ಕರ್ನಾಟಕದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗವು ಚುನಾವಣೆ ಘೋಷಿಸಿದೆ. ಹಾಲಿ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ, ಎಚ್‌.ಡಿ.ದೇವೇಗೌಡ ಸೇರಿದಂತೆ ನಾಲ್ವರ ಅವಧಿ ಅಂತ್ಯಗೊಳ್ಳಲಿದ್ದು, ವಿಧಾನಸಭೆಯ ಸಂಖ್ಯಾಬಲದ ಪ್ರಕಾರ ಕಾಂಗ್ರೆಸ್‌ಗೆ ಮೂರು ಮತ್ತು ಬಿಜೆಪಿಗೆ ಒಂದು ಸ್ಥಾನ ಲಭಿಸುವ ಸಾಧ್ಯತೆಯಿದೆ.

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗವು ರಾಜ್ಯದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ, ಬಿಜೆಪಿಯ ನಾರಾಯಣ ಕೊರಗಪ್ಪ, ಈರಣ್ಣ ಕಡಾಡಿ ಅವರ ರಾಜ್ಯಸಭಾ ಸದಸ್ಯತ್ವ ಅವಧಿ ಇದೇ ಜೂ.25ಕ್ಕೆ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಈ ನಾಲ್ಕು ಸ್ಥಾನಗಳಿಗೆ ಜೂ.18ರಂದು ಚುನಾವಣೆ ನಡೆಸುವುದಾಗಿ ತಿಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜೂ.1ರಂದು ಅಧಿಸೂಚನೆ ಹೊರಬೀಳಲಿದ್ದು, ಜೂ.8 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಜೂ.9ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜೂ.11 ನಾಮಪತ್ರ ಹಿಂಪಡೆಯಲು ಕಡೆ ದಿನವಾಗಿದೆ. ಜೂ.18ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಮತದಾನ ನಡೆಯಲಿದ್ದು, ಅಂದೇ ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ.

ವಿಧಾನಸಭೆಯಿಂದ ರಾಜ್ಯಸಭೆಗೆ ನಾಲ್ವರು ಸದಸ್ಯರ ಆಯ್ಕೆಗಾಗಿ ಈ ಚುನಾವಣೆ ನಡೆಯಲಿದೆ. ರಾಜಕೀಯ ಪಕ್ಷಗಳ ವಿಧಾನಸಭೆ ಸದಸ್ಯರ ಸಂಖ್ಯಾಬಲ ನೋಡಿದಾಗ, ಕಾಂಗ್ರೆಸ್‌ಗೆ ಮೂರು ಸ್ಥಾನ ಮತ್ತು ಬಿಜೆಪಿಗೆ ಒಂದು ಸ್ಥಾನ ಲಭಿಸಲಿದೆ. ಜೆಡಿಎಸ್‌ ಬಳಿ ಅಗತ್ಯ ಸಂಖ್ಯಾಬಲ ಇಲ್ಲ.

ಎಚ್‌ಡಿಡಿ ಮರು ಆಯ್ಕೆ ತೀರ್ಮಾನ ಆಗಿಲ್ಲ

ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರು ಮರು ಆಯ್ಕೆ ಆಗಬೇಕಾದರೆ, ಬಿಜೆಪಿಯ ಬೆಂಬಲ ಅತ್ಯಗತ್ಯ. ಆದರೆ, ಈ ಬಗ್ಗೆ ಜೆಡಿಎಸ್‌ ಅಥವಾ ಬಿಜೆಪಿ ರಾಜ್ಯ ನಾಯಕರು ಯಾವುದೇ ತೀರ್ಮಾನ ಮಾಡಿಲ್ಲ. ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷಗಳಲ್ಲಿ ಚರ್ಚೆಗಳು ಶುರುವಾಗಿವೆ. ಶೀಘ್ರದಲ್ಲೇ ಅಭ್ಯರ್ಥಿಗಳ ಹೆಸರು ಬೀಳಲಿದೆ.

ಯಾರ ಅವಧಿ ಅಂತ್ಯ?

- ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್‌ನ ಎಚ್‌.ಡಿ.ದೇವೇಗೌಡ, ಬಿಜೆಪಿಯ ಕೆ.ನಾರಾಯಣ, ಈರಣ್ಣ ಕಡಾಡಿ.

ರೇಸಲ್ಲಿ ಯಾರು?

ಕಾಂಗ್ರೆಸ್‌: ಮಲ್ಲಿಕಾರ್ಜುನ ಖರ್ಗೆ, ಬಿ.ವಿ.ಶ್ರೀನಿವಾಸ್‌, ಬಿ.ಕೆ. ಹರಿಪ್ರಸಾದ್‌

ಬಿಜೆಪಿ: ಡಿ.ವಿ. ಸದಾನಂದಗೌಡ, ನಿರ್ಮಲಕುಮಾರ್‌ ಸುರಾನಾ, ವರಿಷ್ಠರು ಒಪ್ಪಿದರೆ ಜೆಡಿಎಸ್‌ ವರಿಷ್ಠ ದೇವೇಗೌಡ

--