ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಮತ್ತು ಸಡನ್ ಡೆತ್ ಪ್ರಕರಣಗಳನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲಿದೆ. ಆಸ್ಪತ್ರೆಗಳು ಮತ್ತು ಸಾರ್ವಜನಿಕರಿಗೆ ನಿರ್ದಿಷ್ಟ ಸೂಚನೆಗಳನ್ನು ನೀಡಲಾಗುವುದು.
ರಾಜ್ಯದಲ್ಲಿ ಹೃದಯಾಘಾತ ಹಾಗೂ ಸಡನ್ ಡೆತ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲು ಯೋಜಿಸಿದೆ. ಇದರಲ್ಲಿ ಆಸ್ಪತ್ರೆಗಳಿಗೆ ಮತ್ತು ಸಾರ್ವಜನಿಕರಿಗೆ ವಿಭಿನ್ನವಾಗಿ ಸೂಚನೆಗಳು ನೀಡಲಾಗುವ ಸಾಧ್ಯತೆ ಇದೆ. ಇದರ ಜೊತೆಗೆ ಸಡನ್ ಹೃದಯಾಘಾತಕ್ಕೆ ಕೊರೊನಾ ಕಾರಣವೇ ಎಂಬ ಅನುಮಾನ ಇದ್ದು, ಈ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆ ಕಡ್ಡಾಯ ಮಾಡಲು ಸರ್ಕಾರ ಮುಂದಾಗಿದೆ.
ಆಸ್ಪತ್ರೆಗಳಿಗಾಗಿ ಮಾರ್ಗಸೂಚಿಗಳು:
- ಕಾರ್ಡಿಯಾಕ್ ಸರ್ವೆಲೆನ್ಸ್ ನಡೆಸುವಂತೆ ಸೂಚನೆ ನೀಡಲಾಗುತ್ತದೆ.
- ಸಡನ್ ಡೆತ್ ಅಥವಾ ಹೃದಯಾಘಾತದ ಎಲ್ಲ ಪ್ರಕರಣಗಳನ್ನು ಆಸ್ಪತ್ರೆಗಳಲ್ಲಿ ದಾಖಲು ಮಾಡಬೇಕು.
- ರೋಗಿಗಳ ಹೃದಯ ಸಂಬಂಧಿ ಸಮಸ್ಯೆಗಳ ವಿವರಗಳನ್ನು ವಿಶೇಷ ರಿಜಿಸ್ಟರ್‌ನಲ್ಲಿ ದಾಖಲಿಸಬೇಕು.
- ಹೃದಯಾಘಾತದಿಂದ ಮೃತಪಟ್ಟವರ ಮೇಲೆ ಮರಣೋತ್ತರ ಪರೀಕ್ಷೆ (ಪೋಸ್ಟ್ ಮಾರ್ಟಮ್) ನಡೆಸುವುದು ಕಡ್ಡಾಯ.
- ಹೃದಯದ ಸಮಸ್ಯೆಗಳ ತಪಾಸಣೆ (ಸ್ಕ್ರೀನಿಂಗ್) ಮಾಡಿ ಬೇಗ ಪತ್ತೆಹಚ್ಚಬೇಕು.
- ಜಿಲ್ಲಾ ಆಸ್ಪತ್ರೆಗಳಲ್ಲಿ ಹೃದಯ ಥಿನ್ನರ್ ಔಷಧಿಗಳ ಹಾಗೂ ತುರ್ತು ಔಷಧಗಳ ಸ್ಟಾಕ್ ಕಾಯ್ದಿರಬೇಕು.
- ಸಾರ್ವಜನಿಕ ಸ್ಥಳಗಳಲ್ಲಿ ಹೃದಯಾಘಾತದ ಕುರಿತು ಜಾಗೃತಿ ಮೂಡಿಸಲು ಕ್ರಮವಹಿಸಬೇಕು.
- ಹೃದಯ ಸಂಬಂಧಿ ಸಮಸ್ಯೆಗೆ ಈಸಿಜಿ (ECG) ಮಾಡಿ ಜಯದೇವ ಆಸ್ಪತ್ರೆಗಳ ತಜ್ಞರ ಅಭಿಪ್ರಾಯ ಪಡೆಯಬೇಕು.
ಸಾರ್ವಜನಿಕರಿಗೆ ನೀಡಲಿರುವ ಮಾರ್ಗಸೂಚಿಗಳು:
- ಹೃದಯ ಸಂಬಂಧಿತ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಬಾರದು.
- ಹೃದಯಾಘಾತದ ಲಕ್ಷಣಗಳು ಕಾಣಿಸಿದರೆ ತಕ್ಷಣವೇ ಆಸ್ಪತ್ರೆಗೆ ಭೇಟಿ ನೀಡಬೇಕು.
- ಸಕ್ಕರೆ ಮತ್ತು ಉಪ್ಪಿನ ಪ್ರಮಾಣವನ್ನು ಸಾಧ್ಯವಿರುವಷ್ಟು ಕಡಿಮೆ ಬಳಸಬೇಕು.
- ಕನಿಷ್ಠ ಆರು ಗಂಟೆಗಳ ನಿದ್ರೆಗೆ ಅವಕಾಶ ನೀಡಬೇಕು.
- ಪೋಷಕರು ಮಕ್ಕಳ ಮೊಬೈಲ್ ಸ್ಕ್ರೀನ್ ಟೈಮ್ ಕಡಿಮೆ ಮಾಡಬೇಕು.
- ಉದ್ಯೋಗದಲ್ಲಿ ಉಂಟಾಗುವ ಒತ್ತಡವನ್ನು ಕಡಿಮೆ ಮಾಡಬೇಕು.
