ಮದ್ಯ ಸೇವಿಸಿ ಕರ್ತವ್ಯಕ್ಕೆ ಬಂದ ಕಂಡಕ್ಟರ್, ವೇತನ ಕಡಿತ ಸರಿ: ಹೈಕೋರ್ಟ್
ಸಿದ್ದರಾಜಯ್ಯ ಅವರ ಮೂಲ ವೇತನ ಪ್ರಮಾಣ ಕಡಿಮೆ ಮಾಡಿದ್ದ ತನ್ನ ಆದೇಶವನ್ನು ಮಾರ್ಪಾಡಿಸಿದ್ದ ಕೈಗಾರಿಕಾ ನ್ಯಾಯಮಂಡಳಿಯ ತೀರ್ಪು ರದ್ದು ಕೋರಿ ಬಿಎಂಟಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಮೇಲ್ಮನವಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರ ಪೀಠ, ಕೈಗಾರಿಕಾ ನ್ಯಾಯಮಂಡಳಿಯ ಆದೇಶವನ್ನು ರದ್ದುಪಡಿಸಿದೆ.
ಬೆಂಗಳೂರು(ಅ.13): ಮದ್ಯಪಾನ ಮಾಡಿ ಪ್ರಯಾಣಿಕರೊಂದಿಗೆ ದುರ್ನಡತೆ ತೋರಿದ ಆರೋಪದ ಮೇಲೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ನಿರ್ವಾಹಕ ಎಚ್.ಬಿ.ಸಿದ್ಧರಾಜಯ್ಯಗೆ ಮೂಲ ವೇತನ ಪ್ರಮಾಣ ಕಡಿಮೆ ಮಾಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಸಿದ್ದರಾಜಯ್ಯ ಅವರ ಮೂಲ ವೇತನ ಪ್ರಮಾಣ ಕಡಿಮೆ ಮಾಡಿದ್ದ ತನ್ನ ಆದೇಶವನ್ನು ಮಾರ್ಪಾಡಿಸಿದ್ದ ಕೈಗಾರಿಕಾ ನ್ಯಾಯಮಂಡಳಿಯ ತೀರ್ಪು ರದ್ದು ಕೋರಿ ಬಿಎಂಟಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಮೇಲ್ಮನವಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರ ಪೀಠ, ಕೈಗಾರಿಕಾ ನ್ಯಾಯಮಂಡಳಿಯ ಆದೇಶವನ್ನು ರದ್ದುಪಡಿಸಿದೆ.
ಬೆಂಗಳೂರಿಗೆ ಬಿಬಿಎಂಪಿಯೇ ಪ್ರಮುಖ ಶತ್ರು: ಹೈಕೋರ್ಟ್ ಕಿಡಿ
ಬಸ್ ಸೇವೆಯನ್ನು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸುವುದು. ಟಿಕೆಟ್ ನೀಡಿ, ಹಣ ಪಡೆಯುವುದು, ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು, ಇಳಿಸುವುದು, ಪ್ರಯಾಣಿಕರಿಗೆ ಸಹಕಾರ ನೀಡುವುದು, ಅವರಿಗೆ ಸೂಕ್ತ ಮಾಹಿತಿ ಒದಗಿಸುವುದು ಸಾರ್ವಜನಿಕ ಸಾರಿಗೆ ನಿಗಮದ ಸಿಬ್ಬಂದಿಯಾಗಿರುವ ನಿರ್ವಾಹಕನ ಜವಾಬ್ದಾರಿ. ಉತ್ತಮ ನಿರ್ವಾಹಕ ಎಲ್ಲ ಪ್ರಯಾಣಿಕರಿಗೆ ಸಹಾಯಕರಾಗಿರುತ್ತಾರೆ ಮತ್ತು ಉತ್ತಮ ಸಂವಹನವನ್ನೂ ಸಹ ಹೊಂದಿರುತ್ತಾರೆ ಎಂದು ನ್ಯಾಯಪೀಠ ಹೇಳಿದೆ.
