರದ್ದಾಗುವುದಿಲ್ಲ. ಈ ಆದೇಶದಡಿ ಆರೋಪಿಗಳು ಮತ್ತೆ ದೇಶದಲ್ಲಿ ನೆಲೆಸಲು ಅವಕಾಶ ಇರುವುದಿಲ್ಲ ಎಂದು ಕಟ್ಟನಿಟ್ಟಿನ ಸೂಚನೆ ನೀಡಿದೆ.

ಸ್ಥಳೀಯರ ವಿರುದ್ಧದ ಪ್ರಕರಣ ರದ್ದಿಲ್ಲ:

ಅಕ್ರಮವಾಗಿ ಧರ್ಮ ಪ್ರಚಾರದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಸ್ಥಳೀಯರ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಪಡಿಸಲು ನಿರಾಕರಿಸಿರುವ ಹೈಕೋರ್ಟ್‌, ಪ್ರಕರಣ ರದ್ದು ಕೋರಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಜೊತೆಗೆ, ಮುಂದಿನ ಆರು ತಿಂಗಳಲ್ಲಿ ಪ್ರಕರಣದ ತನಿಖೆ ಪೂರ್ಣಗೊಳಿಸಿ ಅನುಪಾಲನಾ ವರದಿಯನ್ನು ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಸಲ್ಲಿಸಬೇಕು ಎಂದು ತನಿಖಾಧಿಕಾರಿಗಳಿಗೆ ಸೂಚಿಸಿದೆ.

83 ವಿದೇಶಿ ತಬ್ಲೀಘಿಗಳ ಮೇಲೆ ದಿಲ್ಲಿ ಪೊಲೀಸರ ಛಾಟಿ!

ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ್ದ ವಕೀಲರು, ವಿದೇಶಗಳಲ್ಲಿ ಧರ್ಮ ಪ್ರಚಾರ ಮಾಡಬೇಕಾದರೆ ಪ್ರತ್ಯೇಕ ವೀಸಾ ಪಡೆಯಬೇಕು ಎಂಬ ನಿಯಮವಿದೆ. ಆದರೆ, ಹೈಕೋರ್ಟ್‌ ಮೆಟ್ಟಿಲೇರಿರುವ ತಬ್ಲೀಘಿ ಜಮಾತ್‌ ಸಂಘಟನೆ ಸದಸ್ಯರು ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಬಂದಿದ್ದಾರೆ. ನಿಯಮಗಳನ್ನು ಉಲ್ಲಂಘಿಸಿ ಧರ್ಮ ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು. ಅಲ್ಲದೆ, ಇದೇ ಆರೋಪದಲ್ಲಿ ವಿದೇಶಗಳಿಂದ ದೇಶದ ವಿವಿಧ ಭಾಗಗಳಿಗೆ ಬಂದಿದ್ದ 960 ವಿದೇಶಿಗರನ್ನು ಕೇಂದ್ರ ಸರ್ಕಾರ ಕಪ್ಪು ಪಟ್ಟಿಗೆ ಸೇರಿಸಿದೆ. ಈ ರೀತಿಯ ವೀಸಾ ಉಲ್ಲಂಘಿಸಿರುವ ವಿದೇಶಿಗರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಎಲ್ಲ ರಾಜ್ಯಗಳಿಗೂ ಸೂಚನೆ ನೀಡಿದೆ ಎಂದು ವಿವರಿಸಿದರು.

ಆರೋಪಿಗಳ ಪರ ವಾದ ಮಂಡಿಸಿದ ವಕೀಲರು, ಅರ್ಜಿದಾರರ ಪ್ರಯಾಣ ದಾಖಲೆಗಳನ್ನು ಪರಿಗಣಿಸಿ ಅವರು ವೀಸಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ನಿರ್ಧರಿಸಲು ಸಾಧ್ಯವಿಲ್ಲ. ನಿಯಮಗಳನ್ನು ಉಲ್ಲಂಘಿಸಿರುವ ಕುರಿತು ಪುರಾವೆಗಳಿಲ್ಲ. ಆದ್ದರಿಂದ ಇವರ ವಿರುದ್ಧದ ಪ್ರಕರಣ ರದ್ದು ಮಾಡಬೇಕು ಎಂದು ಮನವಿ ಮಾಡಿದರು.
 

Follow Us:
Download App:
  • android
  • ios