ರಾಜ್ಯದ ಐವರು ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ನಡೆದಿದೆ ಎಂಬ ಆರೋಪದ ಬಗ್ಗೆ ತನಿಖೆಯಾಗಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಸ್ಟಿಂಗ್ ಮಾಡಿದ ವ್ಯಕ್ತಿಯೊಂದಿಗೆ ಪಂಚತಾರಾ ಹೋಟೆಲ್‌ನಲ್ಲಿ ಚರ್ಚಿಸಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು: ನಿಮ್ಮ ವಿರುದ್ಧ ಸ್ಟಿಂಗ್ ಆಗಿದೆ ಎಂದು ಸಚಿವ ಸಂಪುಟದ ಐವರು ಸದಸ್ಯರಿಗೆ ಹೇಳುವ ಮುನ್ನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸ್ಟಿಂಗ್ ಮಾಡುವ ವ್ಯಕ್ತಿಯೊಂದಿಗೆ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜು ಪಕ್ಕದ ಪಂಚತಾರಾ ಹೋಟೆಲ್‌ನಲ್ಲಿ ಗಂಟೆಗಟ್ಟಲೆ ಚರ್ಚೆ ನಡೆಸಿದ್ದರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಗಂಭೀರವಾಗಿ ಆರೋಪಿಸಿದ್ದಾರೆ.

ಭಾನುವಾರ ಪಕ್ಷದ ಕೇಂದ್ರ ಕಚೇರಿಯಲ್ಲಿ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಆ ಹೋಟೆಲ್‌ನಲ್ಲಿ ಮುಖ್ಯಮಂತ್ರಿ ಯಾರೊಂದಿಗೆ ಕೂತಿದ್ದರು? ಆ ವ್ಯಕ್ತಿ ಯಾರು? ಆ ವ್ಯಕ್ತಿ ಜತೆ ಈ ಮುಖ್ಯಮಂತ್ರಿಗೆ ಏನು ಸಂಬಂಧ? ಆ ವ್ಯಕ್ತಿಯನ್ನು ಇಟ್ಟುಕೊಂಡು ಮುಖ್ಯಮಂತ್ರಿ ಯಾರ ಯಾರ ವಿರುದ್ಧ ಸ್ಟಿಂಗ್ ಮಾಡಿಸಿದ್ದರು ಎಂಬುದನ್ನು ಶಿವಕುಮಾರ್‌ ಅವರು ರಾಜ್ಯದ ಜನರಿಗೆ ಹೇಳಬೇಕಾಗುತ್ತದೆ ಎಂದು ಅಗ್ರಹಿಸಿದರು.

ನನ್ನ ವಿರುದ್ಧವೇ ಸ್ಟಿಂಗ್ ನಡೆದಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಅಲ್ಲಿಗೆ ರಾಜ್ಯದಲ್ಲಿ ‘ಕಿಂಗ್‌ ಆಪರೇಷನ್’ ನಡೆಯುತ್ತಿದೆ ಎಂದು ಸ್ವತಃ ಅವರೇ ಒಪ್ಪಿಕೊಂಡಂತೆ ಆಯಿತು. ಸ್ಟಿಂಗ್ ವಿಷಯ ನಿಜ ಎಂದು ಅವರೇ ಒಪ್ಪಿಕೊಂಡಂತೆಯೂ ಆಯಿತು. ಹಾಗಾದರೆ ಮೌಂಟ್ ಕಾರ್ಮೆಲ್ ಕಾಲೇಜಿನ ಪಕ್ಕದ ಹೋಟೆಲ್ ನಲ್ಲಿ ಸ್ಟಿಂಗ್ ಆಪರೇಷನ್ ಮಾಡುವ ವ್ಯಕ್ತಿ ಜತೆ ಕೂತು ಎಷ್ಟು ಹೊತ್ತು ಚರ್ಚೆ ನಡೆಸಿದಿರಿ? ಆ ವ್ಯಕ್ತಿ ಯಾರು ಅಂತ ಜನರ ಮುಂದೆ ಮುಖ್ಯಮಂತ್ರಿ ಹೇಳಬೇಕಲ್ಲವೇ ಎಂದರು.

ಜನತೆಗೆ ಗೊತ್ತಾಗಬೇಕು:

ರಾಜ್ಯದಲ್ಲಿ ಏನು ನಡೆಯುತ್ತಿದೆ ಎನ್ನುವುದು ರಾಜ್ಯದ ಜನತೆಯ ಮುಂದೆ ಮುಖ್ಯಮಂತ್ರಿ ಇಡಬೇಕು. ಅಲ್ಲದೆ, ರಾಜ್ಯದ ಹಿರಿಯ ನಾಯಕರು, ಕಾಂಗ್ರೆಸ್ ನಾಯಕರೊಬ್ಬರ ವಿರುದ್ಧ ನಡೆದಿರುವ ಸ್ಟಿಂಗ್ ಆಪರೇಷನ್ ಆಗಿದೆ ಎನ್ನುವ ವಿಚಾರ ಹಾಗೆಯೇ ಸೈಲೆಂಟ್ ಆಯಿತು? ಆ ಸ್ಟಿಂಗ್ ನಲ್ಲಿ ಮುಖ್ಯಮಂತ್ರಿ ಕೂರಿಸಿಕೊಂಡು ಮಾತನಾಡಿರುವ ವ್ಯಕ್ತಿಯ ಪಾತ್ರವೇನು? ಎಂಬುದು ಹೊರಗೆ ಬರಬೇಕಲ್ಲವೇ? ಎಂದರು.

