ರಾಜ್ಯದಲ್ಲಿ ಇಂದಿನಿಂದ ಮಾಸ್ಕ್ ಕಡ್ಡಾಯ: ಸಚಿವ ಸುಧಾಕರ್
ರಾಜ್ಯದಲ್ಲಿ ಇಂದಿನಿಂದ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ. ಅಲ್ಲದೆ, ಲಸಿಕೆ ತೆಗೆದುಕೊಂಡ್ರೆ ಸೋಂಕು ಹರಡುವುದಿಲ್ಲ, ಸಾವು ಬರಲ್ಲ ಎಂದೂ ಹೇಳಿದ್ದಾರೆ.
ರಾಜ್ಯ ಮತ್ತು ದೇಶದಲ್ಲಿ ಕೋವಿಡ್ - 19 ಸೋಂಕು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಇಂದಿನಿಂದ ಮಾಸ್ಕ್ ಕಡ್ಡಾಯಗೊಳಿಸುವುದಾಗಿ ಆರೋಗ್ಯ ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಮಾಸ್ಕ್ ಕಡ್ಡಯಗೊಳಿಸಲಾಗಿದೆ. ಇದೇ ರೀತಿ, ರಾಜ್ಯದಲ್ಲೂ ಮಾಸ್ಕ್ ಕಡ್ಡಾಯಗೊಳಿಸಲಾಗುತ್ತಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ಕೊಟ್ಟಿದ್ದೇನೆ ಎಂದು ಸಚಿವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಇಂದಿನಿಂದ ಮಾಸ್ಕ್ ಕಡ್ಡಾಯಗೊಳಿಲಾಗಿದೆ. ಈ ಹಿನ್ನೆಲೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಆದರೆ ಸದ್ಯ ಮಾಸ್ಕ್ ಧರಿಸದಿದ್ದರೆ ಯಾವುದೇ ದಂಡ ವಿಧಿಸಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ಕೊಟ್ಟಿದ್ದೇನೆ ಎಂದು ಆರೋಗ್ಯ ಸಚಿವ ಸುಧಾಕರ್ ಗುರುವಾರ ತಿಳಿಸಿದ್ದಾರೆ.
ಇದನ್ನು ಓದಿ: ಕರ್ನಾಟಕದಲ್ಲಿ ಮಂಕಿಪಾಕ್ಸ್ ಮೇಲೆ ಹೆಚ್ಚಿನ ನಿಗಾ: ಸಚಿವ ಸುಧಾಕರ್
ಅಲ್ಲದೆ, ಮುಂದಿನ ದಿನಗಳಲ್ಲಿ ಸೋಂಕು ಏರಿಕೆ ಆದ್ರೆ ಹೆಚ್ಚಿನ ಕ್ರಮ ಕೈಗೊಳ್ಳುತ್ತೇವೆ. 15 ದಿನಗಳಲ್ಲಿ ಮತ್ತೊಮ್ಮೆ ಸಭೆ ಮಾಡ್ತೇವೆ ಎಂದೂ ಸುಧಾಕರ್ ತಿಳಿಸಿದ್ದಾರೆ. ಸದ್ಯ, ಸಭೆ ಸಮಾರಂಭಗಳನ್ನ ನಿರ್ಬಂಧಿಸಬೇಕು ಅಂತಾ ತಜ್ಞರು ಹೇಳಿಲ್ಲ. ಆದರೆ, ಜನರು ರೂಲ್ಸ್ ಪಾಲಿಸಬೇಕು ಎಂದೂ ಆರೋಗ್ಯ ಸಚಿವರು ಎಚ್ಚರಿಕೆ ನೀಡಿದ್ದಾರೆ.
