ಹಂಪಿ ಉತ್ಸವ ಯಶಸ್ಸು: ಮೂರು ದಿನಗಳಲ್ಲಿ ಬರೋಬ್ಬರಿ 10 ಲಕ್ಷ ಜನ ಭೇಟಿ!
ವಿಜಯನಗರದ ಗತ ವೈಭವ ಸಾರುವ ಹಂಪಿ ಉತ್ಸವಕ್ಕೆ ಮೂರು ದಿನಗಳಲ್ಲಿ ಬರೋಬ್ಬರಿ ಹತ್ತು ಲಕ್ಷ ಜನ ಹರಿದು ಬಂದಿದ್ದು, ವಿಜಯನಗರ ಜಿಲ್ಲಾಡಳಿತದ ಆಶಯದಂತೆ ಉತ್ಸವ ಭರ್ಜರಿ ಯಶಸ್ಸು ಕಂಡಿದೆ. ಹಂಪಿ ಉತ್ಸವ ಜನೋತ್ಸವದೊಂದಿಗೆ ವಿಜೃಂಭಣೆಯ ಸಾಂಸ್ಕೃತಿಕ ವೈಭವದೊಂದಿಗೆ ಸಂಪನ್ನಗೊಂಡಿತು.
ಕೃಷ್ಣ ಎನ್. ಲಮಾಣಿ ಹಂಪಿ
ವಿಜಯನಗರದ ಗತ ವೈಭವ ಸಾರುವ ಹಂಪಿ ಉತ್ಸವಕ್ಕೆ ಮೂರು ದಿನಗಳಲ್ಲಿ ಬರೋಬ್ಬರಿ ಹತ್ತು ಲಕ್ಷ ಜನ ಹರಿದು ಬಂದಿದ್ದು, ವಿಜಯನಗರ ಜಿಲ್ಲಾಡಳಿತದ ಆಶಯದಂತೆ ಉತ್ಸವ ಭರ್ಜರಿ ಯಶಸ್ಸು ಕಂಡಿದೆ. ಹಂಪಿ ಉತ್ಸವ ಜನೋತ್ಸವದೊಂದಿಗೆ ವಿಜೃಂಭಣೆಯ ಸಾಂಸ್ಕೃತಿಕ ವೈಭವದೊಂದಿಗೆ ಸಂಪನ್ನಗೊಂಡಿತು.
ರಾಜ್ಯ ಸೇರಿದಂತೆ ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಕೇರಳ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಪ್ರವಾಸಿಗರು ಆಗಮಿಸಿ ಹಂಪಿ ಉತ್ಸವಕ್ಕೆ ಬಲ ನೀಡಿದರು. ದೇಶ, ವಿದೇಶಿ ಪ್ರವಾಸಿಗರೊಂದಿಗೆ ವಿಜಯನಗರ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಕೊಪ್ಪಳ, ರಾಯಚೂರು ಜಿಲ್ಲೆಗಳಿಂದಲೂ ಜನರು ಆಗಮಿಸಿದ್ದರು. ಅದರಲ್ಲೂ ಹೊಸಪೇಟೆ, ಕಮಲಾಪುರ, ಗಂಗಾವತಿ, ಆನೆಗೊಂದಿ, ಮರಿಯಮ್ಮನಹಳ್ಳಿ, ಹಗರಿಬೊಮ್ಮನಹಳ್ಳಿ, ಗಿಣಿಗೇರಾ, ಕಂಪ್ಲಿ, ಕುರುಗೋಡು, ಸಂಡೂರು, ತೋರಣಗಲ್, ಕುಡುತಿನಿ, ಕುರೇಕುಪ್ಪ, ಪಾಪಿನಾಯಕ ನಹಳ್ಳಿ, ಗಾದಿಗನೂರು, ಸೀತಾರಾಂ ತಾಂಡಾ, ಕೆರೆ ತಾಂಡಾ, ಕಡ್ಡಿರಾಂಪುರ, ಹಂಪಿ, ಹೊಸ ಹಂಪಿ, ಹಂಪಿ ಪ್ರಕಾಶ ನಗರದಿಂದಲೂ ಜನರು ಆಗಮಿಸಿ ಹಂಪಿ ಉತ್ಸವಕ್ಕೆ ಮೆರಗು ತಂದರು.
ಹಂಪಿ ಉತ್ಸವಕ್ಕೆ ಎರಡನೇ ದಿನ ಜನವೋ ಜನ! ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಜನರು ಭೇಟಿ!
