ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚನ್ನಮ್ಮ, 72 ವರ್ಷಗಳ ದಾಂಪತ್ಯದ ನಂತರ ನಿಧನರಾದರು. ಹಾಸನ ಟು ದಿಲ್ಲಿವರೆಗೆ ಜತೆಯಾದ ಜೀವ ಕೊನೆಗೆ ಬಯಸಿದ ಆ ಆಸೆ ಏನಾಗಿತ್ತು? ಇಲ್ಲಿದೆ ಎಲ್ಲದರ ಸಂಪೂರ್ಣ ವಿವರ.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮತ್ತು ಅವರ ಧರ್ಮಪತ್ನಿ ಚನ್ನಮ್ಮ ಅವರ ಬರೋಬ್ಬರಿ 72 ವರ್ಷಗಳ ಅಪೂರ್ವ ದಾಂಪತ್ಯಕ್ಕೆ ಕೊನೆಗೂ ವಿಧಿ ವಿರಾಮ ಹಾಡಿದೆ. ಹಾಸನದ ಒಂದು ಪುಟ್ಟ ಹಳ್ಳಿಯ ರೈತ ಕುಟುಂಬದಿಂದ ಹಿಡಿದು ದೇಶದ ಅತ್ಯುನ್ನತ ಪ್ರಧಾನಿ ಗದ್ದುಗೆಯವರೆಗೆ ದೊಡ್ಡ ಗೌಡರು ನಡೆದು ಬಂದ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ರಾಜಕೀಯದ ಏಳುಬೀಳುಗಳು, ತುರ್ತು ಪರಿಸ್ಥಿತಿಯ ಕಠಿಣ ದಿನಗಳು, ಅಧಿಕಾರದ ದಿನಗಳು, ಹೀಗೆ ಗೌಡರ ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ನೆರಳಾಗಿ, ಧೈರ್ಯವಾಗಿ ಜೊತೆಗಿದ್ದ ಅವರ ಧರ್ಮಪತ್ನಿ ಚನ್ನಮ್ಮ ಇನ್ನಿಲ್ಲ. ಆದರೆ, ಅವರು ಇಹಲೋಕ ತ್ಯಜಿಸುವ ಮುನ್ನ ನಡೆದ ಆ ಕೊನೆಯ ಕ್ಷಣಗಳು, ಅಲ್ಲಿ ನೆರವೇರಿದ ಅವರ ಆ ಕೊನೆ ಆಸೆ ಪ್ರತಿಯೊಬ್ಬರ ಕಣ್ಣನ್ನು ತೇವಗೊಳಿಸುವಂತಿದೆ.
ಪತಿಯ ಕೈ ಹಿಡಿದೇ ಕಣ್ಣು ಮುಚ್ಚಿದ ಜೀವ!
ಚನ್ನಮ್ಮ ಅವರ ಆರೋಗ್ಯ ಸ್ಥಿತಿ ತೀವ್ರವಾಗಿ ಕ್ಷೀಣಿಸಿದಾಗ ಇಡೀ ಕುಟುಂಬ ಅವರ ಹಾಸಿಗೆಯ ಸುತ್ತ ಜಮಾಯಿಸಿತ್ತು. ಆದರೆ ಚನ್ನಮ್ಮ ಅವರ ಕಣ್ಣುಗಳು ಮಾತ್ರ 72 ವರ್ಷಗಳ ಕಾಲ ತಮಗೆ ತಾಳಿ ಕಟ್ಟಿ, ಸುಖ-ದುಃಖದಲ್ಲಿ ಜೊತೆಯಾಗಿದ್ದ ಪತಿಯಾದ ದೊಡ್ಡ ಗೌಡರನ್ನೇ ಹುಡುಕುತ್ತಿದ್ದವು. ಕೊನೆಗೆ ಹಾಸಿಗೆಯ ಪಕ್ಕದಲ್ಲೇ ಕಣ್ಣೀರು ಹಾಕುತ್ತಾ ಕುಳಿತಿದ್ದ ದೇವೇಗೌಡರ ಕೈಯನ್ನು ಚನ್ನಮ್ಮ ಗಟ್ಟಿಯಾಗಿ ಹಿಡಿದುಕೊಂಡು, ಆ ಸುದೀರ್ಘ ಪಯಣದ ಹಿತವಾದ ಸ್ಪರ್ಶ ಸಿಗುತ್ತಿದ್ದಂತೆ, ಪತಿಯ ಹಸ್ತದ ಮೇಲೆಯೇ ನೆಮ್ಮದಿಯಿಂದ ಚನ್ನಮ್ಮ ಕಣ್ಣು ಮುಚ್ಚಿದರು. ತನಗಿಂತ ಮುಂಚೆ ತನ್ನ ಪತಿ ಹೋಗಬಾರದು, ಮುತ್ತೈದೆಯಾಗಿಯೇ ತಾನು ಸಾಯಬೇಕು ಎಂಬ ಸಾಂಪ್ರದಾಯಿಕ ಭಾರತೀಯ ನಾರಿಯ ಆ ಮೂಕ ಆಸೆ ಆ ಕ್ಷಣದಲ್ಲಿ ನೆರವೇರಿತ್ತು.
