ಮೀಸಲು, ಒಳಮೀಸಲು ಬಗ್ಗೆ ಶೀಘ್ರ ನಿರ್ಧರಿಸಿ: ಎಚ್‌ಡಿಕೆ
ಎಸ್ ಸಿ ಮತ್ತು ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಏರಿಕೆ ಮಾಡುವ ಸಂಬಂಧ ಹಾಗೂ ಒಳಮೀಸಲು ಸಂಬಂಧ ರಾಜ್ಯ ಸರ್ಕಾರ ಆದಷ್ಟು ಬೇಗ ನಿರ್ಣಯ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯ ಮಾಡಿದ್ದಾರೆ.
ಬೆಂಗಳೂರು (ಅ.08): ಎಸ್ ಸಿ ಮತ್ತು ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಏರಿಕೆ ಮಾಡುವ ಸಂಬಂಧ ಹಾಗೂ ಒಳಮೀಸಲು ಸಂಬಂಧ ರಾಜ್ಯ ಸರ್ಕಾರ ಆದಷ್ಟು ಬೇಗ ನಿರ್ಣಯ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯ ಮಾಡಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಹಲವಾರು ರಾಜ್ಯದಲ್ಲಿ ಹಲವು ಸಣ್ಣ ಪುಟ್ಟ ಸಮಾಜದರು ಇದ್ದಾರೆ. 75 ವರ್ಷದಲ್ಲಿ ಎಂದೂ ಮೀಸಲಾತಿ ಕಾಣದೆ ಇರುವ ಆನೇಕ ಸಮುದಾಯಗಳಿವೆ. ಅದರ ಜತೆಗೆ ಒಳ ಮೀಸಲಾತಿ ಬಗ್ಗೆಯೂ ಚರ್ಚೆ ಮಾಡಿದ್ದೇವೆ. 2005 ರಲ್ಲಿ ಒಳ ಮೀಸಲಾತಿ ವಿಚಾರವಾಗಿ ಕಮಿಟಿ ರಚನೆ ಮಾಡಿತ್ತು.
ಆಗಿನ ಸರ್ಕಾರ ಆ ವರದಿ ಕೊಟ್ಟು ಹತ್ತು ವರ್ಷಗಳಾಗಿವೆ. ಇನ್ನೂ ಅದರ ಕಾರ್ಯಗತವಾಗಿಲ್ಲ. ಆದರೆ, ಅದಕ್ಕೆ ಕೋಟ್ಯಾಂತರ ರೂ. ಹಣ ಖರ್ಚಾಗಿದೆ. ಇದರ ಬಗ್ಗೆಯೂ ಕ್ರಮ ತೆಗೆದುಕೊಳ್ಳುವಂತೆ ಸಭೆಯಲ್ಲಿ ಹೇಳಿದ್ದೇವೆ ಎಂದರು. ಸಮಯ ವ್ಯರ್ಥ ಮಾಡದೆ ಮೀಸಲಾತಿಯನ್ನು ಹೆಚ್ಚಿಸಿ ಜಾರಿಗೆ ತರಬೇಕು. ನಾನು ಮುಖ್ಯಮಂತ್ರಿಯಾಗಿದ್ದಾ ನ್ಯಾ.ನಾಗಮೋಹನ್ ದಾಸ್ ಸಮಿತಿ ರಚನೆ ಮಾಡಿದ್ದೆ. ಆ ವರದಿಗೆ ನನ್ನ ನೇತೃತ್ವದ ಸರ್ಕಾರ ಒಪ್ಪಿಗೆಯನ್ನು ನೀಡಿತ್ತು. ಈ ವರದಿ ಅನುಷ್ಠಾನಕ್ಕೆ ತರಬೇಕೆಂದು ನಾಯಕ ಸಮುದಾಯದ ಶ್ರೀಗಳು ಸುಧೀರ್ಘ ಕಾಲದಿಂದ ಧರಣಿ ಮಾಡಿದ್ದಾರೆ. ಇದರ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸರ್ವ ಪಕ್ಷದ ಸಭೆ ನಡೆಸಿತು. ಸರ್ವ ಪಕ್ಷಗಳೂ ಈ ಬಗ್ಗೆ ಸರ್ಕಾರಕ್ಕೆ ಸಲಹೆ ಮಾಡಿದ್ದೇವೆ ಎಂದು ತಿಳಿಸಿದರು.