ಹಂಪಿ ಉತ್ಸವದಲ್ಲಿ ಮೊದಲ ದಿನ 2 ಲಕ್ಷ ಜನ ಸೇರಿದ್ದರೆ, ಎರಡನೆ ದಿನ ಮೂರು ಲಕ್ಷ ಜನ ಸೇರಿದ್ದರು. ಮೂರನೇ ದಿನ ಐದು ಲಕ್ಷ ಜನ ಸೇರಿದ್ದರು. ಹಾಗಾಗಿ ಹಂಪಿ ಉತ್ಸವದಲ್ಲಿ ಮೂರು ದಿನಗಳಲ್ಲಿ ಒಟ್ಟಾರೆ ಹತ್ತು ಲಕ್ಷ ಜನ ಸೇರಿದ್ದರು ಎಂದು ಅಂದಾಜಿಸಲಾಗಿದೆ. ಈ ಮೂಲಕ ಜಿಲ್ಲಾಡಳಿತದ ಶ್ರಮಕ್ಕೂ ಫಲ ದೊರೆತಿದೆ.
ಜಾನಪದ ವಾಹಿನಿ ವೈಭವ: ಹಂಪಿ ಉತ್ಸವದ ಕೊನೇ ದಿನ ಉದ್ದಾನ ವೀರಭದ್ರೇಶ್ವರ ದೇವಾಲಯದಿಂದ ಆರಂಭಗೊಂಡ ಜಾನಪದ ವಾಹಿನಿಯ ಭವ್ಯ ಮೆರವಣಿಗೆ ಹಂಪಿ ಸ್ಮಾರಕಗಳ ಮಧ್ಯದಲ್ಲಿ ನಡೆಯಿತು. ವಿವಿಧ ಕಲಾ ತಂಡಗಳು ಸಾಗಿ ಬಂದುದ್ದನ್ನು ಜನಸ್ತೋಮ ಕಣ್ಣದುಂಬಿಕೊಂಡಿತು. ವಿಜಯನಗರದ ನೆಲದ ಕಲಾಲೋಕವನ್ನು ಇಡೀ ವಿಶ್ವಕ್ಕೆ ಕಲಾವಿದರು ಉಣಬಡಿಸಿದರು. ದೇಸಿ ಕಲೆ ಹಂಪಿಯಲ್ಲಿ ಅನಾವರಣಗೊಳಿಸಿದರು.
ಜಾನಪದ ವಾಹಿನಿ ವೀಕ್ಷಣೆಗೆ ಜನರು ಕಲ್ಲುಬಂಡೆಗಳ ಮೇಲೆ ಕುಳಿತು ವೀಕ್ಷಿಸಿದರು. ಹಂಪಿಯ ಇಕ್ಕೇಲಗಳಲ್ಲಿ ಕಂಡು ಬಂದ ಜನರು, ಹಂಪಿಯ ವಾಸ್ತು ಶಿಲ್ಪ ಪ್ರಪಂಚಕ್ಕೆ ಕಳೆ ತಂದರು. ಹಂಪಿ ಉತ್ಸವ ಬರೀ ಕಾಟಾಚಾರದ ಉತ್ಸವವಲ್ಲ, ಇದು ಜನೋತ್ಸವ ಎಂಬ ಸಂದೇಶ ಸಾರಿದರು.
ಹಂಪಿಯಲ್ಲಿ ಟ್ರಾಫಿಕ್ ಜಾಮ್: ಹಂಪಿಗೆ ಬರುವ ಎರಡು ಮಾರ್ಗಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹೊಸಪೇಟೆಯಿಂದ ಹಂಪಿಗೆ ಆಗಮಿಸಲು ಜನರು ಹರಸಾಹಸಪಟ್ಟರು. ಹಂಪಿಯ ಕಡ್ಡಿರಾಂಪುರದಿಂದ ಹಂಪಿಯವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅದರಲ್ಲೂ ಕಿಲೋ ಮೀಟರ್ ಗಟ್ಟಲೇ ವಾಹನಗಳು ಸಾಲುಗಟ್ಟಿದ್ದವು. ಕಮಲಾಪುರ ಭಾಗದಲ್ಲೂ ವಾಹನಗಳು ಸಾಲುಗಟ್ಟಿದ್ದವು. ಸುಗಮ ಸಂಚಾರಕ್ಕಾಗಿ ಪೊಲೀಸರು ಹರಸಾಹಸ ಪಟ್ಟರು.
ಪಾಸ್‌ಗಳ ಹರಿದು ಹಾಕಿದ ಪೊಲೀಸರು:ಹಂಪಿಯ ಗಾಯತ್ರಿಪೀಠ ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮಗಳ ವೀಕ್ಷಣೆಗೆ ಭಾರೀ ಸಂಖ್ಯೆಯಲ್ಲಿ ಜನರ ದಂಡೇ ಹರಿದು ಬಂದ ಹಿನ್ನೆಲೆಯಲ್ಲಿ ಪಾಸ್ ಹಿಡಿದುಕೊಂಡು ಬಂದ ಜನರನ್ನು ವಿವಿಐಪಿ, ವಿಐಪಿ ಗೇಟ್‌ಗಳಲ್ಲಿ ಒಳ ಬಿಟ್ಟುಕೊಂಡು ಬಳಿಕ ಪೊಲೀಸರು ಪಾಸ್‌ಗಳನ್ನು ಹರಿದು ಹಾಕಿದರು. ಪಾಸ್‌ಗಳ ಪುನರಾವರ್ತನೆ ತಪ್ಪಿಸಲು ಪೊಲೀಸರು ಈ ಮಾರ್ಗ ಕಂಡುಕೊಂಡರು. ಹಾಗಾಗಿ ಹಂಪಿ ಉತ್ಸವಕ್ಕೆ ಕೊನೇ ದಿನ ಜನರನ್ನು ಕಂಟ್ರೋಲ್ ಮಾಡಲು ಪೊಲೀಸರಿಗೆ ಅನುಕೂಲವಾಯಿತು.
