Asianet Suvarna News Asianet Suvarna News

ಹಂಪಿ ಉತ್ಸವಕ್ಕೆ ಎರಡನೇ ದಿನ ಜನವೋ ಜನ! ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಜನರು ಭೇಟಿ!

 ವಿಜಯನಗರದ ಗತವೈಭವ ಸಾರುವ ಹಂಪಿ ಉತ್ಸವದಲ್ಲಿ ಜನವೋ ಜನ. ಉತ್ಸವದ ವೀಕ್ಷಣೆಗೆ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು, ಉತ್ಸವ ಕಳೆಗಟ್ಟಿತು. ಹಂಪಿಯಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದು ಎರಡನೇ ದಿನ ಅಂದಾಜು 3 ಲಕ್ಷಕ್ಕೂ ಅಧಿಕ ಜನರು ಆಗಮಿಸಿ ಉತ್ಸವ ಕಣ್ತುಂಬಿಕೊಂಡರು.

Hampi Utsav 2024  On the 2nd day  more than 3 lakh people visited rav
Author
First Published Feb 4, 2024, 8:18 AM IST

ಕೃಷ್ಣ ಎನ್‌. ಲಮಾಣಿ

ಹಂಪಿ (ಫೆ.4): ವಿಜಯನಗರದ ಗತವೈಭವ ಸಾರುವ ಹಂಪಿ ಉತ್ಸವದಲ್ಲಿ ಜನವೋ ಜನ. ಉತ್ಸವದ ವೀಕ್ಷಣೆಗೆ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು, ಉತ್ಸವ ಕಳೆಗಟ್ಟಿತು. ಹಂಪಿಯಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದು ಎರಡನೇ ದಿನ ಅಂದಾಜು 3 ಲಕ್ಷಕ್ಕೂ ಅಧಿಕ ಜನರು ಆಗಮಿಸಿ ಉತ್ಸವ ಕಣ್ತುಂಬಿಕೊಂಡರು.

ಹಂಪಿ ಉತ್ಸವಕ್ಕೆ ಜನಸಾಗರವೇ ಹರಿದುಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆ ಹಂಪಿಯಲ್ಲಿ ಭಾರೀ ಬಿಗಿ ಭದ್ರತೆ ಕೈಗೊಂಡಿತು. ಉತ್ಸವದ ವೀಕ್ಷಣೆಗೆ ರಾಜ್ಯ ಸೇರಿದಂತೆ ದೇಶ- ವಿದೇಶಗಳಿಂದ ಆಗಮಿಸಿದ್ದ ಜನಸ್ತೋಮ ಹಂಪಿ ನೆಲದಲ್ಲಿ ಅರಳಿ ನಿಂತ ನಾಡಿನ ಕಲಾ ವೈಭವವನ್ನು ಕಂಡು ಖುಷಿಪಟ್ಟರು.

ಹಂಪಿ ಉತ್ಸವದಲ್ಲಿ ಕಾಟೇರನ ಭರ್ಜರಿ ಹವಾ: ಡಿ ಬಾಸ್ ಗುಂಗಿನಲ್ಲಿ ತೇಲಾಡಿದ ಅಭಿಮಾನಿಗಳು..!

ಹಂಪಿಯ ವಸ್ತುಪ್ರದರ್ಶನ, ಫಲಪುಷ್ಪ ಪ್ರದರ್ಶನ ಸೇರಿದಂತೆ ಎಲ್ಲೆಡೆ ಜನರು ಸೇರಿದ್ದರು. ಹಂಪಿಯಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು. ಪ್ರಧಾನ ವೇದಿಕೆಯಲ್ಲೂ ಜನಸಾಗರ ಹರಿದು ಬಂದ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲೆಡೆ ತೆರಳಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದರು. ಎಸ್ಪಿ ಶ್ರೀಹರಿಬಾಬು ಸ್ವತಃ ಪ್ರಧಾನ ವೇದಿಕೆಗೆ ಆಗಮಿಸಿ ಭದ್ರತೆ ಪರಿಶೀಲಿಸಿದರು.

ಹಂಪಿಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ, ರಸಮಂಜರಿ ಕಾರ್ಯಕ್ರಮವನ್ನು ವೀಕ್ಷಿಸಿದ ಜನರು ಹುಚ್ಚೆದ್ದು ಕುಣಿದರು. ಒಂದೆಡೆ ಗಾಯಕರು ಗಾನ ಸುಧೆ ಸುರಿಸಿದರೆ, ಜನರು ಕುಣಿದು ಕುಪ್ಪಳಿಸಿ ಏಂಜಾಯ್‌ ಮಾಡಿದರು.

ಗ್ರಾಮೀಣ ಕ್ರೀಡೆ ಬಲ:

ಹಂಪಿ ಉತ್ಸವದಲ್ಲಿ ಎರಡನೇ ದಿನ ಕುಸ್ತಿ ಪಂದ್ಯಾವಳಿ, ಗುಂಡು ಎತ್ತುವ ಸ್ಪರ್ಧೆ, ಬಂಡಿ ಗಾಲಿ ಜೋಡಿಸುವ ಸ್ಪರ್ಧೆಗಳು ನಡೆದವು. ಮಲಪನಗುಡಿ, ಹೊಸಮಲಪನಗುಡಿ, ಅನಂತಶಯನಗುಡಿ ಗ್ರಾಮಗಳ ಭಾಗದ ಜನರು ಆಗಮಿಸಿ ಹಂಪಿ ಉತ್ಸವವನ್ನು ಕಣ್ತುಂಬಿಕೊಂಡರು. ಶಾಸಕ ಎಚ್.ಆರ್. ಗವಿಯಪ್ಪನವರು ಸ್ವತಃ ಕುಸ್ತಿ ಪಂದ್ಯಾವಳಿಯನ್ನು ವೀಕ್ಷಿಸಿ ಪೈಲ್ವಾನ್‌ರನ್ನು ಹುರಿದುಂಬಿಸಿದರು. ಧಾರವಾಡ, ಬೆಳಗಾವಿ, ಗದಗ, ಶಿವಮೊಗ್ಗ, ಬಳ್ಳಾರಿ, ದಾವಣಗೆರೆ ವಿಜಯನಗರ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಕುಸ್ತಿಪಟುಗಳು ರೋಮಾಂಚನಗೊಳಿಸಿದರು.

ಹಂಪಿ ಉತ್ಸವದಲ್ಲಿ ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ ನವಣಿ, ರಾಗಿ, ಸಾಮೆ, ಅರ್ಕ, ಉದುಲು, ಬರಗು ಸೇರಿದಂತೆ ವಿವಿಧ ಸಿರಿಧಾನ್ಯಗಳ ಪಾಕವನ್ನು ಮಾಡಿ ಸ್ಪರ್ಧಾಳುಗಳು ಸೈ ಎನಿಸಿಕೊಂಡರು. ಹಂಪಿ ಉತ್ಸವದಲ್ಲಿ ಮಹಿಳಾ ವಿಚಾರ ಗೋಷ್ಠಿ, ಪುರಾತತ್ವ ವಿಚಾರ ಸಂಕಿರಣದಲ್ಲಿ ಪರಿಣತರು ವಿಷಯಗಳನ್ನು ಮಂಡಿಸಿದರು.

ಹಂಪಿ ಉತ್ಸವವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಪ್ರವಾಸಿಗರು ಉತ್ಸವದಲ್ಲಿ ಭಾಗಿಯಾಗಿ ಉತ್ಸಾಹ ತುಂಬಿದರು. ಅದರಲ್ಲೂ ವಿದೇಶಿ ಪ್ರವಾಸಿಗರು ಕೂಡ ಆಸಕ್ತಿಯಿಂದ ಉತ್ಸವವನ್ನು ಏಂಜಾಯ್‌ ಮಾಡಿದರು.

ಹಂಪಿಯಲ್ಲಿ ರಾತ್ರಿ 2.30ರ ವರೆಗೆ ನಡೆದ ಸಾಂಸ್ಕೃತಿಕ ಹಾಗೂ ರಸಮಂಜರಿ ಕಾರ್ಯಕ್ರಮಗಳನ್ನು ವೀಕ್ಷಿಸಿದ ಜನರು ಹಂಪಿ ಉತ್ಸವ ಜನೋತ್ಸವ ಎಂಬುದನ್ನು ಸಾಬೀತುಪಡಿಸಿದರು. ಹಂಪಿ ಉತ್ಸವದಲ್ಲಿ 10 ಲಕ್ಷ ಜನರು ಸೇರುವ ನಿರೀಕ್ಷೆ ಹೊಂದಿದ್ದ ಜಿಲ್ಲಾಡಳಿತಕ್ಕೆ ಎರಡು ದಿನಗಳಲ್ಲೇ ಉತ್ತಮ ಸ್ಪಂದನೆ ದೊರೆತಿದೆ. ಲಕ್ಷಾಂತರ ಜನರು ಹಂಪಿಯತ್ತ ಧಾವಿಸುತ್ತಿದ್ದಾರೆ.

