ಉತ್ತರ ಕರ್ನಾಟಕ ಭಾಗದಲ್ಲಿ ಮುಂಗಾರು ಅಬ್ಬರಿಸುತ್ತಿದ್ದು, ಹುಬ್ಬಳ್ಳಿ-ಧಾರವಾಡ, ಕಾರವಾರ, ಗದಗ, ಯಾದಗಿರಿ, ಕಲಬುರಗಿ ಸೇರಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಮಳೆಗೆ ಅಕ್ಷರಶಃ ನಲುಗಿ ಹೋಗಿವೆ.

ಹುಬ್ಬಳ್ಳಿ/ಬೆಂಗಳೂರು (ಜೂ.13): ಉತ್ತರ ಕರ್ನಾಟಕ ಭಾಗದಲ್ಲಿ ಮುಂಗಾರು ಅಬ್ಬರಿಸುತ್ತಿದ್ದು, ಹುಬ್ಬಳ್ಳಿ-ಧಾರವಾಡ, ಕಾರವಾರ, ಗದಗ, ಯಾದಗಿರಿ, ಕಲಬುರಗಿ ಸೇರಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಮಳೆಗೆ ಅಕ್ಷರಶಃ ನಲುಗಿ ಹೋಗಿವೆ. ಬುಧವಾರ ರಾತ್ರಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ಇಬ್ಬರು ನೀರು ಪಾಲಾಗಿದ್ದರೆ, ಪ್ರವಾಹದಲ್ಲಿ ಸಿಲುಕಿದ್ದ 7 ಮಂದಿಯನ್ನು ರಕ್ಷಿಸಲಾಗಿದೆ. ಬೆಣ್ಣೆಹಳ್ಳ, ತುಪ್ಪರಿ, ಮುಲ್ಲಾಮಾರಿ ಸೇರಿ ಉತ್ತರ ಕರ್ನಾಟಕದ ಹಲವು ನದಿಗಳು ಉಕ್ಕಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ, ನಿವಾಸಿಗಳು ಪರದಾಡುವಂತಾಗಿದೆ. ಮುಂಜಾಗ್ರತಾ ಕ್ರಮವಾಗಿ ಧಾರವಾಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ಶುಕ್ರವಾರವೂ ರಜೆ ಘೋಷಿಸಲಾಗಿದೆ.

ಬುಧವಾರ ರಾತ್ರಿ ಸುಮಾರು 6 ತಾಸು ಸುರಿದ ಮಳೆಗೆ ಹುಬ್ಬಳ್ಳಿ ತತ್ತರಿಸಿ ಹೋಯಿತು. ಹುಬ್ಬಳ್ಳಿಯ ನೇಕಾರ ನಗರದಲ್ಲಿ ಬೈಕ್‌ ಸವಾರ ಹುಸೇನ್ ಕಳಸ (55) ಎಂಬುವರು ಚರಂಡಿ ನೀರಲ್ಲಿ ಕೊಚ್ಚಿ ಹೋಗಿದ್ದು, ಅದೃಷ್ಟವಶಾತ್‌ ಹಿಂಬದಿ ಸವಾರ ಬಚಾವಾಗಿದ್ದಾನೆ. ಇದೇ ವೇಳೆ, ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಟ್ರ್ಯಾಕ್ಟರ್‌ನಲ್ಲಿ ಬೆಣ್ಣೆಹಳ್ಳ ದಾಟುವಾಗ ರೈತ ಶಿವಯ್ಯ (25) ಎಂಬುವರು ಕೊಚ್ಚಿಕೊಂಡು ಹೋಗಿದ್ದಾರೆ. ಇವರ ಜೊತೆಗಿದ್ದ ಮತ್ತಿಬ್ಬರು ಈಜಿ ದಡ ಸೇರಿದ್ದಾರೆ.

ಈ ಮಧ್ಯೆ, ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಹೊರವಲಯದ ಲಂಡ್ಯಾನ ಹಳ್ಳದ ಪ್ರವಾಹದಲ್ಲಿ ಮೂವರು ಕುರಿಗಾಹಿಗಳು ಮತ್ತು 100 ಕುರಿಗಳು ಸಿಲುಕಿದ್ದು, ಎಲ್ಲರನ್ನೂ ರಕ್ಷಿಸಲಾಗಿದೆ. ನವಲಗುಂದ ತಾಲೂಕಿನ ಯಮನೂರಲ್ಲಿ ತೋಟದ ಮನೆಯಲ್ಲಿ ಸಿಲುಕಿದ್ದ ನಾಲ್ವರನ್ನು ಅಗ್ನಿಶಾಮಕದಳ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ. ಬೆಣ್ಣೆಹಳ್ಳ ಉಕ್ಕಿ ಹರಿಯುತ್ತಿದ್ದು, ರೋಣ ಹಾಗೂ ನರಗುಂದ ತಾಲೂಕುಗಳ ಸಂಪರ್ಕ ಕಡಿತಗೊಂಡಿದೆ. ಕಾರವಾರದಲ್ಲಿ ಬುಧವಾರ ರಾತ್ರಿ ಜಿಲ್ಲಾಸ್ಪತ್ರೆಗೆ ನೀರು ನುಗ್ಗಿದ್ದು, ರೋಗಿಗಳು ಪರದಾಡುವಂತಾಯಿತು. ನಗರದ ಚಿಕನ್‌ ಶಾಪ್‌ಗೆ ನೀರು ನುಗ್ಗಿದ್ದು, 150ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ. ಜಿಲ್ಲೆಯ ಕೆಲವೆಡೆ ಭೂಕುಸಿತ ಸಂಭವಿಸಿದೆ.

ಉಡುಪಿ, ದಕ್ಷಿಣ ಕನ್ನಡ, ಕಾರವಾರ, ದಾವಣಗೆರೆ, ವಿಜಯನಗರ, ಯಾದಗಿರಿ, ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಳೆಗೆ 35ಕ್ಕೂ ಹೆಚ್ಚು ಮನೆಗಳು ಕುಸಿದಿದ್ದರೆ, 280ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಉಡುಪಿ, ಬಾಗಲಕೋಟೆ, ಮಂಗಳೂರು, ದಾವಣಗೆರೆ, ಧಾರವಾಡ, ಗದಗ, ಹಾವೇರಿ, ರಾಯಚೂರು, ಯಾದಗಿರಿ, ಕಲಬುರಗಿ, ವಿಜಯನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ 1200 ಹೆಕ್ಟೇರ್‌ ಗೂ ಹೆಚ್ಚು ಪ್ರದೇಶದಲ್ಲಿ ಬೆಳೆದ ಬೆಳೆ ಹಾನಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಮಳೆಯಾಗುತ್ತಿದ್ದು, ಆಗುಂಬೆ ಘಾಟಿಯ ಸೂರ್ಯಾಸ್ತಮಾನ ವೀಕ್ಷಣಾ ಗೋಪುರದ ಮೇಲ್ಭಾಗದ ರಸ್ತೆಗೆ ಗುರುವಾರ ಭಾರಿ ಗಾತ್ರದ ಮರ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.