ಬೆಂಗಳೂರು (ಸೆ.11): ಮಾದಕ ವಸ್ತು ಮಾರಾಟದ ಜಾಲದಲ್ಲಿ ಸಿಲುಕಿರುವ ಕನ್ನಡ ಚಲನಚಿತ್ರ ನಟಿಯರು ಹಾಗೂ ಪೇಜ್‌ ತ್ರಿ ಪಾರ್ಟಿ ಆಯೋಜಕರ ಅಮಲಿಗೆ ಅವರ ತಲೆಗೂದಲೇ ಪ್ರಮುಖ ಪುರಾವೆಯಾಗಲಿದೆ ಎಂಬ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.

ಈ ಪ್ರಕರಣ ಸಂಬಂಧ ಮಲ್ಲೇಶ್ವರ ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಸೇರಿದಂತೆ ಆರು ಆರೋಪಿಗಳಿಗೆ ಉದ್ದೀಪನಾ ಮದ್ದು ಸೇವನೆ ಪರೀಕ್ಷೆ (ಡೋಪಿಂಗ್‌ ಟೆಸ್ಟ್‌) ನಡೆಸಲಾಗಿದೆ. ಈ ವೇಳೆ ಆರೋಪಿಗಳ ತಲೆಗೂದಲು ಸಂಗ್ರಹಿಸಲಾಗಿದ್ದು, ಅವರು ಮಾದಕ ವ್ಯಸನಿಗಳೇ ಅಥವಾ ಅಲ್ಲವೇ ಎಂಬುದು ಖಚಿತಪಡಿಸಿಕೊಳ್ಳಲು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌)ಕ್ಕೆ ಕೂದಲು ತಪಾಸಣೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಡ್ರಗ್ಸ್ ಕೇಸಿಗೆ ಇ.ಡಿ. ಪ್ರವೇಶ:: ಹವಾಲಾ ಹಣದ ಮೇಲೂ ಕಣ್ಣು..!

ಸಾಮಾನ್ಯವಾಗಿ ಕ್ರೀಡಾಪಟುಗಳು ಹಾಗೂ ರೇಸ್‌ನಲ್ಲಿ ಪಾಲ್ಗೊಳ್ಳುವ ಕುದುರೆಗಳಿಗೆ ಉದ್ದೀಪನಾ ಮದ್ದು ಸೇವನೆ ಪರೀಕ್ಷೆ ನಡೆಸಲಾಗುತ್ತಿತ್ತು. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮಾದಕ ವಸ್ತು ದಂಧೆ ಕೃತ್ಯದ ಆರೋಪಿಗಳಿಗೆ ಈ ಪರೀಕ್ಷೆ ನಡೆದಿದೆ. ಕೃತ್ಯ ರುಜುವಾತುಪಡಿಸಲು ವೈಜ್ಞಾನಿಕವಾಗಿ ಕೂದಲು ಪ್ರಬಲ ಸಾಕ್ಷ್ಯವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೂದಲು ಹೇಗೆ ಸಾಕ್ಷ್ಯವಾಗುತ್ತದೆ?:

ಕ್ರೀಡಾಪಟುಗಳು ಶಕ್ತಿ ವೃದ್ಧಿಸಲು ತೆಗೆದುಕೊಳ್ಳುವ ಉದ್ದೀಪನಾ ಮದ್ದಿಗೂ ಮಾದಕ ವ್ಯಸನಿಗಳಿಗೂ ವ್ಯತ್ಯಾಸವಿದೆ. ಕ್ರೀಡಾಪಟುಗಳು ಸ್ಟಿರಾಯ್ಡ್‌ ಇತ್ಯಾದಿ ಡ್ರಗ್ಸ್‌ಗಳನ್ನು ಸೇವಿಸುತ್ತಾರೆ. ಕ್ರೀಡಾಕೂಟದ ಆರಂಭಕ್ಕೂ ಮುನ್ನ ಡೋಪಿಂಗ್‌ ಪರೀಕ್ಷೆ ನಡೆಸಲಾಗುತ್ತದೆ. ಕ್ರೀಡಾಪಟುಗಳ ದೇಹದಲ್ಲಿ ಉದ್ದೀಪನಾ ಮದ್ದಿನ ಅಂಶ 2-3 ದಿನಗಳ ಕಾಲ ಉಳಿಯಲಿದೆ. ಆದರೆ ಮಾದಕ ವ್ಯಸನಿಗಳು ಸೇವಿಸುವ ಡ್ರಗ್ಸ್‌ಗಳ ಅಂಶವು ಅವರ ದೇಹದಲ್ಲಿ ಸುಮಾರು 1 ವರ್ಷದವರೆಗೆ ಇರುತ್ತದೆ. ರಕ್ತ, ಮೂತ್ರ, ಉಗುರು ಹಾಗೂ ತಲೆಗೂದಲು ಪರೀಕ್ಷೆ ಮೂಲಕ ಡ್ರಗ್ಸ್‌ ಪತ್ತೆ ಮಾಡಬಹುದು ಎಂದು ಖಾಸಗಿ ಎಫ್‌ಎಸ್‌ಎಲ್‌ ತಜ್ಞ ಫಣೀಂದ್ರ ಹೇಳುತ್ತಾರೆ.

