ಉತ್ತರ ಕನ್ನಡ ಜಿಲ್ಲೆಯಲ್ಲಿ 439 ಭೂಕುಸಿತ ವಲಯ: ವರದಿಯಲ್ಲೇನಿದೆ?
ಪಶ್ಚಿಮ ಘಟ್ಟ ಭಾಗವಾದ ಉತ್ತರ ಕನ್ನಡ ಜಿಲ್ಲೆಗೆ ಇದೀಗ ದೊಡ್ಡ ಕಂಟಕ ಎದುರಾಗಿದೆ. 2018ರಲ್ಲಿ ಕೊಡಗಿನಲ್ಲಿ ಕಾಣಿಸಿಕೊಂಡಿದ್ದಂತಹ ಭೂಕುಸಿತದ ಸಮಸ್ಯೆ ಇದೀಗ ಉತ್ತರ ಕನ್ನಡ ಜಿಲ್ಲೆಯ ಬರೋಬ್ಬರಿ 439 ಪ್ರದೇಶಗಳಲ್ಲಿ ನಡೆಯುವ ಸಾಧ್ಯತೆಗಳ ಬಗ್ಗೆ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ವರದಿ ನೀಡಿದೆ.
ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರ ಕನ್ನಡ (ಜು.27): ಪಶ್ಚಿಮ ಘಟ್ಟ ಭಾಗವಾದ ಉತ್ತರ ಕನ್ನಡ ಜಿಲ್ಲೆಗೆ ಇದೀಗ ದೊಡ್ಡ ಕಂಟಕ ಎದುರಾಗಿದೆ. 2018ರಲ್ಲಿ ಕೊಡಗಿನಲ್ಲಿ ಕಾಣಿಸಿಕೊಂಡಿದ್ದಂತಹ ಭೂ ಕುಸಿತದ ಸಮಸ್ಯೆ ಇದೀಗ ಉತ್ತರ ಕನ್ನಡ ಜಿಲ್ಲೆಯ ಬರೋಬ್ಬರಿ 439 ಪ್ರದೇಶಗಳಲ್ಲಿ ನಡೆಯುವ ಸಾಧ್ಯತೆಗಳ ಬಗ್ಗೆ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ವರದಿ ನೀಡಿದೆ. ಹೌದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಸಾಕಷ್ಟು ಕಡೆಗಳಲ್ಲಿ ನೆರೆ ಕಾಟದೊಂದಿಗೆ ಅಲ್ಲಲ್ಲಿ ಭೂ ಕುಸಿತಗಳು ಕೂಡಾ ನಡೆಯುತ್ತಿವೆ. 2009 ಅಕ್ಟೋಬರ್ 2ರಂದು ಕಾರವಾರದ ಕಡವಾಡದಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿ 22 ಜನರು ಮೃತಪಟ್ಟಿದ್ದರು.
2021ರ ಜುಲೈನಲ್ಲಿ ಯಲ್ಲಾಪುರದ ಕಳಚೆಯಲ್ಲಿ ಭೂ ಕುಸಿತವಾಗಿ 667 ಕುಟುಂಬಗಳು ನಿರಾಶ್ರಿತರಾಗಿದ್ದರು. ಕಳೆದ ವರ್ಷ ಭಟ್ಕಳದ ಮುಟ್ಟಳ್ಳಿಯಲ್ಲಿ ಭೂ ಕುಸಿತವಾಗಿ ಒಂದೇ ಕುಟುಂಬದ 4 ಜನರು ಸಾವನ್ನಪ್ಪಿದ್ದರು. ಈ ವರ್ಷ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ , ಶಿರಸಿ ಭಾಗದ ದೇವಿಮನೆ ಘಟ್ಟ, ಹೊನ್ನಾವರದ ಅಪ್ಸರ ಕೊಂಡ, ಜೋಯಿಡಾದ ಅಣಶಿ, ಕ್ಯಾಸಲ್ ರಾಕ್ ನಲ್ಲಿ ಭೂ ಕುಸಿತವಾಗಿದ್ದು, ಸಾಕಷ್ಟು ಹಾನಿ ತಂದಿದೆ. ಕಳೆದ ವರ್ಷ ಜಿಲ್ಲೆಗೆ ಭೇಟಿ ನೀಡಿ ಸರ್ವೇ ನಡೆಸಿದ್ದ ಭೂ ವಿಜ್ಞಾನಿಗಳ ತಂಡ ಯಲ್ಲಾಪುರ, ಕಾರವಾರ, ಶಿರಸಿಯ ಜಾಜಿ ಗುಡ್ಡ, ಜೊಯಿಡಾ, ಹೊನ್ನಾವರ ಭಾಗವನ್ನು ಭೂ ಕುಸಿತ ವಲಯ ಎಂದು ಗುರುತಿಸಿತ್ತು.
ಕೆಜೆ ಹಳ್ಳಿ, ಡಿಜೆ ಹಳ್ಳಿ ಆರೋಪಿಗಳನ್ನು ಅಮಾಯಕರೆಂದು ಪರಿಗಣಿಸುವುದು ಅಪಾಯಕಾರಿ: ಸಿ.ಟಿ.ರವಿ
ಇದಾದ ಬಳಿಕ ತಂಡ ಅಧ್ಯಯನವನ್ನು ಮುಂದುವರೆಸಿದ್ದು, ಇದೀಗ 439 ಪ್ರದೇಶಗಳನ್ನು ಭೂ ಕುಸಿತ ವಲಯ ಎಂದು ಗುರುತಿಸಿದೆ. ಇದರಲ್ಲಿ ಕೈಗಾ ಅಣುಸ್ಥಾವರ ಪ್ರದೇಶ ಹಾಗೂ ಕೊಡಸಳ್ಳಿ ಜಲಾಶಯದ ಪ್ರದೇಶವನ್ನು ಕೂಡಾ ಗುರುತಿಸಲಾಗಿದ್ದು, ಈ ಭಾಗದಲ್ಲಿ ನಿರಂತರ ಗುಡ್ಡ ಕುಸಿಯುತ್ತಿದೆ. ಇನ್ನು ಗುಡ್ಡ ಕುಸಿತವಾಗುವ ಬಹುತೇಕ ಪ್ರದೇಶಗಳು ಜನವಸತಿಯಿಂದ ಕೂಡಿರುವುದು ಆತಂಕಕ್ಕೆ ಕಾರಣವಾಗಿದ್ದು, ಭೂ ಕುಸಿತ ಭಾಗದ ಜನರನ್ನು ಬೇರೆಡೆ ಸ್ಥಳಾಂತರಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ.