ಕೊಡಗು, ಕರಾವಳಿ, ಮಲೆನಾಡು ಭಾಗದ 6 ಜಿಲ್ಲೆಗಳಲ್ಲಿ ಮುಂಗಾರು ಅಬ್ಬರಿಸುತ್ತಿದ್ದು, ಸೋಮವಾರ ಮತ್ತೆರಡು ಜೀವಗಳನ್ನು ಬಲಿ ಪಡೆದಿದೆ. ಶಿವಮೊಗ್ಗದಲ್ಲಿ ಭಾರೀ ಮಳೆಗೆ ಮನೆಯ ಗೋಡೆ ಕುಸಿದು ಶತಾಯುಷಿ ಅಜ್ಜಿಯೊಬ್ಬಳು ಮೃತ

 ಬೆಂಗಳೂರು : ಕೊಡಗು, ಕರಾವಳಿ, ಮಲೆನಾಡು ಭಾಗದ 6 ಜಿಲ್ಲೆಗಳಲ್ಲಿ ಮುಂಗಾರು ಅಬ್ಬರಿಸುತ್ತಿದ್ದು, ಸೋಮವಾರ ಮತ್ತೆರಡು ಜೀವಗಳನ್ನು ಬಲಿ ಪಡೆದಿದೆ. ಶಿವಮೊಗ್ಗದಲ್ಲಿ ಭಾರೀ ಮಳೆಗೆ ಮನೆಯ ಗೋಡೆ ಕುಸಿದು ಶತಾಯುಷಿ ಅಜ್ಜಿಯೊಬ್ಬಳು ಮೃತಪಟ್ಟಿದ್ದರೆ, ಚಿಕ್ಕಮಗಳೂರಿನಲ್ಲಿ ಮರ ಬಿದ್ದು ಬೈಕ್‌ ಸವಾರನೊಬ್ಬ ಅಸುನೀಗಿದ್ದಾನೆ. ಕುಂದಾಪುರದಲ್ಲಿ ಬೈಕೊಂದು ಪ್ರವಾಹದ ನೀರಲ್ಲಿ ಕೊಚ್ಚಿ ಹೋಗಿದ್ದು, ಸವಾರರಿಬ್ಬರು ಅದೃಷ್ಟವಶಾತ್‌ ಪಾರಾಗಿದ್ದಾರೆ. ನೇತ್ರಾವತಿ, ಕುಮಾರಧಾರ, ತುಂಗಾ, ಮಲಪ್ರಭಾ, ಸೌಪರ್ಣಿಕಾ, ಶರಾವತಿ ನದಿಗಳು ಮೈದುಂಬಿ ಹರಿಯುತ್ತಿವೆ.

ಇದೇ ವೇಳೆ, ಸಕಲೇಶಪುರ ಬಳಿ ಶಿರಾಡಿಘಾಟ್‌, ಶೃಂಗೇರಿಯ ಸಾಲ್ಮರ, ಮಂಗಳೂರಿನ ಕದ್ರಿ ಸೇರಿ ಕೆಲವೆಡೆ ಭೂಕುಸಿತ ಉಂಟಾಗಿದ್ದು, ಸಾರಿಗೆ ಸಂಚಾರ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ, ಬೈಂದೂರಿನ ಕಂಬಳಗದ್ದೆ, ಹಳಗೇರಿ, ಮಂಗಳೂರಿನ ಮೊಗೂರು ಗ್ರಾಮಗಳು ಜಲಾವೃತಗೊಂಡಿವೆ. ಮುಂಜಾಗ್ರತಾ ಕ್ರಮವಾಗಿ ಉತ್ತರ ಕನ್ನಡ ಜಿಲ್ಲೆಯ 8 ತಾಲೂಕುಗಳ ವ್ಯಾಪ್ತಿಯಲ್ಲಿ ಶಾಲೆಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ.

