ಬೆಂಗಳೂರು(ಸೆ.12): ರಾಜ್ಯದ ಬಯಲುಸೀಮೆ ಭಾಗದಲ್ಲಿ ದುರ್ಬಲವಾಗಿರುವ ಮುಂಗಾರು ಶುಕ್ರವಾರ ಕರಾವಳಿ ಭಾಗದಲ್ಲಿ ಪ್ರಬಲವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಂದರು ನಗರಿ ಮಂಗಳೂರು ಸೇರಿದಂತೆ ವಿವಿಧೆಡೆ ಕೃತ ನೆರೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದಲ್ಲದೆ, ಕೃಷಿ ಭೂಮಿಗಳೂ ಜಲಾವೃತವಾಗಿ ಅಪಾರ ಬೆಳೆ ನಷ್ಟವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸುತ್ತಮುತ್ತ ಕೃತಕ ನೆರೆಯಿಂದಾಗಿ ಜಲಾವೃತವಾಗಿದ್ದು, 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. 10ಕ್ಕೂ ಹೆಚ್ಚು ಮಂದಿಯನ್ನು ದೋಣಿಗಳ ಮುಖಾಂತರ ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದೆ. ಎರಡು ಕಡೆ ತಡೆಗೋಡೆಗಳು ಕುಸಿದು ಏಳು ವಾಹನಗಳಿಗೆ ಹಾನಿಯಾಗಿದ್ದು ಒಂದು ಅಪಾರ್ಟ್‌ಮೆಂಟ್‌, 2 ಮನೆಗಳು ಅಪಾಯದ ಅಂಚಿನಲ್ಲಿವೆ.

ಏತನ್ಮಧ್ಯೆ ಮಂಗಳೂರಿನ ಕುದ್ರೋಳಿಯ ಪ್ರಗತಿ ಸರ್ವಿಸ್‌ ಸ್ಟೇಷನ್‌ ಬಳಿ ಮಳೆನೀರು ಹರಿಯುತ್ತಿದ್ದ ತೋಡಿಗೆ ಮಹಿಳೆಯೊಬ್ಬರು ಹಾರಿದ್ದು, ಆಕೆಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲೂ ಶುಕ್ರವಾರ ನಿರಂತರ ಮಳೆಯಾಗಿದ್ದು ಹೆಬ್ರಿ ತಾಲೂಕಿನ ಮುದ್ರಾಡಿ ಯಲ್ಲಿ ಭತ್ತದ ಗದ್ದೆಗಳಿಗೆ ನೀರು ನುಗ್ಗಿದೆ.

ಬಯಲುಸೀಮೆ ಸೇರಿ 6 ಜಿಲ್ಲೆಯಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ

ಇನ್ನುಳಿದಂತೆ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಗಾಳಿಮಳೆಯಾಗಿದ್ದರೆ, ಚಿಕ್ಕಮಗಳೂರು, ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿದಿದೆ. ಧಾರವಾಡ, ಗದಗ, ಹಾವೇರಿ, ಬೆಳಗಾವಿ, ವಿಜಯಪುರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ. ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನಲ್ಲಿ ಡೋಣಿ ನದಿಯ ಆರ್ಭಟ ಎಂದಿನಂತೆಯೇ ಮುಂದುವರಿದಿದೆ. ಈ ನದಿಗೆ ಹಡಗಿನಾಳ ಗ್ರಾಮದಲ್ಲಿ ಕಟ್ಟಿರುವ ಕೆಳಮಟ್ಟದ ಸೇತುವೆಯನ್ನು ಶುಕ್ರವಾರ ಸಂಜೆ ದಾಟಲು ಯತ್ನಿಸುತ್ತಿದ್ದ ಪಾನಮತ್ತ ಬೈಕ್‌ ಸವಾರನೊಬ್ಬ ಬೈಕ್‌ ಸಮೇತ ದಡಲ್ಲೇ ಬಿದ್ದು ಆತಂಕಕ್ಕೆ ಕಾರಣವಾಗಿತ್ತು. ಬಳಿಕ ಆತನೆ ಸಾವರಿಸಿಕೊಂಡು ಬೈಕ್‌ನೊಂದಿಗೆ ದಡಕ್ಕೆ ವಾಪಸ್‌ ಬಂದ.

