ಮಂಗಳೂರಲ್ಲಿ ನಿರಂತರ ಮಳೆ, ಮುಂದಿನ 4 ದಿನ ಆರೆಂಜ್ ಅಲರ್ಟ್
ಬುಧವಾರ ಬೆಳಗ್ಗಿನಿಂದಲೇ ನಿರಂತರ ಮಳೆ ಸುರಿಯತೊಡಗಿದೆ. ಜೂ.14ರವರೆಗೆ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಆರೇಂಜ್ ಅಲರ್ಟ್ ಘೋಷಿಸಲಾಗಿದೆ.
ಮಂಗಳೂರು(ಜೂ.11): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಸಂಪೂರ್ಣ ಮಳೆಗಾಲದ ವಾತಾವರಣ ಆರಂಭವಾಗಿದೆ. ರಾಜ್ಯದಲ್ಲಿ ಕಳೆದ ವಾರವೇ ಮುಂಗಾರು ಪ್ರವೇಶವಾಗಿದ್ದರೂ ಕರಾವಳಿ ಭಾಗದಲ್ಲಿ ಮಾತ್ರ ದಿನಕ್ಕೊಂದೆರಡು ಬಾರಿ ಮಾತ್ರ ಮಳೆಯಾಗಿ ಬಿಸಿಲು- ಸೆಕೆ ವಾತಾವರಣವಿತ್ತು.
ಇದೀಗ ಬುಧವಾರ ಬೆಳಗ್ಗಿನಿಂದಲೇ ನಿರಂತರ ಮಳೆ ಸುರಿಯತೊಡಗಿದೆ. ಜೂ.14ರವರೆಗೆ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಆರೇಂಜ್ ಅಲರ್ಟ್ ಘೋಷಿಸಲಾಗಿದೆ.
ಕುಕ್ಕೆ ಸುಬ್ರಮಣ್ಯದಲ್ಲಿ ಎರಡನೇ ದಿನ 2 ಸಾವಿರಕ್ಕೂ ಅಧಿಕ ಭಕ್ತರು
ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದ್ದರೆ, ಇತರ ಭಾಗಗಳಲ್ಲಿ ದಿನವಿಡಿ ಹನಿ ಮಳೆ ಸುರಿದಿದೆ. ಜಿಲ್ಲಾದ್ಯಂತ ಮಳೆಗಾಲದಂತೆಯೇ ಚಳಿ ಪೂರ್ತಿಯಾಗಿ ಆವರಿಸಿದೆ. ಭಾರೀ ಮಳೆ ಆಗದೆ ಇರುವುದರಿಂದ ಕೂಳೂರು- ಕಾವೂರು ರಸ್ತೆಯಲ್ಲಿ ಮರದ ರೆಂಬೆ ಬಿದ್ದದ್ದು ಬಿಟ್ಟರೆ ಹೆಚ್ಚಿನ ಅನಾಹುತಗಳಾದ ಕುರಿತು ವರದಿಯಾಗಿಲ್ಲ.
ಭಾರೀ ಮಳೆ ನಿರೀಕ್ಷೆ: ಭಾರತೀಯ ಹವಾಮಾನ ಇಲಾಖೆ ಹೊರಡಿಸಿರುವ ಮುನ್ಸೂಚನೆ ಪ್ರಕಾರ ಕೇರಳ, ಕರ್ನಾಟಕ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರಿ ಮಳೆಯಾಗಲಿದ್ದು, ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಜೂ.11 ಮತ್ತು 12ರವರೆಗೆ ದ.ಕ. ಜಿಲ್ಲೆಯಲ್ಲಿ 64.5 ಮಿ.ಮೀ. ನಿಂದ 115.5 ಮಿ.ಮೀವರೆಗೆ ಮಳೆ ಸುರಿಯುವ ನಿರೀಕ್ಷೆಯಿದ್ದರೆ, ಜೂ.13ರಿಂದ ಜೂ.14ರವರೆಗೆ 115.6 ಮಿ.ಮೀ.ನಿಂದ 204.4 ಮಿ.ಮೀ.ವರೆಗೆ ಮಳೆಯಾಗಲಿದೆ. ಆದ್ದರಿಂದ ಸಾರ್ವಜನಿಕರು ಈ ಸಮಯದಲ್ಲಿ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚಿಸಿದೆ. ಪ್ರಾಕೃತಿಕ ವಿಕೋಪಗಳಿಗೆ ಸಂಬಂಧಿಸಿದ ದೂರುಗಳಿಗೆ ಟೋಲ್ ಫ್ರೀ ಸಂಖ್ಯೆ 1077 ಸಂಪರ್ಕಿಸುವಂತೆ ಕೋರಲಾಗಿದೆ.
ಕಟೀಲು ದುರ್ಗಾಪರಮೇಶ್ವರಿ ದರ್ಶನಕ್ಕೆ ಇ-ಟಿಕೆಟ್: ದೇವಳ ತೆರೆಯುವ ದಿನಾಂಕ ಫಿಕ್ಸ್
ಮಳೆ ವಿವರ: ಮಂಗಳವಾರ ಬೆಳಗ್ಗಿನಿಂದ ಬುಧವಾರ ಬೆಳಗ್ಗಿನವರೆಗೆ ಜಿಲ್ಲೆಯಲ್ಲಿ ಸರಾಸರಿ 9 ಮಿ.ಮೀ. ಮಳೆ ದಾಖಲಾಗಿದೆ. ಬೆಳ್ತಂಗಡಿಯಲ್ಲಿ 10 ಮಿ.ಮೀ., ಬಂಟ್ವಾಳ ತಾಲೂಕಿನಲ್ಲಿ 5 ಮಿ.ಮೀ., ಮಂಗಳೂರಿನಲ್ಲಿ 10 ಮಿ.ಮೀ., ಪುತ್ತೂರಿನಲ್ಲಿ 9 ಮಿ.ಮೀ., ಸುಳ್ಯದಲ್ಲಿ 11 ಮಿ.ಮೀ. ಮಳೆಯಾಗಿದೆ.