ಕೋವಿಡ್ ಲಸಿಕೆ ಮತ್ತು ಹೃದಯಾಘಾತಗಳ ನಡುವಿನ ಸಂಬಂಧವನ್ನು ತನಿಖೆ ಮಾಡಿದ ತಜ್ಞರ ಸಮಿತಿಯು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಸಿದ್ಧವಾಗಿದೆ. ಅಧ್ಯಯನವು ಲಸಿಕೆ ಮತ್ತು ಹೃದಯಾಘಾತಗಳ ನಡುವೆ ಯಾವುದೇ ನೇರ ಸಂಪರ್ಕವಿಲ್ಲ, ಆದರೆ ಕೋವಿಡ್ ಸೋಂಕು ಹೃದಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಿಳಿದುಬಂದಿದೆ.
ಬೆಂಗಳೂರು: ಕೋವಿಡ್ ಲಸಿಕೆಯಿಂದ ಹೃದಯಾಘಾತ ಸಂಭವಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರ ನೀಡುವ ತಜ್ಞರ ಸಮಿತಿಯ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ಸಜ್ಜಾಗಿದೆ. ಇಂದು ಇಲಾಖೆ ಪ್ರಧಾನ ಕಾರ್ಯದರ್ಶಿಯವರ ಜೊತೆ ವರ್ಚುವಲ್ ಮೀಟಿಂಗ್ ನಡೆಸಿದ ನಂತರ ಸೋಮವಾರ ವರದಿ ಸಲ್ಲಿಕೆಗೆ ನಿರ್ಧಾರ ಮಾಡಲಾಗಿದೆ. ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ, ಸರ್ಕಾರ ತಜ್ಞರ ಸಮಿತಿಗೆ ಅಧ್ಯಯನ ನಡೆಸುವಂತೆ ಸೂಚನೆ ನೀಡಿತ್ತು. ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರ ನೇತೃತ್ವದಲ್ಲಿ 12 ಸದಸ್ಯರ ತಜ್ಞರ ತಂಡ ಈ ಅಧ್ಯಯನವನ್ನು ನಡೆಸಿದ್ದು, ಕೋವಿಡ್ ಲಸಿಕೆ ಪಡೆದ 250 ಮಂದಿಯ ಮೇಲೆ ಅಧ್ಯಯನ ನಡೆಸಲಾಗಿದೆ.
ವರದಿಯ ಪ್ರಮುಖ ಅಂಶಗಳು
- ಕೋವಿಡ್ ಲಸಿಕೆಯಿಂದ ಹೃದಯಾಘಾತ ಸಂಭವಿಸುತ್ತಿಲ್ಲ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ.
- ಹೃದಯ ಸಂಬಂಧಿ ಸಮಸ್ಯೆಗಳು ಮುಖ್ಯವಾಗಿ ಕೋವಿಡ್ ಸೋಂಕಿತರಲ್ಲೇ ಹೆಚ್ಚು ಕಾಣಿಸುತ್ತಿವೆ.
- ಕೋವಿಡ್ ಸೋಂಕುಬಂದ ಮೂರು ವರ್ಷಗಳ ಬಳಿಕ ಕೆಲವರಿಗೆ ಹೃದಯ ಸಮಸ್ಯೆಗಳು ತೀವ್ರವಾಗುತ್ತಿರುವುದು ಅಧ್ಯಯನದಲ್ಲಿ ಪತ್ತೆಯಾಗಿದೆ.
- ಸುಸ್ತು, ಉಸಿರಾಟದ ತೊಂದರೆ, ಕೊಬ್ಬು, ನಿದ್ರಾಹೀನತೆ ಮುಂತಾದ ಲಕ್ಷಣಗಳು ಹೃದಯದ ಸಮಸ್ಯೆಯ ಸೂಚಕಗಳಾಗಿವೆ.
- ಶಾಲಾ ಮಕ್ಕಳಲ್ಲಿ ಹೃದಯ ಸಮಸ್ಯೆಗಳ ತಪಾಸಣೆ (Screening) ನಡೆಸಬೇಕೆಂದು ಸಮಿತಿ ಸಲಹೆ ನೀಡಿದೆ.
- ಪಠ್ಯಪುಸ್ತಕಗಳಲ್ಲಿ ಹೃದಯಾಘಾತ ಕುರಿತ ಜಾಗೃತಿ ವಿಷಯಗಳನ್ನು ಸೇರಿಸುವಂತೆ ಸಮಿತಿ ಶಿಫಾರಸು ಮಾಡಿದೆ.
