20 ವರ್ಷ ಕಳೆದರೂ ಕಟ್ಟಡ ಕಟ್ಟದ ಸೈಟ್ ವಾಪಸ್: ಕೆಎಚ್‌ಬಿ ಕ್ರಮ ಎತ್ತಿಹಿಡಿದ ಹೈಕೋರ್ಟ್
ಕೆಎಚ್‌ಬಿ ಹೊರಡಿಸಿದ್ದ ನಿವೇಶನ ಮಂಜೂರಾತಿ ರದ್ದತಿ ಆದೇಶ ಪುರಸ್ಕರಿಸಿದ್ದ ಏಕ ಸದಸ್ಯ ನ್ಯಾಯಪೀಠದ ತೀರ್ಪು ಪ್ರಶ್ನಿಸಿ ದಿವ್ಯಜ್ಯೋತಿ ವಿದ್ಯಾ ಕೇಂದ್ರ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಆದೇಶಿಸಿದೆ.
ಬೆಂಗಳೂರು(ಅ.19): ಶೈಕ್ಷಣಿಕ ಕಟ್ಟಡ ನಿರ್ಮಿಸುವ ಉದ್ದೇಶಕ್ಕೆಂದು ನಾಗರಿಕ ಸೌಲಭ್ಯ ನಿವೇಶನ (ಸಿಎ) ಪಡೆದು 20 ವರ್ಷಗಳ ಕಳೆದರೂ ಕಟ್ಟಡ ನಿರ್ಮಾಣ ಮಾಡದ ‘ದಿವ್ಯಜ್ಯೋತಿ ವಿದ್ಯಾಕೇಂದ್ರ’ಕ್ಕೆ ನಗರದ ಯಲಹಂಕ ಉಪನಗರದಲ್ಲಿ ಮಂಜೂರು ಮಾಡಿದ್ದ ನಿವೇಶನವನ್ನು ರದ್ದುಪಡಿಸಿದ್ದ ಕರ್ನಾಟಕ ವಸತಿ ಮಂಡಳಿ (ಕೆಎಚ್‌ಬಿ) ಕ್ರಮವನ್ನು ಹೈಕೋರ್ಟ್ ವಿಭಾಗೀಯ ಪೀಠ ಪುರಸ್ಕರಿಸಿದೆ.
ಕೆಎಚ್‌ಬಿ ಹೊರಡಿಸಿದ್ದ ನಿವೇಶನ ಮಂಜೂರಾತಿ ರದ್ದತಿ ಆದೇಶ ಪುರಸ್ಕರಿಸಿದ್ದ ಏಕ ಸದಸ್ಯ ನ್ಯಾಯಪೀಠದ ತೀರ್ಪು ಪ್ರಶ್ನಿಸಿ ದಿವ್ಯಜ್ಯೋತಿ ವಿದ್ಯಾ ಕೇಂದ್ರ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಆದೇಶಿಸಿದೆ.
ಮದ್ಯ ಸೇವಿಸಿ ಕರ್ತವ್ಯಕ್ಕೆ ಬಂದ ಕಂಡಕ್ಟರ್, ವೇತನ ಕಡಿತ ಸರಿ: ಹೈಕೋರ್ಟ್
ಸಾರ್ವಜನಿಕ ಸೌಲಭ್ಯದ ನಿವೇಶನದಲ್ಲಿ ಶೈಕ್ಷಣಿಕ ಕಟ್ಟಡ ನಿರ್ಮಾಣಕ್ಕೆಂಬ ಆದೇಶವನ್ನು ಅರ್ಜಿದಾರ ಸಂಸ್ಥೆ ಪೂರೈಸಿಲ್ಲ. ಇಂತಹ ಸಂದರ್ಭದಲ್ಲಿ ನಿವೇಶನ ಮಂಜೂರಾತಿ ಆದೇಶವನ್ನು ಉಳಿಸುವುದು ಸಾರ್ವಜನಿಕ ಹಿತಾಸಕ್ತಿಯ ವಿರೋಧಿ ಕ್ರಮವಾಗಲಿದೆ. ಶೈಕ್ಷಣಿಕ ಕಟ್ಟಡ ನಿರ್ಮಾಣ ಮಾಡದೆ ನಿವೇಶನ ಮಂಜೂರಾತಿಯ ಷರತ್ತನ್ನು ಉಲ್ಲಂಘನೆ ಮಾಡಿದಾಗ ಉದಾರತೆ ಪ್ರದರ್ಶಿಸುವುದು ತಪ್ಪಾದ ಸಹಾನುಭೂತಿಗೆ ಉದಾಹರಣೆಯಾಗಲಿದೆ. ಜತೆಗೆ, ನಿವೇಶನ ಮಂಜೂರಾತಿ ಷರತ್ತುಗಳ ದುರುಪಯೋಗವಾಗುವ ಸಾಧ್ಯತೆಯೂ ಇದೆ. ಆಧ್ದರಿಂದ ಅರ್ಜಿದಾರ ಸಂಸ್ಥೆಯು ನಿವೇಶನದ ಸ್ವಾಧೀನಾನುಭವನ್ನು ನಾಲ್ಕು ವಾರದಲ್ಲಿ ಕೆಎಚ್‌ಬಿ ವಶಕ್ಕೆ ನೀಡಬೇಕು. ಹಾಗೆಯೇ, ಕೆಎಚ್‌ಬಿ ಸಹ ಸಂಸ್ಥೆ ಪಾವತಿಸಿರುವ ಹಣವನ್ನು ಹಿಂದಿರುಗಿಸಬೇಕು ಎಂದು ಆದೇಶದಲ್ಲಿ ವಿಭಾಗೀಯ ಪೀಠ ನಿರ್ದೇಶಿಸಿದೆ.