ಕೊನೆ ಕ್ಷಣದಲ್ಲಿ ಚೆನ್ನಮ್ಮ ಬಯಸಿದ ಆ ಆಸೆ ಏನಾಗಿತ್ತು?
ಚನ್ನಮ್ಮ ಮೊದಲಿನಿಂದಲೂ ತೀವ್ರ ದೈವಭಕ್ತರಾಗಿದ್ದರು. ತಮಗೆ ಸಾವು ಹತ್ತಿರ ಬಂದಿರುವುದು ಅವರಿಗೆ ಕೊನೆ ಕ್ಷಣದಲ್ಲಿ ಮನವರಿಕೆಯಾಗಿತ್ತು ಅಂತ ಕಾಣಿಸುತ್ತದೆ. ಆಗ ಅವರು ಕುಟುಂಬದವರ ಬಳಿ ಒಂದು ಕೊನೆ ಆಸೆ ವ್ಯಕ್ತಪಡಿಸಿದ್ದಾರೆ. ತಮಗೆ ಯಾವುದೇ ಆಡಂಬರ ಬೇಡ, ಕೊನೆ ಕ್ಷಣದಲ್ಲಿ ಕೇವಲ ಭಗವಂತನ ನಾಮಸ್ಮರಣೆ ಕೇಳುತ್ತಲೇ ತನ್ನ ಪ್ರಾಣ ಹೋಗಬೇಕು ಎಂಬುದು ಅವರ ಅಂತಿಮ ಇಚ್ಛೆಯಾಗಿತ್ತು ಎನ್ನಲಾಗಿದೆ.
ವಿಶೇಷ ಪ್ರಾರ್ಥನೆ!
ಅವರ ಆಸೆಯಂತೆಯೇ, ನಿಧನದ ಕೆಲವೇ ಕ್ಷಣಗಳ ಮುನ್ನ ಅವರ ಕೊಠಡಿಯಲ್ಲೇ ವಿಶೇಷ ಪ್ರಾರ್ಥನೆ ಆರಂಭವಾಯಿತು. ಸುಮಾರು 20 ನಿಮಿಷಗಳ ಕಾಲ ನಿರಂತರವಾಗಿ ಮಂತ್ರಘೋಷಗಳು ಮೊಳಗಿದವು, ದೇವರ ನಾಮಸ್ಮರಣೆ ನಡೆಯಿತು. ಕೊನೆಗೆ ಪೂಜೆಯ ಮಂಗಳಾರತಿ ಮುಗಿಸಿ, ತಿರುಪತಿ ಮತ್ತು ಹಾಸನಾಂಬೆ ದೇವಸ್ಥಾನದ ಪವಿತ್ರ ತೀರ್ಥ ಹಾಗೂ ಪ್ರಸಾದವನ್ನು ಅವರ ಬಾಯಿಗೆ ಇಡುತ್ತಿದ್ದಂತೆ ಚನ್ನಮ್ಮ ಕಣ್ಣು ಮುಚ್ಚಿದ್ದಾರೆ.
ಹಳ್ಳಿಯಿಂದ ದಿಲ್ಲಿಯವರೆಗೆ ಜೊತೆಯಾಗಿದ್ದ ಆದರ್ಶ ಒಡನಾಟ!
ದೇವೇಗೌಡರು ಮುಖ್ಯಮಂತ್ರಿಯಾದಾಗ, ಪ್ರಧಾನಿಯಾದಾಗಲೂ ಚನ್ನಮ್ಮ ಎಂದಿಗೂ ಅಧಿಕಾರದ ಆಡಂಬರಕ್ಕೆ ಆಸೆ ಬಿದ್ದವರಲ್ಲ. ಬೆಂಗಳೂರಿನ ಪದ್ಮನಾಭನಗರದ ಮನೆಯಲ್ಲಿ ದೊಡ್ಡ ಗೌಡರ ರಾಜಕೀಯದ ಒತ್ತಡಗಳನ್ನು ನಿಭಾಯಿಸುತ್ತಾ, ಇಡೀ ಕುಟುಂಬವನ್ನು ಒಟ್ಟಾಗಿ ಮುನ್ನಡೆಸಿದ ಶಕ್ತಿ ಅವರದ್ದು ಎನ್ನಲಾಗಿದೆ. ಸಾವು ಹತ್ತಿರ ಬಂದಾಗಲೂ ಪತಿಯ ಕೈ ಬಿಡದ ಚೆನ್ನಮ್ಮ, 20 ನಿಮಿಷಗಳ ದೈವಿಕ ಪೂಜೆಯ ನಡುವೆ ತನ್ನ ಕೊನೆ ಆಸೆಯನ್ನು ಈಡೇರಿಸಿಕೊಂಡು ನೆಮ್ಮದಿಯಿಂದ ವಿದಾಯ ಹೇಳಿದ್ದಾರೆ.


