Asianet Suvarna News Asianet Suvarna News

ಡ್ರಗ್ಸ್ ಕೇಸಿಗೆ ಇ.ಡಿ. ಪ್ರವೇಶ:: ಹವಾಲಾ ಹಣದ ಮೇಲೂ ಕಣ್ಣು..!

ಡ್ರಗ್ಸ್‌ ಜಾಲದ ಆರೋಪಿಗಳು ಕೇವಲ ಮಾದಕ ವಸ್ತು ಸಾಗಾಟ ಮಾತ್ರವಲ್ಲದೆ, ಅಕ್ರಮ ಹಣ ವರ್ಗಾವಣೆ, ವಿದೇಶದಲ್ಲಿ ಹಣಕಾಸು ವ್ಯವಹಾರ ಹಾಗೂ ಹವಾಲಾ ಚಟುವಟಿಕೆಯಲ್ಲೂ ಭಾಗಿಯಾದ ಶಂಕೆ ಹಿನ್ನೆಲೆಯಲ್ಲಿ ಇ.ಡಿ. ಅಧಿಕಾರಿಗಳು ತನಿಖೆಗೆ ಪ್ರವೇಶಿಸಿದ್ದು, ಹಾಲಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ತನಿಖಾಧಿಕಾರಿಗಳಿಂದ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

enforcement directorate Enters Sandalwood Drugs Mafia Case
Author
Bengaluru, First Published Sep 11, 2020, 8:00 AM IST

ಬೆಂಗಳೂರು(ಸೆ.11): ದೇಶಾದ್ಯಂತ ಸಂಚಲನ ಹುಟ್ಟಿಸಿರುವ ಸ್ಯಾಂಡಲ್‌ವುಡ್‌ ಡ್ರಗ್‌ ದಂಧೆ ಪ್ರಕರಣದ ತನಿಖೆಗೆ ಇದೀಗ ಜಾರಿ ನಿರ್ದೇಶನಾಲಯ (ಇ.ಡಿ.) ರಂಗ ಪ್ರವೇಶ ಮಾಡಿದೆ.

"

ಈ ಡ್ರಗ್ಸ್‌ ಜಾಲದ ಆರೋಪಿಗಳು ಕೇವಲ ಮಾದಕ ವಸ್ತು ಸಾಗಾಟ ಮಾತ್ರವಲ್ಲದೆ, ಅಕ್ರಮ ಹಣ ವರ್ಗಾವಣೆ, ವಿದೇಶದಲ್ಲಿ ಹಣಕಾಸು ವ್ಯವಹಾರ ಹಾಗೂ ಹವಾಲಾ ಚಟುವಟಿಕೆಯಲ್ಲೂ ಭಾಗಿಯಾದ ಶಂಕೆ ಹಿನ್ನೆಲೆಯಲ್ಲಿ ಇ.ಡಿ. ಅಧಿಕಾರಿಗಳು ತನಿಖೆಗೆ ಪ್ರವೇಶಿಸಿದ್ದು, ಹಾಲಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ತನಿಖಾಧಿಕಾರಿಗಳಿಂದ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದಾರೆ.

ತನ್ಮೂಲಕ ಮಾದಕ ವಸ್ತು ಮಾರಾಟ ಜಾಲ ಆರೋಪದ ಹಿನ್ನೆಲೆಯಲ್ಲಿ ಸಿಸಿಬಿ ಬಲೆಗೆ ಬಿದ್ದಿರುವ ಕನ್ನಡ ಚಲಚಿತ್ರ ರಂಗದ ತಾರೆಯರು ಹಾಗೂ ಪೇಜ್‌ ತ್ರಿ ಪಾರ್ಟಿಗಳ ಆಯೋಜಕರಿಗೆ ಮತ್ತೊಂದು ಕಂಟಕ ಶುರುವಾಗಿದೆ. ಇ.ಡಿ. ಅಧಿಕಾರಿಗಳು ಸಿಸಿಬಿ ಕಚೇರಿಗೆ ಬುಧವಾರ ತೆರಳಿ ತನಿಖಾಧಿಕಾರಿಗಳಿಂದ ಮಾಹಿತಿ ಸಂಗ್ರಹ ಮಾಡಿದರು.

ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ಇವೆಂಟ್‌ ಮ್ಯಾನೇಜ್ಮೆಂಟ್‌ ಸಂಸ್ಥೆ ಮಾಲಿಕರಾದ ವೀರೇನ್‌ ಖನ್ನಾ, ರಾಹುಲ್‌, ಪ್ರಶಾಂತ್‌ ರಂಕಾ, ನಿಯಾಜ್‌, ಸಾರಿಗೆ ಇಲಾಖೆ ನೌಕರ ರವಿಶಂಕರ್‌ ಅವರನ್ನು ವಿಚಾರಣೆಗೊಳಪಡಿಸುವ ಉದ್ದೇಶವನ್ನು ಇ.ಡಿ. ಅಧಿಕಾರಿಗಳು ಹೊಂದಿದ್ದಾರೆ ಎನ್ನಲಾಗಿದೆ.

ಕಿತ್ತಾಡಿಕೊಂಡಿದ್ದ ಸಂಜನಾ-ರಾಗಿಣಿ ಮಧ್ಯೆ ದೋಸ್ತಿ ಚಿಗುರಲು ಕಾರಣವಾಗಿದ್ದು ಈ ಅಂಶ

ಹೀಗಾಗಿ, ಸಿಸಿಬಿ ಬಂಧಿಸಿರುವ ಆರೋಪಿಗಳ ಸಂಬಂಧ ಪ್ರಾಥಮಿಕ ಹಂತದಲ್ಲಿ ತನಿಖಾಧಿಕಾರಿಗಳಿಂದ ಇ.ಡಿ. ಮಾಹಿತಿ ಪಡೆದಿದೆ. ಮಾದಕ ವಸ್ತು ಜಾಲ ಪ್ರಕರಣದ ಸಿಸಿಬಿ ವಿಚಾರಣೆ ಮುಗಿದ ನಂತರ ಇ.ಡಿ. ಅಧಿಕಾರಿಗಳು ಅಕ್ರಮ ಹಣಕಾಸು ವ್ಯವಹಾರ ಸಂಬಂಧ ಪ್ರತ್ಯೇಕವಾಗಿ ಎಫ್‌ಐಆರ್‌ ದಾಖಲಿಸಿ ತನಿಖೆ ಆರಂಭಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಹವಾಲಾ ದಂಧೆ, ಅಕ್ರಮ ಬಂಡವಾಳ ಹೂಡಿಕೆ ಶಂಕೆ:

ಹತ್ತು ವರ್ಷಗಳಿಂದ ರಂಗುರಂಗಿನ ಪಾರ್ಟಿಗಳನ್ನು ಆಯೋಜಿಸುವ ಕಿಂಗ್‌ಪಿನ್‌ ಎಂದೇ ಹೆಸರು ಪಡೆದಿರುವ ವೀರೇನ್‌ ಖನ್ನಾನ ಪಾರ್ಟಿಗಳಲ್ಲಿ ಆಗರ್ಭ ಶ್ರೀಮಂತರ ಪಾಲ್ಗೊಳ್ಳುವಿಕೆ ಕಂಡುಬಂದಿದೆ. ಹೀಗಾಗಿ ಪಾರ್ಟಿ ನೆಪದಲ್ಲಿ ಕಾನೂನುಬಾಹಿರವಾಗಿ ಕಪ್ಪು ಹಣ ಚಲಾವಣೆಯಾಗಿರಬಹುದು. ಡ್ರಗ್ಸ್‌ ಖರೀದಿಗೆ ಅಕ್ರಮ ಹಣ ವರ್ಗಾವಣೆ ನಡೆದಿರುವ ಸಾಧ್ಯತೆ ದಿಸೆಯಲ್ಲೂ ಸಿಸಿಬಿ ತನಿಖೆ ನಡೆಸಿದೆ.

