ರಾಜ್ಯದಲ್ಲಿ ಅಗತ್ಯ ಸೇವೆಗಳಡಿ ಪ್ರತಿನಿತ್ಯ ವಾಣಿಜ್ಯ ಬಳಕೆಗೆ 9,544 ಎಲ್ಪಿಜಿ ಸಿಲಿಂಡರ್ ಪೂರೈಸಲು ಕ್ರಮ ಕೈಗೊಂಡಿದ್ದೇವೆ. ಆದರೆ, ಬೇಡಿಕೆ ತಕ್ಕಂತೆ ಹೋಟೆಲ್‌ಗಳಿಗೆ ಸಿಲಿಂಡರ್ ಪೂರೈಸಲು ಸಾಧ್ಯವಿಲ್ಲ. ದಿನಕ್ಕೆ ಒಂದು ಸಾವಿರ ಸಿಲಿಂಡರ್ ಪೂರೈಕೆ ಮಾಡಲಾಗುವುದು ಎಂದು ಆಹಾರ ಸಚಿವ ಮುನಿಯಪ್ಪ ಹೇಳಿದ್ದಾರೆ.

ಬೆಂಗಳೂರು : ರಾಜ್ಯದಲ್ಲಿ ಅಗತ್ಯ ಸೇವೆಗಳಡಿ ಪ್ರತಿನಿತ್ಯ ವಾಣಿಜ್ಯ ಬಳಕೆಗೆ 9,544 ಎಲ್ಪಿಜಿ ಸಿಲಿಂಡರ್ ಪೂರೈಸಲು ಕ್ರಮ ಕೈಗೊಂಡಿದ್ದೇವೆ. ಆದರೆ, ಬೇಡಿಕೆ ತಕ್ಕಂತೆ ಹೋಟೆಲ್‌ಗಳಿಗೆ ಸಿಲಿಂಡರ್ ಪೂರೈಸಲು ಸಾಧ್ಯವಿಲ್ಲ. ದಿನಕ್ಕೆ ಒಂದು ಸಾವಿರ ಸಿಲಿಂಡರ್ ಪೂರೈಕೆ ಮಾಡಲಾಗುವುದು ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.

ಸೋಮವಾರ ಎಲ್ಪಿಜಿ ಸಿಲಿಂಡರ್ ಸಮಸ್ಯೆ ಕುರಿತು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿ. (ಐಒಸಿಎಲ್), ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ.(ಎಚ್‌ಪಿಸಿಎಲ್), ಭಾರತ್ ಪೆಟ್ರೋಲಿಯಂ ಕಾರ್ಫೋರೇಷನ್ ಲಿ.( ಬಿಪಿಸಿಎಲ್) ಹಾಗೂ ಗೇಲ್‌ನ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಸಚಿವರು ಈ ಮಾಹಿತಿ ನೀಡಿದರು.

ಕೇಂದ್ರ ಸರ್ಕಾರ ಐದು ಹಂತಗಳಲ್ಲಿ ವಿಂಗಡಿಸಿ ಸಿಲಿಂಡರ್‌ ಸರಬರಾಜು ಮಾಡುವಂತೆ ಸೂಚನೆ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಶೈಕ್ಷಣಿಕ ಸಂಸ್ಥೆ, ವಿದ್ಯಾರ್ಥಿ ನಿಲಯ ಮತ್ತು ಆಸ್ಪತ್ರೆಗಳಿಗೆ ಪ್ರತಿ ನಿತ್ಯ 4,200, ಇಂದಿರಾ ಕ್ಯಾಂಟೀನ್, ರೈಲ್ವೆ, ಬಸ್ ನಿಲ್ದಾಣಗಳು, ನಂದಿನಿ ಡೈರಿ, ಸರ್ಕಾರಿ ಸಂಸ್ಥೆಗಳಿಗೆ 1,200 ಮತ್ತು ರೆಸ್ಟೋರೆಂಟ್, ಡಾಬಾ, ಹೊಟೇಲ್‌ಗಳಿಗೆ 1 ಸಾವಿರ ಸಿಲಿಂಡರ್ ಪೂರೈಕೆ ಮಾಡಲಾಗುವುದು ಎಂದರು.

