ಮಾದಕ ವಸ್ತು ಮಾರಾಟದ ದಂಧೆ| ವಿದೇಶಿ ಪ್ರಜೆ ಸೇರಿ ಆರು ಮಂದಿ ಬಂಧನ| ಆರೋಪಿಗಳಿಂದ 2.80 ಲಕ್ಷ ಮೌಲ್ಯದ 10.2 ಕೆ.ಜಿ ಗಾಂಜಾ, 10 ಗ್ರಾಂ ಕೊಕೇನ್ ಹಾಗೂ ಎರಡು ದ್ವಿಚಕ್ರ ವಾಹನ ಜಪ್ತಿ| ಗಸ್ತಿನಲ್ಲಿದ್ದ ಪೊಲೀಸರು ತಪಾಸಣೆ ನಡೆಸಿದಾಗ ಕೊಕೇನ್ ಪತ್ತೆ|
ಬೆಂಗಳೂರು(ಸೆ.11): ಮಾದಕ ವಸ್ತು ಮಾರಾಟದ ದಂಧೆ ಸಂಬಂಧ ವಿದೇಶಿ ಪ್ರಜೆ ಸೇರಿದಂತೆ ಆರು ಮಂದಿಯನ್ನು ದಕ್ಷಿಣ ವಿಭಾಗದ ಪೊಲೀಸರು ಪ್ರತ್ಯೇಕವಾಗಿ ಸೆರೆ ಹಿಡಿದಿದ್ದಾರೆ.
ನೈಜೀರಿಯಾ ಪ್ರಜೆ ಇಫಿತು ಮಾಂಡೇ ಎಜೆ , ಆಂಧ್ರಪ್ರದೇಶದ ಮೌಲಿ, ದುರ್ಗಾಪ್ರಸಾದ್, ಅಭಿಷೇಕ್, ಉದಯ್ ಹಾಗೂ ಒಡಿಶಾ ಮೂಲದ ಅಮನ್ ಪ್ರಧಾನ್ ಬಂಧಿತರಾಗಿದ್ದು, ಆರೋಪಿಗಳಿಂದ 2.80 ಲಕ್ಷ ಮೌಲ್ಯದ 10.2 ಕೆ.ಜಿ ಗಾಂಜಾ, 10 ಗ್ರಾಂ ಕೊಕೇನ್ ಹಾಗೂ ಎರಡು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.
ಕಲಬುರಗಿ ಲಿಂಕ್; ಕುರಿದೊಡ್ಡಿಯಲ್ಲಿ ಹೂತಿಟ್ಟಿದ್ದ 13.5 ಕ್ವಿಂಟಾಲ್ ಗಾಂಜಾ ಸೀಜ್!
ಕೆಲ ದಿನಗಳ ಹಿಂದೆ ನೈಜೀರಿಯಾ ಪ್ರಜೆ ಬನಶಂಕರಿಯ ಖಾಸಗಿ ಕಾಲೇಜಿನ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಗಸ್ತಿನಲ್ಲಿದ್ದ ಬನಶಂಕರಿ ಪೊಲೀಸರು ತಪಾಸಣೆ ನಡೆಸಿದಾಗ ಕೊಕೇನ್ ಪತ್ತೆಯಾಗಿದೆ. ವೀಸಾ, ಪಾಸ್‌ಪೋರ್ಟ್ ಬಗ್ಗೆ ಪರಿಶೀಲಿಸಲಾಗುತ್ತಿದೆ. ಅಲ್ಲದೆ, ತಲಘಟ್ಟಪುರದ ಅಪಾರ್ಟ್‌ಮೆಂಟ್ ಬಳಿ ಬ್ಯಾಗ್‌ನಲ್ಲಿ ಗಾಂಜಾ ತಂದು ಮಾರಾಟಕ್ಕೆ ಯತ್ನಿಸುತ್ತಿದ್ದ ಆಂಧ್ರಪ್ರದೇಶ ಮತ್ತು ಒಡಿಶಾದ ಐದು ಮಂದಿ ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
