ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಗಾಯಗೊಂಡ ಕೇಸ್: ಬೆಸ್ಕಾಂ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಚಾಟಿ
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಬೆಸ್ಕಾಂ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಅರ್ಜಿದಾರರ ವಿರುದ್ಧದ ಅಧೀನ ನ್ಯಾಯಾಲಯದ ವಿಚಾರಣೆ ತಡೆ ನೀಡಲು ಮೌಖಿಕವಾಗಿ ನಿರಾಕರಿಸಿ, ಅರ್ಜಿ ವಿಚಾರಣೆಯನ್ನು 2025ರ ಜನವರಿ ಮೊದಲ ವಾರಕ್ಕೆ ಮುಂದೂಡಿದರು.
ಬೆಂಗಳೂರು(ನ.12): ಬೆಸ್ಕಾಂ ಅಧಿಕಾರಿಗಳು ಅತ್ಯಂತ ಬೇಜವಾಬ್ದಾರಿತನ ಹೊಂದಿದ್ದು, ಪಾದಚಾರಿಗಳ ಜೀವವನ್ನು ಸುಲಭ ವಾಗಿ ತೆಗೆಯುತ್ತಾರೆ ಎಂದು ಹೈಕೋರ್ಟ್ ಹರಿಹಾಯ್ದಿದೆ.
ಹೊಲಕ್ಕೆ ನಡೆದು ಹೋಗುವಾಗ ರಸ್ತೆ ಬದಿಯ ಕೆಂಬಿ ಕಂಬದ ತಂತಿ ಸ್ಪರ್ತವಾಗಿ, ವಿದ್ಯುತ್ ಪ್ರವಹಿಸಿ ಹುಡುಗನೋರ್ವ ತೀವ್ರ ಗಾಯಗೊಂಡ ಪ್ರಕರಣದಲ್ಲಿ ವ್ಯಕ್ತಿಯ ಜೀವಕ್ಕೆ ಅಪಾಯ ಉಂಟು ಮಾಡಿದ ಆರೋಪದಡಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಬೆಸ್ಕಾಂನ ಜಗಳೂರು ವಿಭಾಗದ ಇಬ್ಬರು ಅಧಿಕಾರಿಗಳು ಮತ್ತು ಓರ್ವ ಲೈನ್‌ಮೆನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಚಾರ್ಜ್‌ಶೀಟ್ ಸಲ್ಲಿಕೆ ಬಳಿಕ ಕೊ* ಆರೋಪಿಗೆ ‘ಹುಡುಕಾಟ’: ಹೈಕೋರ್ಟ್ ಹೇಳಿದ್ದೇನು?
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಬೆಸ್ಕಾಂ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಅರ್ಜಿದಾರರ ವಿರುದ್ಧದ ಅಧೀನ ನ್ಯಾಯಾಲಯದ ವಿಚಾರಣೆ ತಡೆ ನೀಡಲು ಮೌಖಿಕವಾಗಿ ನಿರಾಕರಿಸಿ, ಅರ್ಜಿ ವಿಚಾರಣೆಯನ್ನು 2025ರ ಜನವರಿ ಮೊದಲ ವಾರಕ್ಕೆ ಮುಂದೂಡಿದರು.
ಇದಕ್ಕೂ ಮುನ್ನ ಅರ್ಜಿ ವಿಚಾರಣೆಗೆ ಬರುತ್ತಿದ್ದಂತೆಯೇ ಅರ್ಜಿದಾರರ ಪರ ವಕೀಲರು ಪ್ರಕರಣದ ಅಂಶಗಳನ್ನು ವಿವರಿಸಲು ಮುಂದಾದರು. ಆದರೆ, ಅರ್ಜಿದಾರ ವಕೀಲರವಾದ ಮಂಡನೆ ತಡೆದ ನ್ಯಾಯಮೂರ್ತಿಗಳು, ನನಗೇನಾದರೂ ಅವಕಾಶ ಸಿಕ್ಕರೆ ನೇರವಾಗಿ ಅರ್ಜಿದಾರರಿಗೆ ಶಿಕ್ಷೆ ವಿಧಿಸುತ್ತೇನೆ. ಬೆಸ್ಕಾಂ ಅಧಿಕಾರಿಗಳು ಅತ್ಯಂತ ಬೇಜವಾಬ್ದಾರಿ ಅಧಿಕಾರಿಗಳು. ಅವರ ಬೇಜವಾಬ್ದಾರಿಯಿಂದ ರಸ್ತೆಯಲ್ಲಿ ನಡೆದುಹೋಗುವ ಪಾದಚಾರಿಗಳ ಜೀವನವನ್ನು ಸುಲಭವಾಗಿ ತೆಗೆಯುತ್ತಾರೆ ಎಂದು ತರಾಟೆಗೆ ತೆಗೆದುಕೊಂಡರು.
