ಬೆಂಗಳೂರು(ಜೂ.12): ಜೂನ್‌ 3 ರಂದು ಕರಾವಳಿ ಪ್ರವೇಶಿಸಿದ ಮುಂಗಾರು ಗುರುವಾರ ಇಡೀ ರಾಜ್ಯಾದ್ಯಂತ ವ್ಯಾಪಿಸಿದೆ. ಜೂನ್‌ 1 ರಂದು ಕೇರಳ ಪ್ರವೇಶಿಸಿದ ಮುಂಗಾರು ಮೂರೇ ದಿನಕ್ಕೆ (ಜೂ.4) ರಾಜ್ಯದ ಕರಾವಳಿ ಪ್ರವೇಶಿಸಿತ್ತು. ಅದಾದ ಎಂಟು ದಿನಕ್ಕೆ (ಜೂ.11) ರಾಜ್ಯದ 30 ಜಿಲ್ಲೆಗಳಲ್ಲಿ ಮುಂಗಾರು ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಜೂನ್‌ 1 ರಿಂದ ಈವರೆಗೆ ದಕ್ಷಿಣ ಒಳನಾಡು ಹಾಗೂ ಮಲೆನಾಡು ಜಿಲ್ಲೆಗಳನ್ನು ಹೊರತುಪಡಿಸಿ ಉತ್ತರ ಒಳನಾಡು ಹಾಗೂ ಕರಾವಳಿಗಳಲ್ಲಿ ವಾಡಿಕೆ ಮತ್ತು ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ರಾಜ್ಯದಲ್ಲಿ ಜೂನ್‌ 1ರಿಂದ ಈವರೆಗೆ ವಾಡಿಕೆಯಂತೆ 56 ಮಿ.ಮೀ. ಮಳೆಯಾಗುವ ಬದಲು 60 ಮಿ.ಮೀ.ನಷ್ಟು(ಶೇ.7ರಷ್ಟು ಅಧಿಕ) ಮಳೆಯಾಗಿದೆ ಎಂದು ‘ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ’ ಮಾಹಿತಿ ನೀಡಿದೆ.

ಮಂಗಳೂರಲ್ಲಿ ನಿರಂತರ ಮಳೆ, ಮುಂದಿನ 4 ದಿನ ಆರೆಂಜ್‌ ಅಲರ್ಟ್‌

ಮುಂಗಾರು ಆರಂಭ ಪೂರ್ವದಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಿರುವುದರಿಂದ ಜೂನ್‌ ಮೊದಲ ವಾರದ ವಾಡಿಕೆ ಪ್ರಮಾಣಕ್ಕಿಂತ ಶೇ.50 ರಷ್ಟು ಹೆಚ್ಚಿನ ಬಿತ್ತನೆಯಾಗಿದೆ. ಇದೀಗ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಮುಂದಿನ ಮೂರ್ನಾಲ್ಕು ದಿನ ಉತ್ತರ ಒಳನಾಡು, ಕರಾವಳಿ, ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗಲಿದೆ ಎಂದು ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಶ್ರೀನಿವಾಸ್‌ ರೆಡ್ಡಿ ಮಾಹಿತಿ ನೀಡಿದ್ದಾರೆ.

ಮೂರ್ನಾಲ್ಕು ದಿನ ಮಳೆ:

ಮುಂಗಾರು ಚುರುಕಾಗಿರುವ ಪರಿಣಾಮ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೇಂಜ್‌ ಮತ್ತು ಎಲ್ಲೋ ಅಲರ್ಟ್‌ನ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಇದೇ ವೇಳೆ ದಕ್ಷಿಣ ಒಳನಾಡಿನ ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.