Asianet Suvarna News Asianet Suvarna News

ಬೆಂಗಳೂರಿಗೆ ಬಿಬಿಎಂಪಿಯೇ ಪ್ರಮುಖ ಶತ್ರು: ಹೈಕೋರ್ಟ್‌ ಕಿಡಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಅಕ್ರಮ ಜಾಹಿರಾತು ಫಲಕಗಳ ಹಾವಳಿ ತಡೆಗಟ್ಟಲು ವಿಫಲವಾಗಿರುವ ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ನಗರದಲ್ಲಿ ಅಳವಡಿಸಿರುವ ಜಾಹೀರಾತುಗಳ ಸಮೀಕ್ಷೆ ನಡೆಸಿ, ಎಷ್ಟು ಜಾಹೀರಾತುಗಳಿಗೆ ಅನುಮತಿ ನೀಡಲಾಗಿದೆ.

Bbmp Foremost Enemy Of Bengaluru Karnataka High Court Slams Civic Body Over Illegal Hoardings gvd
Author
First Published Oct 13, 2023, 4:00 AM IST

ಬೆಂಗಳೂರು (ಅ.13): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಅಕ್ರಮ ಜಾಹಿರಾತು ಫಲಕಗಳ ಹಾವಳಿ ತಡೆಗಟ್ಟಲು ವಿಫಲವಾಗಿರುವ ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ನಗರದಲ್ಲಿ ಅಳವಡಿಸಿರುವ ಜಾಹೀರಾತುಗಳ ಸಮೀಕ್ಷೆ ನಡೆಸಿ, ಎಷ್ಟು ಜಾಹೀರಾತುಗಳಿಗೆ ಅನುಮತಿ ನೀಡಲಾಗಿದೆ, ಎಷ್ಟು ಅನಧಿಕೃತವಾಗಿ ಅಳವಡಿಸಲಾಗಿದೆ, ಅವುಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಮತ್ತು ಎಷ್ಟು ಜಾಹೀರಾತುಗಳ ಸಂಬಂಧ ಶುಲ್ಕ ಶುಲ್ಕ ಪಾವತಿಯಾಗಿದೆ ಎಂಬ ಕುರಿತು ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ನಿರ್ದೇಶಿಸಿದೆ.

ನಗರದಲ್ಲಿನ ಅನಧಿಕೃತ ಜಾಹೀರಾತು ಫಲಕಗಳ ಅಳವಡಿಕೆ ಹಾವಳಿ ತಡೆಯಲು ಬಿಬಿಎಂಪಿ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಮಾಯಿಗೇಗೌಡ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ನವೆಂಬರ್‌ ಎರಡನೇ ವಾರಕ್ಕೆ ಮುಂದೂಡಿದೆ. ಜಾಹೀರಾತು ಅಳವಡಿಕೆಗೆ ಅನುಮತಿ ನೀಡಿದರೆ, ಅಳವಡಿಕೆದಾರರು ಶುಲ್ಕವನ್ನು ಪಾವತಿಸಬೇಕಾಗುತ್ತದೆ. 

ಕಾಂಗ್ರೆಸ್‌ ರಾಕ್ಷಸರ ಸಮರ್ಥನೆಗೆ ನಿಂತುಕೊಂಡಿದೆ: ಚಕ್ರವರ್ತಿ ಸೂಲಿಬೆಲೆ

ಆದರೆ, ಶುಲ್ಕ ಸಂಗ್ರಹಣೆ ಬಗ್ಗೆ ಬಿಬಿಎಂಪಿ ನ್ಯಾಯಾಲಯಕ್ಕೆ ಸಲ್ಲಿಸಿದ ಮೆಮೊ ಅಥವಾ ಪ್ರಮಾಣ ಪತ್ರದಲ್ಲಿ ಯಾವುದೇ ಮಾಹಿತಿ ನೀಡಿಲ್ಲ ಎಂದು ಅರ್ಜಿದಾರರೊಬ್ಬರ ಪರ ವಕೀಲರು ತಿಳಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್‌, ಬೆಂಗಳೂರು ನಗರಕ್ಕೆ ಬಿಬಿಎಂಪಿಯೇ ಮೊದಲ ಶತ್ರುವಾಗಿದೆ. ಅಕ್ರಮ ಜಾಹೀರಾತು ಅಳವಡಿಕೆಯಿಂದ ಬಿಬಿಎಂಪಿಗೆ ಸಾವಿರಾರು ಕೋಟಿ ನಷ್ಟವಾಗಿದೆ. ಜಾಹೀರಾತಿನಿಂದ ಪಡೆಯಬೇಕಾದ ತೆರಿಗೆಯನ್ನು ನಾಗರಿಕರ ಮೇಲೆ ಹೊರಿಸುತ್ತಿದೆ. ಜಾಹೀರಾತು ತೆರಿಗೆ ಸಂಗ್ರಹದ ವೈಫಲ್ಯದಿಂದ ಜನಸಾಮಾನ್ಯರ ಮೇಲೆ ತೆರಿಗೆ ಹೊರೆ ಬೀಳುತ್ತಿದೆ ಎಂದು ಕಟುವಾಗಿ ನುಡಿಯಿತು.