ಗಂಡ-ಹೆಂಡ್ತಿ ಜಗಳದಲ್ಲಿ ಬಡವಾಗಿದ್ದು ಮಗು ಅಲ್ಲ, ಭಾರತೀಯ ರೈಲ್ವೆ; ಬರೋಬ್ಬರಿ 3 ಕೋಟಿ ನಷ್ಟ
ವಿದ್ಯುತ್ ಪ್ರವಹಿಸುವ ತಂತಿ ರಸ್ತೆಯಲ್ಲಿ ಬಿದ್ದಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದರೂ ಬೆಸ್ಕಾಂ ಅಧಿಕಾರಿಗಳು ಮಾತ್ರ ಜೀವಕ್ಕೆ ಅಪಾಯ ವಿರುವ ಆ ತಂತಿಯನ್ನು ತೆರವುಗೊಳಿಸುವುದಿಲ್ಲ. ದೂರಿನ ಬಗ್ಗೆ ಕ್ಯಾರೇ ಎನ್ನುವುದಿಲ್ಲ. ಅವರಿಗೆ ಏನಾಗಬೇಕು? ಹವಾನಿಯಂತ್ರಿತ ಕಚೇರಿಯಲ್ಲಿಯೇ ಕುಳಿತು ಎಲ್ಲ ಕೆಲಸ ಮಾಡುತ್ತಾರೆ. ಬೆಸ್ಕಾಂ ಅಧಿಕಾರಿ ಗಳ ನಿರ್ಲಕ್ಷ್ಯದಿಂದ ಇನ್ನೆಷ್ಟು ಸಾವು ಸಂಭವಿಸಬೇಕು. ಈ ಪ್ರಕರಣ ರದ್ದು ಕೋರುವ ಬೆಸ್ಕಾಂ ಅಧಿಕಾರಿಗಳ ಅರ್ಜಿಗಳನ್ನು ನಾನು ಪರಿಗಣಿಸುವುದೇ ಇಲ್ಲ ಎಂದು ನ್ಯಾಯಮೂರ್ತಿಗಳು ಕಟುವಾಗಿ ನುಡಿದರು.
ಅರ್ಜಿದಾರರ ಪರ ಹಾಜರಿದ ಕಿರಿಯ ವಕೀಲರು, ಅರ್ಜಿ ವಿಚಾರಣೆಯನ್ನು ಮುಂದೂಡಬೇಕು. ಮುಂದಿನ ವಿಚಾರಣೆ ವೇಳೆ ತಮ್ಮ ಹಿರಿಯ ವಕೀಲರು ವಾದ ಮಂಡಿಸುತ್ತಾರೆ. ಅದಕ್ಕೆ ಅವಕಾಶ ಮಾಡಿಕೊಡಬೇಕೆಂದು ಕೋರಿದ್ದರು. ಅದನ್ನು ಪರಿಗಣಿಸಿದ ನ್ಯಾಯಮೂರ್ತಿಗಳು, ಅರ್ಜಿ ವಿಚಾರಣೆಯನ್ನು 2025ರ ಜನವರಿ ಮೊದಲ ವಾರಕ್ಕೆ ಮುಂದೂಡಿದರು.
