ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಜನ್ಮದಿನವನ್ನು ಮಂಡ್ಯದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ, ಜೆಡಿಎಸ್ ಕಾರ್ಯಕರ್ತರಾದ ಶಂಕರೇಗೌಡ ಅವರು ತಮ್ಮ ನೆಚ್ಚಿನ ನಾಯಕನಿಗೆ ₹3.50 ಲಕ್ಷ ಮೌಲ್ಯದ 25 ಗ್ರಾಂ ತೂಕದ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿ ಅಭಿಮಾನ ಮೆರೆದರು.
ಮಂಡ್ಯ (ಡಿ.17): ರಾಜ್ಯಾದ್ಯಂತ ಜೆಡಿಎಸ್ ಕಾರ್ಯಕರ್ತರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ಮಂಗಳವಾರ ಅದ್ಧೂರಿಯಾಗಿ ಆಚರಿಸಿದರು. ಮಂಡ್ಯದಲ್ಲಿ ಜೆಡಿಎಸ್ ಕಾರ್ಯಕರ್ತರೊಬ್ಬರು ₹3.50 ಲಕ್ಷ ಮೌಲ್ಯದ 25 ಗ್ರಾಂ ತೂಕದ ಚಿನ್ನದ ಸರವನ್ನು ಎಚ್‌ಡಿಕೆಗೆ ಉಡುಗೊರೆಯಾಗಿ ನೀಡಿ ಶುಭ ಕೋರಿದರು.
ನಗರದ ವಿ.ಸಿ.ಫಾರಂ ಗೇಟ್ ಬಳಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಎಚ್‌ಡಿಕೆ ಹುಟ್ಟುಹಬ್ಬ ಕಾರ್ಯಕ್ರಮ ಆಯೋಜಿಸಿಲಾಗಿತ್ತು. ಈ ವೇಳೆ ಮುದಗಂದೂರು ಗ್ರಾಪಂ ಮಾಜಿ ಅಧ್ಯಕ್ಷ ಶಂಕರೇಗೌಡ ಅವರು, ತಮ್ಮ ನೆಚ್ಚಿನ ನಾಯಕ, ಕೇಂದ್ರ ಸಚಿವರಿಗೆ ಕೇಕ್ ತಿನ್ನಿಸಿ ಸ್ವತಃ ತಾವೇ ಚಿನ್ನದ ಸರವನ್ನೂ ಕೊರಳಿಗೆ ಹಾಕಿ ಎಲ್ಲರ ಗಮನಸೆಳೆದರು.
ಇದಕ್ಕೂ ಮೊದಲು ಕುಮಾರಸ್ವಾಮಿ ಅವರಿಗೆ ಮಾಜಿ ಸಚಿವ ಪುಟ್ಟರಾಜು ಬೃಹತ್ ಹಾರ ಹಾಕಿ, ಮಂಗಳವಾದ್ಯ, ಜಾನಪದ ಕಲಾತಂಡಗಳೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಿದರು. ಮೇಲುಕೋಟೆ ಕ್ಷೇತ್ರದ ನೂರಾರು ಮುಖಂಡರು-ಕಾರ್ಯಕರ್ತರು ಕುಮಾರಸ್ವಾಮಿ ಅವರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಸುರೇಶ್‌ಗೌಡ, ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್, ಜಿಪಂ ಮಾಜಿ ಸದಸ್ಯ ಅಶೋಕ್ ಇದ್ದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮುದಗಂದೂರು ಗ್ರಾ.ಪಂ ಮಾಜಿ ಅಧ್ಯಕ್ಷ ಶಂಕರೇಗೌಡ ಅವರು ₹3.50 ಲಕ್ಷ ಮೌಲ್ಯದ 25 ಗ್ರಾಂ ತೂಕದ ಚಿನ್ನದ ಸರವನ್ನು ಜನ್ಮದಿನದ ಉಡುಗೊರೆಯಾಗಿ ನೀಡಿದರು.