- ಹೃದಯ ಸಂಬಂಧಿತ ಸಮಸ್ಯೆಗಳನ್ನು ಹೊಂದಿರುವವರು ಅಗತ್ಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು ಎಂಬ ಸಲಹೆ ನೀಡಲಾಗಿದೆ.
- ಹೃದಯಾಘಾತದಿಂದ ಸಾವು ಸಂಭವಿಸಿದರೆ ಮರಣೋತ್ತರ ಪರೀಕ್ಷೆ ಕಡ್ಡಾಯವಾಗಬೇಕು ಎಂದು ತಜ್ಞರ ತಂಡ ಅಭಿಪ್ರಾಯಪಟ್ಟಿದೆ.
ಕೋವಿಡ್ ಲಸಿಕೆ ಮತ್ತು ಹೃದಯಾಘಾತ ನಡುವೆ ನೇರ ಸಂಪರ್ಕವಿಲ್ಲ ಎಂಬ ಸ್ಪಷ್ಟತೆ ನೀಡಿರುವ ವರದಿ, ಸಾರ್ವಜನಿಕರಲ್ಲಿ ಭಯ ನಿವಾರಣೆಗೆ ಸಹಾಯ ಮಾಡುವ ನಿರೀಕ್ಷೆ ಇದೆ. ಈ ಅಧ್ಯಯನದ ವರದಿ ಆಧಾರದ ಮೇಲೆ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ.
ಹೃದಯಾಘಾತಕ್ಕೆ ಕಾರಣವೇನು?
ಕಳೆದ ಕೆಲವು ತಿಂಗಳುಗಳಿಂದ ಹಾಸನ ಜಿಲ್ಲೆಯಲ್ಲಿ ಹೃದಯಾಘಾತ (Heart Attack) ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು, ಜಿಲ್ಲೆಯ ನಾಗರಿಕರಲ್ಲಿ ಆತಂಕ ಮೂಡಿಸಿದೆ. ಒಂದೇ ತಿಂಗಳಲ್ಲಿ 20ಕ್ಕೂ ಹೆಚ್ಚು ಹೃದಯಾಘಾತದ ಸಾವು ಸಂಭವಿಸಿದೆ. ಅತಿಯಾದ ಮಾಂಸಾಹಾರ ಸೇವನೆ, ಜೀವನಶೈಲಿಯ ಬದಲಾವಣೆ ಮತ್ತು ಕೆಲಸದ ಒತ್ತಡ ಕಾರಣವಾಗಿರಬಹುದುಎ ಎಂದು ಹಲವು ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಧುನಿಕ ಜೀವನಶೈಲಿಯಲ್ಲಿ ಬೆಳೆದಿರುವ ಅತಿಯಾದ ಮಾನಸಿಕ ಒತ್ತಡ, ಶಾರೀರಿಕ ಚಟುವಟಿಕೆಯ ಕೊರತೆ, ಹಾಗೂ ಅನಾರೋಗ್ಯಕರ ಆಹಾರಪದ್ದತಿಗಳು ಹೃದಯದ ಆರೋಗ್ಯಕ್ಕೆ ಅಪಾಯಕಾರಿಯಾಗಿವೆ. ತಿನ್ನುವ ಆಹಾರದಲ್ಲಿ ಕೊಬ್ಬು, ಉಪ್ಪು ಮತ್ತು ತೈಲಾಂಶದ ಪ್ರಮಾಣವನ್ನು ನಿಯಂತ್ರಿಸುವುದು, ನಿಯಮಿತ ವ್ಯಾಯಾಮ ಮತ್ತು ಮಾನಸಿಕ ಸಂತೂಲನ ಕಾಯ್ದುಕೊಳ್ಳುವುದು ಹೃದಯಾಘಾತದ ಅಪಾಯ ತಗ್ಗಿಸಲು ಮುಖ್ಯವಾಗಿದೆ. 6 ತಿಂಗಳಿಗೆ ಒಮ್ಮೆಯಾದರೂ ಪರೀಕ್ಷಿಸಿಕೊಂಡು ಚಿಕಿತ್ಸೆ ನೀಡಿದರೆ ಹೃದಯಾಘಾತದ ಹಾನಿಯನ್ನು ಕಡಿಮೆ ಮಾಡಬಹುದು ಎಂಬುದು ಹಲವರ ಅಭಿಪ್ರಾಯವಾಗಿದೆ.
