*   ಕೊಪ್ಪಳದಲ್ಲಿ ಸಿಡಿಲಿಗೆ ರೈತ ಬಲಿ*   ಹುಣಸಗಿಯಲ್ಲಿ ಹಳ್ಳಕ್ಕೆ ಬಿದ್ದಿದ್ದ ಬಾಲಕನ ರಕ್ಷಣೆ*   ಬಾಲಕನ ರಕ್ಷಣೆ 

ಬೆಂಗಳೂರು(ಸೆ.22):ಉತ್ತರ ಕರ್ನಾಟಕದ ಯಾದಗಿರಿ, ಕೊಪ್ಪಳ ಸೇರಿ 7 ಜಿಲ್ಲೆಗಳಲ್ಲಿ ಮಂಗಳವಾರ ಉತ್ತಮ ಮಳೆ ಸುರಿದಿದ್ದು ಕೆಲ ಗ್ರಾಮಗಳಲ್ಲಿ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯೊಂದಿಗೆ ಬಂದ ಸಿಡಿಲಿಗೆ ರೈತರೊಬ್ಬರು ಬಲಿಯಾಗಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದ್ದು, ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಬಾಲಕನೊಬ್ಬನನ್ನು ಯುವಕರಿಬ್ಬರು ನೀರಲ್ಲಿ ಧುಮುಕಿ ಈಜಿ ರಕ್ಷಿಸಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನಿಂದ ವರದಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ನುಳಿದಂತೆ ಬಳ್ಳಾರಿ, ವಿಜಯನಗರ, ಬಾಗಲಕೋಟೆ, ವಿಜಯನಗರ ಜಿಲ್ಲೆಗಳ ಹಲವೆಡೆ ಉತ್ತಮ ಮಳೆಯಾಗಿದ್ದರೆ, ಗದಗ ಮತ್ತು ಧಾರವಾಡ ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆ ಸುರಿದಿದೆ. ಕೊಪ್ಪಳ ತಾಲೂಕಿನ ಮೈನಳ್ಳಿಯ ರೈತ ಯಂಕನಗೌಡ ಕುರುಡಗಿ (48) ಸಿಡಿಲು ಬಡಿದು ಮೃತರಾಗಿದ್ದಾರೆ. ಸೋಮವಾರ ಸಂಜೆ ಹೊಲಕ್ಕೆ ಹೋಗಿದ್ದ ಅವರು ಮಳೆ ಬರುತ್ತಿದ್ದ ವೇಳೆ ಮರದಡಿ ನಿಂತಿದ್ದರು. ಈ ವೇಳೆ ಸಿಡಿಲು ಬಡಿದು ಮೃತರಾಗಿದ್ದಾರೆ.

ಬೆಂಗಳೂರಿನಲ್ಲಿ ಇನ್ನೆರಡು ದಿನ ಮಳೆ ಅಬ್ಬರ: ಇರಲಿ ಎಚ್ಚರ

ಯಾದಗಿರಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು ಹಲವು ಕಡೆಗಳ ಗ್ರಾಮೀಣ ಭಾಗದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಹೊಲಗದ್ದೆಗಳಿಗೂ ನೀರು ನುಗ್ಗಿದ್ದರಿಂದ ಭತ್ತ ಮತ್ತು ಈರುಳ್ಳಿ ಬೆಳೆಗಳಿಗೆ ಹಾನಿಯಾಗಿದೆ. ಹುಣಸಗಿ ತಾಲೂಕಿನ ಗೆದ್ದಲಮುರಿ ಗ್ರಾಮದ ಮುಖ್ಯರಸ್ತೆ ಯಲ್ಲಿರುವ ಗೆದ್ದಲಮುರಿ ಸೇತುವೆ ಮೇಲೆ ನೀರು ತುಂಬಿ ಹರಿಯುತ್ತಿದ್ದು, ಜನರ ಸಂಚಾರ ಬಂದ್‌ ಆಗಿದೆ.

ಬಾಲಕನ ರಕ್ಷಣೆ: 

ಹುಣಸಗಿ ತಾಲೂಕಿನ ಗೆದ್ದಲಮರಿ ಗ್ರಾಮದ ಬಸವರಾಜ ಗೆದ್ದಲಮರಿ ಎಂಬ 5 ವರ್ಷದ ಬಾಲಕ ಗ್ರಾಮದಲ್ಲಿ ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ಕಾಲು ಜಾರಿ ಬಿದ್ದಿದ್ದ. ಬಾಲಕ ಹಳ್ಳದ ನೀರಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದುದನ್ನು ಗಮನಿಸಿದ ಗ್ರಾಮದ ಯುವಕರಾದ ಯಮನಪ್ಪ, ಕೆಂಚಪ್ಪ ಹಾಗೂ ಹಣಮಂತ ಎಂಬವರು ಬಾಲಕರನ್ನು ರಕ್ಷಿಸಿದ್ದಾರೆ.