* ಜು.25ರ ನಂತರ ರಾಜ್ಯದಲ್ಲಿ ಮಳೆಯ ಅಬ್ಬರ ಸಾಕಷ್ಟು ಕಡಿಮೆ* ಕಳೆದ ಮೂರು ದಿನದ ಹಿಂದೆ ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ವಾಯುಭಾರ ಕುಸಿತ * ಕಳೆದ 24 ಗಂಟೆಯಲ್ಲಿ ಹಲವು ಪ್ರದೇಶಗಳಲ್ಲಿ 10 ಸೆಂ.ಮೀ.ಗಿಂತಲೂ ಅಧಿಕ ಮಳೆ
ಬೆಂಗಳೂರು(ಜು.25): ರಾಜ್ಯಾದ್ಯಂತ ಸುರಿಯುತ್ತಿರುವ ಮಳೆ ಭಾನುವಾರವೂ ಮುಂದುವರಿಯಲಿದೆ. ಹವಾಮಾನದಲ್ಲಿ ಉಂಟಾದ ಬದಲಾವಣೆಗಳು ಸಹಜ ಸ್ಥಿತಿಗೆ ಬರುವ ಹಿನ್ನೆಲೆಯಲ್ಲಿ ಜು.25ರ ನಂತರ ರಾಜ್ಯದಲ್ಲಿ ಮಳೆಯ ಅಬ್ಬರ ಸಾಕಷ್ಟು ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜು.28ರವರೆಗೆ ರಾಜ್ಯದ ಕೆಲವೆಡೆ ಮಾತ್ರ ತುಸು ಬಿರುಸಿನ ಮಳೆ ಆಗುವ ಸಾಧ್ಯತೆ ಇರುವ ಕಾರಣ ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಜು.26ಕ್ಕೆ ‘ಆರೆಂಜ್ ಅಲರ್ಟ್’, ನಂತರದ ಎರಡು ದಿನ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ. ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಿಗೆ ಜು.26ರಂದು ‘ಯೆಲ್ಲೋ ಅಲರ್ಟ್’ ಎಚ್ಚರಿಕೆ ನೀಡಲಾಗಿದೆ.
ಮುಂದಿನ 24 ಗಂಟೆ ಅರಬ್ಬಿ ಸಮುದ್ರದಲ್ಲಿ 3.7 ಮೀಟರ್ ಎತ್ತರದ ಅಲೆಗಳು ದಡಕ್ಕೆ ಬಂದಪ್ಪಳಿಸಲಿವೆ. ಕರಾವಳಿ ತೀರದ ಪ್ರದೇಶಗಳಲ್ಲಿ ಗಾಳಿಯ ತೀವ್ರತೆ ಸಹ ಹೆಚ್ಚಿರಲಿದ್ದು, ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಹೀಗಾಗಿ ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ಮಹಾರಾಷ್ಟ್ರ ಮಳೆಗೆ ಬೆಳಗಾವಿ ಇನ್ನೂ ತತ್ತರ
ಕಳೆದ ಮೂರು ದಿನದ ಹಿಂದೆ ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ವಾಯುಭಾರ ಕುಸಿತ ಸದ್ಯ ಜಾರ್ಖಂಡ್, ಛತ್ತೀಸ್‌ಗಢ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಹಾದು ಹೋಗಿದೆ. ಹೀಗಾಗಿ ಶನಿವಾರ ಅಲ್ಲಿಯ ಭೂ ಮೇಲ್ಮೈನಲ್ಲಿ ವಾಯುಭಾರ ಕುಸಿತವಾಗಿದೆ. ಇತ್ತ ಕೇರಳ ಹಾಗೂ ಕರ್ನಾಟಕ ಕರಾವಳಿ ಭಾಗದಲ್ಲಿ ಮೇಲ್ಮೈ ಸುಳಿಗಾಳಿ (ಸ್ಟ್ರಫ್) ತೀವ್ರತೆ ಹೆಚ್ಚಾದ ಪರಿಣಾಮ ರಾಜ್ಯದ ಬಹುತೇಕ ಎಲ್ಲೆಡೆ ನಿರಂತರವಾಗಿ ಧಾರಾಕಾರ ಮಳೆ ದಾಖಲಾಗಿದೆ.
ನಿನ್ನೆ ಎಲ್ಲೆಲ್ಲಿ ಎಷ್ಟು ಮಳೆ?
ಕಳೆದ 24 ಗಂಟೆಯಲ್ಲಿ ಹಲವು ಪ್ರದೇಶಗಳಲ್ಲಿ 10 ಸೆಂ.ಮೀ.ಗಿಂತಲೂ ಅಧಿಕ ಮಳೆ ದಾಖಲಾಗಿದೆ. ಬೆಳಗಾವಿ ಜಿಲ್ಲೆಯ ಲೋಂಡಾದಲ್ಲಿ 18 ಸೆಂ.ಮೀ, ಉತ್ತರ ಕನ್ನಡದ ಮಂಚಿಕೆರೆ, ಚಿಕ್ಕಮಗಳೂರಿನ ಕೊಪ್ಪ, ಹಾಸನದ ಸಕಲೇಶಪುರಲ್ಲಿ ತಲಾ 15 ಸೆಂ.ಮೀ, ಶಿವಮೊಗ್ಗ ಜಿಲ್ಲೆಯ ತಾಳಗುಪ್ಪ 13, ಬೆಳಗಾವಿಯ ಸಂಕೇಶ್ವರ, ಹುಕ್ಕೇರಿ, ಗೋಕಾಕ್, ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ 11 ಸೆಂ.ಮೀ ಮಳೆ ಆಗಿದೆ. ಉತ್ತರ ಕನ್ನಡದ ಜಾನ್ಮನೆ, ಕೊಡಗಿನ ಭಾಗಮಂಡಲ, ಶಿವಮೊಗ್ಗ ಜಿಲ್ಲೆ ಮಂಡಗದ್ದೆ ಮತ್ತು ತ್ಯಾಗರ್ತಿಯಲ್ಲಿ ತಲಾ 10 ಸೆಂ.ಮೀ. ಮಳೆ ಬಿದ್ದಿದೆ. ಅಂತೆಯೇ ಉತ್ತರ ಕನ್ನಡದ ಹಳಿಯಾಳ, ಬೆಳಗಾವಿಯ ನಿಪ್ಪಾಣಿ, ಹಿಡಕಲ್ ಡ್ಯಾಂ ಮತ್ತು ರಾಯಭಾಗ್, ಶಿವಮೊಗ್ಗದ ಆಗುಂಬೆ, ಹಾವೇರಿಯ ಹಿರೇಕೆರೂರು, ಧಾರವಾಡದ ಕಲಘಟಗಿ ಪ್ರದೇಶಗಳಲ್ಲಿ ಅಬ್ಬರದ ಮಳೆಯಾಗಿದೆ.