ಪ್ರಕರಣದ ಹಿನ್ನೆಲೆ
ಶಾಲಾ ಕಟ್ಟಡ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡಲು ಕೋರಿ ದಿವ್ಯ ಜ್ಯೋತಿ ವಿದ್ಯಾ ಕೇಂದ್ರ 2003ರಲ್ಲಿ ಅರ್ಜಿ ಸಲ್ಲಿಸಿತ್ತು. 2013ರ ಡಿ.16ರಂದು 79,75,705 ರು.ಗೆ ಸಿಎ ನಿವೇಶನವನ್ನು ಮಂಜೂರು ಮಾಡಿತ್ತು. ಅದರಂತೆ 53,10,293 ರು. ಪಾವತಿ ಮಾಡಿದ್ದರಿಂದ ಸಂಸ್ಥೆಗೆ ಷರತ್ತುಬದ್ಧ ಕ್ರಯ ನೀಡಿ, 2005ರ ಅ.20ರಂದು ನಿವೇಶನವನ್ನು ಸ್ವಾಧೀನಾನುಭವಕ್ಕೆ ನೀಡಲಾಗಿತ್ತು. 2014ರಲ್ಲಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿಯನ್ನು ಬಿಬಿಎಂಪಿ ನೀಡಿತ್ತು. 2018ರಲ್ಲಿ ಪಿಲ್ಲರ್ ಮಟ್ಟಕ್ಕೆ ಕಟ್ಟಡ ನಿರ್ಮಾಣ ತಲುಪಿದ್ದು, ಕಾಮಗಾರಿ ಪೂರ್ಣಗೊಳಿಸಲು ಸ್ವಲ್ಪ ಸಮಯ ವಿಸ್ತರಣೆ ಮಾಡಬೇಕು ಎಂದು ಕೆಚ್‌ಬಿಗೆ ಕೋರಿದ್ದರು.
ಬೆಂಗಳೂರಿಗೆ ಬಿಬಿಎಂಪಿಯೇ ಪ್ರಮುಖ ಶತ್ರು: ಹೈಕೋರ್ಟ್ ಕಿಡಿ
ಆದರೆ, 2018ರ ಅ.17ರಂದು ನಿವೇಶನ ಮಂಜೂರಾತಿಯನ್ನು ರದ್ದುಪಡಿಸಿ ಕೆಎಚ್‌ಬಿ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ 2018ರಲ್ಲಿ ಹೈಕೋರ್ಟ್‌ಗೆ ತರಕಾರು ಅರ್ಜಿ ಸಲ್ಲಿಸಿದ್ದ ವಿದ್ಯಾಕೇಂದ್ರವು, ಯಾವುದೇ ನೊಟಿಸ್ ನೀಡದೆ ಏಕಾಏಕಿ ನಿವೇಶನ ಮಂಜೂರಾತಿ ಆದೇಶ ರದ್ದುಪಡಿಸಲಾಗಿದೆ ಎಂದು ಆಕ್ಷೇಪಿಸಿತ್ತು.
ಆದರೆ ಈ ವಾದ ಒಪ್ಪದ ಏಕ ಸದಸ್ಯ ಪೀಠ,ನಿವೇಶನವನ್ನು ಸ್ವಾಧೀನಾನುಭವಕ್ಕೆ ನೀಡಿದ ನಂತರ ಎರಡು ವರ್ಷದಲ್ಲಿ ಶೈಕ್ಷಣಿಕ ಸಂಸ್ಥೆಯ ಕಟ್ಟಡ ಕಾಮಗಾರಿ ಪೂರ್ಣಗೊಳಿಸಬೇಕು. ಆದರೆ, 18 ವರ್ಷ ಕಳೆದರೂ ಕಟ್ಟಡ ನಿರ್ಮಾಣ ಪೂರ್ಣಗೊಳಿಸದೆ ನಿವೇಶನ ಮಂಜೂರಾತಿಯ ಷರತ್ತು ಉಲ್ಲಂಘಿಸಲಾಗಿದೆ ಎಂದು ಅರ್ಜಿ ವಜಾಗೊಳಿಸಿ 2023ರ ಜು.4ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ದಿವ್ಯ ಜ್ಯೋತಿ ವಿದ್ಯಾ ಕೇಂದ್ರ ಮೇಲ್ಮನವಿ ಸಲ್ಲಿಸಿತ್ತು.