20000 ಕೇಂದ್ರ ನೌಕರಿ: ಕನ್ನಡ ನಿರ್ಲಕ್ಷ್ಯ ವಿವಾದ
ಒಳಮೀಸಲು ಬಗ್ಗೆ ತಜ್ಞರ ಜತೆ ಚರ್ಚಿಸಿ ಕ್ರಮ: ಒಳಮೀಸಲಾತಿ ಕುರಿತು ತಜ್ಞರೊಂದಿಗೆ ಸಮಾಲೋಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಸರ್ವಪಕ್ಷ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳಮೀಸಲಾತಿ ಸೇರಿದಂತೆ ಇನ್ನೂ ಹತ್ತು ಹಲವು ಬೇಡಿಕೆಗಳಿದ್ದು, ಮೀಸಲಾತಿಯ ಬಗ್ಗೆ ಚಿಂತನೆ ಮಾಡುವ ಅವಶ್ಯಕತೆ ಇದೆ. ಎಲ್ಲಾ ಸಮಾಜದಲ್ಲಿ, ಎಲ್ಲಾ ಜನಾಂಗಗಳಲ್ಲಿಯೂ ಆಕಾಂಕ್ಷೆಗಳು ಹೆಚ್ಚಾಗಿವೆ. ಎಸ್‌ಸಿ/ಎಸ್‌ಟಿ ಸಮುದಾಯದೊಳಗೆ ಕೆಲವರಿಗೆ ನ್ಯಾಯ ದೊರೆತಿಲ್ಲ ಎನ್ನುವ ಒಂದು ಕೂಗಿದೆ. ಅದರ ಬಗ್ಗೆಯೂ ಸಹ ಈಗಾಗಲೇ ಆಯೋಗಗಳು ತೀರ್ಮಾನ ನೀಡಿರುವ ಹಿನ್ನೆಲೆಯಲ್ಲಿ ಅದನ್ನೂ ಸಹ ಸಮಗ್ರವಾಗಿ ಅಧ್ಯಯನ ನಡೆಸಿ ಒಳ್ಳೆಯ ತೀರ್ಮಾನ ಕೈಗೊಳ್ಳಲು ಸರ್ಕಾರ ಮುಂದಾಗಲಿದೆ ಎಂದರು.
ಒಳಮೀಸಲಾತಿ ಬಗ್ಗೆ ಸಿದ್ದು ಮೌನ?: ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದವರಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸುವ ಸಂಬಂಧ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೌನ ತಾಳಿದ್ದರು ಎಂದು ತಿಳಿದು ಬಂದಿದೆ. ಮುಂಬರುವ ದಿನದಲ್ಲಿ ಸರ್ಕಾರ ಆ ನಿಟ್ಟಿನಲ್ಲಿಯೂ ಎಸ್‌ಸಿ/ಎಸ್‌ಟಿ ಒಳಮೀಸಲಾತಿಗೂ ಸಹ ಎಲ್ಲರೊಂದಿಗೆ ಚರ್ಚಿಸಿ, ಯಾವುದೇ ಸಮಾಜಕ್ಕೆ ಅನ್ಯಾಯವಾಗದಂತೆ, ಕೈಬಿಡದಂತೆ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಲಾಗುವುದು. ಅಲ್ಲದೇ, ಎಲ್ಲಾ ಪಕ್ಷಗಳ ಜತೆ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು. ಇದಲ್ಲದೇ, ಹಿಂದುಳಿದ ವರ್ಗಗಳ ಮೀಸಲಾತಿ ಬಗ್ಗೆ ನಡೆಯುತ್ತಿರುವ ಚರ್ಚೆ ಬಗ್ಗೆಯೂ ವರದಿಗಳನ್ನು ಆಧರಿಸಿ ಆಯಾ ಸಮಾಜಕ್ಕೆ ನ್ಯಾಯ ದೊರಕಿಸಲು ಸರ್ಕಾರ ಮುಂದಾಗಲಿದೆ ಎಂದರು.
ಚನ್ನಪಟ್ಟಣ ಹೈಡ್ರಾಮಾ ಬಗ್ಗೆ ಸಿಎಂ ಬೊಮ್ಮಾಯಿಗೆ ಎಚ್‌ಡಿಕೆ ದೂರು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಸಭೆಯಲ್ಲಿ ಒಳಮೀಸಲಾತಿ ಕಲ್ಪಿಸುವ ಅಗತ್ಯತೆಯನ್ನು ಪ್ರತಿಪಾದಿಸಿದರು ಎನ್ನಲಾಗಿದೆ. ಆದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳಮೀಸಲಾತಿ ಕುರಿತು ಚಕಾರವೆತ್ತಲಿಲ್ಲ ಎಂದು ತಿಳಿದುಬಂದಿದೆ. ಈ ನಡುವೆ ಕಾಂಗ್ರೆಸ್‌ನ ಪ್ರಕಾಶ್ ರಾಥೋಡ್ ಒಳ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದಾಗಲೂ ಸಿದ್ದರಾಮಯ್ಯ ಮೌನಕ್ಕೆ ಜಾರಿದ್ದರು. ಅಲ್ಲದೇ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸಹ ಒಳಮೀಸಲಾತಿ ಬಗ್ಗೆ ಚರ್ಚೆಯಾಗುವಾಗಲೂ ಸುಮ್ಮನಿದ್ದರು ಎಂದು ಹೇಳಲಾಗಿದೆ.