ರಾಜ್ಯದಲ್ಲಿ ಕೋವಿಡ್‌ ಮೂರನೇ ಡೋಸ್‌ ಲಸಿಕೆಯನ್ನು ಶೇ.17ರಷ್ಟುಮಂದಿ ಮಾತ್ರ ಪಡೆದಿದ್ದು, ಉಚಿತವಾಗಿ ನೀಡುತ್ತಿದ್ದರೂ ಲಸಿಕೆ ಪಡೆಯಲು ಮುಂದೆ ಬಾರದಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ಲಸಿಕೆ ಪಡೆದರೆ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾದರೂ ಸಾವು ಸಂಭವಿಸುವ ಸ್ಥಿತಿ ಸೃಷ್ಟಿಯಾಗುವುದಿಲ್ಲ. 

ಬೆಂಗಳೂರು (ಆ.12): ರಾಜ್ಯದಲ್ಲಿ ಕೋವಿಡ್‌ ಮೂರನೇ ಡೋಸ್‌ ಲಸಿಕೆಯನ್ನು ಶೇ.17ರಷ್ಟುಮಂದಿ ಮಾತ್ರ ಪಡೆದಿದ್ದು, ಉಚಿತವಾಗಿ ನೀಡುತ್ತಿದ್ದರೂ ಲಸಿಕೆ ಪಡೆಯಲು ಮುಂದೆ ಬಾರದಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ಲಸಿಕೆ ಪಡೆದರೆ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾದರೂ ಸಾವು ಸಂಭವಿಸುವ ಸ್ಥಿತಿ ಸೃಷ್ಟಿಯಾಗುವುದಿಲ್ಲ. ಹೀಗಾಗಿ ಉತ್ತಮ ಆರೋಗ್ಯಕ್ಕಾಗಿ ಅರ್ಹರೆಲ್ಲರೂ ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದರು.

ಗುರುವಾರ ವಿಧಾನಸೌಧದಲ್ಲಿ ನಡೆದ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಎರಡೂ ಡೋಸ್‌ ಲಸಿಕಾಕರಣ ಪ್ರಮಾಣ ಶೇ.100ರಷ್ಟುದಾಟಿದರೂ, ಮೂರನೇ ಡೋಸ್‌ ಸಲಿಕಾಕರಣ ಶೇ.17ರಷ್ಟುಮಾತ್ರ ಆಗಿದೆ. ಪ್ರಧಾನಿ ಮೋದಿ ಅವರು ಮೂರನೇ ಡೋಸ್‌ ಕೂಡ ಉಚಿತವಾಗಿ ನೀಡಲು ಕ್ರಮ ವಹಿಸಿದ್ದಾರೆ. ಲಕ್ಷಾಂತರ ಲಸಿಕೆ ಡೋಸ್‌ ಲಭ್ಯವಿದ್ದರೂ ಜನರು ಮುಂದೆ ಬಾರದಿರುವುದು ಬೇಸರ ತಂದಿದೆ. ಲಸಿಕೆ ಪಡೆದವರಲ್ಲಿ 6-7 ತಿಂಗಳ ನಂತರ ರೋಗ ನಿರೋಧಕ ಶಕ್ತಿ ಕ್ಷೀಣಿಸುವುದರಿಂದ ಮೂರನೇ ಡೋಸ್‌ ನೀಡಲಾಗುತ್ತಿದೆ. ಮೂರನೇ ಡೋಸ್‌ ಪಡೆದರೆ ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದರು.

