ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಶೇ.60ರಷ್ಟು ಕೈಕೊಟ್ಟಿದ್ದು, ಭೀಕರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಮುಖ ಜಲಾಶಯಗಳಲ್ಲಿ ಕೇವಲ 40% ನೀರು ಮಾತ್ರ ಸಂಗ್ರಹವಿದ್ದು, ಸರ್ಕಾರವು ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿ, ರೈತರು ಬೆಳೆ ಹಾಕದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.
ಬೆಂಗಳೂರು (ಜು.19): ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ (Monsoon Rain) ಕೈಕೊಟ್ಟಿದ್ದು, ಕರ್ನಾಟಕವು ಭೀಕರ ಬರಗಾಲದ (Drought Situation) ಛಾಯೆಯಲ್ಲಿದೆ. ಸಚಿವ ಸಂಪುಟ ಸಭೆಯ (Cabinet Meeting) ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಪ್ರಸ್ತುತ ಜಲಕ್ಷಾಮ ಮತ್ತು ಮಳೆ ಕೊರತೆಯ ಆತಂಕಕಾರಿ ವರದಿಯನ್ನು ಬಿಚ್ಚಿಟ್ಟಿದ್ದಾರೆ.
ಮಳೆ ಕೊರತೆ ಮತ್ತು ಜಲಾಶಯಗಳ ಸ್ಥಿತಿ:
ರಾಜ್ಯದಲ್ಲಿ ಈ ಬಾರಿ ಸುಮಾರು 60% ರಷ್ಟು ಮಳೆ ಕಡಿಮೆಯಾಗಿದೆ (Rainfall Deficit). ಒಟ್ಟು 178 ತಾಲೂಕುಗಳಲ್ಲಿ ಮಳೆಯ ತೀವ್ರ ಕೊರತೆ ಕಾಣಿಸಿಕೊಂಡಿದ್ದರೆ, 158 ತಾಲೂಕುಗಳಲ್ಲಿ ಸಾಧಾರಣ ಮಳೆಯಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳಲ್ಲಿ (Reservoirs) ಕೇವಲ 40% ರಷ್ಟು ಮಾತ್ರ ನೀರು ಸಂಗ್ರಹವಿದೆ. ಕೃಷ್ಣಾ ನದಿ (Krishna River) ಪಾತ್ರದ ಜಲಾಶಯಗಳಲ್ಲಿ 48% ನೀರಿದ್ದರೆ, ರಾಜ್ಯದ ಒಟ್ಟಾರೆ ಸರಾಸರಿ ನೀರಿನ ಮಟ್ಟ 40% ಮಾತ್ರ ಇದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.
ಕುಡಿಯುವ ನೀರಿಗೆ ಮೊದಲ ಆದ್ಯತೆ:
ಜಲಾಶಯಗಳಲ್ಲಿರುವ ನೀರು ಕೇವಲ ಕುಡಿಯುವ ಉದ್ದೇಶಕ್ಕೆ (Drinking Water) ಮಾತ್ರ ಸಾಕಾಗುವಷ್ಟಿದೆ. "ಈಗಾಗಲೇ ಮಂಡ್ಯ (Mandya) ಭಾಗಕ್ಕೆ ಕುಡಿಯುವ ನೀರಿಗಾಗಿ ಮಾತ್ರ ನೀರು ಬಿಡಲಾಗಿದೆ. ರೈತರು ಬೆಳೆ ಹಾಕಬೇಡಿ (Don't plant crops) ಎಂದು ಮನವಿ ಮಾಡುತ್ತೇನೆ. ಸುಮ್ಮನೆ ಬೆಳೆ ಹಾಕಿ ನಂತರ ನೀರು ಬಿಡಿ ಎಂದು ಗಲಾಟೆ ಮಾಡಿದರೆ ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗುತ್ತದೆ" ಎಂದು ಸಿಎಂ ಎಚ್ಚರಿಸಿದ್ದಾರೆ. ಬೆಳಗಾವಿ (Belagavi) ಭಾಗದಲ್ಲೂ ಕುಡಿಯುವ ನೀರಿಗೆ ಮಾತ್ರ ಬಳಕೆ ಮಾಡುವಂತೆ ಸೂಚನೆ ನೀಡಲಾಗಿದೆ.
ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ:
ಬರ ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ (DC) ಖಾತೆಯಲ್ಲಿ ಒಟ್ಟು 329 ಕೋಟಿ ರೂಪಾಯಿ ಹಣವಿದೆ. ಹಣದ ಕೊರತೆ ಬರದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಎಂಎಲ್‌ಎ (MLA) ಅಧ್ಯಕ್ಷತೆಯಲ್ಲಿ ಸಭೆ ನಡೆಸಿ 1 ಕೋಟಿ ರೂ. ಮೊತ್ತವನ್ನು ತುರ್ತು ಕಾಮಗಾರಿಗಳಿಗೆ ಬಳಸಲು ನಿರ್ದೇಶನ ನೀಡಲಾಗಿದೆ. ‘ಅಧಿಕಾರಿಗಳು ಎಸಿ ರೂಮ್ ಬಿಟ್ಟು ಫೀಲ್ಡ್‌ಗೆ (Field Visit) ಹೋಗಬೇಕು. ಒಂದು ಬೋರ್‌ವೆಲ್ (Borewell) ಕೊರೆಸುವಾಗಲೂ ಅಧಿಕಾರಿಗಳು ಸ್ಥಳದಲ್ಲಿ ಇರಬೇಕು. ಯಾವುದೇ ಕಾರಣಕ್ಕೂ ನೀರು ಮಿಸ್ ಯೂಸ್ ಆಗಬಾರದು’ ಎಂದು ಸಿಎಂ ಕಟ್ಟುನಿಟ್ಟಾಗಿ ಹೇಳಿದ್ದಾರೆ.
ಕೇಂದ್ರಕ್ಕೆ ವರದಿ ಮತ್ತು ತಾಂತ್ರಿಕ ನೆರವು:
ಮುಂದಿನ 15 ದಿನಗಳಲ್ಲಿ ರಾಜ್ಯದ ಬರ ಪರಿಸ್ಥಿತಿಯ ಕುರಿತು ಕೇಂದ್ರ ಸರ್ಕಾರಕ್ಕೆ (Central Government) ವರದಿ ಸಲ್ಲಿಸಲಾಗುವುದು. ಮೇವು (Fodder) ಲಭ್ಯತೆ ಮತ್ತು ಗೋಶಾಲೆಗಳ (Goshalas) ನಿರ್ವಹಣೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಆದೇಶಿಸಲಾಗಿದೆ. ವಿಶೇಷವಾಗಿ ವಿಜಯನಗರ (Vijayanagara) ಜಿಲ್ಲೆಯಲ್ಲಿ ಮಳೆಯೇ ಇಲ್ಲದ ಕಾರಣ ಅಲ್ಲಿ ಹೆಚ್ಚಿನ ಗಮನ ಹರಿಸಲಾಗಿದೆ. ಹವಾಮಾನ ಮುನ್ಸೂಚನೆ (Weather Forecast) ಪಡೆಯಲು ಡ್ರೋನ್ ಸರ್ವೇ (Drone Survey) ನಡೆಸಲು ಕೃಷಿ ಇಲಾಖೆಗೆ 36 ಕೋಟಿ ರೂ. ಅನುಮೋದನೆ ನೀಡಲಾಗಿದೆ.
ರಾಜ್ಯದ ಬರ ಪರಿಸ್ಥಿತಿಯ ನಿರ್ವಹಣೆಗೆ ಕೈಗೊಂಡ ಕ್ರಮಗಳು
- ₹1 ಕೋಟಿ ಹೆಚ್ಚುವರಿ ಅನುದಾನ: ಗ್ರಾಮೀಣ ತಾಲ್ಲೂಕುಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಹೆಚ್ಚುವರಿ ಅನುದಾನ ಘೋಷಣೆ.
- ಬೋಗಸ್ ಬೋರ್‌ವೆಲ್‌ಗೆ ಬ್ರೇಕ್: ಹೊಸ ಬೋರ್‌ವೆಲ್ ಕೊರೆಸುವಾಗ ಕಡ್ಡಾಯವಾಗಿ ವಿಡಿಯೋ ಚಿತ್ರೀಕರಣ ಆಗಬೇಕು. ನಕಲಿ ಪ್ರಕರಣಗಳು ಕಂಡುಬಂದರೆ ಸಿಇಒಗಳೇ ನೇರ ಹೊಣೆ.
- ಕೇಂದ್ರಕ್ಕೆ ಶೀಘ್ರ ವರದಿ: ಮುಂದಿನ 15 ದಿನಗಳಲ್ಲಿ ಕೇಂದ್ರ ಸರ್ಕಾರಕ್ಕೆ ಬರ ಪರಿಸ್ಥಿತಿಯ ಸಮಗ್ರ ವರದಿ ಸಲ್ಲಿಕೆ; ಕೇಂದ್ರ ತಂಡಕ್ಕೆ ವಾಸ್ತವಾಂಶ ಮನವರಿಕೆ ಮಾಡಲು ಸೂಚನೆ.
