ಅಜಾನ್‌ ಲೌಡ್‌ ಸ್ಪೀಕರ್‌ಗಳ ಡೆಸಿಬಲ್ ಮಿತಿ ಕುರಿತ ಪ್ರಶ್ನೆಗೆ, ಪರಿಸರ ಸಚಿವ ಈಶ್ವರ್‌ ಖಂಡ್ರೆ ಅವರು ದೀಪಾವಳಿ ಪಟಾಕಿ ಮತ್ತು ಹಬ್ಬಗಳ ವಿಷಯ ಪ್ರಸ್ತಾಪಿಸಿದ್ದು, ಸದನದಲ್ಲಿ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. 

ಬೆಂಗಳೂರು (ಡಿ.17): ಅಜಾನ್‌ ಸಮಯದಲ್ಲಿ ಡೆಸಿಬಲ್ ಮಿತಿ ಮೀರಿ ಲೌಡ್‌ ಸ್ಪೀಕರ್ ಬಳಸುತ್ತಿರುವುದನ್ನು ನಿಯಂತ್ರಿಸಬೇಕೆಂಬ ಬಿಜೆಪಿಯ ಡಿ.ಎಸ್‌.ಅರುಣ ಅವರ ಪ್ರಶ್ನೆಗೆ ಪರಿಸರ ಸಚಿವ ಈಶ್ವರ್‌ ಖಂಡ್ರೆ ಅವರು ದೀಪಾವಳಿಯ ಪಟಾಕಿ ಬಳಕೆ, ಹಬ್ಬಇತ್ಯಾದಿ ವೇಳೆ ಲೌಡ್‌ ಸ್ಪೀಕರ್‌ ಬಳಕೆ ವಿಷಯ ಪ್ರಸ್ತಾಪಿಸಿದ್ದು, ಕೆಲಕಾಲ ತೀವ್ರ ಮಾತಿನ ವಾಗ್ವಾದಕ್ಕೆ ಕಾರಣವಾಯಿತು.

ಆಜಾನ್‌ ವಿಷಯದಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂದು ಎಂದು ಸಚಿವ ಖಂಡ್ರೆ ಹೇಳಿದಾಗ, ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಕಾಂಗ್ರೆಸ್‌ ಸದಸ್ಯರು ಎದ್ದು ನಿಂತು ಸಚಿವರನ್ನು ಬೆಂಬಲಿಸಿ ಮಾತನಾಡತೊಡಗಿದರು.

ಒಂದು ಸಂದರ್ಭದಲ್ಲಿ ಅರುಣ್‌ ಅವರು ಅಜಾನ್‌ನಿಂದ ತೊಂದರೆಯಾಗುತ್ತದೆ ಎಂದು ದೂರು ಕೊಡುವ ಧೈರ್ಯ ಯಾರಿಗೂ ಇಲ್ಲ. ಯಾಕೆಂದರೆ ಇವರಿಗೆ ಸರ್ಕಾರದ ಬೆಂಬಲ ಇದೆ. ಕಳೆದ ಎರಡೂವರೆ ವರ್ಷಗಳಿಂದ ಇದಕ್ಕೆ ಸರ್ಕಾರದ ಬೆಂಬಲವಿದೆ ಎಂದು ಹೇಳಿದ ಮಾತು ಕೆಲ ಕಾಲ ಮಾತಿನ ಚಕಮಕಿಗೆ ಕಾರಣವಾಯಿತು.

ಪುನಃ ಸಚಿವ ಈಶ್ವರ್‌ ಖಂಡ್ರೆ ಅವರು ದೀಪಾವಳಿಯಿಂದ ಶಬ್ದ ಮಾಲಿನ್ಯ, ವಾಯುಮಾಲಿನ್ಯ ಆಗುತ್ತದೆ ಎಂದು ಹೇಳತೊಡಗಿದರು. ಆಗ ಸಭಾಪತಿ ಬಸವರಾಜ ಹೊರಟ್ಟಿ ಅವರು ಸದಸ್ಯರು ಕೇಳಿದ ಪ್ರಶ್ನೆಗೆ ಮಾತ್ರ ಉತ್ತರ ನೀಡಿ, ಬೇರೆ ವಿಷಯ ಪ್ರಸ್ತಾಪ ಬೇಡ ಎಂದು ಸಚಿವರಿಗೆ ಸಲಹೆ ನೀಡಿದರು.