ಹೊಲಕ್ಕೆ ಹೋದಾಗ ವಿದ್ಯುತ್ ತಂತಿ ಸ್ಪರ್ಶ
ಜಗಳೂರು ತಾಲೂಕಿನ ಮೂಡಲ ಮಾಚಿಕೆರೆ ಗ್ರಾಮದ ನಿವಾಸಿ ಆರ್. ರವಿ 2020ರ ಅ.27ರಂದು ಪೊಲೀಸರಿಗೆ ದೂರು ನೀಡಿ, ಅ.26ರಂದು ಬೆಳಗ್ಗೆ ತಮ್ಮ ಪುತ್ರ ಪಾಂಡುರಂಗ (15) ಹೊಲಕ್ಕೆ ಹೋಗುವ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಆತನ ಕಾಲು ರಸ್ತೆ ಬದಿಯ ವಿದ್ಯುತ್ ಕಂಬದ ತಂತಿಗೆ ಸ್ಪರ್ಶವಾಗಿ, ವಿದ್ಯುತ್ ಪ್ರವಹಿಸಿದೆ. ಇದರಿಂದ ಪಾಂಡುರಂಗನ ಎರಡು ಕಾಲು ಮತ್ತು ಕೈಗೆ ತೀವ್ರವಾಗಿ ಗಾಯವಾಗಿದೆ. ಘಟನೆಗೆ ಬೆಸ್ಕಾಂನ ದಾವಣಗೆರೆ ವಿಭಾಗದ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಜಿ.ಎಂ. ಪ್ರವೀಣ್, ಸೆಕ್ಷನ್ ಆಫೀಸರ್ ಎಸ್.ಸಿ. ಚಂದ್ರಶೇಖರ ತಿಲಕ್ ಮತ್ತು ಲೈನ್ ಮ್ಯಾನ್ ಆಸೀಫ್ ಸೋಮಲಪುರ ಕಾರಣಕರ್ತರಾಗಿದ್ದಾರೆ ಎಂದು ಆರೋಪಿಸಿದ್ದರು.
ದೂರಿನ ತನಿಖೆ ನಡೆಸಿದ್ದ ಜಗಳೂರು ಠಾಣಾ ಪೊಲೀಸರು ಅರ್ಜಿದಾರರಾಗಿರುವ ಬೆಸ್ಕಾಂ ಈ ಮೂವರು ಉದ್ಯೋಗಿಗಳ ವಿರುದ್ಧ ವ್ಯಕ್ತಿಯ ಜೀವಕ್ಕೆ ಅಪಾಯ ಉಂಟು ಮಾಡಿದ ಆರೋಪದ ಮೇಲೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣ ಜಗಳೂರು ಸಿವಿಲ್ ಮತ್ತು ಜೆಎಂಎಫ್‌ಸಿ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ತಮ್ಮ ವಿರುದ್ಧದ ಈ ಪ್ರಕರಣ ಮತ್ತು ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಅರ್ಜಿದಾರ ಅಧಿಕಾರಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ನ್ಯಾಯಾಧೀಶರ ಕಟು ನುಡಿಗಳು
* ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಬೆಸ್ಕಾಂ ಅಧಿಕಾರಿಗಳಿಂದ ಅರ್ಜಿ
* ಅಧಿಕಾರಿಗಳ ಪರ ವಾದ ಮಂಡಿಸಲು ಮುಂದಾದ ವಕೀಲನಿಗೆ ಜಡ್ಜ್ ತಡೆ
* ಬೆಸ್ಕಾಂ ಅಧಿಕಾರಿಗಳು ಎಸಿ ರೂಂನಲ್ಲಿ ಕುಳಿತು ಕೆಲಸ ಮಾಡುತ್ತಾರಷ್ಟೇ
* ಜೀವಕ್ಕೆ ಅಪಾಯವಿರುವ ತಂತಿಗಳನ್ನು ತೆರವು ಮಾಡಲು ಬೆಸ್ಕಾಂ ನಿರ್ಲಕ್ಷ್ಯ
* ಇವರ ನಿರ್ಲಕ್ಷ್ಯದಿಂದ ಇನ್ನೆಷ್ಟು ಜನರ ಜೀವಗಳು ಹೋಗಬೇಕು: ನ್ಯಾ.ನಾಗವ್ರಸನ್ನ ಪ್ರಶ್ನೆ