- ಹೃದಯದ ಸಮಸ್ಯೆಗಳ ತಪಾಸಣೆ ಆಗಾಗ್ಗೆ ಮಾಡಿಸಬೇಕು.
- 15 ವರ್ಷದೊಳಗಿನ ಶಾಲಾ ಮಕ್ಕಳಿಗೆ ಹೃದಯ ತಪಾಸಣೆ (ಸ್ಕ್ರೀನಿಂಗ್) ಮಾಡುವಂತೆ ಸಲಹೆ ನೀಡಲಾಗಿದೆ.
- ಎಲ್ಲಾ ಶಾಲಾ ಮಕ್ಕಳನ್ನೂ ಹೃದಯದ ತಪಾಸಣೆಗೆ ಒಳಪಡಿಸುವಂತೆ ಸೂಚನೆ ಇದೆ.
- ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ.
- 18 ವರ್ಷದೊಳಗಿನವರಿಗೆ ಧೂಮಪಾನ ಮತ್ತು ಮದ್ಯಪಾನ ಮಾರಾಟ ನಿಷಿದ್ಧ.
- ರಕ್ತದ ದಬ್ಬಿ (BP), ಶುಗರ್, ಅಥವಾ ಹೆಚ್ಚು ತೂಕ ಹೊಂದಿರುವವರು ಮಾಸ್ಟರ್ ಚೆಕ್-ಅಪ್ ಮಾಡಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ.
- ಜಿಮ್‌ಗಳ ತರಬೇತುದಾರರು ಸಿಪಿಆರ್ (CPR) ತರಬೇತಿ ಪಡೆದಿರಬೇಕು.
- ಬಸ್ ನಿಲ್ದಾಣ, ರೈಲು ನಿಲ್ದಾಣ, ಮಾಲ್, ವಿಮಾನ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ Automated External Defibrillator (AED) ಅಳವಡಿಕೆ ಮಾಡುವ ಯೋಜನೆ ಇದೆ.
- ಕಾರ್ಡಿಯಾಕ್ ಅರೆಸ್ಟ್ ಸಂಭವಿಸಿದಾಗ ಸೂಕ್ತ ಪ್ರಾಥಮಿಕ ಚಿಕಿತ್ಸೆ ನೀಡಲು ಸಿದ್ಧತೆ ಇರಬೇಕು.
- AED ಮೂಲಕ ಕುಸಿದು ಬಿದ್ದ ವ್ಯಕ್ತಿಗಳಿಗೆ ತಕ್ಷಣ ಚಿಕಿತ್ಸೆ ನೀಡಿದ ಬಳಿಕ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸುವ ವ್ಯವಸ್ಥೆ ಇರಲಿದೆ.
ಸಡನ್ ಹೃದಯಾಘಾತ ಹೆಚ್ಚಳಕ್ಕೆ ಕೊರೋನಾ ಕಾರಣವೇ?
ಕೊರೋನಾ ಸೋಂಕು ರಾಜ್ಯದಲ್ಲಿ ಸಡನ್ ಹೃದಯಾಘಾತ ಹೆಚ್ಚಳಕ್ಕೆ ಕಾರಣವಾಗಿದೆಯೇ ಎಂಬ ಅನುಮಾನ ಆರೋಗ್ಯ ಇಲಾಖೆಯನ್ನು ಕಾಡುತ್ತಿದೆ. ರಾಜ್ಯದ ಹೃದಯ ತಜ್ಞರಲ್ಲಿಯೂ ಈ ಶಂಕೆ ಇದೆ. ಈ ಹಿನ್ನೆಲೆ ಹೃದಯಾಘಾತ ಹಾಗೂ ಸಡನ್ ಡೆತ್ ಪ್ರಕರಣಗಳಿಗೆ ಮರಣೋತ್ತರ ಪರೀಕ್ಷೆ ಕಡ್ಡಾಯ ಮಾಡಲು ಸರ್ಕಾರ ಮುಂದಾಗಿದೆ. ಮರಣೋತ್ತರ ಪರೀಕ್ಷೆಯ ಮೂಲಕವೇ ಕೊರೋನಾ ಸೋಂಕಿನ ಹೃದಯದ ಮೇಲೆ ಬೀರಬಹುದಾದ ಪರಿಣಾಮಗಳನ್ನು ತಿಳಿದುಕೊಳ್ಳಲು ಸಾಧ್ಯವಿದೆ.
ಹೃದಯಾಘಾತದಿಂದ ಸಾವನ್ನಪ್ಪಿದವರಲ್ಲಿ ಕಾರ್ಡಿಯಾಕ್ ಮಸಲ್ ಬಯಾಪ್ಸಿ ನಡೆಸುವ ಯೋಜನೆ ಇದೆ. ಇದರಿಂದ ಕೊರೋನಾ ಸೋಂಕು ಹೃದಯಾಘಾತಕ್ಕೆ ನೇರ ಕಾರಣವಾಗಿತ್ತೇ ಅಥವಾ ಇಲ್ಲವೇ ಎಂಬ ಅಂಶವನ್ನು ವೈಜ್ಞಾನಿಕವಾಗಿ ಸ್ಥಿರಪಡಿಸಬಹುದು. ಈ ಎಲ್ಲದರಿಂದ ರಾಜ್ಯ ಆರೋಗ್ಯ ಇಲಾಖೆ ಮರಣೋತ್ತರ ಪರೀಕ್ಷೆ ಕಡ್ಡಾಯ ಮಾಡುವತ್ತ ಸನ್ನದ್ಧವಾಗಿದೆ.
