ರಾಕೇಶ್‌ ಎನ್‌.ಎಸ್‌.

ಬೆಂಗಳೂರು(ಡಿ.22): ಕೊರೋನಾ ಸೋಂಕಿನ ಎರಡನೇ ಅಲೆಯನ್ನು ತಡೆಯಲು ಪ್ರತಿದಿನ ಕನಿಷ್ಠ 1.25 ಲಕ್ಷ ಪರೀಕ್ಷೆ ನಡೆಸಬೇಕು ಎಂಬ ಗುರಿ ಹಾಕಿಕೊಂಡಿರುವ ರಾಜ್ಯದ ಆರೋಗ್ಯ ಇಲಾಖೆ ತನ್ನ ಗುರಿ ತಲುಪುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗದೇ ಇರುವುದು ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಈ ವರೆಗೆ ರಾಜ್ಯದಲ್ಲಿ ಕೇವಲ ಎರಡು ಬಾರಿ ಮಾತ್ರ 1.25 ಲಕ್ಷಕ್ಕಿಂತ ಹೆಚ್ಚು ಕೊರೋನಾ ಪರೀಕ್ಷೆಗಳು ನಡೆದಿವೆ. ನವೆಂಬರ್‌ನ ಕೊನೆಯ ವಾರದಲ್ಲಿ ಎರಡು ದಿನ ಮಾತ್ರ 1.25 ಲಕ್ಷಕ್ಕಿಂತ ಹೆಚ್ಚು ಪರೀಕ್ಷೆ ನಡೆದಿತ್ತು. ತನ್ಮೂಲಕ ರಾಜ್ಯದಲ್ಲಿರುವ ಒಟ್ಟು 164 ಪ್ರಯೋಗಾಲಯಗಳಿಂದ ಉದ್ದೇಶಿತ ಗುರಿ ತಲುಪಲು ಸಾಧ್ಯವಿದೆ ಎಂಬುದು ಸಾಬೀತಾಗಿತ್ತು. ಆದರೆ ಆ ಬಳಿಕ ಕೊರೋನಾ ಪರೀಕ್ಷೆ ನಿರೀಕ್ಷಿತ ಮಟ್ಟದಲ್ಲಿ ಸಾಗುವಲ್ಲಿ ಎಡವಿದೆ.

ಚಳಿಯ ತೀವ್ರತೆ ಹೆಚ್ಚಿರುವ, ಗ್ರಾಮ ಪಂಚಾಯತ್‌ ಚುನಾವಣೆ, ಕಾಲೇಜ್‌ಗಳ ಆರಂಭ, ಜಾತ್ರೆಗಳು ನಡೆಯುತ್ತಿರುವ ಡಿಸೆಂಬರ್‌ ತಿಂಗಳಿನಲ್ಲಿ ಒಂದೇ ಒಂದು ದಿನವೂ 1.25 ಲಕ್ಷಕ್ಕಿಂತ ಹೆಚ್ಚು ಕೊರೋನಾ ಪರೀಕ್ಷೆ ನಡೆದಿಲ್ಲ. ಈ ತಿಂಗಳಿನಲ್ಲಿ ಒಂದು ದಿನದ ಗರಿಷ್ಠ ಪರೀಕ್ಷೆ ಎಂದರೆ ಡಿಸೆಂಬರ್‌ 19ರಂದು ನಡೆದಿದ್ದ 1,15,150 ಪರೀಕ್ಷೆಗಳು. ಉಳಿದಂತೆ ಈ ತಿಂಗಳಿನಲ್ಲಿ ಒಟ್ಟು ಹತ್ತು ದಿನಗಳಲ್ಲಿ ಲಕ್ಷಕ್ಕಿಂತ ಕಡಿಮೆ ಪರೀಕ್ಷೆಗಳು ನಡೆದಿವೆ.