ಹಾಗಾಗಿ ಪೊಲೀಸ್‌ ಭದ್ರತೆಗೆ ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗಳಿಂದಲೂ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಪೊಲೀಸ್‌ ಭದ್ರತೆ ಹೆಚ್ಚಳ ಮಾಡಲಾಗಿದೆ.

ಹಂಪಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿಯ ಮೇಲೆ ಕಣ್ಣಾಡಿಸಿದ ಪ್ರೇಕ್ಷಕರು, ಹಂಪಿ ಉತ್ಸವದಲ್ಲಿ ಯಾವ ಕಲಾವಿದರು ಯಾವ ವೇದಿಕೆಯಲ್ಲಿ ಇರುತ್ತಾರೆ. ಅತ್ತ ಕಡೆ ಧಾವಿಸಿದರು. ಅದರಲ್ಲೂ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ, ಶಾಸ್ತ್ರೀಯ ಸಂಗೀತ ಆಲಿಸಲು ಕೂಡ ಪ್ರೇಕ್ಷಕರು ತಮಗೆ ಇಷ್ಟಾನು ಇಷ್ಟ ವೇದಿಕೆಗಳತ್ತ ಧಾವಿಸಿದ್ದು ಕಂಡುಬಂದಿತು. ಅದರಲ್ಲೂ ಪ್ರಧಾನ ವೇದಿಕೆಯತ್ತಲೇ ಯುವಕರ ಗುಂಪು ತಂಡೋಪತಂಡವಾಗಿ ಆಗಮಿಸಿ ಉತ್ಸವ ಕಳೆಗಟ್ಟಿದ್ದರು.

ಹಂಪಿ ಉತ್ಸವದಲ್ಲಿ ಹೆಜ್ಜೆ ಹೆಜ್ಜೆಗೂ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದ ಜಿಲ್ಲಾಡಳಿತಕ್ಕೆ ಜನರು ಪ್ರಶಂಸಿಸಿದ್ದಾರೆ. ಅದರಲ್ಲೂ 100 ಎಕರೆ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿರುವ ಜಿಲ್ಲಾಡಳಿತದ ಕಾರ್ಯಕ್ಕೆ ಜನರು ಶಹಬ್ಬಾಸ್ ಗಿರಿ ನೀಡಿದರು.

 

ಇಡೀ ಹಂಪಿ ಹೆಲಿಕಾಫ್ಟರ್‌ನಲ್ಲಿ ಸುತ್ತಬಹುದೀಗ ; ಬೆಲೆ ಎಷ್ಟು ಇಲ್ಲಿದೆ ನೋಡಿ!

ಜಾಮ್‌, ಜಾಮ್‌ ಎಲ್ನೋಡಿ ಜಾಮ್‌..

ಹಂಪಿಯಲ್ಲಿ ಜಾಮ್‌,. ಜಾಮ್‌ ಎಲ್ನೋಡಿ ಜಾಮ್‌ ಎಂಬಂತೆ ಹಂಪಿಯಿಂದ ಕಮಲಾಪುರ ಮಾರ್ಗ ಹಾಗೂ ಹೊಸಪೇಟೆಯಿಂದ ಕಡ್ಡಿರಾಂಪುರ ಮಾರ್ಗ, ಹಂಪಿಯಿಂದ ಕಡ್ಡಿರಾಂಪುರ ಮಾರ್ಗದಲ್ಲೂ ಜಾಮ್‌ ಉಂಟಾಗಿತ್ತು. ಪೊಲೀಸರ ವಾಹನಗಳು, ಆ್ಯಂಬುಲೆನ್ಸ್‌ ಕೂಡ ಜಾಮ್‌ನಲ್ಲಿ ಸಿಕ್ಕು ಹಾಕಿಕೊಂಡಿದ್ದು ಕಂಡುಬಂತು.

Follow Us:
Download App:
  • android
  • ios