ಮಾದಕ ವಸ್ತು ಮಾರಾಟ: ನೈಜೀರಿಯಾ ಪೆಡ್ಲ​ರ್ಸ್‌ ಸೆರೆ ...

ರಕ್ತ ಹಾಗೂ ಮೂತ್ರದಲ್ಲಿ ಮಾದಕ ವಸ್ತು ಸೇವಿಸಿ 48 ತಾಸಿನಲ್ಲಿ ಡ್ರಗ್ಸ್‌ ಅಂಶ ಪತ್ತೆಯಾಗಲಿದೆÜ. ಆದರೆ ತಲೆಗೂದಲಿನಲ್ಲಿ 6 ತಿಂಗಳಿಂದ ವರ್ಷದವರೆಗೆ ಡ್ರಗ್ಸ್‌ ಅಂಶ ಸಿಗಲಿದೆ. ಇದಕ್ಕೆ ವೈಜ್ಞಾನಿಕ ಭಾಷೆಯಲ್ಲಿ ‘ಹೇರ್‌ ಪೊಲಿಕ್‌’ ಪರೀಕ್ಷೆ ಎನ್ನುತ್ತಾರೆ. ಈ ವೈಜ್ಞಾನಿಕ ವರದಿಯನ್ನು ಸಾಕ್ಷ್ಯವಾಗಿ ನ್ಯಾಯಾಲಯ ಪರಿಗಣಿಸಬಹುದು ಎಂದು ಫಣೀಂದ್ರ ಹೇಳಿದ್ದಾರೆ.

ಏನಿದು ಹೇರ್‌ ಪೊಲಿಕ್‌ ಪರೀಕ್ಷೆ?:

ಮಾದಕ ವ್ಯಸನಿ, ಡ್ರಗ್ಸ್‌ ಸೇವಿಸಿದ ಒಂದೂವರೆ ತಿಂಗಳ ಬಳಿಕ ಆತನ ತಲೆಗೂದಲಿನ ಬೇರಿಗೆ ಡ್ರಗ್ಸ್‌ ಅಂಶ ಸೇರುತ್ತದೆ. ಕೂದಲಿನ ಬೇರಿನಲ್ಲಿ ಮಾದಕ ವಸ್ತುವಿನ ಕಣಗಳು ಲೀನವಾಗುತ್ತವೆ. ಅಲ್ಲದೆ, ಆತ ಸೇವಿಸಿದ ಡ್ರಗ್ಸ್‌ಗಳ ಕಣಗಳೇ ವ್ಯಸನಿಯ ತಲೆಗೂದಲಿನ ಬೇರಿನಲ್ಲಿ ಸಿಗುತ್ತವೆ. ಉದಾಹರಣೆ ಕೊಕೇನ್‌ ಅಥವಾ ಎಂಡಿಎಂಎ ಸೇವಿಸಿದರೆ ಅದೇ ಅಂಶವೇ ತಲೆಗೂದಲಿನಲ್ಲಿ ಪತ್ತೆಯಾಗಲಿದೆ. ಆತನ ತಲೆಗೂದಲನ್ನು ಸಂಗ್ರಹಿಸಿ ರಾಸಾಯನಿಕ ವಸ್ತು ಬಳಸಿ ಡ್ರಗ್ಸ್‌ ಅಂಶ ಪತ್ತೆಹಚ್ಚಬಹುದು ಎಂದು ಫಣೀಂದ್ರ ವಿವರಿಸಿದರು.

ಮಾದಕ ವ್ಯಸನಿ ಎಂಬುದನ್ನು ಸಾಬೀತುಪಡಿಸಲು ತಲೆಗೂದಲು ಪ್ರಮುಖ ಸಾಕ್ಷಿಯಾಗಲಿದೆ. ವಿದೇಶದಲ್ಲಿ ಹಲವು ಪ್ರಕರಣದಲ್ಲಿ ಈ ರೀತಿಯ ಪರೀಕ್ಷೆ ನಡೆದಿದೆ. ರಾಜ್ಯದ ಮಟ್ಟಿಗೆ ಡ್ರಗ್ಸ್‌ ವ್ಯಸನಿಗಳಿಗೆ ಈ ಪರೀಕ್ಷೆ ಮೊದಲ ಬಾರಿಗೆ ಈಗ ನಡೆಯುತ್ತಿದೆ ಎನ್ನಬಹುದು.

- ಫಣೀಂದ್ರ, ಖಾಸಗಿ ಎಫ್‌ಎಸ್‌ಎಲ್‌ ತಜ್ಞ