ಕೃಷಿ ಫಾರ್ಮ್‌, ಮೀನುಗಾರರಿಗೆ, ಕೋಳಿ ಸಾಕಾಣಿಕೆ ಮತ್ತು ಕಾರ್ಪೋರೇಟ್ ಕ್ಯಾಂಟೀನ್‌ಗಳಿಗೆ 500, ಇತರೆ ವರ್ಗಕ್ಕೆ 100 ಸಿಲಿಂಡರ್ ಪೂರೈಕೆಗೆ ರಾಜ್ಯ ಸರ್ಕಾರ ತೀರ್ಮಾನಿಸಿದೆ. ಪ್ರತಿದಿನಕ್ಕೆ 44 ಸಾವಿರ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೇಕಿತ್ತು. ಆದರೆ, 9,544 ಸಿಲಿಂಡರ್ ವಿತರಿಸಲಾಗುವುದು. ಗ್ರಾಹಕರ ಬದಲು ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿರುವವರ ಅನುಕೂಲಕ್ಕಾಗಿ ಸಿಲಿಂಡರ್ ಪೂರೈಸಲಾಗುತ್ತಿದೆ. ಹೋಟೆಲ್ ಮಾಲೀಕರು ಎಲೆಕ್ಟ್ರಿಕ್ ಸ್ಟೌವ್ ಉಪಯೋಗಿಸಬೇಕು ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ಸಿಲಿಂಡರ್ ಸಮಸ್ಯೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡನೇ ಬಾರಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ದಿನದಿಂದ ದಿನಕ್ಕೆ ಪರಿಸ್ಥಿತಿ ಗಂಭೀರವಾಗುತ್ತಿದೆ. ಕೇಂದ್ರ ಸರ್ಕಾರ ಹೆಚ್ಚಿನ ಕ್ರಮ ತೆಗದುಕೊಳ್ಳಬೇಕು. ತೈಲ ಕಂಪನಿಗಳ ಜೊತೆ ಇಲಾಖೆ ಅಧಿಕಾರಿಗಳು ಪ್ರತಿ ನಿತ್ಯ ಆಗುಹೋಗುಗಳ ಬಗ್ಗೆ ನಿಗಾವಹಿಸುತ್ತಿದ್ದಾರೆ. ರಾಜ್ಯದಲ್ಲಿ ಗೃಹ ಬಳಕೆ ಅನಿಲ ವಿತರಣೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಬೇಡಿಕೆ ತಕ್ಕಂತೆ ಸಿಲಿಂಡರ್ ವಿತರಿಸಲಾಗುತ್ತಿದೆ. ಗ್ರಾಹಕರು ಆತಂಕಕ್ಕೆ ಒಳಗಾಗಬಾರದು. ಪರಿಸ್ಥಿತಿ ಗಂಭೀರವಿದ್ದಾಗ ಮಿತವ್ಯಯ ಮಾಡಬೇಕು. ಕಾಳಸಂತೆಯಲ್ಲಿ ಅಕ್ರಮವಾಗಿ ಗ್ಯಾಸ್ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಆಹಾರ ಇಲಾಖೆ ಕಾರ್ಯದರ್ಶಿ ಕನಗವಲ್ಲಿ, ಆಯುಕ್ತ ರವಿಕುಮಾರ್, ಅನಿಲ ಕಂಪನಿಗಳ ಅಧಿಕಾರಿಗಳಾದ ನೀರಾ ಸಿಂಗ್, ಅರುಂದಿ ಗೊಯಲ್, ದಿವ್ಯ, ಮುರಳಿ ಚಾರ್, ಸುಬ್ರತ್ ಚಟರ್ಜಿ ಮತ್ತಿತರರಿದ್ದರು.

181.34 ಮೆಟ್ರಿಕ್‌ ಟನ್‌ ಎಲ್ಪಿಜಿ ಪೂರೈಕೆ

ರಾಜ್ಯದಲ್ಲಿ ದಿನಕ್ಕೆ 850 ಮೆಟ್ರಿಕ್ ಟನ್ ಎಲ್ಪಿಜಿ ಬೇಡಿಕೆ ಇದ್ದು, ಸದ್ಯಕ್ಕೆ 181.34 ಮೆ.ಟನ್ ಪೂರೈಕೆಯಾಗುತ್ತಿದೆ. ಇದರಲ್ಲಿ 48.34 ಮೆ.ಟನ್ ಆಟೋ ಎಲ್ಪಿಜಿ ಪೂರೈಕೆಯಾಗುತ್ತಿದೆ. ಅಂತೆಯೇ ದಿನಕ್ಕೆ 9,544 ಕಮರ್ಷಿಯಲ್ ಸಿಲಿಂಡರ್ ಮಾತ್ರ ಪೂರೈಕೆಯಾಗುತ್ತಿದ್ದು, ಇಂಡಿಯನ್ ಆಯಿಲ್‌ನಿಂದ 2 ಸಾವಿರ, ಭಾರತ್ ಪೆಟ್ರೋಲಿಯಂನಿಂದ 2,500 ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂನಿಂದ 2500 ಸಿಲಿಂಡರ್ ಸರಬರಾಜು ಮಾಡಲಾಗಿದೆ. ಆಸ್ಪತ್ರೆ, ಶಿಕ್ಷಣ ಸಂಸ್ಥೆ, ಹಾಸ್ಟೆಲ್‌ಗಳಿಗೆ ಶೇ.100 ಗ್ಯಾಸ್ ಒದಗಿಸಲಾಗುತ್ತಿದೆ ಎಂದರು.

