ಚೈತ್ರಾ ಬಿಜೆಪಿ ಟಿಕೆಟ್ ಡೀಲ್ ಕೇಸ್: ವಂಚನೆ ದುಡ್ಡಲ್ಲಿ 26 ಲಕ್ಷ ರು. ಕಾರು ಖರೀದಿಸಿದ್ದ ಹಾಲಶ್ರೀ
ಉದ್ಯಮಿ ಗೋವಿಂದ ಪೂಜಾರಿ ಅವರಿಂದ 1.5 ಕೋಟಿ ರು ಹಣವನ್ನು ಹಾಲಶ್ರೀ ಪಡೆದಿದ್ದರು. ಈ ಹಣದಲ್ಲಿ 26 ಲಕ್ಷ ರು. ವ್ಯಯಿಸಿ ಹೊಸ ಇನ್ನೋವಾ ಕಾರನ್ನು ಸ್ವಾಮೀಜಿ ಕೊಂಡಿದ್ದರು. ಆ ಕಾರನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದ ಸಿಸಿಬಿ ಅಧಿಕಾರಿಗಳು
ಬೆಂಗಳೂರು(ಸೆ.23): ಬಿಜೆಪಿ ಟೆಕೆಟ್ ಹೆಸರಿನಲ್ಲಿ ಉದ್ಯಮಿಗೆ ವಂಚಿಸಿದ ಸಂಪಾದಿಸಿದ ಹಣದಲ್ಲಿ 26 ಲಕ್ಷ ರು. ಮೌಲ್ಯದ ಐಷಾರಾಮಿ ಇನ್ನೋವಾ ಕಾರನ್ನು ಹಾಲವೀರಪ್ಪಜ್ಜ ಸ್ವಾಮೀಜಿ ಅಲಿಯಾಸ್ ಹಾಲಶ್ರೀ ಖರೀದಿಸಿದ್ದರು ಎಂಬ ಸಂಗತಿ ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಉದ್ಯಮಿ ಗೋವಿಂದ ಪೂಜಾರಿ ಅವರಿಂದ 1.5 ಕೋಟಿ ರು ಹಣವನ್ನು ಹಾಲಶ್ರೀ ಪಡೆದಿದ್ದರು. ಈ ಹಣದಲ್ಲಿ 26 ಲಕ್ಷ ರು. ವ್ಯಯಿಸಿ ಹೊಸ ಇನ್ನೋವಾ ಕಾರನ್ನು ಸ್ವಾಮೀಜಿ ಕೊಂಡಿದ್ದರು. ಆ ಕಾರನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಚೈತ್ರಾ ಕುಂದಾಪುರ ನಮ್ಮವಳಲ್ಲ ಎಂದು ಕೈಬಿಟ್ಟ ವಿಶ್ವ ಹಿಂದೂ ಪರಿಷತ್
ವಂಚನೆಯ ಶೇ.88 ರಷ್ಟು ಹಣ ಜಪ್ತಿ:
ಈ ವಂಚನೆ ಕೃತ್ಯದ ತನಿಖೆ ನಡೆಸುತ್ತಿರುವ ಸಿಸಿಬಿ ಮಹಿಳಾ ರಕ್ಷಣಾ ದಳದ ಎಸಿಪಿ ರೀನಾ ಸುವರ್ಣ ನೇತೃತ್ವದ ತಂಡವು, ಬಿಜೆಪಿ ಟಿಕೆಟ್ ಆಸೆಗೆ ಬಿದ್ದು ಉದ್ಯಮಿ ಕಳೆದುಕೊಂಡಿದ್ದ 5 ಕೋಟಿ ರು ಹಣದಲ್ಲಿ ಶೇ.88ರಷ್ಟು ಹಣವನ್ನು ಆರೋಪಿಗಳಿಂದ ವಸೂಲಿ ಮಾಡುವಲ್ಲಿ ಯಶಸ್ಸು ಕಂಡಿದೆ.