- ರೈತರ ಹಿತರಕ್ಷಣೆಗೆ ಆದ್ಯತೆ: ಸಣ್ಣ ಮತ್ತು ಅತಿ ಸಣ್ಣ ರೈತರ ಹಿತವೇ ಮುಖ್ಯ ಆದ್ಯತೆ. ಕೃಷಿ, ಪಶುಸಂಗೋಪನೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು.
- ವಿದ್ಯುತ್ ವ್ಯವಸ್ಥೆ: ಟ್ರಾನ್ಸ್‌ಫಾರ್ಮರ್‌ಗಳ ರಿಪೇರಿಗೆ ವಿಶೇಷ ಗಮನ ನೀಡಿ, ಹೆಚ್ಚುವರಿ ಟ್ರಾನ್ಸ್‌ಫಾರ್ಮರ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳಲು 4G ವಿನಾಯಿತಿ.
- 'TEAM KARNATAKA' ಮನಸ್ಥಿತಿ: ಅಧಿಕಾರಿಗಳು ಕೇವಲ ಕಾಗದದ ವರದಿ ನೀಡದೆ, ಫೀಲ್ಡ್‌ಗಿಳಿದು ಆಡಳಿತಾತ್ಮಕ ಟೀಮ್ ವರ್ಕ್ ಮತ್ತು ಕಾರ್ಯಕ್ಷಮತೆ ಪ್ರದರ್ಶಿಸಬೇಕು.
ರಾಜ್ಯದ ಮಳೆ ಹಾಗೂ ಜಲಮಟ್ಟದ ಪ್ರಸ್ತುತ ಅಂಕಿ-ಅಂಶಗಳು:
- • ಮಳೆ ಕೊರತೆ: ಜುಲೈ 18ರವರೆಗೆ ರಾಜ್ಯದಲ್ಲಿ ಮುಂಗಾರು ಮಳೆ ವಾಡಿಕೆಗಿಂತ ಒಟ್ಟಾರೆ ಶೇ. 39ರಷ್ಟು ಕೊರತೆ. 170ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಮಳೆ ಅಭಾವ (ವಿಜಯನಗರ ಜಿಲ್ಲೆಯಲ್ಲಿ ಅತ್ಯಧಿಕ -67% ಕೊರತೆ).
- • ಪ್ರಾದೇಶಿಕ ಕೊರತೆ: ಮಲೆನಾಡು (-43%), ಕರಾವಳಿ (-35%), ಉತ್ತರ ಒಳನಾಡು (-33%), ದಕ್ಷಿಣ ಒಳನಾಡು (-31%).
- • ಜಲಾಶಯಗಳ ಸ್ಥಿತಿ: ಪ್ರಮುಖ ಜಲಾಶಯಗಳಲ್ಲಿ ಕೇವಲ ಶೇ. 40 ರಷ್ಟು ಮಾತ್ರ ನೀರು ಸಂಗ್ರಹವಿದೆ (ಪ್ರಸ್ತುತ 359.98 ಟಿಎಂಸಿ, ಕಳೆದ ವರ್ಷ 681.83 ಟಿಎಂಸಿ ಇತ್ತು).
- • ಜಲವಿದ್ಯುತ್ ಜಲಾಶಯಗಳು: ಲಿಂಗನಮಕ್ಕಿ, ಸೂಪ ಮತ್ತು ವರಾಹಿಯಲ್ಲಿ ಕೇವಲ ಸರಾಸರಿ ಶೇ. 23 ರಷ್ಟು ಮಾತ್ರ ನೀರು ಸಂಗ್ರಹವಿದೆ. ಕಾವೇರಿ ಕಣಿವೆಯಲ್ಲಿ ಶೇ. 51 ಹಾಗೂ ಕೃಷ್ಣಾ ಕಣಿವೆಯಲ್ಲಿ ಶೇ. 48 ರಷ್ಟು ನೀರಿದೆ.
- • ರೈತರ ಹಿತರಕ್ಷಣೆಗೆ ಆದ್ಯತೆ: ರೈತರು ಕಡಿಮೆ ನೀರಿನ ಬಳಕೆಯಾಗುವ ಬೆಳೆಗಳನ್ನು ಬೆಳೆಯುವ ಮೂಲಕ ಬರದ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಕೈಜೋಡಿಸಬೇಕು. ರೈತರ ಹಿತರಕ್ಷಣೆಗೆ ಸಕಲ ಸಿದ್ಧತೆಗಳನ್ನೂ ಮಾಡಲಾಗುವುದು.


