ಸೃಷ್ಟಿ ಸಿರಿಯಾಗಿ, ಭೂಮಿ ತಂಪಾತಲೇ ಪರಾಕ್.., ವರ್ಷ ಭವಿಷ್ಯ ನುಡಿದ ಕಾರ್ಣಿಕ, ರೈತರಿಗೆ ಸಂತಸ!

ಹಾವನೂರ (ಚಿಕ್ಕ ಮೈಲಾರ)ದಲ್ಲಿ ಮೈಲಾರಲಿಂಗೇಶ್ವರನ ಕಾರ್ಣಿಕ ನುಡಿಯನ್ನು ಗೊರವಪ್ಪ ಆನಂದ ಬಿಲ್ಲರ ಘೋಷಿಸಿದ್ದಾರೆ. 'ಸೃಷ್ಟಿ ಸಿರಿಯಾಗಿ, ಭೂಮಿ ತಂಪಾತಲೇ ಪರಾಕ್' ಎಂಬ ನುಡಿ ಉತ್ತಮ ಮಳೆ, ಬೆಳೆ ಮತ್ತು ಜಗತ್ತಿನ ಸಿರಿತನವನ್ನು ಸೂಚಿಸುತ್ತದೆ ಎಂದು ಭಕ್ತರು ಅರ್ಥೈಸಿದ್ದಾರೆ.

haveri mylar lingeshwar karnika prediction about rain rav

ಗುತ್ತಲ (ಫೆ.14): 'ಸೃಷ್ಟಿ ಸಿರಿಯಾಗಿ, ಭೂಮಿ ತಂಪಾತಲೇ ಪರಾಕ್' ಎಂದು ಇಲ್ಲಿನ ಹಾವನೂರ (ಚಿಕ್ಕ ಮೈಲಾರ) ಸಮೀಪದ ಜೋಗ ಮರಡಿಯಲ್ಲಿ ಮೈಲಾರಲಿಂಗೇಶ್ವರನ ಕಾರ್ಣಿಕದ ನುಡಿಯನ್ನು ಗೊರವಪ್ಪ ಆನಂದ ಬಿಲ್ಲರ ಗುರುವಾರ ಸಂಜೆ ಹೇಳಿದರು.

ಕಳೆದ 359 ವರ್ಷಗಳಿಂದ ಹಾವನೂರ ಗ್ರಾಮದಲ್ಲಿನ ಚಿಕ್ಕಮೈಲಾರದ ಕಾರ್ಣಿಕೋತ್ಸವವು ಮೈಲಾರದ ಡೆಂಕನ ಮರಡಿಯಲ್ಲಿ ನುಡಿಯುವ ಕಾರ್ಣಿಕ ದಿನದ ಹಿಂದಿನ ದಿನ (ಭಾರತ ಹುಣ್ಣಿಮೆಯ ಮರುದಿನ) ಇಲ್ಲಿ ಕಾರ್ಣಿಕವನ್ನು ಹೇಳುತ್ತಾ ಬರಲಾಗಿದೆ.

ಗುರುವಾರ ಸಂಜೆ ಸಾಂಪ್ರದಾಯಿಕ ಪೂಜೆಗಳ ನಂತರ ಮೈಲಾರಲಿಂಗೇಶ್ವರನನ್ನು ಮೆರವಣಿಗೆಯಲ್ಲಿ ತರಲಾಯಿತು. ನಂತರ ಚಿಕ್ಕ ಮೈಲಾರದಿಂದ ಗಂಗಮಾಳವ್ವ ಮೂರ್ತಿಗಳ ಆಗಮನದ ನಂತರ ಗೊರವಪ್ಪನು 15-20 ಅಡಿ ಎತ್ತರದ ಬಿಲ್ಲನ್ನು ಏರಿ ವರ್ಷ ಭವಿಷ್ಯ ಎಂದೇ ಅರ್ಥೈಸಲಾಗುವ ಕಾರ್ಣಿಕದ ನುಡಿಯನ್ನು ಹೇಳಲು ಬಿಲ್ಲನೇರಿ ಸದ್ದಲೇ ಎನ್ನುತ್ತಲೇ ವೀಕ್ಷಿಸಲು ಆಗಮಿಸಿದ್ದ ಸಾವಿರಾರು ಭಕ್ತರು ಮೌನವಾದರು. 

ಇದನ್ನೂ ಓದಿ: 'ಆಕಾಶನ ಚಿಗುರೀತಲೇ ಬೇರೆಲ್ಲಾ ಮುತ್ತಾಯಿತಲೇ ಪರಾಕ್' ಐತಿಹಾಸಿಕ ದೇವರಗುಡ್ಡ ಗೊರವಯ್ಯ ಕಾರ್ಣಿಕ ನುಡಿ ಯಾವುದರ ಮುನ್ಸೂಚನೆ?

ನಂತರ ಒಂದೇ ವಾಕ್ಯದ ವರ್ಷ ಭವಿಷ್ಯವನ್ನು ಹೇಳಿ ಮೇಲಿಂದ ಗೊರವಪ್ಪ ವಾಯವ್ಯ ದಿಕ್ಕಿನ ಕಡೆ ತಲೆ ಮಾಡಿ ಬಿದ್ದಿದ್ದರಿಂದ ಆ ಭಾಗದಲ್ಲಿ ಉತ್ತಮ ಮಳೆ ಬೆಳೆ ಆಗುವುದೆಂಬ ನಂಬಿಕೆ ಭಕ್ತರದ್ದು.ಈ ಬಾರಿಯ ಭವಿಷ್ಯವು ಅನೇಕ ರೀತಿಯಲ್ಲಿ ಅರ್ಥೈಸಲಾಗಿದ್ದು, ಪ್ರಸ್ತಕ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ಉತ್ತಮವಾಗಿದ್ದು, ಇಡೀ ಜಗತ್ತೇ ಸಿರಿಯಾಗುವುದು. ಕಳೆದ 2-3 ವರ್ಷಗಳಿಂದ ತಾಪಮಾನ ಏರುತ್ತಿದ್ದು, ಆದರೆ ಈ ಬಾರಿ ಭೂಮಿ ತಂಪಾಗುವುದು ಎಂದು ಅರ್ಥೈಸಲಾಗುತ್ತಿದ್ದು, ಮಳೆಯಿಂದ ಭೂಮಿ ತಂಪಾಗುವುದು. ಕಳೆದ ಅನೇಕ ವರ್ಷಗಳಿಂದ ಮೈಲಾರ ಕ್ಷೇತ್ರದಂತೆ ಹಾವನೂರಿನಲ್ಲಿ ನುಡಿಯುವ ಕಾರ್ಣಿಕೋತ್ಸದ ಭವಿಷ್ಯವಾಣಿ ನಿಜವಾಗುತ್ತಿರುವುದರಿಂದ ವರ್ಷದಿಂದ ವರ್ಷಕ್ಕೆ ಇಲ್ಲಿಯೂ ಭವಿಷ್ಯವಾಣಿಯನ್ನು ಅನೇಕರು ಆಸಕ್ತಿಯಿಂದ ಕೇಳಲು ಆಗಮಿಸುತ್ತಿದ್ದಾರೆ. 

ಇದನ್ನೂ ಓದಿ: ಮೈಲಾರಲಿಂಗೇಶ್ವರನ ಕಾರ್ಣಿಕ ಸಂಪಾಯಿತಲೇ ಪರಾಕ್ ಭವಿಷ್ಯವಾಣಿ ನಿಜವಾಯ್ತು

ಸೃಷ್ಟಿ ಸಿರಿಯಾಗಿ ಅಂದರೆ ಉತ್ತಮ ಆಡಳಿತದಿಂದ ಪ್ರಜೆಗಳು ಸಿರಿತನ ಅಂದರೆ ಯಾವುದೇ ತೊಂದರೆ ಇಲ್ಲದೆ ಉತ್ತಮವಾಗಿರಲಿದೆ ಎಂಬ ಅರ್ಥವನ್ನೂ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಮೈಲಾರಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ಕೃಷ್ಣಭಟ್ ಪೂಜಾರ, ಗ್ರಾಮದೇವತಾ ಪಂಚ ಕಮಿಟಿ ಅಧ್ಯಕ್ಷ ಶಿವಾನಂದಯ್ಯ ಕರಸ್ಥಳಮಠ, ಶ್ಯಾಮಸುಂದರ ಸದರಜೋಷಿ, ವಿಲಾಸ ಜೋಗ, ನಾರಾಯಣಪ್ಪ ಕಮ್ಮಾರ, ಸುಭಾಷ ಮೈಲಾರ, ಅಶೋಕ ಮೈಲಾರ, ಗ್ರಾ.ಪಂ ಸದಸ್ಯರಾದ ದಿಳ್ಳೆಪ್ಪ ಗೊಣ್ಣಿ, ಗೋಪಾಲ ಗೊಣ್ಣಿ, ಸುನೀಲ ಕೆಂಗನಿಂಗಪ್ಪನವರ ಸೇರಿದಂತೆ ಗ್ರಾ.ಪಂ ಸದಸ್ಯರು, ಹಾವನೂರ ಸೇರಿದಂತೆ ಗುತ್ತಲ, ಹರಳಹಳ್ಳಿ, ಕಂಚಾರಗಟ್ಟಿ, ಹುರುಳಿಹಾಳ ಗ್ರಾಮಗಳಿಂದ ಸಾವಿರಾರು ಜನರು ಆಗಮಿಸಿದ್ದರು.

Latest Videos
Follow Us:
Download App:
  • android
  • ios