ಬೆಂಗಳೂರು(ಡಿ.22): ನಗರದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಇಲ್ಲ. ಬ್ರಿಟನ್‌ನಲ್ಲಿ ಕೊರೋನಾ ಹೊಸ ಪ್ರಭೇದ ಪತ್ತೆಯಾದ ರೀತಿಯ ಯಾವುದೇ ಪ್ರಕರಣಗಳು ನಗರದಲ್ಲಿ ವರದಿಯಾಗಿಲ್ಲ. ಹಾಗಾಗಿ, ನಾಗರಿಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ, ಆದರೆ ಕಡ್ಡಾಯವಾಗಿ ಮುನ್ನೆಚ್ಚರಿಕೆ ಕ್ರಮ ಪಾಲಿಸಬೇಕು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಹೇಳಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಕಳೆದ ಒಂದು ವಾರದಿಂದ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿಲ್ಲ. ನವೆಂಬರ್‌ನಲ್ಲಿ ಸೋಂಕಿನಿಂದಾಗಿ 271 ಜನ ಮೃತಪಟ್ಟಿದ್ದರು. ಈ ತಿಂಗಳು 130 ಮೃತಪಟ್ಟಿದ್ದಾರೆ. ಆದರೆ, ಕೋವಿಡ್‌ ಡೆತ್‌ ಅನಾಲಿಸಸ್‌ ಮತ್ತು ಸೋಂಕು ಪರೀಕ್ಷೆಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಸಿರೊಲಾಜಿಕಲ್‌ ವರದಿಯ ಅನ್ವಯ ಎಲ್ಲೆಲ್ಲಿ ಸೋಂಕು ಹೆಚ್ಚಾಗುವ ಆತಂಕ ಇದೆಯೋ ಅಲ್ಲೆಲ್ಲ ಹೆಚ್ಚು ಪರೀಕ್ಷೆ ಮಾಡಲಾಗುತ್ತಿದೆ ಎಂದು ಹೇಳಿದರು.

ಹೊಸ ವರ್ಷಾಚರಣೆ ನಿಯಮ ಅಪಾರ್ಟ್‌ಮೆಂಟ್‌ಗೂ ಅನ್ವಯ

ನಗರದಲ್ಲಿ ಕ್ರಿಸ್‌ಮಸ್‌ ಮತ್ತು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಹೆಚ್ಚು ಜನ ಸೇರದೆ ಸರಳವಾಗಿ ಹೊಸ ವರ್ಷ ಆಚರಣೆ ಮಾಡಬೇಕು ಎನ್ನುವ ನಿಯಮ ನಗರದಲ್ಲಿರುವ ಅಪಾರ್ಟ್‌ಮೆಂಟ್‌ಗಳಿಗೂ ಅನ್ವಯಿಸಲಿದ್ದು, ನಿಯಮ ಉಲ್ಲಂಘನೆ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತ ಮಂಜುನಾಥ್‌ ಪ್ರಸಾದ್‌ ಎಚ್ಚರಿಸಿದ್ದಾರೆ.

ತಗ್ಗಿದ ಕೊರೋನಾ ಹಾವಳಿ: ರಾಜ್ಯದ ಜನತೆಗೆ ಕೊಂಚ ರಿಲೀಫ್

ನಗರದ ಹೋಟೆಲ್‌, ಪಬ್‌ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಹೆಚ್ಚು ಜನ ಸೇರುವಂತಿಲ್ಲ. ಸಾರ್ವಜನಿಕ ಪ್ರದೇಶದಲ್ಲಿ ಹೊಸ ವರ್ಷ ಆಚರಣೆ ಮಾಡುವಂತಿಲ್ಲ. ನಿಯಮ ಪಾಲನೆ ಮೇಲ್ವಿಚಾರಣೆಗೆ 440 ಜನ ಮಾರ್ಷಲ್‌ಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

6 ತಿಂಗಳ ನಂತರ ಅತ್ಯಂತ ಕಡಿಮೆ ಜನರಿಗೆ ಸೋಂಕು

ನಗರದಲ್ಲಿ ಆರು ತಿಂಗಳ ನಂತರ ಕೊರೋನಾ ಸೋಂಕಿನ ಪ್ರಕರಣಗಳು ಅತ್ಯಂತ ಕಡಿಮೆ ದಾಖಲಾಗಿದೆ. ಸೋಮವಾರ 363 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 709 ಮಂದಿ ಗುಣಮುಖರಾಗಿದ್ದು, ಐದು ಮಂದಿ ಮೃತಪಟ್ಟಿದ್ದಾರೆ.
ಜೂನ್‌ 27ರಂದು 596 ಪ್ರಕರಣ ಪತ್ತೆಯಾಗಿತ್ತು. ನಂತರದ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಸಾವಿರ ದಾಟಿತ್ತು. ನಂತರ ಡಿ.14ರಂದು 369 ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದಾದ ನಂತರದ ಅತಿ ಕಡಿಮೆ ಸೋಂಕಿನ ಪ್ರಕರಣ ಸೋಮವಾರ ದಾಖಲಾಗಿದೆ.

ನಗರದಲ್ಲಿ ಸದ್ಯ ಈವರೆಗಿನ ಸೋಂಕಿತರ ಸಂಖ್ಯೆ 3,83,231ಕ್ಕೆ ಏರಿಕೆಯಾಗಿದೆ. ಗುಣಮುಖರ ಸಂಖ್ಯೆ 3,69,701ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಐದು ಮಂದಿ ಸಾವು: ಸೋಮವಾರ ಐದು ಮಂದಿ ಮೃತಪಡುವುದರೊಂದಿಗೆ ಈವರೆಗೆ 4,278 ಜನರು ಸಾವಿಗೀಡಾಗಿದ್ದಾರೆ. ಸದ್ಯ 9,256 ಸಕ್ರಿಯ ಪ್ರಕರಣಗಳಿದ್ದು, ವಿವಿಧ ಆಸ್ಪತ್ರೆ, ಆರೈಕೆ ಕೇಂದ್ರ ಹಾಗೂ ಹೋ ಐಸೋಲೇಷನ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 102 ಸೋಂಕಿತರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.