Asianet Suvarna News Asianet Suvarna News

ಬಯಲುಸೀಮೆ ಸೇರಿ 6 ಜಿಲ್ಲೆಯಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ

ಚಿತ್ರದುರ್ಗದಲ್ಲಿ ಗೋಡೆ ಕುಸಿದು ಆರುವರ್ಷದ ಬಾಲಕಿ ಸಾವು | ಹಲವು ವರ್ಷದ ಬಳಿಕ ಕೋಡಿ ಬಿದ್ದ ಚಿತ್ರದುರ್ಗದ ಕೆರೆಗಳು | ದಾವಣಗೆರೆಯಲ್ಲಿ 350ಕ್ಕೂ ಅಧಿಕ ಭತ್ತ, ಅಡಕೆ ಬೆಳೆಗೆ ಹಾನಿ

Heavy Rainfall Wreaks Havoc in north Karnataka Districts
Author
Bengaluru, First Published Sep 10, 2020, 9:00 AM IST

 ಬೆಂಗಳೂರು (ಸೆ. 10): ಬಯಲು ಸೀಮೆ ಸೇರಿ ರಾಜ್ಯದ 6 ಜಿಲ್ಲೆಗಳಲ್ಲಿ ಮಂಗಳವಾರ ರಾತ್ರಿಯಿಂದೀಚೆಗೆ ಸುರಿದಿರುವ ಭಾರೀ ಮಳೆಗೆ ಹಲವು ಕೆರೆಕಟ್ಟೆಗಳು ಭರ್ತಿಯಾಗಿವೆ. ನೂರಾರು ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹೊಲಗದ್ದೆಗಳು ಜಲಾವೃತವಾಗಿ ಲಕ್ಷಾಂತರ ರುಪಾಯಿ ಬೆಳೆ ನೀರುಪಾಲಾಗಿದೆ. ಚಿತ್ರದುರ್ಗದಲ್ಲಿ ಮಳೆಯಿಂದಾಗಿ ಗೋಡೆ ಕುಸಿದು 6 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆಯೂ ನಡೆದಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿಯಿಂದೀಚೆಗೆ ಭಾರಿ ಮಳೆಯಾಗಿದ್ದು ಸುವರ್ಣಮುಖಿ, ವೇದಾವತಿ ನದಿಗಳು ತುಂಬಿ ಹರಿಯುತ್ತಿವೆ. ಐದಾರು ವರ್ಷಗಳ ಬಳಿಕ ಪಂಡ್ರಹಳ್ಳಿ, ಅಬ್ಬಿನಹೊಳೆ ಸೇರಿ ಹತ್ತಾರು ಕೆರೆಕಟ್ಟೆಗಳು ಭರ್ತಿಯಾಗಿ ಕೋಡಿ ಬಿದ್ದಿದೆ. ಮಲ್ಲಾಪುರ ಕೆರೆ ಕೋಡಿ ಬಿದ್ದ ಪರಿಣಾಮ ಗ್ರಾಮಕ್ಕೆ ನೀರು ನುಗ್ಗಿ ಅಲ್ಲಿನ ಮನೆಗಳು ಜಲಾವೃತವಾಗಿವೆ. ಮಳೆಯಿಂದಾಗಿ ಶೀತ ಹೆಚ್ಚಾಗಿ ಸಾವಿರಾರು ಎಕರೆ ಪ್ರದೇಶದ ಈರುಳ್ಳಿ ಬೆಳೆಗೆ ಹಾನಿಯಾಗಿದೆ. ಜಿಲ್ಲೆಯ ಚಳ್ಳಕೆರೆ ತಾಲೂಕಿನ ಜಾಜೂರು ಗ್ರಾಮದಲ್ಲಿ ಮನೆಯೊಂದು ಕುಸಿದು ಶೃಜನ್ಯ(6) ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಬೆಂಗಳೂರಲ್ಲಿ ಮಳೆ ಅನಾಹುತ ಪ್ರದೇಶಗಳಿಗೆ ಮೇಯರ್, ಆಯುಕ್ತರ ಭೇಟಿ

