ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆಯ ಸಂಭವ ಹೆಚ್ಚಿರುವ ಕಾರಣ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಬೆಂಗಳೂರು (ಜೂ.14): ಕಳೆದ ಎರಡು ದಿನಗಳಿಂದ ರಾಜ್ಯಾದ್ಯಂತ ಅಬ್ಬರಿಸಿದ್ದ ಮುಂಗಾರು ಮಳೆ ಶುಕ್ರವಾರ ಕೊಂಚ ಬಿಡುವು ನೀಡಿದೆ. ಆದರೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆಯ ಸಂಭವ ಹೆಚ್ಚಿರುವ ಕಾರಣ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಬೀದರ್ ಸೇರಿದಂತೆ ಹಲವೆಡೆ ಶುಕ್ರವಾರ ಅಲ್ಪ ಪ್ರಮಾಣದಲ್ಲಿ ಮಳೆ ಸುರಿದಿದೆ.
ಬುಧವಾರ ತಡರಾತ್ರಿ ಸುರಿದ ಧಾರಕಾರ ಮಳೆಗೆ ತತ್ತರಿಸಿದ್ದ ಹುಬ್ಬಳ್ಳಿ, ಧಾರವಾಡ ಸೇರಿ ಉತ್ತರ ಕರ್ನಾಟಕದ ನೆರೆ ಪ್ರದೇಶಗಳು ಸಹಜ ಸ್ಥಿತಿಗೆ ಮರಳಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಮಳೆಯಾಗಿದ್ದು, 4 ಮನೆ, ಸುಮಾರು 40 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಇನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ-ಮಲ್ಪೆ ರಸ್ತೆಯ ಆಗುಂಬೆ ಘಾಟಿಯಲ್ಲಿ ಜೂ.15 ರಿಂದ ಸೆ.30ರ ವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.
ಹುಬ್ಬಳ್ಳಿಯ ನೇಕಾರ ನಗರದ ಸೇತುವೆ ಬಳಿ ಭಾರಿ ಮಳೆಯಿಂದ ಉಂಟಾದ ದಿಢೀರ್ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಹುಸೇನ್ ಕಳಸ ಎಂಬುವವರ ಶವ ಶುಕ್ರವಾರ ಪತ್ತೆಯಾಗಿದೆ. ಕೊಚ್ಚಿಹೋದ ಸ್ಥಳದಿಂದ ಸುಮಾರು 2 ಕಿಮೀ ದೂರ ಶವ ದೊರೆತಿದೆ. ಧಾರವಾಡ ಕುಂದಗೋಳ ತಾಲೂಕಿನ ವಿವಿಧ ನೆರೆ ಪ್ರದೇಶಗಳಿಗೆ ಸಚಿವ ಸಂತೋಷ ಲಾಡ್ ತೆರಳಿ ಸಂತ್ರಸ್ತರನ್ನು ಭೇಟಿ ಮಾಡಿದರು. ಪ್ರವಾಹಕ್ಕೆ ಸಿಲುಕಿ ಮೃತರಾದ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸರ್ಕಾರದಿಂದ ₹5 ಲಕ್ಷ ಪರಿಹಾರ ಬಿಡುಗಡೆ ಮಾಡಿದ ಆದೇಶದ ಪ್ರತಿಯನ್ನು ವಿತರಿಸಿದರು.
ಹೊನ್ನಾವರದಲ್ಲಿ ಮುಂದುವರಿದ ಮಳೆ: ತಾಲೂಕಿನಾದ್ಯಂತ ಮುಂಗಾರು ಮಳೆ ಭರ್ಜರಿಯಾಗಿ ಪ್ರಾರಂಭವಾಗಿದೆ. ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಮಳೆಯಿಂದ ಅನಾಹುತಗಳು ಅಲ್ಲಲ್ಲಿ ಆಗುತ್ತಲಿದೆ. ಪಟ್ಟಣದಲ್ಲಿನ ಕಾಲೇಜು ರೋಡ್ ನಲ್ಲಿನ ಎಡಭಾಗದಲ್ಲಿ ಗಟಾರವನ್ನು ಸ್ವಚ್ಛಗೊಳಿಸದೇ ಗಟಾರದಲ್ಲಿ ಹರಿಯಬೇಕಾದ ಮಳೆಯ ನೀರು ರಸ್ತೆಯ ಅಂಚಿನಲ್ಲಿ ಹರಿಯುವಂತಾಗಿದೆ. ಇದರಿಂದ ಪಾದಚಾರಿಗಳಿಗೆ, ವಿದ್ಯಾರ್ಥಿಗಳಿಗೆ ನಡೆದುಕೊಂಡು ಹೋಗುವಾಗ ರಸ್ತೆಯ ಎಡಭಾಗದಲ್ಲಿ ಕಿರಿಕಿರಿ ಎನ್ನುವಂತಾಗಿದೆ.
ಹೊನ್ನಾವರ -ಬೆಂಗಳೂರು ಹೈವೇ ಪಕ್ಕದಲ್ಲಿನ ಗಟಾರವನ್ನು ಸ್ವಚ್ಛ ಮಾಡುವ ಕೆಲಸವನ್ನು ಪಟ್ಟಣ ಪಂಚಾಯತ್ ಮಾಡಿಲ್ಲ. ಮೇ ತಿಂಗಳಿನಲ್ಲಿಯೇ ಚಂಡಮಾರುತದ ಪ್ರಭಾವದಿಂದ ತಾಲೂಕಿನಲ್ಲಿ ಭಾರಿ ಮಳೆ ಆಗಿತ್ತು. ಆ ವೇಳೆಯಲ್ಲಿಯೇ ಮಳೆಗಾಲ ಪೂರ್ವ ಭಾವಿ ಕೆಲಸವನ್ನು ಏರಿಯಾ ಪ್ರಕಾರ ಮಾಡಬಹುದಿತ್ತು. ಆದರೂ ಪಟ್ಟಣ ಪಂಚಾಯತ್ ಇದರ ಬಗ್ಗೆ ಗಮನ ಹರಿಸಲಿಲ್ಲ ಎಂದು ಜನಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ. ಪಟ್ಟಣದ ಮೂಡಗಣಪತಿ ದೇವಾಲಯದ ಕೆಳಗಿನ ಭಾಗದಿಂದ ಹೈವೆ ಸರ್ಕಲ್ ವರೆಗಿನ ಗಟಾರವನ್ನು ಸ್ವಚ್ಛ ಮಾಡಿಲ್ಲ. ಗಟಾರದಲ್ಲಿನ ಮಣ್ಣು, ಪ್ಲಾಸ್ಟಿಕ್ ಹಾಗೂ ಇನ್ನಿತರ ಕಸ ಹಾಗೆ ತುಂಬಿಕೊಂಡಿರುವುದರಿಂದ ಮಳೆ ನೀರು ಗಟಾರ ಬಿಟ್ಟು ರಸ್ತೆಯ ಮೇಲೆ ಹರಿಯುವ ಪರಿಸ್ಥಿತಿ ನಿರ್ಮಾಣ ವಾಗಿದೆ.