ಈ ರೀತಿ ತಮಗೆ ಆಗದವರು ವಿರುದ್ಧ ಸ್ಟಿಂಗ್ ಮಾಡಿಸುವ ವ್ಯಕ್ತಿಯನ್ನು ಸ್ಟಿಂಗ್ ಕಿಂಗ್ ಪಿನ್ ಎನ್ನಬೇಕೋ ಅಥವಾ ಸ್ಟಿಂಗ್ ಸಾಮ್ರಾಟ ಎನ್ನಬೇಕೋ ಎಂಬುದನ್ನು ಮುಖ್ಯಮಂತ್ರಿಯೇ ಹೇಳಬೇಕು. ಅವರನ್ನು ಏನೆಂದು ಕರೆಯಬೇಕು ಎಂಬುದು ನನಗಂತೂ ಗೊತ್ತಾಗುತ್ತಿಲ್ಲ. ತಮಗೆ ಇಂತಹ ಯಾವ ಬಿರುದು ಸರಿ ಹೊಂದುತ್ತದೆ ಎಂಬುದನ್ನು ಅವರೇ ನಿಶ್ಚಯ ಮಾಡಬೇಕು ಎಂದು ಲೇವಡಿ ಮಾಡಿದರು.

ತನಿಖೆಗೆ ಹಿಂಜರಿಕೆ ಯಾಕೆ?

ಐದು ಜನ ಮಂತ್ರಿಗಳ ಮೇಲೆ ಸ್ಟಿಂಗ್ ಆಪರೇಷನ್ ನಡೆದಿದೆ ಎಂದು ಮುಖ್ಯಮಂತ್ರಿ ಸಂಪುಟ ಸಭೆಯಲ್ಲಿ ಹೇಳಿದ್ದಾರೆ ಎಂದು ಮಾಧ್ಯಮಗಳು ನಿರಂತರವಾಗಿ ವರದಿ ಮಾಡುತ್ತಿವೆ. ಸಂಪುಟ ಸದಸ್ಯರ ಮೇಲೆ ನಡೆದಿರುವ ಈ ಕುಟುಕು ಕಾರ್ಯಾಚರಣೆ ಬಗ್ಗೆ ಮುಖ್ಯಮಂತ್ರಿ ಉತ್ತರ ಕೊಡಬೇಕು. ಇದನ್ನು ಸೂಕ್ತ ರೀತಿಯಲ್ಲಿ ತನಿಖೆ ಮಾಡಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

ನಿಮ್ಮದೇ ಸರ್ಕಾರ ಇದೆ. ನಿಮ್ಮದೇ ಪೊಲೀಸ್ ವ್ಯವಸ್ಥೆ ಇದೆ. ₹35 ಲಕ್ಷ ಬಹುಮಾನ ಪಡೆದ ನಿಮ್ಮದೇ ಅತ್ಯಂತ ದಕ್ಷ ಎಸ್ಐಟಿ ತಂಡ ಇದೆ. ಹೀಗಿದ್ದರೂ ಕೂಡ ನೀವು ತನಿಖೆಗೆ ಏಕೆ ಹಿಂಜರಿಯುತ್ತಿದ್ದೀರಿ ಎಂದು ಅವರು ಪ್ರಶ್ನಿಸಿದರು.

ನಾನು ಹಿಂದೆಯೇ ವಿಜಯದಶಮಿ ಹಬ್ಬಕ್ಕೆ ಮೊದಲು ಏನೇನೋ ಆಗಬಹುದು ಎಂದು ತಿಳಿಸಿದ್ದೆ. ನಾನು ನೈಸ್ ಹೋರಾಟದಲ್ಲಿ ನಿರತನಾಗಿ ದಾಖಲೆಗಳನ್ನು ಬಿಡುಗಡೆ ಮಾಡಿ ರಾಜ್ಯದ ಜನರ ಮುಂದೆ ನ್ಯಾಯ ಕೇಳುತ್ತಿದ್ದೇನೆ. ಈ ಸ್ಟಿಂಗ್ ವ್ಯವಹಾರದ ಹಿಂದಿರುವ ವ್ಯಕ್ತಿಗಳು ಅದರ ದಿಕ್ಕು ತಪ್ಪಿಸಲು ಸ್ಟಿಂಗ್ ಆಪರೇಶನ್ ವಿಷಯ ಹೊರ ತಂದರು. ಅದಕ್ಕೆ ಈ ಮುಖ್ಯಮಂತ್ರಿಯನ್ನು ಅಭಿನಂದಿಸುತ್ತೇನೆ. ಸದ್ಯಕ್ಕೆ ಜನರ ಗಮನ ಮೈಸೂರು ದಸರಾ, ನಾಡಹಬ್ಬದ ಕಡೆಗೆ ಇದೆ. ಆದರೂ ನಾನು ಕೆಲ ವಿಚಾರಗಳನ್ನು ಮಾತನಾಡಬೇಕಿದೆ ಎಂದು ಕುಮಾರಸ್ವಾಮಿ ಹೇಳಿದರು.

ಸಚಿವರ ವಿರುದ್ಧ ಸ್ಟಿಂಗ್‌ ಮಾಡಿಸಿದ್ದು ಯಾರು ಅಂತ ಗೊತ್ತಾಗಲಿ: ಸಿದ್ದು

ಬೆಂಗಳೂರು: ಸಚಿವರ ವಿರುದ್ಧ ಸ್ಟಿಂಗ್‌ ಆಪರೇಷನ್‌ ನಡೆಸಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸ್ಟಿಂಗ್‌ ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ. ಆದರೆ ಯಾರು ಮಾಡುತ್ತಿದ್ದಾರೆ ಎಂಬ ಸತ್ಯ ಗೊತ್ತಾಗಬೇಕಲ್ವಾ ಎಂದಿದ್ದಾರೆ.

--