ಚಾಮರಾಜನಗರದ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ಗಸ್ತು ತಿರುಗುತ್ತಿದ್ದ ಅರಣ್ಯ ವೀಕ್ಷಕ ಸಣ್ಣ ಹೈದ ಎಂಬುವವರು ಹುಲಿ ದಾಳಿಗೆ ಬಲಿಯಾಗಿದ್ದಾರೆ. 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಇವರ ಮೇಲೆ ಹುಲಿ ಏಕಾಏಕಿ ದಾಳಿ ಮಾಡಿ ಕೊಂದಿದೆ. ಅರಣ್ಯ ಇಲಾಖೆ ಮೃತರ ಕುಟುಂಬಕ್ಕೆ ಪರಿಹಾರ ಮತ್ತು ಉದ್ಯೋಗದ ಭರವಸೆ.
ವರದಿ - ಪುಟ್ಟರಾಜು. ಆರ್. ಸಿ ಏಷಿಯಾನೆಟ್ ಸುವರ್ಣ ನ್ಯೂಸ್ , ಚಾಮರಾಜನಗರ.
ಚಾಮರಾಜನಗರ (ಡಿ.27) - ಆತ ಅರಣ್ಯ ಇಲಾಖೆಯ ಸಿಬ್ಬಂದಿ ಎಂದಿನಂತೆ ಮೂವರು ಸಿಬ್ಬಂದಿ ಜೊತೆಗೆ ಗಸ್ತಿಗೆ ಹೋಗಿದ್ದರು. ಇಬ್ಬರು ಸಿಬ್ಬಂದಿ ಇವರಿಗಿಂತ ಸ್ವಲ್ಪ ದೂರ ಮುಂದೆ ಹೋಗಿದ್ದರು. ಇದೇ ಅವಕಾಶ ಕಾಯುತ್ತಿದ್ದ ಟೈಗರ್ ಏಕಾಏಕಿ ವಾಚರ್ ಮೇಲೆ ದಾಳಿ ಮಾಡಿದೆ. ಹುಲಿಯ ಪಂಜದ ಒಂದೇ ಏಟಿಗೆ ವಾಚರ್ ಉಸಿರು ಚೆಲ್ಲಿದ್ದಾನೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ..
ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಇತ್ತಿಚ್ಚಿನ ದಿನಗಳಲ್ಲಿ ಕಾಡಿನ ಒಳಗೆ ಹಾಗೂ ಹೊರಗೆ ಹುಲಿಯದ್ದೆ ಸುದ್ದಿ. ಕಾಡು ಬಿಟ್ಟು ನಾಡು ಸೇರಿರುವ ಹುಲಿ ಸೆರೆಗೂ ಕೂಡ ಕೂಂಬಿಂಗ್ ಕಾರ್ಯ ನಡೆಯುತ್ತಿದೆ. ಆದ್ರೆ ಈ ಬಾರಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಹುಲಿ ಸಂರಕ್ಷಿತ ಅರಣ್ಯದ ಮರಳಳ್ಳ ಕಳ್ಳಬೇಟೆ ಶಿಬಿರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಾಚರ್ ಸಣ್ಣ ಹೈದ ದಿನನಿತ್ಯದ ಕಾಯಕದಂತೆ ಇಂದು ಕೂಡ ಗಸ್ತಿಗೆ ಹೋಗಿದ್ದಾನೆ. ಇವನ ಜೊತೆಗೆ ಮೂವರು ಗಸ್ತಿಗೆ ಹೋಗಿದ್ದರು. ಆದ್ರೆ ನಡೆದು ಹೋಗುವ ವೇಳೆ ಇನ್ನಿಬ್ಬರು ಸಿಬ್ಬಂದಿ ಸಣ್ಣಹೈದನಿಗಿಂತ ನೂರು ಮೀಟರ್ ಮುಂದೆ ನಡೆದು ಹೋಗುತ್ತಿದ್ದರು. ಹೀಗೆ ನಡೆದು ಹೋಗುವ ಸಂದರ್ಭದಲ್ಲಿ ಎಲ್ಲಿಂದ ಬಂದ್ನೋ ಆ ಹುಲಿರಾಯ ಏಕಾಏಕಿ ಸಣ್ಣಹೈದನ ಕತ್ತಿನ ಭಾಗಕ್ಕೆ ತನ್ನ ಪಂಜ ಬೀಸಿದ್ದಾನೆ. ಒಂದೇ ಏಟಿಗೆ ವಾಚರ್ ಸಣ್ಣಹೈದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಇನ್ನೂ ಮೃತ ವಾಚರ್ ಸಣ್ಣ ಹೈದ ಕಳೆದ 25 ವರ್ಷಗಳಿಂದಲೂ ಕೂಡ ಅರಣ್ಯ ಇಲಾಖೆಯ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದನು. ನಿತ್ಯ ಕೂಡ ಅರಣ್ಯದಲ್ಲಿ ಗಸ್ತು ಮಾಡೊದೆ ಕಾಯಕ ಮಾಡಿಕೊಂಡಿದ್ದನು. ಅರಣ್ಯ ಇಲಾಖೆಯ ನಿಯಮಾನುಸಾರ ಪರಿಹಾರ ಕೊಡಲೂ ಹಾಗೂ ಕುಟುಂಬದ ಒಬ್ಬರಿಗೆ ನೌಕರಿ ಕೊಡಲೂ ಅರಣ್ಯಾಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಅಲ್ಲದೇ ಇನ್ಮುಂದೆ ಗಸ್ತಿಗೆ ಹೋಗುವ ಅರಣ್ಯ ಸಿಬ್ಬಂದಿ ಎಚ್ಚರಿಕೆ ವಹಿಸಲು ಕೊಡಲೂ ಸೂಚನೆ ಕೊಟ್ಟಿದ್ದಾರೆ. ಇಂತಹ ಪ್ರಕರಣ ಜರುಗಿರುವುದು ಇದೇ ಮೊದಲು ಅಂತ ಎಸಿಎಫ್ ನವೀನ್ ಕುಮಾರ್ ತಿಳಿಸಿದರು..
ಒಟ್ನಲ್ಲಿ ಗಡಿ ಜಿಲ್ಲೆ ಚಾಮರಾಜನಗರದ ಒಂದಲ್ಲ ಒಂದು ಭಾಗದಲ್ಲಿ ಹುಲಿ ದಾಳಿ ಪ್ರಕರಣ ತಪ್ಪಿದ್ದಲ್ಲ. ಇದೀಗಾ ಗಸ್ತಿಗೆ ಹೋಗಿದ್ದ ಅರಣ್ಯ ಸಿಬ್ಬಂದಿ ಜೀವ ಹಾರಿ ಹೋಗಿದೆ. ಗಸ್ತು ಹೋಗುವ ವೇಳೆ ಅರಣ್ಯಾಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂಬುದು ಈ ಘಟನೆಯಿಂದ ಸ್ಪಷ್ಟವಾಗಿದೆ. ಮುಂದಿನ ದಿನಗಳಲ್ಲಿ ಅರಣ್ಯಾಧಿಕಾರಿಗಳು ಯಾವ ರೀತಿಯ ಕ್ರಮವಹಿಸ್ತಾರೆ ಅನ್ನೋದ್ನ ಕಾದು ನೋಡಬೇಕಾಗಿದೆ..


