ಮಹಾರಾಷ್ಟ್ರ ಮಳೆಗೆ ಬೆಳಗಾವಿ ಇನ್ನೂ ತತ್ತರ
* ಮಳೆ ಇಳಿದರೂ ಬೆಳಗಾವಿಯಲ್ಲಿ ನೆರೆ ಭೀತಿ
* ಮಹಾರಾಷ್ಟ್ರದಲ್ಲಿ ಈಗಲೂ ಭಾರಿ ಮಳೆ
* ಬೆಳಗಾವಿ ಜಿಲ್ಲೆಯಲ್ಲಿ ಉಕ್ಕೇರಿ ಹರಿಯುತ್ತಿರುವ ಕೃಷ್ಣಾ, ಘಟಪ್ರಭಾ, ವೇದಗಂಗಾ
ಬೆಳಗಾವಿ(ಜು.25): ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಬೆಳಗಾವಿಯಲ್ಲಿ ಶನಿವಾರ ಸಂಪೂರ್ಣ ಕ್ಷೀಣಗೊಂಡಿದ್ದರೂ ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ಮುಂದುವರಿದಿರುವ ಪರಿಣಾಮ ಕೃಷ್ಣಾ, ಘಟಪ್ರಭಾ, ವೇದಗಂಗಾ ನದಿಗಳು ಉಕ್ಕಿ ಹರಿಯುತ್ತಿವೆ.
ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ ನದಿಯಿಂದಾಗಿ ಚಿಕ್ಕೋಡಿ, ಅಥಣಿ, ಕಾಗವಾಡ ತಾಲೂಕುಗಳು, ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಲವಾರು ಗ್ರಾಮಗಳು, ಘಟಪ್ರಭಾ ನದಿಯಿಂದಾಗಿ ಗೋಕಾಕ, ಮೂಡಲಗಿ, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಆದರೆ, ಖಾನಾಪುರ ತಾಲೂಕಿನಲ್ಲಿ ಮಳೆ ಕ್ಷೀಣಗೊಂಡಿದ್ದರಿಂದ ಮಲಪ್ರಭಾ ನದಿ ನೀರಿನ ಮಟ್ಟಯಥಾಸ್ಥಿತಿಯಲ್ಲಿದೆ. ಆದರೆ, ಸವದತ್ತಿ ತಾಲೂಕಿನಲ್ಲಿರುವ ನವಿಲು ತೀರ್ಥ ಜಲಾಶಯದಿಂದ ಈಗಲು 18 ಸಾವಿರ ಕ್ಯುಸೆಕ್ ನೀರನ್ನು ಹೊರಗೆ ಬಿಡುತ್ತಿರುವುದರಿಂದ ರಾಮದುರ್ಗ, ಬಾಗಲಕೋಟೆಯ ಬಾದಾಮಿ ತಾಲೂಕುಗಳು ಈಗ ಪ್ರವಾಹದ ಆತಂಕಕ್ಕೆ ಒಳಗಾಗಿವೆ.
19 ಸಾವಿರ ಮಂದಿ ಸ್ಥಳಾಂತರ:
ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ನದಿತೀರದ ಗ್ರಾಮಗಳಲ್ಲಿ 19,035 ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಸದ್ಯ 89 ಕಾಳಜಿ ಕೇಂದ್ರಗಳನ್ನು ಸರ್ಕಾರದಿಂದ ತೆರೆಯಲಾಗಿದ್ದು, 12 ಕಾಳಜಿ ಕೇಂದ್ರಗಳನ್ನು ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅರಬಾವಿ ಕ್ಷೇತ್ರದಲ್ಲಿ ತೆರೆದಿದ್ದಾರೆ. ಅದೇ ರೀತಿ ಸಚಿವ ಶ್ರೀಮಂತ ಪಾಟೀಲ ಸಹ 3 ಕಾಳಜಿ ಕೇಂದ್ರಗಳನ್ನು ತೆರೆದಿದ್ದಾರೆ. ಈ ಕೇಂದ್ರಗಳಲ್ಲಿ ಈಗ 8795 ಜನರಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಲಾಗಿದೆ. 37 ರಸ್ತೆಗಳು ಮುಳುಗಡೆಯಾಗಿವೆ. 16 ಮನೆಗಳು ಸಂಪೂರ್ಣ ಬಿದ್ದಿದ್ದು, 771 ಮನೆಗಳು ಭಾಗಶಃ ಬಿದ್ದಿವೆ. ಒಟ್ಟು 113 ಗ್ರಾಮಗಳು ಬಾಧಿತಗೊಂಡಿದ್ದು, 20895 ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. 36308 ಹೆಕ್ಟೇರ್ ಕೃಷಿ ಬೆಳೆ ಹಾಗೂ 1735 ಹೆಕ್ಚೇರ್ ಪ್ರದೇಶದಲ್ಲಿನ ತೋಟಗಾರಿಕೆ ಬೆಳೆ ಹಾನಿಗೀಡಾಗಿದೆ.
ಬೆಳಗಾವಿಯಲ್ಲಿ ಭಾರೀ ಮಳೆ: 51 ಗ್ರಾಮ ಜಲಾವೃತ..!