ತನ್ನ ಆರ್ಥಿಕ ವ್ಯವಹಾರದ ಬಗ್ಗೆ ಸೂಕ್ತ ಮಾಹಿತಿಯನ್ನು ವೀರೇನ್‌ ಖನ್ನಾ ಸಿಸಿಬಿ ವಿಚಾರಣೆ ವೇಳೆ ಬಾಯ್ಬಿಡುತ್ತಿಲ್ಲ. ಅದೇ ರೀತಿ ಸಂಜನಾ ಸ್ನೇಹಿತ ರಾಹುಲ್‌ ಸಹ ಇವೆಂಟ್‌ ಮ್ಯಾನೇಜ್ಮೆಂಟ್‌, ರಿಯಲ್‌ ಎಸ್ಟೇಟ್‌ ಮಾತ್ರವಲ್ಲದೆ ವಿದೇಶದಲ್ಲಿ ಉದ್ದಮೆ ಹೊಂದಿರುವುದು ತನಿಖೆಯಲ್ಲಿ ಗೊತ್ತಾಗಿದೆ. ವಿದೇಶದಲ್ಲಿ ಈತ ಕ್ಯಾಸಿನೋ ಹೊಂದಿದ್ದಾನೆ ಎನ್ನಲಾಗಿದೆ. ವಿದೇಶಗಳಲ್ಲಿ ಇಷ್ಟೆಲ್ಲ ಚಟುವಟಿಕೆ ಹೊಂದಿರುವ ರಾಹುಲ್‌ ಆ ದೇಶಗಳಲ್ಲಿ ಅಕ್ರಮವಾಗಿ ಬಂಡವಾಳ ಹೂಡಿಕೆ ಹಾಗೂ ಹವಾಲಾ ದಂಧೆಯನ್ನು ನಡೆಸಿರಬಹುದು ಎಂಬ ಗುಮಾನಿಯಿದೆ.

ಇನ್ನು, ಚಲನಚಿತ್ರರಂಗದಲ್ಲಿ ಸಂಪಾದಿಸಿದ ಹಣಕ್ಕಿಂತ ಅಧಿಕ ಆಸ್ತಿ ಹೊಂದಿದ್ದಾರೆ ಎಂಬ ಆರೋಪ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಮೇಲೂ ಇದೆ. ತಮ್ಮ ಆತ್ಮೀಯ ಮಿತ್ರ ಕೂಟದೊಂದಿಗೆ ಸೇರಿ ಅಕ್ರಮ ಹಣ ವರ್ಗಾವಣೆಯಲ್ಲಿ ನಟಿಯರೂ ಪಾಲ್ಗೊಂಡಿರುವ ಸಾಧ್ಯತೆಗಳನ್ನು ಸಿಸಿಬಿ ಶೋಧಿಸುತ್ತಿದೆ. ಅಕ್ರಮ ಹಣ ವರ್ಗಾವಣೆ ಹಾಗೂ ಹವಾಲಾ ಚಟುವಟಿಕೆಗಳು ನಡೆದಿರುವ ಸಾಧ್ಯತೆ ಗಂಭೀರವಾಗಿ ಕಂಡುಬಂದ ಹಿನ್ನೆಲೆಯಲ್ಲಿ ಈ ತನಿಖೆಯ ಬಗ್ಗೆ ಇ.ಡಿ. ಕೂಡ ಆಸಕ್ತಿ ತಳೆದಿದ್ದು, ತನ್ನದೇ ಆದ ಪ್ರತ್ಯೇಕ ತನಿಖೆ ನಡೆಸುವ ಉದ್ದೇಶವನ್ನು ಹೊಂದಿದೆ ಎನ್ನಲಾಗಿದೆ.

Follow Us:
Download App:
  • android
  • ios