ವಿಚಾರಣೆ ವೇಳೆ ಬಿಬಿಎಂಪಿ ವಕೀಲರು, ಅನಧಿಕೃತ ಫ್ಲೆಕ್ಸ್, ಬ್ಯಾನರ್ ಹೋರ್ಡಿಂಗ್ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಈಗಾಗಲೇ ನೋಟಿಸ್‌ ಜಾರಿಗೊಳಿಸಲಾಗಿದೆ ಎಂದು ತಿಳಿಸಿ ಮೆಮೋ ಸಲ್ಲಿಸಿದರು. ಅದನ್ನು ಪರಿಗಣಿಸಿದ ನ್ಯಾಯಾಲಯವು ಕೇವಲ ಕ್ರಮ ಜರುಗಿಸುವ ಪ್ರಕ್ರಿಯೆ ಆರಂಭಿಸಿದರೆ ಸಾಲದು, ಅದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕು. ನ್ಯಾಯಾಲಯಕ್ಕೆ ನೀಡಿರುವ ಭರವಸೆಯಂತೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಮುಂದಿನ ವಿಚಾರಣೆ ವೇಳೆ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿರುವ ಪ್ರಕ್ರಿಯೆ ಆರಂಭಿಸಿದ ನಂತರ ನಡೆದ ಬೆಳವಣಿಗಳ ಕುರಿತು ವರದಿ ಸಲ್ಲಿಸಬೇಕು ಎಂದು ಬಿಬಿಎಂಪಿಗೆ ನಿರ್ದೇಶಿಸಿತು.

ಲೋಕಸಭೆ ಚುನಾವಣೆ ಜಯಕ್ಕೆ 'ಗ್ಯಾರಂಟಿ' ಅಸ್ತ್ರ ಬಳಸಿ: ಸಚಿವ ಕೃಷ್ಣ ಬೈರೇಗೌಡ

ಮೂಲಸೌಕರ್ಯಕ್ಕೆ ಹಣ ಕೊಡದೆ ಕೈಎತ್ತುವ ಪಾಲಿಕೆ: ಒಂದೆಡೆ ಜಾಹಿರಾತು ಫಲಕಗಳಿಂದ ತೆರಿಗೆ ಸಂಗ್ರಹಿಸಲು ಬಿಬಿಎಂಪಿ ವಿಫಲವಾಗುತ್ತಿದೆ. ಮತ್ತೊಂದೆಡೆ ಬೆಂಗಳೂರಿನ ಅಭಿವೃದ್ಧಿಗೆ ಮತ್ತು ನಾಗರಿಕರಿಗೆ ಮೂಲ ಸೌಲಭ್ಯ ಕಲ್ಪಿಸಲು ಹಣವಿಲ್ಲವೆಂದು ಹೇಳುತ್ತಾ ಕೈ ಮೇಲಕ್ಕೆ ಎತ್ತುತ್ತಿದೆ. ಅಕ್ರಮ ಜಾಹೀರಾತುಗಳ ಅಳವಡಿಕೆಯನ್ನು ತಡೆಯಲು ಬಿಬಿಎಂಪಿ ನಿರ್ಲಕ್ಷ್ಯ ವಹಿಸಿರುವುದರಿಂದ ನಗರದ ಸೌಂದರ್ಯ ವಿರೂಪಗೊಳ್ಳುತ್ತಿದೆ. ಈ ಮೊದಲೇ ವಿರೂಪಗೊಂಡಿರುವ ನಗರ ಇನ್ನಷ್ಟು ಹಾಳಾಗುತ್ತಿದೆ. ಆದ್ದರಿಂದ ಜಾಹೀರಾತು ಫಲಕಗಳ ಸಂಬಂಧ ಎಲ್ಲ ವಿವರವನ್ನು ನ. 28ರೊಳಗೆ ವರದಿ ಸಲ್ಲಿಸುವಂತೆ ಹೈಕೋರ್ಟ್‌ ಬಿಬಿಎಂಪಿಗೆ ನಿರ್ದೇಶಿಸಿತು.

Follow Us:
Download App:
  • android
  • ios