ಬಸವಳಿದ ಪೊಲೀಸರು: ಹಂಪಿಯಲ್ಲಿ ಭಾರೀ ಪ್ರಮಾಣದಲ್ಲಿ ಜನರು ಹರಿದು ಬಂದ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಲ್ಲಿ ಸರಿಯಾಗಿ ನಿದ್ದೆ ಇಲ್ಲದೇ ಡ್ಯೂಟಿ ಮಾಡಿದ ಪೊಲೀಸರು ಬಸವಳಿದರು.
ಬೆಂಕಿ ಅವಘಡ ತಪ್ಪಿದ ಭಾರೀ ಅನಾಹುತ: ಹಂಪಿ ಉತ್ಸವದ ಮುಖ್ಯ ವೇದಿಕೆ ಬಳಿ ಧಿಡೀರ್ ಕಾಣಿಸಿಕೊಂಡ ಬೆಂಕಿಯಿಂದ ಕೆಲ ಕಾಲ ಆತಂಕ ಮೂಡಿತ್ತು. ಬೆಂಕಿ ಆಕಸ್ಮಿಕದಿಂದ ಬಿದಿರು ಗಿಡಗಳಲ್ಲಿ ಬೆಂಕಿ ವ್ಯಾಪಿಸಿತ್ತು. ಪಕ್ಕದಲ್ಲೇ ಇದ್ದ ಗಾಯತ್ರಿ ಪೀಠದ ಭವ್ಯ ವೇದಿಕೆಯ ವಿದ್ಯುತ್ ತಂತಿಗಳಿಗೂ ಬೆಂಕಿ ವ್ಯಾಪಿಸಬಹುದೆಂಬ ಆತಂಕ ಮನೆ ಮಾಡಿತ್ತು. ಕೂಡಲೇ ಪೊಲೀಸರು ಹಾಗೂ ಅಗ್ನಿಶಾಮಕದಳದವರು ಬೆಂಕಿ ನಂದಿಸಿದರು. ಈ ಬೆಂಕಿ ನಂದಿಸಿದ ಬಳಿಕ ಪಕ್ಕದಲೇ ಇನ್ನೊಂದು ಪೊದೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆ ಬೆಂಕಿಯನ್ನು ಹೊಸಪೇಟೆ ಅಗ್ನಿಶಾಮಕ ದಳದ ತಂಡ ಬೆಂಕಿ ನಂದಿಸಿತು.
ಹಂಪಿ ಉತ್ಸವದಲ್ಲಿ ಕಾಟೇರನ ಭರ್ಜರಿ ಹವಾ: ಡಿ ಬಾಸ್ ಗುಂಗಿನಲ್ಲಿ ತೇಲಾಡಿದ ಅಭಿಮಾನಿಗಳು..!
ಹಂಪಿ ಉತ್ಸವಕ್ಕೆ ಭಾರೀ ಸಂಖ್ಯೆಯಲ್ಲಿ ಜನರು ಹರಿದು ಬಂದಿದ್ದು ಯಾರೋ ಬೀಡಿ ಸೇದಿ ಎಸೆದಿರಬಹದು ಎಂದು ಪೊಲೀಸರು ಶಂಕಿಸಿದ್ದಾರೆ.
ಭುವನೇಶ್ವರಿ ದೇವಿಗೆ ನಮಿಸಿದ ಮುಸ್ಲಿಂ ಮಹಿಳೆಯರು!
ಹಂಪಿಯಲ್ಲಿ ನಡೆದ ಜಾನಪದ ವಾಹಿನಿ ಮೆರವಣಿಗೆ ವೇಳೆ ಮುಸ್ಲಿಂ ಮಹಿಳೆಯರು ತಾಯಿ ಭುವನೇಶ್ವರಿ ದೇವಿಗೆ ನಮಿಸಿದರು. ಈ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದರು. ವಿಜಯನಗರ ನೆಲದಲ್ಲಿ ನಡೆದ ಜಾನಪದ ವಾಹಿನಿ ಇಡೀ ಜಗತ್ತಿಗೆ ಭಾತೃತ್ವ ಪಾಠವನ್ನೂ ಮಾಡಿತು.