ರಾಜ್ಯದಲ್ಲಿ ಇಂದಿನಿಂದ ಮಾಸ್ಕ್‌ ಕಡ್ಡಾಯ: ಸಚಿವ ಸುಧಾಕರ್

‘ರಾಜ್ಯದಲ್ಲಿ ಈ ತಿಂಗಳ 10ರವರೆಗೆ 24 ಮಂದಿ ಸಾವನ್ನಪ್ಪಿದ್ದು ಬಹುತೇಕರು 60 ವರ್ಷ ವಯಸ್ಸು ಮೇಲ್ಪಟ್ಟವರಾಗಿದ್ದಾರೆ. ಯುವಜನರು ಲಸಿಕೆ ಪಡೆಯುವ ಜತೆಗೆ ಮನೆಯ ಹಿರಿಯರಿಗೂ ಕೊಡಿಸಬೇಕು. ರಾಜ್ಯದಲ್ಲಿ ಶೇ.7.2ರಷ್ಟುಕೋವಿಡ್‌ ಪಾಸಿಟಿವಿಟಿ ದರ ಇದೆ. ಕೆಲವು ಜಿಲ್ಲೆಗಳಲ್ಲಿ ರಾಜ್ಯದ ಪಾಸಿಟಿವಿಟಿ ದರಕ್ಕಿಂತ ಹೆಚ್ಚು ದರ ದಾಖಲಾಗಿದೆ. ಧಾರವಾಡದಲ್ಲಿ ಅತಿ ಹೆಚ್ಚು ದಾಖಲಾಗಿದೆ. ರಾಜ್ಯದಲ್ಲಿ ಪ್ರತಿದಿನ 30 ಸಾವಿರ ಮಾದರಿಗಳನ್ನು ಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದೆ. ಕೇಂದ್ರದ ಮಾರ್ಗಸೂಚಿಯಂತೆ, ರೋಗ ಲಕ್ಷಣ ಇರುವವರಿಗೆ ಪರೀಕ್ಷೆ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಖಾಸಗಿ ಆಸ್ಪತ್ರೆ ವಿರುದ್ಧ ಕಠಿಣ ಕ್ರಮ: ಖಾಸಗಿ ಆಸ್ಪತ್ರೆಗಳು ಕೋವಿಡ್‌ ರೋಗಿಗಳನ್ನು ನಿರಾಕರಿಸುವ ಬಗ್ಗೆ ದೂರು ಬಂದಿದ್ದು, ಇಂತಹ ಪ್ರಕರಣ ಕಂಡು ಬಂದರೆ ಕಾನೂನು ಪ್ರಕಾರ ಕಠಿಣ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದ ಸಚಿವರು, ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದ್ದರೂ ದಂಡ ವಿಧಿಸುವ ಪ್ರಸ್ತಾಪ ಇಲ್ಲ. ಪರಿಸ್ಥಿತಿ ನೋಡಿಕೊಂಡು ಮತ್ತೆ ಸಭೆ ನಡೆಸಿ ಚರ್ಚಿಸಲಾಗುವುದು. ಮಾಸ್ಕ್‌ ವಿಚಾರದಲ್ಲಿ ನಿರ್ಲಕ್ಷ್ಯ ಕಂಡು ಬರುತ್ತಿದ್ದು, ಎಲ್ಲರೂ ಮಾಸ್ಕ್‌ ಧರಿಸುವುದು ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ತಿಳಿಸಿದರು.

ಕೋರ್ಬಿವ್ಯಾಕ್ಸ್‌ ಲಸಿಕೆ: ಕೋರ್ಬಿವ್ಯಾಕ್ಸ್‌ ಎಂಬ ಹೊಸ ಲಸಿಕೆಯನ್ನು ಹೈದರಾಬಾದ್‌ ಸಂಸ್ಥೆ ಆವಿಷ್ಕಾರ ಮಾಡಿದ್ದು, ಅದಕ್ಕೆ ಪರವಾನಗಿ ದೊರೆತಿದೆ. ಮೂರನೇ ಡೋಸ್‌ ಆಗಿ ಕೋರ್ಬಿವ್ಯಾಕ್ಸ್‌ ಪಡೆಯಲು ನಾಳೆಯಿಂದ ಅವಕಾಶ ಇದೆ. 60 ವರ್ಷ ವಯಸ್ಸು ಮೇಲ್ಪಟ್ಟವರು, ಇತರೆ ಅನಾರೋಗ್ಯ ಸಮಸ್ಯೆ ಇರುವವರು ಕಡ್ಡಾಯವಾಗಿ ಮೂರನೇ ಡೋಸ್‌ ಪಡೆಯಬೇಕು. ತುಮಕೂರು, ಧಾರವಾಡ, ಬೆಂಗಳೂರಲ್ಲಿ 16, 21 ವರ್ಷ ವಯಸ್ಸಿನವರು ಕೋವಿಡ್‌ ಸೋಂಕಿಗೊಳಗಾಗಿ ಮೃತಪಟ್ಟಿದ್ದಾರೆ. ಅವರ ಡೆತ್‌ ಆಡಿಟ್‌ ನಡೆಸಲಾಗುತ್ತಿದೆ ಎಂದರು.

ಕರ್ನಾಟಕದಲ್ಲಿ ಮಂಕಿಪಾಕ್ಸ್‌ ಕೇಸ್ ಕಂಡುಬಂದಿಲ್ಲ, : ಸಚಿವ ಸುಧಾಕರ್‌ ಮಾಹಿತಿ

ರಾಜ್ಯದಲ್ಲಿ ಮಂಕಿಪಾಕ್ಸ್‌ ಕಂಡು ಬಂದಿಲ್ಲ: ದೇಶದಲ್ಲಿ ಈವರೆಗೆ ಒಂಬತ್ತು ಮಂಕಿಪಾಕ್ಸ್‌ ಪ್ರಕರಣ ಪತ್ತೆಯಾಗಿದೆ. ಆದರೆ, ರಾಜ್ಯದಲ್ಲಿ ಈವರೆಗೂ ಪ್ರಕರಣ ಕಂಡು ಬಂದಿಲ್ಲ. ಆದರೂ ಗಡಿಭಾಗದ ಐದಾರು ಜಿಲ್ಲೆಗಳಲ್ಲಿ ಮುನ್ನಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ. ಆಸ್ಪತ್ರೆಗಳಲ್ಲಿಯೂ ಅದಕ್ಕೆ ಬೇಕಾದ ಔಷಧಿ , ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.