ಮಳೆಗೆ ಇಬ್ಬರು ಸಾವು:

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮೃಗಶಿರಾ ಮಳೆ ಅಬ್ಬರಿಸುತ್ತಿದ್ದು, ಎನ್‌.ಆರ್‌.ಪುರ ತಾಲೂಕಿನ ಎಲೆಕಲ್ಲು ಘಾಟಿ ಬಳಿ ಮರದ ಕೊಂಬೆ ಬಿದ್ದು, ಬೈಕ್‌ ಸವಾರ ಕಡಬಗೆರೆಯ ಅನಿಲ್ ರೋಜಾರಿಯೋ (50) ಎಂಬುವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಶಿವಮೊಗ್ಗ ತಾಲೂಕಿನ ಆಡಗಡಿ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಸಿದ್ದಮ್ಮ (100) ಎಂಬ ವೃದ್ಧೆ ಮೃತಪಟ್ಟಿದ್ದಾರೆ. ಮತ್ತಿಬ್ಬರು ಗಾಯಗೊಂಡಿದ್ದಾರೆ. ಕುಂದಾಪುರ ತಾಲೂಕಿನ ಬಡಾಕೆರೆ ಗ್ರಾಮದಲ್ಲಿ ನದಿ ದಾಟುವ ವೇಳೆ ಬೈಕೊಂದು ಪ್ರವಾಹದ ನೀರಲ್ಲಿ ಕೊಚ್ಚಿ ಹೋಗಿದ್ದು, ಬೈಕ್‌ ಸವಾರರಿಬ್ಬರು ಈಜಿ ದಡ ಸೇರಿದ್ದಾರೆ. ಈ ಮಧ್ಯೆ, ಬಂಟ್ವಾಳ ತಾಲೂಕಿನ ಬೆಂಜನಪದವಿನಲ್ಲಿ ಮೂರು ದಿನಗಳ ಹಿಂದೆ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಸಾಗರ್‌ (28) ಎಂಬುವರ ಮೃತದೇಹ ಸೋಮವಾರ ಪತ್ತೆಯಾಗಿದೆ.

ಮುಂದುವರಿದ ಭೂಕುಸಿತ:

ಭಾರೀ ಮಳೆಗೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಕುಂದಗಲ್‌ ನಲ್ಲಿ 200 ಅಡಿ ಉದ್ದ, ಒಂದೂವರೆ ಅಡಿಯಷ್ಟು ಭೂಮಿ ಕುಸಿದಿದೆ. ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಶೃಂಗೇರಿ ಸಮೀಪ ನೆಮ್ಮಾರು ಸಾಲ್ಮರ ಬಳಿ ಗುಡ್ಡ ಕುಸಿತ ಉಂಟಾಗಿದ್ದು, ಮಂಗಳೂರು-ಶೃಂಗೇರಿ ಮಾರ್ಗದಲ್ಲಿ ಸೆ.30ರವರೆಗೆ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಕಳಸದ ಸುಂಕಸಾಲೆ, ಸಕಲೇಶಪುರ ತಾಲೂಕಿನ ಹೆಗ್ಗದ್ದೆ ಬಳಿ ಶಿರಾಡಿಘಾಟ್‌ ರಸ್ತೆ 75ರಲ್ಲಿ, ಕುಮಟಾ-ಶಿರಸಿ ರಸ್ತೆಯ ಹರೀಟಾ, ಮಂಗಳೂರಿನ ಕದ್ರಿ ಶಿವಭಾಗ್‌, ಸೂರಿಕುಮೇರು ಬಳಿ ಗುಡ್ಡ ಕುಸಿತ ಉಂಟಾಗಿದೆ. ಬಜಪೆಯ ಅದ್ಯಪಾಡಿ ಬೈಲುಬೀಡಿನ ಬಳಿ ರಸ್ತೆ ಬಿರುಕು ಬಿಟ್ಟಿದ್ದು, ಸಮೀಪದ ಕನ್ಯಾನದಲ್ಲಿ ಭೂಮಿ ಕಂಪನದ ಅನುಭವ ಉಂಟಾಗಿದೆ. ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ 350ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ.

