ಬಳ್ಳಾರಿ: ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ವಿರುದ್ಧ ಪರ್ಯಾಯ ವ್ಯಕ್ತಿ ಬೆಳೆಸುವ ಉದ್ದೇಶದಿಂದ ಭೀಮಾನಾಯ್ಕ ಶಾಸಕರಾಗಿರುವ ಹಗರಿಬೊಮ್ಮನಹಳ್ಳಿಯಲ್ಲಿ ಕಚೇರಿ ತೆರೆದು ರಾಜಕೀಯ ಚಟುವಟಿಕೆಯನ್ನು ಆರಂಭಿಸಿದ್ದ ಶಾಸಕ ಆನಂದ ಸಿಂಗ್‌ ಇದೀಗ ಕಚೇರಿ ತೆರವುಗೊಳಿಸಿದ್ದಾರೆ. 

ಈಚೆಗೆ ಈಗಲ್ಟನ್‌ ರೆಸಾರ್ಟ್‌ನಲ್ಲಿ ಕಂಪ್ಲಿ ಶಾಸಕ ಹಲ್ಲೆ ಪ್ರಕರಣದ ಬಳಿಕ ಆನಂದ ಸಿಂಗ್‌ ಈ ನಿರ್ಧಾರಕ್ಕೆ ಬಂದಿದ್ದು, ಸಿಂಗ್‌ ಹಾಗೂ ಭೀಮಾನಾಯ್ಕ ನಡುವಿನ ಸಂಧಾನ ಯಶಸ್ವಿಯಾದಂತಾಗಿದೆ. ಹಗರಿಬೊಮ್ಮನಹಳ್ಳಿಯಲ್ಲಿದ್ದ ಕಚೇರಿ ಹಾಗೂ ಆನಂದ ಸಿಂಗ್‌ ಅವರ ಬೃಹತ್‌ ಕಟೌಟ್‌ ಸಹ ತೆರವುಗೊಳಿಸಲಾಗಿದ್ದು ಇದರಿಂದ ಇಬ್ಬರ ನಡುವಿನ ಮುಸುಕಿನ ಗುದ್ದಾಟಕ್ಕೆ ತೆರೆ ಬಿದ್ದಂತಾಗಿದೆ. 

ಬಯಲಾಯ್ತು ಆನಂದ್ ಸಿಂಗ್-ಗಣೇಶ್ ಟೈಟ್ ಫೈಟ್ ಸೀಕ್ರೆಟ್

ಈಗಲ್ಟನ್‌ ರೆಸಾರ್ಟ್‌ನಲ್ಲಿ ಕಂಪ್ಲಿ ಶಾಸಕ ಗಣೇಶ್‌ ಹಾಗೂ ಆನಂದ ಸಿಂಗ್‌ ನಡುವೆ ಜಗಳ ಶುರುವಾದಾಗ ಪಕ್ಕದಲ್ಲಿಯೇ ಇದ್ದ ಭೀಮಾನಾಯ್ಕ ಮಧ್ಯಪ್ರವೇಶದಿಂದ ಆನಂದಸಿಂಗ್‌ ಮೇಲಾಗುತ್ತಿದ್ದ ಮತ್ತಷ್ಟು ಹಲ್ಲೆ ತಪ್ಪಿಸಿದ್ದರು. ಇದರಿಂದ ಆನಂದಸಿಂಗ್‌ ಅವರು ಭೀಮಾನಾಯ್ಕ ವಿರುದ್ಧ ಇನ್ನು ಹಗೆ ಸಾಧಿಸುವುದು ಸರಿಯಲ್ಲ ಎಂಬ ನಿರ್ಧಾರಕ್ಕೆ ಬಂದು ತೆರವುಗೊಳಿಸಿದ್ದಾರೆ ಎನ್ನಲಾಗಿದೆ.

ಇದರಿಂದ ವೈರಿಗಳಾಗಿದ್ದ ಬಳ್ಳಾರಿಯ ಈ ಇಬ್ಬರು ಶಾಸಕರ ಮುಸುಕಿನ ಗುದ್ದಾಟಕ್ಕೆ ತೆರೆ ಬಿದ್ದಂತಾಗಿದೆ.