‘ಗೃಹ ಜ್ಯೋತಿ’ ಯೋಜನೆಯಡಿ ಜುಲೈ ತಿಂಗಳ ಉಚಿತ ವಿದ್ಯುತ್‌ ಲಾಭ ಪಡೆಯಲು ನೀಡಿದ್ದ ಗಡುವು ಜು.27ಕ್ಕೆ ಮುಕ್ತಾಯವಾಗಿದೆ. ಇಂದಿನಿಂದ (ಜು.28) ನೋಂದಣಿ ಮಾಡಿದವರಿಗೆ ಆಗಸ್ಟ್‌ನಲ್ಲಿ ಬರುವ ಜುಲೈ ಬಳಕೆಯ ಬಿಲ್‌ ಉಚಿತವಿಲ್ಲ. 

ಬೆಂಗಳೂರು (ಜು.28): ‘ಗೃಹ ಜ್ಯೋತಿ’ ಯೋಜನೆಯಡಿ ಜುಲೈ ತಿಂಗಳ ಉಚಿತ ವಿದ್ಯುತ್‌ ಲಾಭ ಪಡೆಯಲು ನೀಡಿದ್ದ ಗಡುವು ಜು.27ಕ್ಕೆ ಮುಕ್ತಾಯವಾಗಿದೆ. ಇಂದಿನಿಂದ (ಜು.28) ನೋಂದಣಿ ಮಾಡಿದವರಿಗೆ ಆಗಸ್ಟ್‌ನಲ್ಲಿ ಬರುವ ಜುಲೈ ಬಳಕೆಯ ಬಿಲ್‌ ಉಚಿತವಿಲ್ಲ. ಬದಲಿಗೆ ಆಗಸ್ಟ್‌ ಬಳಕೆಯಿಂದ ಉಚಿತ ವಿದ್ಯುತ್‌ ಲಾಭ ಆರಂಭವಾಗಲಿದೆ. ಹೀಗಿದ್ದರೂ, ವಾರದ ಹಿಂದೆಯೇ ಅರ್ಜಿ ಸಲ್ಲಿಸಿರುವ ಲಕ್ಷಾಂತರ ಮಂದಿಯ ಅರ್ಜಿಗೆ ಈವರೆಗೂ ಅನುಮೋದನೆ ದೊರೆತಿಲ್ಲ. ಬಹುತೇಕ ಅರ್ಜಿಗಳು ಪ್ರಕ್ರಿಯೆ (ಪ್ರೊಸೆಸಿಂಗ್‌) ಹಂತದಲ್ಲೇ ಇವೆ. ಇವುಗಳನ್ನು ಎಸ್ಕಾಂಗಳು ಕೂಡಲೇ ಅಂಗೀಕರಿಸದಿದ್ದರೆ ಮೇ, ಜೂನ್‌ ತಿಂಗಳಂತೆ ಜುಲೈ ತಿಂಗಳ ವಿದ್ಯುತ್ತನ್ನೂ ಪಾವತಿ ಮಾಡಬೇಕಾದ ಅನಿರ್ವಾಯತೆ ಉಂಟಾಗಲಿದೆ.

ಜು.25ರ ವೇಳೆಗೆ 1.18 ಕೋಟಿ ಮಂದಿ ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ. ತನ್ಮೂಲಕ ಒಟ್ಟು ಅರ್ಹ ಫಲಾನುಭವಿಗಳಲ್ಲಿ ಶೇ.60.75 ರಷ್ಟುಮಾತ್ರ ನೋಂದಣಿಯಾಗಿದ್ದಾರೆ. ಉಳಿದಂತೆ ಹಲವರ ಅರ್ಜಿ ಪ್ರಕ್ರಿಯೆ ಹಂತದಲ್ಲಿವೆ. ಇನ್ನೂ ಹಲವಾರು ಮಂದಿ ಅರ್ಜಿಯನ್ನೇ ಸಲ್ಲಿಸಿಲ್ಲ. ಈ ಹಿನ್ನೆಲೆಯಲ್ಲಿ ಬೆಸ್ಕಾಂ ಸಿಬ್ಬಂದಿ ಗ್ರಾಮಾಂತರ ಪ್ರದೇಶದಲ್ಲಿ ಮನೆ-ಮನೆಗೂ ಭೇಟಿ ನೀಡಿ ಆಧಾರ್‌ ಕಾರ್ಡ್‌ ಹಾಗೂ ಮೊಬೈಲ್‌ ನಂಬರ್‌ ಸಂಗ್ರಹಿಸುತ್ತಿದ್ದಾರೆ. ಆದಷ್ಟುಬೇಗ ನೋಂದಣಿ ಕಾರ್ಯ ಪೂರ್ಣಗೊಳಿಸುತ್ತೇವೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ 439 ಭೂಕುಸಿತ ವಲಯ: ವರದಿಯಲ್ಲೇನಿದೆ?

