ಮಹಿಳೆಯೊಬ್ಬರು ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಲೋಕ್‌ ಆರಾಧೆ ಮತ್ತು ವಿಜಯಕುಮಾರ ಎ.ಪಾಟೀಲ್‌ ಅವರಿದ್ದ ವಿಭಾಗೀಯ ಪೀಠ, ಪ್ರಕರಣದಲ್ಲಿ ತಂದೆ (ಅರ್ಜಿದಾರೆಯ ಪತಿ) ಅಕ್ರಮವಾಗಿ ಮಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದಿದ್ದಾರೆ ಎಂದು ಅಭಿಪ್ರಾಯಪಟ್ಟಿತು.

ಬೆಂಗಳೂರು(ಮೇ.18):  ಚಿಕಿತ್ಸೆ ಕೊಡಿಸಲು ವೈದ್ಯರ ಬಳಿಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿ ಅಪ್ರಾಪ್ತ ಮಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ತಂದೆ ಕ್ರಮವನ್ನು ಆಕ್ಷೇಪಿಸಿದ ಹೈಕೋರ್ಟ್‌, ಮಗಳನ್ನು ತಾಯಿ ಮಡಿಲಿಗೆ ಸೇರಿಸಿದೆ.

ಮಹಿಳೆಯೊಬ್ಬರು ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಲೋಕ್‌ ಆರಾಧೆ ಮತ್ತು ವಿಜಯಕುಮಾರ ಎ.ಪಾಟೀಲ್‌ ಅವರಿದ್ದ ವಿಭಾಗೀಯ ಪೀಠ, ಪ್ರಕರಣದಲ್ಲಿ ತಂದೆ (ಅರ್ಜಿದಾರೆಯ ಪತಿ) ಅಕ್ರಮವಾಗಿ ಮಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದಿದ್ದಾರೆ ಎಂದು ಅಭಿಪ್ರಾಯಪಟ್ಟಿತು.

ಮದುವೆ, ಹನಿಮೂನ್‌ಗಾಗಿ ಕೊಲೆ ಅಪರಾಧಿಗೆ ಪೆರೋಲ್‌..!

ಅಲ್ಲದೆ, ಮಗಳನ್ನು ಕೂಡಲೇ ಅರ್ಜಿದಾರೆಯ ಸುಪರ್ದಿಗೆ ಒಪ್ಪಿಸುವಂತೆ ಆಕೆಯ ಪತಿಗೆ ನಿರ್ದೇಶಿಸಿದ ಹೈಕೋರ್ಟ್‌, ಮಗಳ ಶಾಶ್ವತ ಸುಪರ್ದಿಗೆ ಕೋರಿ ಪತ್ನಿ ಬೆಂಗಳೂರಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮತ್ತೊಂದೆಡೆ ತಾನು ಮಗುವಿನ ಕಾನೂನುಬದ್ಧ ಪೋಷಕ ಎಂಬುದಾಗಿ ಘೋಷಿಸುವಂತೆ ಕೋರಿ ಪಶ್ಚಿಮ ಬಂಗಾಳದಲ್ಲಿ ಪತಿ ಅರ್ಜಿ ಸಲ್ಲಿಸಿದ್ದಾರೆ. ಆ ಎರಡೂ ಅರ್ಜಿಗಳು ಇತ್ಯರ್ಥವಾಗುವವರೆಗೆ ಮಗಳು ತಾಯಿ ವಶದಲ್ಲಿರಬೇಕು. ತಂದೆಗೆ ಮಗಳ ಭೇಟಿ ಹಕ್ಕು ನೀಡಬೇಕು ಎಂದು ನಿರ್ದೇಶಿಸಿತು.

ಹಾಗೆಯೇ, ತಂದೆಯೊಂದಿಗೆ ಸಾಮಾಜಿಕ, ಭೌತಿಕ ಮತ್ತು ಮಾನಸಿಕ ಸಂಪರ್ಕವನ್ನು ಮಗಳು ಕಳೆದುಕೊಳ್ಳಬಾರದು. ದಂಪತಿ ಪ್ರತ್ಯೇಕವಾಗಿದ್ದರೂ ಸಹ ಮಗಳಿಗೆ ಉತ್ತಮವಾದ ಪಾಲಕರ ಆರೈಕೆ ಸಿಗಬೇಕು. ಆ ದಿಸೆಯಲ್ಲಿ ನಿತ್ಯ ಶಾಲೆಯಿಂದ ಮನೆಗೆ ಬಂದ ನಂತರ ತಂದೆ, ಮಗಳಿಗೆ ಪೋನ್‌ ಅಥವಾ ವಿಡಿಯೋ ಕರೆ ಮಾಡಿ ಯೋಗಕ್ಷೇಮ ವಿಚಾರಿಸಬಹುದು. ಮಗುವಿನ ಪ್ರತಿದಿನದ ಬೆಳವಣಿಗೆ ಬಗ್ಗೆ ಪತ್ನಿಯು ಪ್ರತಿ ಭಾನುವಾರ ಪತಿಗೆ ಮಾಹಿತಿ ನೀಡಬೇಕು. ಪತಿ ವಾರಾಂತ್ಯದಲ್ಲಿ ಬೆಂಗಳೂರಿಗೆ ಬಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಮಗಳ ಜೊತೆಗೆ ಸಮಯ ಕಳೆಯಬಹುದು ಎಂದು ಆದೇಶದಲ್ಲಿ ನ್ಯಾಯಪೀಠ ನಿರ್ದೇಶಿಸಿದೆ.