ದಾವಣಗೆರೆ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿದ್ದು 50ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿವೆ. ಹಲವೆಡೆ ನೀರು ನುಗ್ಗಿ 350ಕ್ಕೂ ಅಧಿಕ ಎಕರೆಯಲ್ಲಿ ಭತ್ತ, ಅಡಕೆ ಬೆಳೆಗಳು ನೀರುಪಾಲಾಗಿವೆ. ಗದಗ ಜಿಲ್ಲೆಯಲ್ಲಿ ಬಿರುಗಾಳಿ ಮಳೆಯಾಗಿದ್ದು ಅಪಾರ ಪ್ರಮಾಣದ ಕಬ್ಬು, ಬೇವಿನಜೋಳ, ಈರುಳ್ಳಿ ಬೆಳೆಗಳು ನಾಶವಾಗಿವೆ. ಜಲ್ಲಿಗೇರಿ ತಾಂಡಾಕ್ಕೆ ಮಳೆ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

ಬಳ್ಳಾರಿ ಜಿಲ್ಲೆಯಲ್ಲೂ ಉತ್ತಮ ಮಳೆ ಸುರಿದಿದ್ದು ಅನೇಕ ಮನೆಗಳಿಗೆ, ಕೆಲ ಬೆಳೆಗಳಿಗೆ ಹಾನಿಯಾಗಿವೆ. ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ಡೋಣಿ ನದಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಉಕ್ಕಿ ಹರಿಯುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಬಯಲುಸೀಮೆಯಲ್ಲಿ ಧಾರಾಕಾರ ಮಳೆಯಾಗಿದ್ದರೆ, ಮಲೆನಾಡು ಭಾಗದಲ್ಲಿ ತುಂತುರು ಮಳೆ ಸುರಿದಿದೆ. ಕೊಡಗು ಜಿಲ್ಲೆಯ ಬಹುತೇಕ ಕಡೆ ಸಾಧಾರಣ ಮಳೆ ಸುರಿದಿದೆ.

ಬೆಂಗಳೂರು: ವರುಣನ ಆರ್ಭಟಕ್ಕೆ 20 ಬಡಾವಣೆ ಮುಳುಗಡೆ, ಇನ್ನೂ ಎರಡು ದಿನ ಭಾರೀ ಮಳೆ

ಎತ್ತಿನ ಬಂಡಿ, ರೈತರ ರಕ್ಷಣೆ

ಡೋಣಿ ನದಿಗೆ ತಾಳಿಕೋಟೆ ತಾಲೂಕಿನ ಹಡಗಿನಾಳ ಗ್ರಾಮಕ್ಕೆ ತೆರಳುವ ಕೆಳಮಟ್ಟದ ಸೇತುವೆ ಸಂಪೂರ್ಣ ಜಲಾವೃತಗೊಂಡು ಎತ್ತಿನಬಂಡಿಯಲ್ಲಿ ನದಿ ದಾಟುತ್ತಿದ್ದ ರೈತರು ಸೇತುವೆ ದಡದಲ್ಲಿ ಸಿಲುಕಿಕೊಂಡು ಪರದಾಡಿದ ಘಟನೆ ನಡೆದಿದೆ. ತಕ್ಷಣವೇ ಸಹಾಯಕ್ಕೆ ಬಂದ ನದಿ ತೀರದ ಜನ ಎಲ್ಲರನ್ನೂ Üಕ್ಷಿಸಿದ್ದಾರೆ. ಇದೆ ವೇಳೆ ವಿದ್ಯಾರ್ಥಿಗಳು ಒಬ್ಬರಿಗೊಬ್ಬರು ಕೈಹಿಡಿದುಕೊಂಡು ಸೇತುವೆ ದಾಟಿ ದ್ವಿತೀಯ ಪಿಯುಸಿ ಸಪ್ಲಿಮೆಂಟರಿ ಪರೀಕ್ಷೆ ಎದುರಿಸಿದ್ದಾರೆ.

Follow Us:
Download App:
  • android
  • ios