ಉಡುಪಿಯಲ್ಲಿ ಈ ಪ್ರಕರಣದ ಮೊದಲ ಆರೋಪಿ ಚೈತ್ರಾ ಕುಂದಾಪುರ ಸೇರಿದ 81 ಲಕ್ಷ ರು ನಗದು, 23 ಲಕ್ಷ ರು ಮೌಲ್ಯದ ಚಿನ್ನಾಭರಣ, ಸಹಕಾರಿ ಬ್ಯಾಂಕ್‌ನಲ್ಲಿದ್ದ 1.08 ಕೋಟಿ ರು ನಿಶ್ಚಿತ ಠೇವಣಿ (ಎಫ್‌ಡಿ), 12 ಲಕ್ಷ ರು ಬೆಲೆಬಾಳುವ ಕಿಯಾ ಕಾರನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇನ್ನುಳಿದಂತೆ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಗನ್ ಕಡೂರು, ಧನರಾಜ್ ಹಾಗೂ ರಮೇಶ್ ಬಳಿ 26 ಲಕ್ಷ ರು ಹಣ ಸಿಕ್ಕಿದೆ. ಅದೇ ರೀತಿ ಹಾಲಶ್ರೀ ಬಳಿ 56 ಲಕ್ಷ ರು ನಗದು ಹಾಗೂ 25 ಲಕ್ಷ ರು ಮೌಲ್ಯದ ಕಾರು ಪತ್ತೆಯಾಗಿದೆ. ಅಲ್ಲದೆ ಹಾಲಶ್ರೀ ಆಪ್ತರ ಬಳಿ 44 ಲಕ್ಷ ರು ಇದ್ದು, ಆ ಹಣವನ್ನು ಶನಿವಾರ ಜಪ್ತಿ ಮಾಡುತ್ತೇವೆ. ಹೀಗಾಗಿ ಒಟ್ಟಾರೆ 4.11 ಕೋಟಿ ಹಣ ಜಪ್ತಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಜೆಪಿ ಟಿಕೆಟ್ ವಂಚನೆ ಕೇಸ್: ಹಾಲಶ್ರೀ ಮಠದಿಂದ 56 ಲಕ್ಷ ನಗದು ವಶ
ಕಸ್ಟಡಿ ಅಂತ್ಯ: ಮತ್ತೆ ಸಿಸಿಬಿ ವಶಕ್ಕೆ ಚೈತ್ರಾ ಇಲ್ಲ?
ಪೊಲೀಸ್ ಕಸ್ಟಡಿ ಅಂತ್ಯ ಹಿನ್ನಲೆಯಲ್ಲಿ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ವಂಚನೆ ಪ್ರಕರಣದ ಆರೋಪಿಗಳಾದ ಹಿಂದೂ ಪರ ಸಂಘಟನೆಯ ಕಾರ್ಯಕರ್ತೆ ಚೈತ್ರಾ ಕುಂದಾಪುರ ಹಾಗೂ ಆಕೆಯ ಐವರು ಸಹಚರರನ್ನು ಶನಿವಾರ ಸಿಸಿಬಿ ಹಾಜರುಪಡಿಸಲಿದೆ. ಕಳೆದ ಹತ್ತು ದಿನಗಳಿಂದ ಚೈತ್ರಾ ತಂಡವನ್ನು ಸಿಸಿಬಿ ವಿಚಾರಣೆ ನಡೆಸಿತ್ತು. ಪ್ರಕರಣದ ತನಿಖೆ ಭಾಗಶಃ ಮುಗಿದ ಹಿನ್ನಲೆಯಲ್ಲಿ ಆರೋಪಿಗಳನ್ನು ಮತ್ತೆ ವಶಕ್ಕೆ ಪಡೆಯಲು ನ್ಯಾಯಾಲಯಕ್ಕೆ ಮನವಿ ಸಲ್ಲಿಸದಿರಲು ಸಿಸಿಬಿ ಅಧಿಕಾರಿಗಳು ನಿರ್ಧರಿಸಿದ್ದಾರೆ. ಹೀಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಚೈತ್ರಾ ತಂಡ ಸೇರುವ ಸಾಧ್ಯತೆಗಳಿವೆ.
ಹಾಲಶ್ರೀ-ಚೈತ್ರಾ ಮುಖಾಮುಖಿ ವಿಚಾರಣೆ
ಇನ್ನು ವಂಚನೆ ಪ್ರಕರಣದ ಸಂಬಂಧ ಹಾಲಶ್ರೀ ಹಾಗೂ ಚೈತ್ರಾ ಕುಂದಾಪುರ ಸೇರಿದಂತೆ ಎಲ್ಲ 8 ಆರೋಪಿಗಳನ್ನು ಮುಖಾಮುಖಿ ಕೂರಿಸಿ ಸಿಸಿಬಿ ವಿಚಾರಣೆಗೊಳಪಡಿಸಿ ಹೇಳಿಕೆ ಪಡೆದಿದೆ ಎಂದು ತಿಳಿದು ಬಂದಿದೆ.
ಈ ವಂಚನೆ ಕೃತ್ಯದಲ್ಲಿ ತಮ್ಮ ಪಾತ್ರಗಳ ಕುರಿತು ಪ್ರತ್ಯೇಕವಾಗಿ ಸಿಸಿಬಿ ಮುಂದೆ ಆರೋಪಿಗಳು ಹೇಳಿದ್ದರು. ಹೀಗಾಗಿ ಸಮಗ್ರವಾಗಿ ಕೃತ್ಯದ ಮಾಹಿತಿ ಪಡೆಯಲು ಎಲ್ಲರನ್ನು ಒಂದೆಡೆ ಸೇರಿಸಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.