ಗ್ರಾಮಗಳು ಜಲಾವೃತ- ದ್ವೀಪಸದೃಶ:

ದಕ್ಷಿಣ ಕನ್ನಡದಲ್ಲಿ ಭಾರೀ ಮಳೆಗೆ ಕುಮಾರಧಾರಾ ನದಿ ಉಕ್ಕಿ ಹರಿಯುತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸ್ನಾನಘಟ್ಟ ಮುಳುಗಡೆಯಾಗಿದೆ. ಭಕ್ತರಿಗೆ ಸ್ನಾನಕ್ಕೆ ಡ್ರಮ್‌ಗಳಲ್ಲಿ ನದಿ ನೀರನ್ನು ಶೇಖರಣೆ ಮಾಡಿ ಇಡಲಾಗಿದೆ. ಧರ್ಮಸ್ಥಳದ ಸ್ನಾನಘಟ್ಟಕ್ಕೆ ಇಳಿಯದಂತೆ ಭಕ್ತರಿಗೆ ಎಚ್ಚರಿಕೆ ನೀಡಲಾಗಿದೆ. ಫಲ್ಗುಣಿ ನದಿ ಉಕ್ಕಿ ಹರಿಯುತ್ತಿದ್ದು, ಬಜಪೆಯ ಆದ್ಯಪಾಡಿ ಮೊಗರು ಕುದ್ರುವಿನಲ್ಲಿ ದ್ವೀಪಸದೃಶ ವಾತಾವರಣ ಉಂಟಾಗಿದೆ. ಇಲ್ಲಿನ 35 ಮನೆಗಳ ಜನರು ಹೊರಗೆ ತೆರಳಲು ದೋಣಿಯನ್ನು ಆಶ್ರಯಿಸಬೇಕಾಗಿದೆ.

ಸೌಪರ್ಣಿಕಾ ನದಿ ಉಕ್ಕಿ ಹರಿಯುತ್ತಿದ್ದು, ಬೈಂದೂರು ಸಮೀಪದ ಹಳಗೇರಿ, ಕಂಬಳಗದ್ದೆ ಪರಿಸರವಿಡೀ ಜಲಾವೃತಗೊಂಡಿದೆ. ಇಲ್ಲಿನ 8 ಮನೆಗಳ ಜನರನ್ನು ದೋಣಿಯ ಮೂಲಕ ಕರೆತರಲಾಗಿದೆ. ಚಕ್ರಾ ನದಿಯ ಪ್ರವಾಹದಿಂದಾಗಿ ಕುಂದಾಪುರ ಸಮೀಪದ ಕಮಲಶಿಲೆ ಬ್ರಾಹ್ಮಿ ದುರ್ಗಾ ಪರಮೇಶ್ವರಿ ದೇವಸ್ಥಾನ, ಮಾರಣಕಟ್ಟೆಯ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಮಲಪ್ರಭಾ ನದಿಯ ಪ್ರವಾಹಕ್ಕೆ ಖಾನಾಪುರ ತಾಲೂಕಿನಲ್ಲಿ ಮಾರುತಿ ದೇವಸ್ಥಾನಗಳು ಜಲಾವೃತಗೊಂಡಿವೆ. ಭಟ್ಕಳದಲ್ಲಿ 20ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ.

ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಶೃಂಗೇರಿ ಮಠದ ನದಿ ತೀರದ ಕಪ್ಪೆಶಂಕರ ಜಲಾವೃತಗೊಂಡಿದೆ. ಶರಾವತಿ ನದಿಯ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 138 ಮಿ.ಮೀ.ಮಳೆ ಬಿದ್ದಿದ್ದು, ವಿಶ್ವವಿಖ್ಯಾತ ಜೋಗ ಜಲಪಾತ ಜೀವಕಳೆ ಪಡೆದು ಮೈದುಂಬಿಕೊಳ್ಳುತ್ತಿದೆ.

