ಬೆಂಗಳೂರು(ಜೂ.14): ಮುಂದಿನ ನಾಲ್ಕೈದು ದಿನಗಳ ಕಾಲ ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂಗಾರು ಚುರುಕುಗೊಂಡಿದ್ದು, ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜೂ.18ರ ವರೆಗೆ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಜೂ.14 ಮತ್ತು 15ರಂದು ಈ ಮೂರು ಜಿಲ್ಲೆಗಳಲ್ಲಿ 115 ಮಿ.ಮೀ.ನಿಂದ 204 ಮಿ.ಮೀ.ವರೆಗೆ ಧಾರಾಕಾರ ಮಳೆಯಾಗುವ ಸಾಧ್ಯತೆ ಇರುವುದರಿಂದ ಈ ಜಿಲ್ಲೆಗಳಿಗೆ ‘ಆರೇಂಜ್‌ ಅಲರ್ಟ್‌’ ಎಚ್ಚರಿಕೆ ನೀಡಲಾಗಿದೆ.

ಇಡೀ ರಾಜ್ಯಕ್ಕೆ ವ್ಯಾಪಿಸಿದ ಮುಂಗಾರು: ವಾಡಿಕೆಗಿಂತ ಹೆಚ್ಚು ಮಳೆ

ಇದೇ ವೇಳೆ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಉತ್ತಮ ಮಳೆ ಹಾಗೂ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಅಂಕೋಲ​ದಲ್ಲಿ 20 ಸೆ.ಮೀ. ಮಳೆ!

ಶನಿವಾರ ಕರಾವಳಿ ಮತ್ತು ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದೆ. ಒಳನಾಡು ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಬೆಳಗಾವಿ, ಹಾವೇರಿ, ಧಾರವಾಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರುಗಳಲ್ಲಿ ಮಳೆಯಾಗಿದೆ.

ಮಂಗಳೂರಲ್ಲಿ ನಿರಂತರ ಮಳೆ, ಮುಂದಿನ 4 ದಿನ ಆರೆಂಜ್‌ ಅಲರ್ಟ್‌

ಶನಿವಾರ ಬೆಳಗ್ಗೆ 8.30ಕ್ಕೆ ಅಂತ್ಯಕ್ಕೆ ಕೊನೆಗೊಂಡ ಕಳೆದ 24 ಗಂಟೆ ಅವಧಿಯಲ್ಲಿ ಉತ್ತರ ಕನ್ನಡದ ಅಂಕೋಲದಲ್ಲಿ ಅತಿ ಹೆಚ್ಚು 20 ಸೆಂ.ಮೀ. ಮಳೆಯಾಗಿದೆ. ಉಳಿದಂತೆ ಉಡುಪಿಯ ಕೋಟಾದಲ್ಲಿ 9, ಕುಂದಾಪುರ, ಉತ್ತರ ಕನ್ನಡದ ಹೊನ್ನಾವರ ಹಾಗೂ ಕದ್ರಾದಲ್ಲಿ ತಲಾ 8, ಗೋರ್ಕಣ, ಉಡುಪಿಯ ಸಿದ್ದಾಪುರ ಹಾಗೂ ಶಿರಾಲಿಯಲ್ಲಿ ತಲಾ 6, ಕಾರವಾರ 5, ಉಡುಪಿಯ ಕಾರ್ಕಳದಲ್ಲಿ 4, ದಕ್ಷಿಣ ಕನ್ನಡದ ಮೂಡಬಿದರೆ, ಮಂಗಳೂರು, ಬೆಳಗಾವಿಯ ನಿಪ್ಪಾಣಿ, ಶಿವಮೊಗ್ಗದ ಹೊಸನಗರದಲ್ಲಿ ತಲಾ 3 ಸೆಂ.ಮೀ. ಮಳೆಯಾಗಿರುವ ವರದಿಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.