3 ದಿನ ಭಾರಿ ಮಳೆ: ಕರಾವಳಿ ಜಿಲ್ಲೆಗೆ ಇಂದು ರೆಡ್‌ ಅಲರ್ಟ್‌

ರಾಜ್ಯದ ಕರಾವಳಿ ಭಾಗದ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಮುಂದಿನ ಮೂರು ದಿನಗಳಲ್ಲಿ ರಾಜ್ಯದ ಹಲವು ಕಡೆ ಭಾರಿ ಮಳೆ ಸುರಿಯಲಿದ್ದು, ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅತ್ಯಂತ ಭಾರಿ ಮಳೆ ಬರುವ ನಿರೀಕ್ಷೆ ಹಿನ್ನೆಲೆಯಲ್ಲಿ ಸೆ. 12ರಂದು ‘ರೆಡ್‌ ಅಲರ್ಟ್‌’ ಎಚ್ಚರಿಕೆ ನೀಡಲಾಗಿದೆ.

ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗದಲ್ಲಿ ಸೆ.12ರಂದು ಅತೀ ಭಾರಿ ಮಳೆ ಬೀಳಲಿದ್ದು ‘ಆರೆಂಜ್‌ ಅಲರ್ಟ್‌’, ದಕ್ಷಿಣ ಹಾಗೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಕಾರಣಕ್ಕೆ ಮೂರು ದಿನ ‘ಯೆಲ್ಲೋ ಅಲರ್ಟ್‌’ ನೀಡಲಾಗಿದೆ.

ಮುಲ್ಕಿ​ಯಲ್ಲಿ 30 ಸೆಂ.ಮೀ ಮಳೆ

ಸೆ.11ರ ಬೆಳಗ್ಗೆ 8.30ಕ್ಕೆ ಅನ್ವಯವಾಗುವಂತೆ ಕಳೆದ 24 ಗಂಟೆಗಳಲ್ಲಿ ಕರಾವಳಿ ಭಾಗದಲ್ಲಿ ಅತ್ಯಂತ ಹೆಚ್ಚು ಮಳೆ ಬಿದ್ದಿದ್ದು, ದಕ್ಷಿಣ ಕನ್ನಡದ ಮುಲ್ಕಿಯಲ್ಲಿ ಅತೀ ಹೆಚ್ಚು 30 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಮಂಗಳೂರು ವಿಮಾನ ನಿಲ್ದಾಣ 26, ಪಣಂಬೂರು 23, ದಕ್ಷಿಣ ಕನ್ನಡದ ಮಂಗಳೂರು 19, ಉಡುಪಿಯ ಕೋಟ, ದಕ್ಷಿಣ ಕನ್ನಡದ ಮೂಡಬಿದಿರೆ, ಉಡುಪಿಯ ಕಾರ್ಕಳ, ಕುಂದಾಪುರ ತಲಾ 13, ದಕ್ಷಿಣ ಕನ್ನಡದ ಬೆಳ್ತಂಗಡಿ 12, ದಕ್ಷಿಣ ಕನ್ನಡದ ಮಾಣಿ 9, ಚಿಕ್ಕಮಗಳೂರಿನ ಕೊಟ್ಟಿಗೆಹಾರ 8, ಉಡುಪಿಯ ಕೊಲ್ಲೂರು, ಉತ್ತರ ಕನ್ನಡದ ಭಟ್ಕಳದಲ್ಲಿ 7 ಸೆಂ.ಮೀ ಮಳೆ ಬಿದ್ದಿದೆ.

ಇದೇ ಜಿಲ್ಲೆಯಲ್ಲಿ ಸೆ.13ರಂದು ಭಾರಿ ಮಳೆ ಬೀಳುವ ಕಾರಣಕ್ಕೆ ‘ಆರೆಂಜ್‌ ಅಲರ್ಟ್‌’, ವ್ಯಾಪಕ ಮಳೆ ಸಾಧ್ಯತೆ ಇರುವುದರಿಂದ ಸೆ.14ಕ್ಕೆ ‘ಯೆಲ್ಲೋ ಅಲರ್ಟ್‌’ ಘೋಷಿಸಲಾಗಿದೆ. ಕಡಲ ತೀರದಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 55 ಕಿ.ಮೀ ಇರಲಿದ್ದು, ಮೀನುಗಾರರಿಗೆ ನೀರಿಗಿಳಿಯದಂತೆ ಸೂಚಿಸಲಾಗಿದೆ. ರಾಜ್ಯದಲ್ಲಿ ತಾಪಮಾನ ಗರಿಷ್ಠ 29 ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.