ಪ್ರಕರಣದ ವಿವರ:

2012ರ ಫೆ.22ರಂದು ಅಂತರ್‌ ಧರ್ಮೀಯ ವಿವಾಹವಾಗಿದ್ದ ದಂಪತಿಗೆ 2016ರಲ್ಲಿ ಮಗಳು ಜನಿಸಿದ್ದಳು. ದಂಪತಿ 2017ರ ಜನವರಿಯಿಂದ 2018ರ ಜೂನ್‌ವರೆಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ದಂಪತಿ ಪ್ರತ್ಯೇಕವಾಗಿದ್ದರು. ಪತ್ನಿ ಮಗಳೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕೆಲಸದ ನಿಮಿತ್ತ ಪತಿ ಪಶ್ಚಿಮ ಬಂಗಾಳದಲ್ಲಿ ವಾಸವಾಗಿದ್ದಾರೆ. 2022ರ ಡಿ.16ರಂದು ಬೆಂಗಳೂರಿಗೆ ಬಂದಿದ್ದ ಪತಿ, ಮಗಳನ್ನು ವೈದ್ಯರ ಬಳಿಗೆ ಚಿಕಿತ್ಸೆಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿ ಪಶ್ಚಿಮ ಬಂಗಾಳಕ್ಕೆ ಕರೆದೊಯ್ದಿದ್ದರು. ಇದರಿಂದ ಪತ್ನಿ ಹೈಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು.

ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದ ಪತಿ, ‘ತನ್ನ ವಿರುದ್ಧ ಪತ್ನಿ ಸುಳ್ಳು, ಕಪೋಲ ಕಲ್ಪಿತ ಮತ್ತು ಆಧಾರರಹಿತ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿದ್ದ ಸ್ನೇಹಿತ ಕರೆ ಮಾಡಿ, ನನ್ನ ಮಗಳು ಜ್ವರ ಮತ್ತು ಕಣ್ಣಿನ ಸೋಂಕಿನಿಂದ ನರಳುತ್ತಿರುವುದಾಗಿ ತಿಳಿಸಿದ್ದರಿಂದ 2016ರ ಡಿ.16ರಂದು ನಾನು ಬೆಂಗಳೂರಿಗೆ ಬಂದಿದ್ದೆ. ನನ್ನನ್ನು ನೋಡಿದ ಕೂಡಲೇ ಮಗಳು ಜೋರಾಗಿ ಅತ್ತಳಲ್ಲದೆ, ಐದಾರು ದಿನಗಳಿಂದ ಸೂಕ್ತವಾಗಿ ಆಹಾರ ಕೊಟ್ಟಿಲ್ಲ ಎಂದಳು’ ಎಂಬುದಾಗಿ ತಿಳಿಸಿದ್ದರು.

‘ಮಗಳ ಸಾಕಲು ಸರಿಯಾದ ವ್ಯವಸ್ಥೆ ಇಲ್ಲದಿದ್ದರೆ ಸುಪರ್ದಿ ಕೇಳುವಂತಿಲ್ಲ': ಹೈಕೋರ್ಟ್

ಜೊತೆಗೆ, ‘ಜ್ವರದಿಂದ ಬಳಲುತ್ತಿದ್ದ ಕಾರಣ ಚಿಕಿತ್ಸೆ ಕಲ್ಪಿಸಲು ಮಗಳನ್ನು ಕರೆದುಕೊಂಡು ಹೋಗಲು ನನ್ನ ಅತ್ತೆ ಅನುಮತಿ ನೀಡಿದ್ದರು. ಕೂಡಲೇ ಮಗಳಿಗೆ ಔಷಧಿ ಕೊಡಿಸಿ, ಅಲ್ಲಿಂದ ಪಶ್ಚಿಮ ಬಂಗಾಳಕ್ಕೆ ಕರೆದುಕೊಂಡು ಹೋದೆ. ಮರುದಿನ ಪಶ್ಚಿಮ ಬಂಗಾಳದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕಲ್ಪಿಸಿದ್ದೆ. ವೈದ್ಯರ ಸಲಹೆ ಮೇರೆಗೆ ನೇತ್ರ ತಜ್ಞರಿಂದಲೂ ಚಿಕಿತ್ಸೆ ಕೊಡಿಸಿದ್ದೆ’ ಎಂದು ವಿವರಿಸಿದ್ದ ಪತಿ, ಆ ಕುರಿತ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರೆಯ ಪತಿಯ ಆಕ್ಷೇಪಣೆ ಗಮನಿಸಿದರೆ, ‘ಕೇವಲ ಚಿಕಿತ್ಸೆ ಕೊಡಿಸಲು ಮಗಳನ್ನು ಕರೆದೊಯ್ಯಲು ಅರ್ಜಿದಾರೆಯ ತಾಯಿ ಅನುಮತಿ ನೀಡಿದ್ದರು. ಆದರೆ, ಮಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದು, ಚಿಕಿತ್ಸೆ ಕಲ್ಪಿಸಲಾಗಿದೆ. ಜತೆಗೆ, ಅಲ್ಲಿಯೇ ಶಾಲೆಗೂ ಸೇರಿಸಿದ್ದಾರೆ. ಆದ್ದರಿಂದ ಮಗಳನ್ನು ತಮ್ಮ ಸುಪರ್ದಿಗೆ ಅಕ್ರಮವಾಗಿ ಕರೆದುಕೊಂಡು ಹೋಗಿದ್ದಾರೆ ಎಂಬ ಅರ್ಜಿದಾರೆ ದೂರು ನೀಡಿದ್ದಾರೆ. ಹೀಗಾಗಿ ಮಗಳನ್ನು ಅರ್ಜಿದಾರೆಯ ಸುಪರ್ದಿಗೆ ನೀಡಬೇಕು’ ಎಂದು ನಿರ್ದೇಶಿಸಿತು.