ಚನ್ನಪಟ್ಟಣ ಹೈಡ್ರಾಮಾ ಬಗ್ಗೆ ಸಿಎಂ ಬೊಮ್ಮಾಯಿಗೆ ಎಚ್‌ಡಿಕೆ ದೂರು
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ನಡುವಿನ ಜಟಾಪಟಿ ಮುಂದುವರಿದಿದ್ದು, ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ವಿಧಾನಸಭಾ ಹಕ್ಕು ಭಾದ್ಯತೆ ಸಮಿತಿ ಪರಿಶೀಲನೆಗೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಬೆಂಗಳೂರು (ಅ.07): ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ನಡುವಿನ ಜಟಾಪಟಿ ಮುಂದುವರಿದಿದ್ದು, ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ವಿಧಾನಸಭಾ ಹಕ್ಕು ಭಾದ್ಯತೆ ಸಮಿತಿ ಪರಿಶೀಲನೆಗೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, ಚನ್ನಪಟ್ಟಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ 50 ಕೋಟಿ ರು. ಬಿಡುಗಡೆ ಮಾಡಲಾಗಿದೆ.
ಕಾರ್ಯಕ್ರಮಕ್ಕೆ ಶಿಷ್ಟಾಚಾರದ ಪ್ರಕಾರ ಸ್ಥಳೀಯ ಶಾಸಕರಾದ ನನ್ನನ್ನು ಆಹ್ವಾನಿಸಬೇಕಿತ್ತು. ಆದರೆ, ಇದನ್ನು ಉಲ್ಲಂಘನೆ ಮಾಡಲಾಗಿದೆ. ನಾಮ ನಿರ್ದೇಶನ ಹೊಂದಿರುವ ಸದಸ್ಯರಿಗೆ ನೀಡಿರುವ 50 ಕೊಟಿ ರು. ವಿಶೇಷ ಅನುದಾನವನ್ನು ಉಳಿದ 74 ಪರಿಷತ್ ಸದಸ್ಯರಿಗೂ ನೀಡಿ, ಅವರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲು ಅನುವು ಮಾಡಿಕೊಡಬೇಕು.
ಬಿಆರ್‌ಎಸ್ ಜತೆ ಸೇರಿ ಮುಂದಿನ ಚುನಾವಣೆ ಎದುರಿಸ್ತೇವೆ: ಕುಮಾರಸ್ವಾಮಿ
ಸರ್ಕಾರಿ ಸಭೆ-ಸಮಾರಂಭಗಳಿಗೆ ಆಹ್ವಾನಿಸುವ ಕುರಿತು ಹೊರಡಿಸಿರುವ ಶಿಷ್ಟಾಚಾರ ಪಾಲನೆಗೆ ವಿರುದ್ಧವಾಗಿ ಸರ್ಕಾರಿ ಸಮಾರಂಭಗಳನ್ನು ಏರ್ಪಡಿಸಿ, ನನ್ನನ್ನು ಕಡೆಗಣಿಸಿ, ಸರ್ಕಾರಿ ಕಾರ್ಯಕ್ರಮ ನಡೆಸಿ, ನನ್ನ ಹಕ್ಕುಗಳಿಗೆ ಚ್ಯುತಿ ಉಂಟು ಮಾಡಿರುವ ರಾಮನಗರ ಜಿಲ್ಲೆಯ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧೀಕಾರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟವರನ್ನು ತಕ್ಷಣ ಅಮಾನತುಗೊಳಿಸಿ ರಾಜ್ಯ ಮುಖ್ಯ ಕಾರ್ಯದರ್ಶಿಗಳ ಹುದ್ದೆಯ ಅಧಿಕಾರಿಯೊಬ್ಬರಿಂದ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಒಂದು ವೇಳೆ ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ವಹಿಸದಿದ್ದರೆ ನಮ್ಮ ಪಕ್ಷದ ವತಿಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಲ್ಲದೇ, ಪಕ್ಷದ ಎಲ್ಲಾ ಶಾಸಕರು ಸೇರಿ ಗಾಂಧಿ ಪ್ರತಿಮೆಯ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ನ.1ಕ್ಕೆ ಜೆಡಿಎಸ್ ಪಂಚರತ್ನ ಯಾತ್ರೆ: ಜೆಡಿಎಸ್‌ನ ಮಹತ್ವಾಕಾಂಕ್ಷೆಯ ಪಂಚರತ್ನ ರಥಯಾತ್ರೆಗೆ ನ.1ರ ಕನ್ನಡ ರಾಜ್ಯೋತ್ಸವ ದಿನದಂದು ಚಾಲನೆ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಈಗಾಗಲೇ ಪೂರ್ವ ಸಿದ್ಧತೆ ಕಾರ್ಯಗಳು ನಡೆಯುತ್ತಿವೆ. ಇದಕ್ಕಾಗಿ ವಾಹನಗಳು ಸಿದ್ಧಗೊಳ್ಳುತ್ತಿವೆ ಎಂದು ಹೇಳಿದ ಅವರು, ಹಳೆ ಮೈಸೂರು ಭಾಗಕ್ಕೆ ಮಾತ್ರ ಜೆಡಿಎಸ್ ಸೀಮಿತವಾಗಲ್ಲ. ರಾಜ್ಯದೆಲ್ಲೆಡೆ ಪಕ್ಷವನ್ನು ಸಂಘಟನೆ ಮಾಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಗಾಗಲೇ ಸಂಘಟನೆ ಆರಂಭಿಸಿದ್ದೇವೆ.
ಅಭಿವೃದ್ಧಿ ಸಹಿಸಿಕೊಳ್ಳಲಾಗದೆ ತಿಕ್ಕಾಟಕ್ಕಿಳಿದಿದ್ದಾರೆ: ಸಚಿವ ಅಶ್ವತ್ಥ್ ನಾರಾಯಣ
ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಅಸ್ತಿತ್ವ ಏನು ಎಂಬುದನ್ನು ಈ ಕಾರ್ಯಕ್ರಮಗಳ ಮೂಲಕ ತೋರಿಸುತ್ತೇವೆ ಎಂದರು. ಈ ತಿಂಗಳ 17 ಮತ್ತು 18ರಂದು ಅಭ್ಯರ್ಥಿಗಳ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದರು. ರಾಜ್ಯದ 130 ಕ್ಷೇತ್ರ ಗೆಲ್ಲಲು ಶ್ರಮವಹಿಸುತ್ತಿದ್ದೇವೆ. ಒಂದಿಷ್ಟುಕ್ಷೇತ್ರದಲ್ಲಿ 2-3 ಜನ ಅಭ್ಯರ್ಥಿಗಳಿದ್ದಾರೆ. ಹೀಗಾಗಿ ಅವರೊಂದಿಗೆ ಮತ್ತು ಕ್ಷೇತ್ರದ ಮುಖಂಡರ ಜತೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.