ಹಂಪಿ ಕಂಬ ಬೀಳಿಸಿದವರಿಗೆ ಎತ್ತಿ ನಿಲ್ಲಿಸುವ ಶಿಕ್ಷೆ
ಹಂಪಿಯಲ್ಲಿ ಕಂಬವನ್ನು ಉರುಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಪೇಟೆ ನ್ಯಾಯಾಲಯವು ಅಪರಾಧಿಗಳಿಗೆ ವಿಶೇಷ ಶಿಕ್ಷೆಯೊಂದನ್ನು ನೀಡಿದೆ.
ಬೆಂಗಳೂರು : ಹಂಪಿಯ ವಿಷ್ಣು ದೇವಾಲಯ ಬಳಿಯ ಕಂಬಗಳನ್ನು ಉರುಳಿಸಿದ ಪ್ರಕರಣದಲ್ಲಿನ ನಾಲ್ವರು ಆರೋಪಿಗಳಿಗೆ ಹೊಸಪೇಟೆಯ ಜೆಎಂಎಫ್‌ಸಿ ನ್ಯಾಯಾಲಯ ತಲಾ 70 ಸಾವಿರ ದಂಡ ವಿಧಿಸಿದೆ. ಜೊತೆಗೆ ಆರೋಪಿಗಳು ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ಹಾಗೂ ಹಂಪಿ ಪಿಎಸ್‌ಐ ಮುಂದೆಯೇ ಕಂಬಗಳನ್ನು ಮೊದಲಿದ್ದ ಜಾಗದಲ್ಲಿಯೇ ನಿಲ್ಲಿಸಬೇಕು, ಬಳಿ ಕವಷ್ಟೇ ಅವರನ್ನು ನ್ಯಾಯಾಂಗ ಬಂಧನದಿಂದ ಬಿಡುಗಡೆ ಮಾಡಬೇಕು ಎಂದು ಆದೇಶಿಸಿದೆ.
ಜೆಎಂಎಫ್‌ಸಿ ನ್ಯಾಯಾಧೀಶರಾದ ಪೂರ್ಣಿಮಾ ಯಾದವ್ ಅವರು ಶುಕ್ರವಾರ ಈ ತೀರ್ಪು ಪ್ರಕಟಿಸಿದ್ದಾರೆ. ಅಂತೆಯೇ ಆರೋಪಿಗಳಾದ ಮಧ್ಯಪ್ರದೇಶ ಮೂಲದ ಆಯುಷ್ ಹಾಗೂ ಬಿಹಾರ ಮೂಲದವರಾದ ರಾಜಾಬಾಬು ಚೌಧರಿ, ರಾಜ್ ಆರ್ಯನ್ ಹಾಗೂ ರಾಜೇಶ್ ಕುಮಾರ್ ಅವರು ಪುರಾತತ್ವ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಶುಕ್ರವಾರವೇ ಕಂಬವನ್ನು ಮೊದಲಿದ್ದ ಸ್ಥಳದಲ್ಲಿ ನಿಲ್ಲಿಸಿದ ಬಳಿಕ ಆರೋಪಿಗಳನ್ನು ಬಿಡುಗಡೆ ಗೊಳಿಸಲಾಗಿದೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಗೀತಾ ಮಿರ್ಜಾಕರ್ ವಾದಿಸಿದ್ದರು. ಹಂಪಿಯ ವಿಷ್ಣು ದೇವಾಲ ಯದ ಬಳಿಯ ಸ್ತಂಭವನ್ನು ಕಿಡಿಗೇಡಿಗಳು ಉರುಳಿಸಿದ ಘಟನೆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಫೆ.8 ರಂದು ವಶಕ್ಕೆ ಪಡೆದಿದ್ದ ಜಿಲ್ಲಾ ಪೊಲೀಸರು, ತನಿಖಾ ಪ್ರಕ್ರಿಯೆ ಪೂರ್ಣಗೊಳಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಹಂಪಿ ಪರಿಸರದಲ್ಲಿ ಕಟ್ಟೆಚ್ಚರ: ವಿಷ್ಣು ದೇವಾಲಯದ ಬಳಿಯ ಕಂಬ ಉರುಳಿಸಿದ ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿರುವ ಭಾರತೀಯ ಪುರಾತತ್ವ ಇಲಾಖೆ ಹಂಪಿ ಪರಿಸರದ ಪ್ರಮುಖ ದೇವಾಲಯಗಳು ಹಾಗೂ ಬೀದಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ನಿರ್ಧಾರ ಕೈಗೊಂಡಿದೆ.