ಆದರೆ, ಈ ಪ್ರಕರಣದಲ್ಲಿ ನಿರ್ವಾಹಕ ಸಿದ್ದರಾಜಯ್ಯ, ಪ್ರಯಾಣಿಕರಿಗೆ ದುಸ್ವಪ್ನದಂತೆ ಕಾಡಿದ್ದಾರೆ. ಉದ್ಯೋಗದಲ್ಲಿ ಇದ್ದಾಗಲೇ ಮದ್ಯ ಸೇವಿಸಿ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿರುವುದು ಸರಿಯಲ್ಲ. ನಿರ್ವಾಹಕನಿಗೆ ಮೂಲ ವೇತನ ಪ್ರಮಾಣ ಕಡಿಮೆ ಮಾಡಿದ್ದ ಬಿಎಂಟಿಸಿ ಆದೇಶ ಸೂಕ್ತವಾಗಿದೆ. ಆದರೆ, ಮೂಲ ವೇತನ ಪ್ರಮಾಣ ಕಡಿಮೆ ಮಾಡಿದ್ದ ಕ್ರಮ ಕೈಬಿಡಲು ಆದೇಶಿಸುವ ಮೂಲಕ ಬಿಎಂಟಿಸಿ ಆದೇಶವನ್ನು ಮಾರ್ಪಡಿಸಿರುವುದು ಸರಿಯಲ್ಲ. ಆದೇಶ ಮಾರ್ಪಡಿಸಲು ಕೈಗಾರಿಕಾ ಮಂಡಳಿಗೆ ಅಧಿಕಾರವೂ ಇಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಮದ್ಯಪಾನ ದೃಢ
ಸಿದ್ದರಾಜಯ್ಯ 2006ರ ರ ಜು.11ರಂದು ಬಿಎಂಟಿಸಿ ಬಸ್ ನಿರ್ವಾಹಕ ಕೆಲಸ ಮಾಡುತ್ತಿದ್ದಾಗ ಮದ್ಯಪಾನ ಮಾಡಿ ಪ್ರಯಾಣಿಕರ ಜತೆ ಅನುಚಿತವಾಗಿ ವರ್ತಿಸಿದ್ದ ಎಂದು ಪ್ರಯಾಣಿಕರು ದೂರು ಸಲ್ಲಿಸಿದ್ದರು. ವೈದ್ಯಕೀಯ ಪರೀಕ್ಷೆಯಲ್ಲಿ ನಿರ್ವಾಹಕ ಮದ್ಯಪಾನ ಮಾಡಿದ್ದು ದೃಢಪಟ್ಟಿತ್ತು. ಬಿಎಂಟಿಸಿ ಶಿಸ್ತು ಪ್ರಾಧಿಕಾರವು ತನಿಖೆ ನಡೆಸಿ, ದಂಡ ವಿಧಿಸಲು ಶಿಫಾರಸು ಮಾಡಿತ್ತು. ಅದರಂತೆ ನಿರ್ವಾಹಕನಿಗೆ ದಂಡದ ರೂಪದಲ್ಲಿ ಮೂಲ ವೇತನ ಪ್ರಮಾಣವನ್ನು ಕಡಿಮೆ ಮಾಡಿತ್ತು.
ಅದನ್ನು ಪ್ರಶ್ನಿಸಿ ಸಿದ್ದರಾಜಯ್ಯ, ಕೈಗಾರಿಕಾ ನ್ಯಾಯಮಂಡಳಿ ಮೊರೆ ಹೋಗಿದ್ದರು. ಬಿಎಂಟಿಸಿ ಆದೇಶವನ್ನು ನ್ಯಾಯಮಂಡಳಿ ಮಾರ್ಪಡಿಸಿತ್ತು. ಇದರಿಂದ ಬಿಎಂಟಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು.