ಶಿವಕುಮಾರ ಕುಷ್ಟಗಿ

ಗದಗ(ಅ.29): ಜಿಲ್ಲೆಯಾದ್ಯಂತ ಎಲ್ಲರೂ ದೀಪಾವಳಿಯ ಸಂಭ್ರಮದಲ್ಲಿದ್ದರೆ ಈರುಳ್ಳಿ ಬೆಳೆದ ರೈತರು ಮಾತ್ರ ತೀವ್ರ ನೋವಿನಲ್ಲಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಕೊರಗಿನಲ್ಲಿಯೇ ಹಬ್ಬ ಆಚರಣೆ ಮಾಡುತ್ತಿದ್ದಾರೆ. ಅತಿಯಾದ ಮಳೆಯಿಂದಾಗಿ ಈರುಳ್ಳಿ ಬೆಳೆಯೆಲ್ಲ ಸಂಪೂರ್ಣ ಕೊಳತೇ ಹೋಗಿದೆ. ಕಳೆದ ಎರಡು ದಿನಗಳಿಂದ ಬಿಡುವು ನೀಡಿರುವ ಮಳೆರಾಯ, ರೈತಲ್ಲಿ ಅಲ್ಪ ಸಮಾಧಾನ ತಂದಿದ್ದರೂ, ಈರುಳ್ಳಿ ಹೊಲಕ್ಕೆ ಹೋಗುತ್ತಿದ್ದಂತೆ ಎದೆಗೆ ಕಲ್ಲು ಬಡಿದು ಅನುಭವವನ್ನು ಪ್ರತಿಯೊಬ್ಬ ಈರುಳ್ಳಿ ಬೆಳೆದ ರೈತ ಎದುರಿಸುತ್ತಿದ್ದಾನೆ.

ಸತತ ಮಳೆ:

ರಾಜ್ಯದಲ್ಲಿ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಗದಗ ಜಿಲ್ಲೆ ಕಪ್ಪು ಮಣ್ಣು (ಯರಿಭೂಮಿ) ಹೊಂದಿದೆ. ಈರುಳ್ಳಿ ಬೆಳೆಯಲು ಇದು ಹೆಚ್ಚು ಸಹಕಾರಿ ಮತ್ತು ಕಡಿಮೆ ಮಳೆಗೂ ಉತ್ತಮ ಬೆಳೆ ಬರಲು ಸಾಧ್ಯ. ಅದಕ್ಕಾಗಿಯೇ ಮುಂಗಾರು ಪ್ರಾರಂಭದಲ್ಲಿ ಮಳೆ ಕೊರತೆ ಉಂಟಾಗಿದ್ದರೂ 59 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿತ್ತು. ಆದರೆ ಪ್ರಸಕ್ತ ಸಾಲಿನ ಆಗಸ್ಟ್‌ನಿಂದ ಅಕ್ಟೋಬರ್‌ ಅಂತ್ಯದ ವರೆಗೆ ಸತತವಾಗಿ ಸುರಿದ ಭಾರಿ ಮಳೆಗೆ ಈರುಳ್ಳಿ ಬೆಳೆಗಳೆಲ್ಲ ಕೊಳೆತು ಹೋಗಿವೆ. ಅದರಲ್ಲೂ ಅಕ್ಟೋಬರ್‌ ಕೊನೆಯ ವಾರದಲ್ಲಿ ಸುರಿದ ಭಾರಿ ಮಳೆಯಂತೂ ಸಂಪೂರ್ಣ ಹಾನಿಗೆ ಕಾರಣವಾಗಿದೆ.

ದೀಪಾವಳಿಗೆ ಕಟಾವು:

ಗದಗ ಜಿಲ್ಲೆಯ ಈರುಳ್ಳಿ ಮಾರುಕಟ್ಟೆಗೆ ಬರುವುದೇ (ದೀಪಾವಳಿಯಿಂದ) ಅಕ್ಟೋಬರ್‌ ಕೊನೆಯ ವಾರದಿಂದ ಡಿಸೆಂಬರ್‌ ಅಂತ್ಯವರೆಗೂ ಮಾರಾಟವಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ಮುಂಗಾರು ವಿಳಂಬವಾದ ಹಿನ್ನೆಲೆಯಲ್ಲಿ ಈರುಳ್ಳಿ ಬಿತ್ತನೆಯೇ ತಡವಾಗಿತ್ತು. ಸಹಜವಾಗಿ ಬೆಳೆಯೂ ತಡವಾಗಿ ಕಟಾವಿಗೆ ಬಂದಿತ್ತು. ಕಟಾವಿಗೆ ಬಂದ ಈರುಳ್ಳಿಗೆ ಅ. 18 ರಿಂದ ಜಿಲ್ಲೆಯಾದ್ಯಂತ ನಿರಂತವಾಗಿ ಸುರಿದ ಮಳೆ ರೈತರ ಗಾಯದ ಮೇಲೆ ಬರೆಯನ್ನೇ ಎಳೆದಿದೆ.

ಪ್ರವಾಹ ಸಂಕಷ್ಟ:

ಜಿಲ್ಲೆಯ 18 ಗ್ರಾಮಗಳು ಮಲಪ್ರಭಾ ಮತ್ತು ಬೆಣ್ಣೆಹಳ್ಳದ ಪ್ರವಾಹದಿಂದಾಗಿ ಜಿಲ್ಲೆಯ ರೋಣ ಮತ್ತು ನರಗುಂದ ತಾಲೂಕಿನ 18 ಗ್ರಾಮಗಳು ಸಂಪೂರ್ಣ ಜಲಾವೃತವಾದವು. ಇದರೊಟ್ಟಿಗೆ 28 ಲಕ್ಷ ಹೆಕ್ಟೇರ್‌ ಅಧಿಕ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ಬೆಳೆಗಳೆಲ್ಲ ಪ್ರವಾಹದಿಂದ ಹಾನಿಗೊಳಗಾಗಿದ್ದು, ಇದರಲ್ಲೂ ಶೇ. 60 ರಷ್ಟು ಈರುಳ್ಳಿ ಬಿತ್ತನೆಯಾಗಿತ್ತು. 12 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಫಲವತ್ತಾದ ಮಣ್ಣು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿ ರೈತರ ಜಮೀನುಗಳೇ ಬರಿದಾಗಿದ್ದು, ಮುಂದಿನ ಬಾರಿ ಬಿತ್ತನೆ ಮಾಡಲು ಬಾರದಂತಹ ಸ್ಥಿತಿಗೆ ಹೊಲಗಳು ಬಂದಿವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಳೆಯಿಂದ ಹಾನಿಯಾಗಿ ಬಂದಿರುವ ಅಲ್ಪ ಬೆಳೆಗಾದರೂ ಉತ್ತಮ ಬೆಲೆ ಸಿಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದ ಈರುಳ್ಳಿ ಬೆಳೆಗಾರರಿಗೆ, ಕೇಂದ್ರ ಸರ್ಕಾರ ಈರುಳ್ಳಿ ರಪ್ತು ನಿಷೇಧ ಮಾಡುತ್ತಿದ್ದಂತೆ ಪಾತಾಳಕ್ಕೆ ಕುಸಿದಿದ್ದು ದೊಡ್ಡ ಆತಂಕಕ್ಕೆ ಕಾರಣವಾಗಿದೆ. ಮಳೆಯಿಂದಾಗಿ ಸಂಪೂರ್ಣ ನೆನೆದು ಹೋಗಿರುವ ಈರುಳ್ಳಿಯಲ್ಲಿಯೇ ಉತ್ತಮ ಗುಣಮಟ್ಟದ ಈರುಳ್ಳಿ ಹುಡುಕಿ, ಒಣಗಿಸಿ, ಸ್ವಚ್ಛಗೊಳಿಸಿ ಮಾರುಕಟ್ಟೆ ತರುತ್ತಿರುವ ರೈತರಿಗೆ ಬಿತ್ತನೆಯಿಂದ ಇಲ್ಲಿಯವರೆಗೂ ಮಾಡಿರುವ ಖರ್ಚು ಮರಳಿ ಬರದಂತಹ ಸ್ಥಿತಿ ನಿರ್ಮಾಣವಾಗಿದ್ದು, ಈರುಳ್ಳಿ ಬೆಳೆಗಾರರು ದೀಪಾವಳಿ ಖುಷಿಗೆ ಮಳೆ ಹಾಗೂ ಪ್ರವಾಹ ತಣ್ಣೀರು ಎರಚಿದೆ.

ಸತತವಾಗಿ ಸುರಿದ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಈರುಳ್ಳಿ ಸಂಪೂರ್ಣ ಕೊಳೆತು ಹೋಗಿದೆ. ಅದನ್ನು ಕಿತ್ತು ಹೊಲದಿಂದ ತರುವುದೇ ಕಷ್ಟಸಾಧ್ಯವಾಗಿದೆ. ಕಿತ್ತು ತಂದ ಈರುಳ್ಳಿಗೆ ಮೆತ್ತಿಕೊಳ್ಳುವ ಮಣ್ಣನ್ನು ಬಿಡಿಸುವುದೇ ಸಮಸ್ಯೆಯಾಗಿದೆ. ಈರುಳ್ಳಿ ಕೀಳುವಾಗಲೇ ಅರ್ಧ ಭೂಮಿಯಲ್ಲಿ ಉಳಿಯುತ್ತಿದೆ. ಇನ್ನು ಬಿಸಿಲಿಗೆ ಹಾಕುತ್ತಿದ್ದಂತೆ ಈರುಳ್ಳಿ ಅಲ್ಲಿಯೇ ಮೊಳಕೆ ಒಡೆಯುತ್ತಿವೆ. ಹೀಗೆ ಹಲವಾರು ರೀತಿಯ ಸಮಸ್ಯೆಗಳನ್ನು ದಾಟಿ ಮಾರುಕಟ್ಟೆಗೆ ತಂದರೆ ಅಲ್ಲಿ ಬೆಲೆಯೇ ಇಲ್ಲ. ಹಾಗಾಗಿ ಈರುಳ್ಳಿ ಕೀಳುವುದನ್ನೇ ಬಿಡುವುದು ಉತ್ತಮ ಎನ್ನುವ ಸ್ಥಿತಿಗೆ ಬಂದಿದ್ದೇವೆ ಎಂದು ಈರುಳ್ಳಿ ಬೆಳೆಗಾರ ಗಂಗಪ್ಪ ಜೈನರ ಅವರು ಹೇಳಿದ್ದಾರೆ . 

ಅತಿಯಾಗಿ ಮಳೆಯಾದ ಹಿನ್ನೆಲೆಯಲ್ಲಿ ಈರುಳ್ಳಿ ಸಾಕಷ್ಟು ತೇವಾಂಶ ಮತ್ತು ಯರಿ ಮಣ್ಣಿನಿಂದ ಕೂಡಿದೆ. ಹೀಗಾಗಿ ರೈತರು ಮಾರಾಟಕ್ಕೆ ತರುವ ಈರುಳ್ಳಿಯನ್ನು ಖರೀದಿದಾರರು ಖರೀದಿಸಲು ಮುಂದೆ ಬರುತ್ತಿಲ್ಲ. ರೈತರು ಚೀಲದಲ್ಲಿ ತುಂಬಿ ಅದು ಮಾರಾಟವಾಗಿ ಬೇರೆ ಸ್ಥಳಗಳಿಗೆ ತೆರಳಬೇಕಾದಲ್ಲಿ ಕನಿಷ್ಠ 3 ದಿನಗಳಾದರೂ ಬೇಕು. ಸದ್ಯ ಮಾರುಕಟ್ಟೆಗೆ ಬರುತ್ತಿರುವ ಈರುಳ್ಳಿ ಒಂದೇ ದಿನದಲ್ಲಿ ಕೆಡುತ್ತಿದೆ ಎಂದು ಈರುಳ್ಳಿ ವ್ಯಾಪಾರಸ್ಥ ಜಿ.ಎಂ. ಶಿರಹಟ್ಟಿ ಅವರು ತಿಳಿಸಿದ್ದಾರೆ.