ಮಳೆಯಿಂದ ಎಲ್ಲಿ ಏನಾಗುತ್ತಿದೆ?

- ಚಿಕ್ಕಮಗಳೂರು ಜಿಲ್ಲೆಯ ಎನ್‌.ಆರ್‌.ಪುರ ತಾಲೂಕಿನ ಎಲೆಕಲ್ಲು ಘಾಟಿ ಬಳಿ ಮರದ ಕೊಂಬೆ ಬಿದ್ದು ಬೈಕ್‌ ಸವಾರ ಸಾವು

- ಶಿವಮೊಗ್ಗ ತಾಲೂಕಿನ ಅಡಗಡಿ ಗ್ರಾಮದಲ್ಲಿ ಮನೆ ಗೋಡೆ ಕುಸಿದು 100 ವರ್ಷದ ಮಹಿಳೆ ಸಿದ್ದಮ್ಮ ಎಂಬುವರು ಮರಣ

- ಕುಂದಾಪುರ ತಾಲೂಕಿನ ಬುಡಾಕೆರೆಯಲ್ಲಿ ಕೊಚ್ಚಿಹೋದ ಬೈಕ್‌. ಈಜಿ ಸುರಕ್ಷಿತವಾಗಿ ದಡ ಸೇರಿದ ಇಬ್ಬರು ಬೈಕ್‌ ಸವಾರರು

- ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಕುಂದಗಲ್‌ನಲ್ಲಿ 200 ಅಡಿ ಉದ್ದ, ಒಂದೂವರೆ ಅಡಿಯಷ್ಟು ಭೂಮಿ ಕುಸಿತ

- ಶೃಂಗೇರಿ ಸಮೀಪದ ನೆಮ್ಮಾರು ಸಾಲ್ಮರ ಬಳಿ ಗುಡ್ಡ ಕುಸಿತ. ಮಂಗಳೂರು- ಶೃಂಗೇರಿ ಮಾರ್ಗದ ಸಂಚಾರ ನಿಷೇಧ

- ಕುಮಾರಧಾರ ನದಿ ಉಕ್ಕಿ ಹರಿಯುತ್ತಿರುವುದರಿಂದ ಕುಕ್ಕೆ ಸುಬ್ರಹ್ಮಣ್ಯ ಸ್ನಾನಘಟ್ಟ ಮುಳುಗಡೆ. ಡ್ರಮ್‌ಗಳಲ್ಲಿ ನೀರಿನ ವ್ಯವಸ್ಥೆ

- ಧರ್ಮಸ್ಥಳದಲ್ಲಿ ನೇತ್ರಾವತಿ ನದಿ ಸ್ನಾನಘಟ್ಟಕ್ಕೆ ಇಳಿಯದಂತೆ ಭಕ್ತರಿಗೆ ಎಚ್ಚರಿಕೆ. ದಕ್ಷಿಣ ಕನ್ನಡ ಬಜಪೆ ಬಳಿ ದ್ವೀಪ ಸದೃಶ ವಾತಾವರಣ

- ಚಕ್ರಾ ನದಿಯ ಪ್ರವಾಹದಿಂದಾಗಿ ಕುಂದಾಪುರದ ಕಮಲಶಿಲೆ ಬ್ರಾಹ್ಮಿ ದುರ್ಗಾ ಪರಮೇಶ್ವರಿ ದೇಗುಲ ಜಲಾವೃತ

- ತುಂಗಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿರುವುದರಿಂದ ಶೃಂಗೇರಿ ಸಮೀಪದ ಕಪ್ಪೆಶಂಕರ ದೇಗುಲ ಜಲಾವೃತ