40000 ಹೋಟೆಲ್‌ಗಳಿಗೆ 1000 ಸಿಲಿಂಡರ್‌ ಸಾಕೆ?

ರಾಜ್ಯದಲ್ಲಿ 40 ಸಾವಿರ ಹೋಟೆಲ್‌ಗಳಿವೆ. ಆದರೆ ಸರ್ಕಾರ ದಿನವೊಂದಕ್ಕೆ ಒಂದು ಸಾವಿರ ಸಿಲಿಂಡರ್‌ ಪೂರೈಸುವುದಾಗಿ ಹೇಳುತ್ತಿದೆ. ಅದು ಯಾವುದಕ್ಕೂ ಸಾಲದು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾಗುತ್ತೇವೆ. ಅಗತ್ಯಬಿದ್ದರೆ ಪೆಟ್ರೋಲಿಯಂ ಸಚಿವರನ್ನೂ ಭೇಟಿ ಮಾಡಲಾಗುವುದು.

- ಪಿ.ಸಿ.ರಾವ್‌, ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ

ಹಳ್ಳಿಗಳಲ್ಲಿ 45 ದಿನ, ಸಿಟಿಗಳಲ್ಲಿ 28 ದಿನಕ್ಕೆ ಒಂದೇ ಸಿಲಿಂಡರ್‌

ಗ್ರಾಮೀಣ ಭಾಗದಲ್ಲಿ 45 ದಿನಕ್ಕೆ, ನಗರ ಪ್ರದೇಶಗಳಲ್ಲಿ 28 ದಿನಕ್ಕೆ ಒಂದು ಸಿಲಿಂಡರ್ ವಿತರಣೆ ಮಾಡಲಾಗುವುದು ಎಂದು ಸಚಿವ ಕೆ.ಎಚ್‌.ಮುನಿಯಪ್ಪ ಅವರು ತಿಳಿಸಿದ್ದಾರೆ.

ಅಡುಗೆ ಅನಿಲ ಹೊತ್ತ ಮತ್ತೊಂದು ಹಡಗು ಭಾರತಕ್ಕೆ ಆಗಮನ

ಅಹಮದಾಬಾದ್‌: ದೇಶದಲ್ಲಿ ವಾಣಿಜ್ಯ ಸಿಲಿಂಡರ್‌ ಕೊರತೆ ನಡುವೆಯೇ 45 ಸಾವಿರ ಟನ್‌ ಅಡುಗೆ ಅನಿಲ ಹೊತ್ತ ‘ಶಿವಾಲಿಕ್‌’ ಹಡಗು ಗುಜರಾತಿನ ಮುಂದ್ರಾ ಬಂದರನ್ನು ತಲುಪಿದೆ. ನಂದಾದೇವಿ ಎಂಬ ಇನ್ನೊಂದು ಹಡಗು ಮಂಗಳವಾರ ಭಾರತ ತಲುಪಲಿದೆ. ಎರಡೂ ನೌಕೆಗಳಲ್ಲಿ ಒಟ್ಟು 92700 ಮೆಟ್ರಿಕ್‌ ಟನ್‌ ಎಲ್‌ಪಿಜಿ ಇದೆ. ಇದನ್ನು ಬಳಸಿ ಗೃಹ ಬಳಕೆಯ 14.2 ಕೆಜಿ ತೂಕದ 68 ಲಕ್ಷ ಸಿಲಿಂಡರ್‌ಗಳನ್ನು ಭರ್ತಿ ಮಾಡಬಹುದು. ಸದ್ಯ ದೇಶದಲ್ಲಿ ಆನ್‌ಲೈನ್ ಮೂಲಕ ನಿತ್ಯ 75-80 ಲಕ್ಷ ಎಲ್‌ಪಿಜಿ ಬುಕ್‌ ಮಾಡಲಾಗುತ್ತಿದೆ.