ಅಜಾನ್‌ನಿಂದ ಆಗುತ್ತಿರುವ ತೊಂದರೆ, ನಿಗದಿತ ಡೆಸಿಬಲ್‌ ಮೀರಿ ಲೌಡ್‌ ಸ್ಪೀಕರ್ ಬಳಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ನಿರ್ದಿಷ್ಟವಾಗಿ ಉತ್ತರಿಸುವ ಬದಲು ದೀಪಾವಳಿ ಪಟಾಕಿ ಸಿಡಿತ, ಜಾತ್ರೆ, ಹಬ್ಬ ಮುಂತಾದ ಸಂದರ್ಭದಲ್ಲಿ ಅತಿ ಹೆಚ್ಚು ಶಬ್ದ ಮಾಡುವ ಲೌಡ್‌ ಸ್ಪೀಕರ್‌ ಬಳಕೆ ಮಾಡಲಾಗುತ್ತಿದೆ ಎಂದ ಸಚಿವ. ಕೊನೆಗೆ ಸಚಿವ ಈಶ್ವರ್‌ ಖಂಡ್ರೆ ಅವರು, ಪರಿಸರ ಇಲಾಖೆ ಈಗಾಗಲೇ ಹೊರಡಿಸಿರುವ ಆದೇಶದಲ್ಲಿ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವೆಗೆ ಧ್ವನಿವರ್ಧಕಗಳವನ್ನು ಉಪಯೋಗಿಸುವಂತೆ ಎಲ್ಲ ಮಸೀದಿ/ ಮದರಸ/ದರ್ಗಾಗಳಿಗೆ ಸೂಚಿಸಿದೆ. ಅಲ್ಲದೆ ಅಜಾನ್‌ ಸಮಯದಲ್ಲಿ ಬಳಸಲಾಗುವ ಲೌಡ್‌ ಸ್ಪೀಕರ್‌ಗಳಿಗೆ ಪರವಾನಗಿ ಪರಿಶೀಲನೆಗೆ ಸಮಿತಿ ಸಹ ರಚಿಸಲಾಗಿದೆ ಎಂದರು.

ಅಜಾನ್ ಕೂಗು: 52 ದೂರು ಸಲ್ಲಿಕೆ:

ಕಳೆದ ಮೂರು ವರ್ಷಗಳಲ್ಲಿ ಅಜಾನ್ ವೇಳೆ ಸ್ಪೀಕರ್‌ಗಳ ಶಬ್ದಮಟ್ಟ ಹೆಚ್ಚಾಗಿದೆ ಎಂದು 52 ದೂರುಗಳು ಬಂದಿವೆ. ಜೊತೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು 51 ಕಡೆ ಪರಿಶೀಲಿಸಿದ್ದು, 26 ಕಡೆ ಉಲ್ಲಂಘನೆಯಾಗಿರುವುದು ಕಂಡು ಬಂದಿದೆ. ಒಟ್ಟಾರೆ 126 ಕಡೆ ಶಬ್ದಮಟ್ಟ ಪರೀಕ್ಷಗಳ ಮೂಲಕ ಪರೀಕ್ಷೆ ಮಾಡಲಾಗಿದ್ದು, 97 ಕಡೆ ಶಬ್ದ ಮಟ್ಟ ಮಿತಿ ಮೀರಿದ ಪ್ರಕರಣ ಪತ್ತೆಯಾಗಿದೆ ಎಂದು ಸಚಿವರು ತಿಳಿಸಿದರು.

ಅಜಾನ್ ಕೂಗು: ಸರ್ಕಾರದ ಬೆಂಬಲ:

ಇದಕ್ಕೂ ಮುನ್ನ ಮಾತನಾಡಿದ ಡಿ.ಎಸ್‌. ಅರುಣ್‌, ಶಿವಮೊಗ್ಗದಲ್ಲಿರುವ ತಮ್ಮ ಮನೆಯ ಸುತ್ತ ಬೆಳಗ್ಗೆಯೇ ಆಜಾನ್‌ನಿಂದ ಸುತ್ತಲಿನ ನಿವಾಸಿಗಳು ಮಲಗಲು ಆಗುತ್ತಿಲ್ಲ. ತಮ್ಮ 86 ವರ್ಷದ ತಂದೆಗೆ ಅಜಾನ್‌ನಿಂದ ಎಚ್ಚರವಾಗಿ ಮತ್ತೆ ನಿದ್ದೆ ಮಾಡದಂತಾಗಿದೆ. ಈ ಬಗ್ಗೆ ಯಾರೂ ದೂರು ನೀಡಲು ಧೈರ್ಯ ಮಾಡುತ್ತಿಲ್ಲ. ಯಾಕೆಂದರೆ ಇವರಿಗೆ ಕಳೆದ ಎರಡು ವರ್ಷಗಳಿಂದ ಸರ್ಕಾರದ ಬೆಂಬಲವಿದೆ. ಆಜಾನ್‌ನಿಂದ ತೊಂದರೆಯಾಗುತ್ತದೆ ಎಂದು ಅಧಿಕಾರಿಗಳಿಗೆ ಹೇಳಿದರೆ ಕಾನೂನು ಕ್ರಮ ಕೈಗೊಳ್ಳುವ ಬದಲು ಶಬ್ದ ಕಡಿಮೆ ಮಾಡುವಂತೆ ಮನವಿ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.