ಹಬ್ಬಕ್ಕೆ ಯಾವುದೇ ಪ್ರತ್ಯೇಕ ರೂಲ್ಸ್ ಜಾರಿ ಇಲ್ಲ
ಈಗ ಸಾಲು ಸಾಲು ಹಬ್ಬಗಳು ಬರುತ್ತಿರುವ ಬಗ್ಗೆಯೂ ಮಾತನಾಡಿದ ಸುಧಾಕರ್, ಹಬ್ಬಕ್ಕೆ ಯಾವುದೇ ಪ್ರತ್ಯೇಕ ರೂಲ್ಸ್ ಜಾರಿ ಇಲ್ಲ. ಆದರೆ, ಜನರು ಎಚ್ಚರಿಕೆಯಿಂದ ಇರಬೇಕು, ಕೋವಿಡ್ - 19 ಟೆಸ್ಟಿಂಗ್ ಅನ್ನು ಇನ್ನಷ್ಟು ಜಾಸ್ತಿ ಮಾಡಿದ್ದೇವೆ, 36 ಸಾವಿರ ಟೆಸ್ಟಿಂಗ್ ಮಾಡಲಾಗಿದೆ ಎಂದೂ ಹೇಳಿದರು. ಹಾಗೆ, ಕೋವಿಡ್ - 19 ವಿರುದ್ಧದ ಲಸಿಕೆ ತೆಗೆದುಕೊಂಡ್ರೆ ಸಾವು ಬರಲ್ಲ, ಜತೆಗೆ ಕೊರೊನಾ ಸೋಂಕನ್ನು ತಡೆಯಬಹುದು. ಸಿಎಂ ಬಸವರಾಜ ಬೊಮ್ಮಾಯಿ ಮೂರು ಡೋಸ್ ತೆಗೆದುಕೊಂಡಿದ್ದಾರೆ, ಅದಕ್ಕೆ ಅವರಿಗೆ ಸೋಂಕು ತಗುಲಿದರೂ ಏನೂ ಸಮಸ್ಯೆ ಆಗಿಲ್ಲ ಎಂದೂ ಆರೋಗ್ಯ ಸಚಿವ ಸುಧಾಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಂಕಿಪಾಕ್ಸ್ ಬಗ್ಗೆಯೂ ಚರ್ಚೆ: ಸುಧಾಕರ್
ಇನ್ನು, ಆರೋಗ್ಯ ಇಲಾಖೆಯ ಸಭೆಯಲ್ಲಿ ಮಂಕಿಪಾಕ್ಸ್ ಬಗ್ಗೆಯೂ ಚರ್ಚೆ ಮಾಡಿದ್ದೀವಿ. ದೇಶದಲ್ಲಿ ಮಂಕಿಪಾಕ್ಸ್‌ನ 9 ಪ್ರಕರಣಗಳು ಈವರೆಗೆ ವರದಿಯಾಗಿವೆ. ಈ ಪೈಕಿ ಕೇರಳದಲ್ಲಿ ಐದು, ದೆಹಲಿಯಲ್ಲಿ ನಾಲ್ಕು ಕೇಸ್ ಪತ್ತೆಯಾಗಿದೆ. ಆದರೆ, ಕರ್ನಾಟಕದಲ್ಲಿ ಮಂಕಿಪಾಕ್ಸ್ ಕೇಸ್ ಪತ್ತೆ ಆಗಿಲ್ಲ ಎಂದೂ ಕೆ. ಸುಧಾಕರ್ ತಿಳಿಸಿದ್ದಾರೆ.
ಇದನ್ನೂ ಓದಿ: Good News: ಕರ್ನಾಟಕದಲ್ಲಿ ಮಂಕಿಪಾಕ್ಸ್ ಕೇಸ್ ಕಂಡುಬಂದಿಲ್ಲ, : ಸಚಿವ ಸುಧಾಕರ್ ಮಾಹಿತಿ
ರಾಜ್ಯದಲ್ಲಿ ಮಂಕಿಪಾಕ್ಸ್ ಕೇಸ್ ಪತ್ತೆ ಆಗಿಲ್ಲದಿದ್ರೂ ಕೇರದಲ್ಲಿ ಸೋಂಕು ಹೆಚ್ಚಳ ಹಿನ್ನೆಲೆ ಗಡಿ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದೂ ಸುದ್ದಿಗೋಷ್ಠಿ ವೇಳೆ ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.
ಇನ್ನೊಂದೆಡೆ, ಕೋವಿಡ್ - 19, ಮಂಕಿಪಾಕ್ಸ್ ಅಲ್ಲದೆ ಮಲೇರಿಯಾ, ಡೆಂಘೀ, ಎಚ್1ಎನ್1 ಬಗ್ಗೆಯೂ ಅಧ್ಯಯನ ಆಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಮಲೇರಿಯಾದ 114 ಪ್ರಕರಣಗಳು ವರದಿಯಾಗಿದ್ದರೆ, 4415 ಮಂದಿಗೆ ಡೆಂಘೀ ಬಂದಿದೆ. ಚಿಕುನ್ ಗುನ್ಯಾದ 978 ಹಾಗೂ ಎಚ್1ಎನ್1ನ 303 ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆ ಈ ಎಲ್ಲ ರೋಗಗಳ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಬೇಕು ಎಂದೂ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಸಚಿವ ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.