ಗೋಕಾಕ ತಾಲೂಕಲ್ಲಿ ಪ್ರವಾಹ:
ಘಟಪ್ರಭಾ, ಮಾಕಂರ್‍ಡೇಯ, ಹಿರಣ್ಯಕೇಶಿ ನದಿಗಳು ಉಕ್ಕೇರಿದ್ದರಿಂದ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ 22 ಗ್ರಾಮಗಳು ಭಾಗಶಃ ಮುಳುಗಡೆಯಾಗಿವೆ. 10ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ಗ್ರಾಮಸ್ಥರನ್ನು ಈಗಾಗಲೇ ಪರಿಹಾರ ಕೇಂದ್ರ ಸುರಕ್ಷಿತವಾಗಿ ಕರೆತರಲಾಗಿದೆ. ಈ ಪರಿಹಾರ ಕೇಂದ್ರದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನರಿದ್ದಾರೆ. ನೀರು ಉಕ್ಕಿದ್ದರಿಂದಾಗಿ ನಗರದ ದಾಳಿಂಬೆ ತೋಟ, ಡೋರ ಗಲ್ಲಿ, ಮಟನ್ ಮಾರ್ಕೆಟ್, ಭೋಜಗಾರ ಗಲ್ಲಿ, ಕುಂಬಾರ ಗಲ್ಲಿ, ಉಪ್ಪಾರ ಗಲ್ಲಿಯಲ್ಲಿ ಮನೆಗಳು ಜಲಾವೃತವಾಗಿವೆ. ನಗರದ ಹಲವೆಡೆ ಮನೆಗಳಲ್ಲೇ ಉಳಿದ 40ಕ್ಕೂ ಹೆಚ್ಚು ಜನರನ್ನು ಎನ್‌ಡಿಆರ್‌ಎಫ್ ತಂಡ ರಕ್ಷಣೆ ಮಾಡಿದೆ. ಗೋಕಾಕ ಪಟ್ಟಣ ಸಂಪರ್ಕಿಸುವ ಪ್ರಮುಖ ರಸ್ತೆ ಮಾರ್ಗಗಳು ಕೂಡ ಕಡಿತಗೊಂಡಿವೆ.
ಆತಂಕದಲ್ಲಿ ಅಥಣಿ 22 ಗ್ರಾಮ:
ಕೃಷ್ಣಾ ನದಿ ನೀರಿನ ಮಟ್ಟ ಏರಿಕೆಯಾಗಿದ್ದರೂ ಅಪಾಯದ ಮಟ್ಟತಲುಪಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಬರುತ್ತಿರುವ ನೀರಿನ ಪ್ರಮಾಣ ಅಪಾರವಾಗಿರುವುದರಿಂದ ಅಥಣಿ ತಾಲೂಕಿನ 22 ಗ್ರಾಮಗಳು ಪ್ರವಾಹಕ್ಕೆ ಒಳಗಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಪ್ರವಾಹ ಮುನ್ನೆಚ್ಚರಿಕೆಗಾಗಿ ತಾಲೂಕು ಆಡಳಿತವು ಪ್ರತಿ ಗ್ರಾಪಂನಲ್ಲಿ ಓರ್ವ ನೋಡಲ್ ಅಧಿಕಾರಿಯನ್ನು ನೇಮಕ ಮಾಡಿದೆ. ಹುಕ್ಕೇರಿ ತಾಲೂಕಿನಲ್ಲಿ ಉಕ್ಕಿ ಹರಿಯುತ್ತಿರುವ ಹಿರಣ್ಯಕೇಶಿ ನದಿಯ ನೀರಿನ ಪ್ರಮಾಣ ಶನಿವಾರ ಯಥಾಸ್ಥಿತಿ ಮುಂದುವರಿದಿದೆ. ಪಟ್ಟಣದ ಮಠ ಗಲ್ಲಿ, ನದಿ ಗಲ್ಲಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಅದರ ಜೊತೆಗೆ ಪಟ್ಟಣದ ಐದು ಗಂಜಿ ಕೇಂದ್ರ ಆರಂಭಿಸಿ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಲಾಗಿದೆ. ಇನ್ನು ಖಾನಾಪುರದಲ್ಲಿ ಮಳೆ ಕ್ಷೀಣವಾಗಿದ್ದು ಮಲಪ್ರಭಾ ನದಿಗೆ ಹರಿದುಬರುತ್ತಿರುವ ನೀರಿನ ಪ್ರಮಾಣ ಯಥಾಸ್ಥಿತಿಯಲ್ಲಿದೆ.
ಜಮಖಂಡಿಯಲ್ಲಿ ಮುಳುಗಡೆ ಭೀತಿ:
ಮಹಾರಾಷ್ಟ್ರದಲ್ಲಿ ಕೋಯ್ನಾ ಜಲಾಶಯದಿಂದ ಭಾರೀ ಪ್ರಮಾಣದ ನೀರನ್ನು ಬಿಡುತ್ತಿದ್ದು, ಕೃಷ್ಣಾ ನದಿಯಲ್ಲಿ ಒಳಹರಿವು ಹೆಚ್ಚಳವಾಗುವ ಭೀತಿ ಇದೆ. ಇದರಿಂದಾಗಿ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ 11 ಗ್ರಾಮಗಳಿಗೆ ಪ್ರವಾಹ ಎದುರಾಗುವ ಸಾಧ್ಯತೆ ಇದೆ. ಈಗಾಗಲೇ ಮುತ್ತೂರು ಗ್ರಾಮಕ್ಕೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.