ಅರ್ಜಿ ಸಲ್ಲಿಕೆಗೆ ಅಂತಿಮ ಗಡುವಿಲ್ಲ: ಅರ್ಜಿ ನೋಂದಣಿಗಾಗಿ ಯಾವುದೇ ಅಂತಿಮ ಗಡುವು ವಿಧಿಸಿಲ್ಲ. ಆದರೆ, ಜುಲೈ ತಿಂಗಳ ವಿದ್ಯುತ್‌ ಬಳಕೆಗೆ ಶುಲ್ಕ ಪಾವತಿಸದೆ ಇರಬೇಕಾದರೆ ಜು.27ರ ಒಳಗಾಗಿ ಅರ್ಜಿ ಸಲ್ಲಿಸಬೇಕಿತ್ತು. ಈಗಾಗಲೇ ನೋಂದಣಿ ಮಾಡಿಕೊಂಡಿರುವವರಿಗೆ ಅವರ ಹಿಂದಿನ 12 ತಿಂಗಳ ಸರಾಸರಿ ಆಧರಿಸಿ ಶೇ.10ರಷ್ಟುಹೆಚ್ಚು ವಿದ್ಯುತನ್ನು ಉಚಿತವಾಗಿ ಬಳಸಲು ಅವಕಾಶ ನೀಡಲಾಗುವುದು.

ಕೆಜೆ ಹಳ್ಳಿ, ಡಿಜೆ ಹಳ್ಳಿ ಪ್ರಕರಣ ವಾಪಸ್‌ ಪಡೆಯಲ್ಲ: ಸಚಿವ ಎಂ.ಬಿ.ಪಾಟೀಲ್‌

ಅರ್ಜಿ ಸಲ್ಲಿಕೆ ಮಾಡಿರುವವರಿಗೆ ಜುಲೈ ತಿಂಗಳ ವಿದ್ಯುತ್‌ ಬಳಕೆಗೆ ಆಗಸ್ಟ್‌ನಲ್ಲಿ ಶೂನ್ಯ ಬಿಲ್‌ ನೀಡಲಾಗುವುದು. ಹೀಗಾಗಿ ನಿಗದಿತ ಪ್ರಮಾಣದಲ್ಲಿ ವಿದ್ಯುತ್‌ ಬಳಸಿರುವವರು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಒಂದು ವೇಳೆ ಜು.27ರ ಒಳಗಾಗಿ ಅರ್ಜಿ ಸಲ್ಲಿಸದಿದ್ದರೆ ಅವರು ಜುಲೈ ಬಳಕೆಯ ವಿದ್ಯುತ್‌ನ ಪೂರ್ಣ ಶುಲ್ಕ ಪಾವತಿಸಬೇಕು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇನ್ನು ಜುಲೈ 28ರಿಂದ ಆಗಸ್ಟ್‌ 27ರ ನಡುವೆ ಅರ್ಜಿ ಸಲ್ಲಿಸಿದರೆ ಸೆಪ್ಟೆಂಬರ್‌ನಲ್ಲಿ ನೀಡುವ ಆಗಸ್ಟ್‌ ತಿಂಗಳ ವಿದ್ಯುತ್‌ ಬಳಕೆಯ ಬಿಲ್‌ ಪಾವತಿಸಬೇಕಾಗಿರುವುದಿಲ್ಲ.