ಡಿಸೆಂಬರ್‌ 1ರಿಂದ ಡಿಸೆಂಬರ್‌ 7 ರವರೆಗೆ ಪ್ರತಿದಿನ ಸರಾಸರಿ 84,639 ಕೊರೋನಾ ಪರೀಕ್ಷೆ ನಡೆದಿದೆ. ಡಿಸೆಂಬರ್‌ 8ರಿಂದ ಡಿಸೆಂಬರ್‌ 14 ರವರೆಗೆ ಸರಾಸರಿ 77,400 ಪರೀಕ್ಷೆಗಳಷ್ಟೆನಡೆದಿವೆ. ಡಿಸೆಂಬರ್‌ 15ರಿಂದ ಡಿಸೆಂಬರ್‌ 21ರವರೆಗೆ ಸರಾಸರಿ 87,382 ಪರೀಕ್ಷೆ ನಡೆದಿದೆ.

‘ಕೋವಿಡ್‌ 2ನೇ ಅಲೆ ಇಲ್ಲ, ಆತಂಕ ಬೇಡ’

ಡಿಸೆಂಬರ್‌ಗೆ ಹೋಲಿಸಿದರೆ ನವೆಂಬರ್‌ ತಿಂಗಳ ಕೊನೆಯ ಹತ್ತು ದಿನಗಳಲ್ಲಿ ಕೊರೋನಾ ಪರೀಕ್ಷೆ ಉತ್ತಮವಾಗಿತ್ತು. ನವೆಂಬರ್‌ 20ರಿಂದ ನವೆಂಬರ್‌ 30ರ ಅವಧಿಯಲ್ಲಿ ಪ್ರತಿದಿನ ಸರಾಸರಿ 1,01,863 ಕೊರೋನಾ ಪರೀಕ್ಷೆಗಳು ನಡೆದಿದ್ದವು. ಡಿಸೆಂಬರ್‌ 3ರಂದು ರಾಜ್ಯದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶಿಫಾರಸ್ಸು ಮಾಡಿದ್ದ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯು ಫೆಬ್ರವರಿ ಅಂತ್ಯದವರೆಗೆ ಕೊರೋನಾ ಪರೀಕ್ಷೆಗಳ ಪ್ರಮಾಣವನ್ನು ಪ್ರತಿದಿನ ಕನಿಷ್ಠ ಎಂದರೂ 1.25 ಲಕ್ಷಕ್ಕೆ ಏರಿಸಬೇಕು ಎಂದು ಹೇಳಿತ್ತು. ಆದರೆ ರಾಜ್ಯದಲ್ಲಿ ಆ ಬಳಿಕ ಪರೀಕ್ಷೆಯ ಪ್ರಮಾಣದಲ್ಲಿ ಭಾರಿ ಇಳಿಕೆ ದಾಖಲಾಗಿದೆ. ಹಾಗೆಯೇ ಪ್ರತಿದಿನ ಲಕ್ಷಕ್ಕೂ ಹೆಚ್ಚು ಆರ್‌ಟಿಪಿಸಿರ್‌ ಪರೀಕ್ಷೆ ನಡೆಸಬೇಕು ಎಂದು ಇಟ್ಟುಕೊಂಡಿರುವ ಗುರಿ ಕೂಡ ಇನ್ನೂ ಸರ್ಕಾರದ ಕೈಗೆಟುಕಿಲ್ಲ.

ರಾಜ್ಯದಲ್ಲಿ ಭಾನುವಾರದವರೆಗೆ ಒಟ್ಟು 1.30 ಕೋಟಿ ಕೊರೋನಾ ಪರೀಕ್ಷೆಗಳು ನಡೆದಿವೆ. ಈ ಪರೀಕ್ಷೆಗಳಲ್ಲಿ ಸಿಂಹಪಾಲು ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಲ್ಲಿ ನಡೆದಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 53.29 ಲಕ್ಷ ಪರೀಕ್ಷೆಗಳು ನಡೆದಿವೆ. ಬಿಬಿಎಂಪಿ ಹೊರತಾಗಿ ಇಡೀ ರಾಜ್ಯದಲ್ಲಿ ಒಟ್ಟು 77.18 ಲಕ್ಷ ಪರೀಕ್ಷೆಗಳು ನಡೆದಿವೆ.